ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಚಿನ್ನಕ್ಕೆ ಗುರಿ ಇಟ್ಟ ಅನೀಶ್‌

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ  ಉದಯೋನ್ಮುಖ ಪಿಸ್ತೂಲ್‌ ಶೂಟರ್‌ ಅನೀಶ್‌ ಶೋನ್‌ ಅವರು ಜರ್ಮನಿಯಲ್ಲಿ ಆರಂಭವಾದ ಐಎಸ್‌ಎಸ್‌ಎಫ್‌ ವಿಶ್ವ ಜೂನಿಯರ್‌ ರೈಫಲ್‌/ಪಿಸ್ತೂಲ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.

ಶನಿವಾರ ನಡೆದ ಜೂನಿಯರ್‌ ಪುರುಷರ 25 ಮೀಟರ್ಸ್‌ ಸ್ಟ್ಯಾಂಡರ್ಡ್‌ ಪಿಸ್ತೂಲ್‌ ವಿಭಾಗದಲ್ಲಿ 15 ವರ್ಷದ ಅನೀಶ್‌ ಅವರು 579 ಸ್ಕೋರ್‌ ಕಲೆಹಾಕಿ ಭಾರತದ ಖಾತೆಗೆ ಮೊದಲ ಚಿನ್ನ ಸೇರ್ಪಡೆ ಮಾಡಿದರು.

ಈ ವಿಭಾಗದ ಬೆಳ್ಳಿ ಜರ್ಮನಿಯ ಫ್ಲೋರಿಯನ್‌ ಪೀಟರ್‌ ಅವರ ಪಾಲಾಯಿತು. ಪೀಟರ್‌ ಅವರು 572 ಸ್ಕೋರ್‌ ಸಂಗ್ರಹಿಸಿದರು.

ಉಕ್ರೇನ್‌ನ ಪ್ಯಾಬ್ಲೊ ಕೊರೊ ಸ್ಟ್ಯಾಲೊ (570) ಕಂಚು ತಮ್ಮದಾಗಿಸಿ ಕೊಂಡರು.

ಈ ವರ್ಷದ ಆರಂಭದಲ್ಲಿ ಜೆಕ್‌ ಗಣರಾಜ್ಯದಲ್ಲಿ ನಡೆದಿದ್ದ ಅಂತರ ರಾಷ್ಟ್ರೀಯ ಶೂಟಿಂಗ್‌ ಸ್ಪರ್ಧೆಯಲ್ಲೂ ಅನೀಶ್‌ ಅವರು ಚಿನ್ನ ಮತ್ತು ಕಂಚಿನ  ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದರು.

ತಂಡ ವಿಭಾಗದಲ್ಲಿ ಅನೀಶ್‌, ಅನಹದ್‌ ಜವಾಂಡ ಮತ್ತು ಸಂಭಾಜಿ ಪಾಟೀಲ್‌ ಅವರಿದ್ದ ಭಾರತ ತಂಡ ಬೆಳ್ಳಿಯ ಸಾಧನೆ ಮಾಡಿತು. ಇವರು  ಒಟ್ಟಾರೆ 1678 ಸ್ಕೋರ್‌ ಕಲೆಹಾಕಿ ಮಿಂಚಿದರು. ಅನಹದ್‌  561 ಸ್ಕೋರ್‌ ಗಳಿಸಿದರೆ, ಪಾಟೀಲ್‌ ಅವರು 547 ಸ್ಕೋರ್‌ ಹೆಕ್ಕಿದರು.

ಜೂನಿಯರ್‌ ಮಹಿಳೆಯರ 50 ಮೀಟರ್ಸ್‌ ರೈಫಲ್‌ ಪ್ರೋನ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿದ್ದ ಶಿರಿನ್‌ ಗೊಡಾರ ಅವರು 21ನೇಯವರಾಗಿ ಸ್ಪರ್ಧೆ ಮುಗಿಸಿದರು. ಶಿರಿನ್‌ ಅವರು 615.9 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು.

ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರಸಿದ್ಧಿ ಮಹಾಂತ್‌ (609.8 ಸ್ಕೋರ್‌) ಮತ್ತು ಆಯುಷಿ ಪೊದ್ದರ್‌ (605.4) ಅವರು ಕ್ರಮವಾಗಿ 41 ಮತ್ತು  57ನೇ ಸ್ಥಾನಗಳಲ್ಲಿ ಕಾಣಿಸಿಕೊಂಡರು.

ಜೂನಿಯರ್‌ ಪುರುಷರ50 ಮೀಟರ್ಸ್‌ ರೈಫಲ್‌ ಪ್ರೋನ್‌ ವಿಭಾಗದಲ್ಲಿ  ಕಣಕ್ಕಿಳಿದಿದ್ದಫತೇಹ್‌ ಸಿಂಗ್‌ ಧಿಲ್ಲೋನ್‌ (617.3 ಸ್ಕೋರ್‌) 23ನೇ ಸ್ಥಾನ
ಗಳಿಸಿದರು. ಶುಭಾಂಕರ್‌ ಪ್ರಾಮಾಣಿಕ್‌ (615.9 ಸ್ಕೋರ್‌) 29ನೇಯವರಾಗಿ ಹೋರಾಟ ಮುಗಿಸಿದರು. ಸೈಯದ್‌ ಅರೈಬ್‌ ಪರ್ವೇಜ್‌ (606) 66ನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚುಗೆದ್ದಿರುವ ನಾರ್ವೆ ತಂಡ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಭಾರತ ತಂಡ ನಂತರದ ಸ್ಥಾನ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT