ರಾಷ್ಟ್ರಪತಿ ಹುದ್ದೆಯ ಘನತೆ

ಪ್ರಜಾಪ್ರಭುತ್ವದಲ್ಲಿ ಯಾರೇ ಆಗಲಿ ಯಾವುದೇ ಹುದ್ದೆಗೆ ಏರಲು ಅವರ ಬಳಿ ಸಂಖ್ಯಾ ಬಲ ಇರಬೇಕು ಎನ್ನುವುದು ತುಂಬ ಮುಖ್ಯವಾಗಿರುತ್ತದೆ. ವ್ಯಕ್ತಿಯೊಬ್ಬನಿಗೆ ಅರ್ಹತೆ ಇರಲಿ ಅಥವಾ ಇಲ್ಲದಿರಲಿ, ಘನತೆಯನ್ನು ಹೆಚ್ಚಿಸಿಕೊಳ್ಳುವುದೇ ಇಲ್ಲಿ ನಿಜವಾದ ಸವಾಲು ಇರುತ್ತದೆ.

ರಾಷ್ಟ್ರಪತಿ ಹುದ್ದೆಯ ಘನತೆ

ರಾಮ ನಾಥ್‌ ಕೋವಿಂದ್‌ ಅವರು ದೇಶದ 14ನೇ ರಾಷ್ಟ್ರಪತಿ ಯಾಗಿ ಆಯ್ಕೆಯಾಗುವರೇ ಅಥವಾ ಇಲ್ಲವೇ ಎನ್ನುವುದು ಸದ್ಯಕ್ಕೆ ಅಕಾಡೆಮಿಕ್‌ ಆದ ಪ್ರಶ್ನೆಯಾಗಿದೆ. ಅವರ ಬದ್ಧ ರಾಜಕೀಯ ಹಿಂಬಾಲಕರು, ಸಾರ್ವಜನಿಕ ಬದುಕಿನಲ್ಲಿನ ಅವರ ಸಾಧನೆಗಳನ್ನು ಹಾಡಿ ಹೊಗಳುತ್ತಿದ್ದಾರೆ. 2007ರಲ್ಲಿ ಕಾಂಗ್ರೆಸ್‌ ಪಕ್ಷವು ಪ್ರತಿಭಾ ಪಾಟೀಲ್‌ ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಪ್ರಕಟಿಸಿದಾಗ ಹಲವು ಹಗರಣಗಳಲ್ಲಿ ಅವರ ಹೆಸರುಗಳು ತಳಕು ಹಾಕಿಕೊಂಡ ಪ್ರಕರಣಗಳು ಬಹಿರಂಗಗೊಂಡಾಗ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟಾಗಿತ್ತು. ಸಕ್ಕರೆ, ಸಹಕಾರಿ ಬ್ಯಾಂಕ್‌ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರತಿಭಾ ಪಾಟೀಲ್‌ ಅವರ ಪ್ರಶ್ನಾರ್ಹ ವ್ಯವಹಾರ ಗಳಿಗೆ ಸಂಬಂಧಿಸಿದಂತೆ ನನ್ನ ಪತ್ರಿಕೆಯಲ್ಲಿ ಸರಣಿಯೋಪಾದಿ ಯಲ್ಲಿ ವಿಶೇಷ ವರದಿಗಳು ಪ್ರಕಟಗೊಳ್ಳುತ್ತಿದ್ದವು.

ಇಂತಹ ವರದಿಗಳ ಪ್ರಕಟಣೆ ತಡೆಯುವ ಉದ್ದೇಶದಿಂದ ಒಂದು ದಿನ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಮಾವಿನ ಹಣ್ಣಿನ ಬುಟ್ಟಿಯೊಂದಿಗೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಮಾತಿನ ಸಂದರ್ಭದಲ್ಲಿ, ‘ನಿಮ್ಮ ವರದಿಗಾರರ ಬರಹಗಳು ಸರಿಯಾಗಿವೆ’ ಎಂದು ಅವರು ಹೇಳಿದ್ದರು. ‘ನೀವೇ ಹೀಗೆ ಹೇಳುವಾಗ, ನಾವು ಆ ವರದಿಗಳ ಪ್ರಕಟಣೆಯನ್ನು ಯಾವ ಕಾರಣಕ್ಕೆ ನಿಲ್ಲಿಸಬೇಕು ಹೇಳಿ’ ಎಂದು ನಾನು ಅವರನ್ನು ಮರು ಪ್ರಶ್ನಿಸಿದ್ದೆ. ಅದಕ್ಕೆ ಅವರು ನೀಡಿದ ಉತ್ತರ ತುಂಬ ಆಸಕ್ತಿ ದಾಯಕವಾಗಿತ್ತು. ‘ಒಳ್ಳೆಯದೋ, ಕೆಟ್ಟದ್ದೋ, ಜುಲೈ 25ಕ್ಕೆ ಪ್ರತಿಭಾ ಪಾಟೀಲ್‌ ಅವರು ಭಾರತ ಗಣರಾಜ್ಯದ ರಾಷ್ಟ್ರಪತಿ ಆಗಲಿದ್ದಾರೆ. ಈ ಎಲ್ಲ ಕೆಸರನ್ನು ಹೊರ ತೆಗೆದು ನಿಮ್ಮ ರಾಷ್ಟ್ರಪತಿಗೆ ಕೆಟ್ಟ ಹೆಸರು ತರುವುದರಿಂದ ಆಗುವ ಪ್ರಯೋಜನಗಳೇನು’ ಎಂದು ಅವರು ನನ್ನನ್ನು ಪ್ರಶ್ನಿಸಿದ್ದರು. ಅಂದು ಕಾಂಗ್ರೆಸ್‌, ಪ್ರತಿಭಾ ಪಾಟೀಲ್‌ ಪರ ನೀಡಿದ್ದ ಕೆಲ ಸಮರ್ಥನೆಗಳನ್ನೇ ಈ ಸಂದರ್ಭದಲ್ಲಿ ಹೋಲಿಕೆ ಮಾಡಬಹುದು.

ಸುದೀರ್ಘ ಕಾಲ ಸಂಸದೀಯ ಪಟು ಆಗಿದ್ದವರು, ಗವರ್ನರ್‌ ಹುದ್ದೆಯಲ್ಲಿ ಇದ್ದವರು, ಮೊದಲ ಮಹಿಳಾ ರಾಷ್ಟ್ರಪತಿ ಎನ್ನುವ ಹೆಸರಿನಲ್ಲಿ ಈ ಹುದ್ದೆ ಅಲಂಕರಿಸಿದ್ದಾರೆ. ಒಳ್ಳೆಯದೊ ಕೆಟ್ಟದ್ದೊ ಅನೇಕರು ಈ ಹುದ್ದೆಗೆ ಏರಿದ್ದಾರೆ. ರಾಷ್ಟ್ರಪತಿ ಅವರನ್ನು ಚುನಾಯಿಸುವ ಜನಪ್ರತಿನಿಧಿಗಳಿಗೆ ಸಂಬಂಧಿಸಿದಂತೆ ಬಹುಮತ ಹೊಂದಿದ ಏಕೈಕ ಕಾರಣಕ್ಕೆ ಕಾಂಗ್ರೆಸ್‌ ಪಕ್ಷ ಮತ್ತು ಯುಪಿಎ ಸರ್ಕಾರವು ಪ್ರತಿಭಾ ಪಾಟೀಲ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವಲ್ಲಿ ನಿರ್ಲಜ್ಜೆಯಿಂದ ನಡೆದುಕೊಂಡಿದ್ದವು.

ಪ್ರತಿಭಾ ಪಾಟೀಲ್‌ ಅವರು ರಾಷ್ಟ್ರಪತಿ ಹುದ್ದೆ ಅಲಂಕರಿಸು ವುದು ಎಂದರೆ, ಅತ್ಯಂತ ಗೌರವಾನ್ವಿತ ರಾಷ್ಟ್ರಪತಿ ಸ್ಥಾನಮಾನ ವನ್ನು ನಾಮಕಾವಾಸ್ತೆಯ ಹುದ್ದೆಯನ್ನಾಗಿಸಿ ಅದರ ಘನತೆ ಯನ್ನು ಕೆಳಮಟ್ಟಕ್ಕೆ ಇಳಿಸಿದಂತಾಗುವುದು ಎಂದು ಅನೇಕರು ಟೀಕಿಸಿದ್ದರು. ಅಂತಹ ಟೀಕಾಕಾರರಲ್ಲಿ ನಾನೂ ಒಬ್ಬನಾಗಿದ್ದೆ.

ರಾಜಕೀಯ ಅನುಭವದ ವಿಷಯದಲ್ಲಿ ಹೇಳುವುದಾದರೆ, ಕೋವಿಂದ್‌ ಅವರು ಪ್ರತಿಭಾ ಪಾಟೀಲ್‌ ಅವರಿಗಿಂತ ಹಿಂದೆ ಇದ್ದಾರೆ. ಆದರೆ, ಶೈಕ್ಷಣಿಕ ಅರ್ಹತೆ, ಕಾನೂನು ಪರಿಜ್ಞಾನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಷ್ಕಳಂಕ ವ್ಯಕ್ತಿತ್ವದವರಾಗಿದ್ದಾರೆ. ಅವರ ಅನುಭವ, ಸಾಧನೆಗಳ ವಿಷಯದಲ್ಲಿ ಯಾರೊಬ್ಬರೂ ಅವರ ಬಗ್ಗೆ ಅಸಹನೆಯಿಂದ ಮಾತನಾಡುವುದಿಲ್ಲ. ವ್ಯಕ್ತಿಯೊಬ್ಬನ ವೈಯಕ್ತಿಕ ಸಾಧನೆಗಳೇ ಉನ್ನತ ಹುದ್ದೆಗಳಿಗೆ ಏರುವವರ ಅರ್ಹತೆಯ ಮಾನದಂಡವಾಗಿರುವುದೇ ಅಥವಾ ಸಾಧನೆಗಳೇ ಇಲ್ಲದ ವ್ಯಕ್ತಿಗಳು ಅನರ್ಹಗೊಳ್ಳುವರೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ದೇಶದಲ್ಲಿ ರಾಷ್ಟ್ರಪತಿ ಆದವರೆಲ್ಲ, ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಹೊಂದಿರುವ, ಸಾಮಾಜಿಕ ಅಥವಾ ರಾಜಕೀಯ ಹಿನ್ನೆಲೆ ಆಧರಿಸಿ ಈ ಹುದ್ದೆಗೆ ಏರಿಲ್ಲ. ಒಂದೆಡೆ, ವಿದ್ವಾಂಸ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌, ಇನ್ನೊಂದೆಡೆ ಅನಕ್ಷರಸ್ಥ ಗ್ಯಾನಿ ಜೈಲ್‌ಸಿಂಗ್ ಅವರದ್ದು ತದ್ವಿರುದ್ಧ ನಿದರ್ಶನಗಳಾಗಿವೆ.

ರಾಜಕೀಯ ಘಟಾನುಘಟಿಗಳಾದ ಡಾ. ರಾಜೇಂದ್ರ ಪ್ರಸಾದ್‌ ಮತ್ತು ಶಂಕರ್‌ ದಯಾಳ್‌ ಶರ್ಮಾ ಒಂದೆಡೆ ಇದ್ದರೆ, ಇನ್ನೊಂದೆಡೆ ಅಷ್ಟೇನೂ ಪ್ರಭಾವಿ ಅಲ್ಲದ ವಿ. ವಿ. ಗಿರಿ ಇದ್ದರು. ಗೌರವಾನ್ವಿತರಾದ ಮತ್ತು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ಮುಸ್ಲಿಂ ರಾಜಕಾರಣಿ ಝಾಕೀರ್‌ ಹುಸೇನ್‌ ಅವರನ್ನು ಭಾರತ ಕಂಡಿರುವಂತೆ, ಸಂಪೂರ್ಣವಾಗಿ ಮರೆಯುವಂತಹ ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರೂ ಇದ್ದಾರೆ. ನಾಗರಿಕ ಸೇವೆಗೆ ಸೇರಿದ (ವಿದೇಶಾಂಗ ಇಲಾಖೆ) ಕೆ. ಆರ್‌. ನಾರಾಯಣನ್‌ ಅವರಂತೆ ರಾಕೆಟ್‌ ವಿಜ್ಞಾನಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರೂ ಈ ಹುದ್ದೆ ಅಲಂಕರಿಸಿದ್ದರು.

ಇದುವರೆಗೆ ನಾವು ಕಂಡಿರುವ ರಾಷ್ಟ್ರಪತಿಗಳ ಪೈಕಿ, ಯಾರೊಬ್ಬರೂ ಈ ಉನ್ನತ ಹುದ್ದೆಯ ಘನತೆಗೆ ಕುಂದು ತರುವ ಬಗೆಯಲ್ಲಿ ವರ್ತಿಸಿಲ್ಲ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಇಂದಿರಾ ಗಾಂಧಿ ಹೊರಡಿಸಿದ ತುರ್ತುಪರಿಸ್ಥಿತಿ ಘೋಷಿಸುವ ಸುಗ್ರೀವಾಜ್ಞೆಯನ್ನು ಓದುವ ಗೋಜಿಗೂ ಹೋಗದೆ ಕಣ್ಣುಮುಚ್ಚಿ ಸಹಿ ಹಾಕಿದ ಫಕ್ರುದ್ದೀನ್‌ ಅಲಿ ಅಹ್ಮದ್‌ ಮತ್ತು ಗ್ಯಾನಿ ಜೈಲ್‌ಸಿಂಗ್‌ ಅವರು ಪ್ರಧಾನಿ ರಾಜೀವ್‌ ಗಾಂಧಿ ಅವರ ವಿರುದ್ಧ ರಾಜಕೀಯ ಒಳಸಂಚು ರೂಪಿಸಲು ರಾಷ್ಟ್ರಪತಿ ಭವನವನ್ನೇ ಅಡ್ಡೆಯನ್ನಾಗಿ ಬಳಸಿಕೊಳ್ಳಲು ಅನುಮತಿ ನೀಡಿದ್ದ ಎರಡು ಸಂದರ್ಭಗಳು ಮಾತ್ರ ಇದಕ್ಕೆ ಅಪವಾದಗಳಾಗಿವೆ.

ರಾಷ್ಟ್ರಪತಿ ಹುದ್ದೆ ಅಲಂಕರಿಸಿದವರ ಪೈಕಿ ಯಾರ ಅಧಿಕಾರಾವಧಿ ಹೆಚ್ಚು ಸ್ಮರಣೀಯವಾಗಿದೆ ಮತ್ತು ಯಾರನ್ನು ಮರೆಯಬೇಕು ಎನ್ನುವ ನಿರ್ಧಾರಕ್ಕೆ ಬರಲು ನಾವು ಪ್ರತ್ಯೇಕ ಮಾನದಂಡಗಳನ್ನು ಅನುಸರಿಸಬೇಕು. ಇದಕ್ಕಾಗಿ ನಾವು ಐವತ್ತರ ಮತ್ತು ಅರವತ್ತರ ದಶಕಗಳಷ್ಟು ಹಿಂದೆ ಹೋಗಬೇಕಾಗಿಲ್ಲ. ಐವತ್ತು ವರ್ಷಗಳ ಹಿಂದೆ ಜನಿಸಿದ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ 21ನೆ ಶತಮಾನದಲ್ಲಿ ಜನಿಸಿದವರು ಕೂಡ ವಿ. ವಿ . ಗಿರಿ ಮತ್ತು ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರ ಅಧಿಕಾರಾವಧಿಯನ್ನು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಿರಿಯ ತಲೆಮಾರಿನವರನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್‌ ಪಕ್ಷ ಒಡೆಯಲು ಇಂದಿರಾ ಗಾಂಧಿ ಅವರು ಪ್ರಮುಖ ದಾಳ ವನ್ನಾಗಿ ಬಳಸಿಕೊಂಡ ವಿ. ವಿ. ಗಿರಿ ಅವರ ಅಧಿಕಾರಾವಧಿ ಮತ್ತು ತುರ್ತುಪರಿಸ್ಥಿತಿ ಸುಗ್ರೀವಾಜ್ಞೆಗೆ ಹಿಂದೆ ಮುಂದೆ ನೋಡದೆ ಸಹಿ ಹಾಕಿದ ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರ ಅಧಿಕಾರಾವಧಿಯನ್ನು ಯಾರೊಬ್ಬರೂ ನೆನಪಿಸಿಕೊಳ್ಳುವುದಿಲ್ಲ.

ನನ್ನ ತಲೆಮಾರಿನವರಿಗಂತೂ ಪ್ರತಿಭಾನ್ವಿತ ವ್ಯಂಗ್ಯಚಿತ್ರ ಕಲಾವಿದ ಅಬು ಅಬ್ರಹಾಂ ಅವರು ಬರೆದಿದ್ದ ಕಾರ್ಟೂನ್‌ ತುಂಬ ಅರ್ಥಪೂರ್ಣವಾಗಿತ್ತು. ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರು, ಬಾತ್‌ಟಬ್‌ನಲ್ಲಿ ಬರಿಮೈಯಲ್ಲಿ ಇದ್ದುಕೊಂಡೆ ಸಹಿ ಹಾಕಿದ ದಾಖಲೆ ಪತ್ರ ಮತ್ತು ಪೆನ್‌ ಹಿಡಿದುಕೊಂಡು, ‘ಇನ್ನೂ ಏನಾದರೂ ಸುಗ್ರೀವಾಜ್ಞೆಗಳು ಇವೆಯೇ, ಕೆಲ ನಿಮಿಷ ಕಾಯಲು ಅವರಿಗೆ ಹೇಳಿ’ ಎಂದು ತಮ್ಮ ಸಿಬ್ಬಂದಿಗೆ ಹೇಳುವ ಕಾರ್ಟೂನ್‌, ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಕೆಲವರು ಯಾವ ಕನಿಷ್ಠ ಮಟ್ಟಕ್ಕೆ ಕುಗ್ಗಿಸಿದ್ದರು ಎನ್ನುವುದನ್ನು ಅರ್ಥಗರ್ಭಿತವಾಗಿ ಬಿಂಬಿಸಿತ್ತು.

ಇವರೆಲ್ಲರಿಗಿಂತ ಕಲಾಂ ಅವರ ಅಧಿಕಾರಾವಧಿಯು ಜನಮಾನಸದಲ್ಲಿ ಹೆಚ್ಚು ನೆನಪಿನಲ್ಲಿ ಉಳಿದಿದೆ. ಅದಕ್ಕೆ, ಬಿಹಾರ ರಾಜಕೀಯ ಬೆಳವಣಿಗೆಗಳಲ್ಲಿ ಮಧ್ಯಪ್ರವೇಶಿಸಿದ ಮತ್ತು ಕೊಲಿಜಿಯಂ ವ್ಯವಸ್ಥೆಯ ಹೊರತಾಗಿಯೂ ನಂಬಿಕೆಗೆ ಅರ್ಹವಲ್ಲದ ನ್ಯಾಯಾಂಗದ ನೇಮಕಾತಿಗಳಿಗೆ ಉತ್ತೇಜನ ಕೊಟ್ಟಿದ್ದು ಕಾರಣವಲ್ಲ, ಗುಜರಾತ್‌ ಗಲಭೆ ನಂತರ ದೇಶದಲ್ಲಿ ಶಾಂತಿ ನೆಲೆಸಲು ಮತ್ತು ‘ಆಪರೇಷನ್‌ ಪರಾಕ್ರಮ’ ಸಂದರ್ಭದಲ್ಲಿ ಯುದ್ಧದಂತಹ ಪರಿಸ್ಥಿತಿ ಉದ್ಭವಗೊಂಡಿದ್ದಾಗ ಅವರು ದೇಶದಾದ್ಯಂತ ಬೀರಿದ್ದ ಪ್ರಭಾವವನ್ನು ಇಲ್ಲಿ ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ರಾಜಕೀಯ ಅಸ್ಥಿರತೆ, ಅಲ್ಪಾವಧಿಯ ಸರ್ಕಾರಗಳು ಅಧಿಕಾರದಲ್ಲಿ ಇದ್ದ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ವೆಂಕಟರಾಮನ್‌ ಮತ್ತು ಶಂಕರ್‌ ದಯಾಳ್‌ ಶರ್ಮಾ ಇನ್ನಷ್ಟು ಗಟ್ಟಿಗೊಳಿಸಿದ್ದರು. ನಾರಾಯಣನ್‌ ಅವರು ರಾಷ್ಟ್ರಪತಿ ಹುದ್ದೆಯ ನೈತಿಕ ಮತ್ತು ಬೌದ್ಧಿಕ ಸ್ಥಾನಮಾನವನ್ನು ಈ ಮುಂಚಿನ ರಾಧಾಕೃಷ್ಣನ್‌ ಅಧಿಕಾರಾವಧಿಯಲ್ಲಿಯ ಮಟ್ಟಕ್ಕೆ ಹೋಲಿಸುವ ರೀತಿಯಲ್ಲಿ ಔನ್ನತ್ಯಕ್ಕೆ ತೆಗೆದುಕೊಂಡು ಹೋಗಿದ್ದರು, ರಾಷ್ಟ್ರಪತಿಗಳನ್ನು ಸ್ಮರಿಸಿಕೊಳ್ಳುವಲ್ಲಿ ವಿಶ್ವಾಸ, ಉಪಕಾರ ಸ್ಮರಣೆ ಮನೋಭಾವ ಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ರಾಷ್ಟ್ರಪತಿ ಹುದ್ದೆಯ ಇತಿಹಾಸ ಪರಿಗಣನೆಗೆ ತೆಗೆದು ಕೊಂಡರೆ, ವ್ಯಕ್ತಿಯ ಶೈಕ್ಷಣಿಕ ಅರ್ಹತೆ, ರಾಜಕೀಯ ದಾಖಲೆ, ಜಾತಿ, ಧರ್ಮ ಅಥವಾ ಸಾಮಾಜಿಕ ಹಿನ್ನೆಲೆ ಪರಿಗಣನೆಗೆ ತೆಗೆದುಕೊಂಡಿಲ್ಲದಿರುವುದು ಕಂಡು ಬರುತ್ತದೆ. ರಾಷ್ಟ್ರಪತಿ ಹುದ್ದೆಗೆ ಏರುವರರ ಶೈಕ್ಷಣಿಕ ಅರ್ಹತೆಯು ಯಾವತ್ತೂ ಮುಖ್ಯ ಮಾನದಂಡವಾಗಿ ಪರಿಗಣಿಸಿಲ್ಲ. ವ್ಯಕ್ತಿತ್ವದ ಘನತೆಯ ಮಟ್ಟವೇ ಇಲ್ಲಿ ಮುಖ್ಯವಾಗಿ ಪರಿಗಣಿಸಲಾಗುತ್ತಿತ್ತು. ಕಲಾಂ, ವೆಂಕಟರಾಮನ್‌ ಮತ್ತು ನಾರಾಯಣನ್‌ ಅವರಲ್ಲಿ ಇಂತಹ ಗುಣಲಕ್ಷಣಗಳು ಇದ್ದವು. ವಿ. ವಿ. ಗಿರಿ, ಅಹ್ಮದ್‌ ಮತ್ತು ಪ್ರತಿಭಾ ಪಾಟೀಲ್‌ ಅವರಲ್ಲಿ ಇಂತಹ ಯಾವುದೇ ವಿಶಿಷ್ಟ ಗುಣಗಳೇ ಇದ್ದಿರಲಿಲ್ಲ.

ಪ್ರಜಾಪ್ರಭುತ್ವದಲ್ಲಿ ಯಾರೇ ಆಗಲಿ ಯಾವುದೇ ಹುದ್ದೆಗೆ ಏರಲು ಅವರ ಬಳಿ ಸಂಖ್ಯಾ ಬಲ ಇರಬೇಕು ಎನ್ನುವುದು ತುಂಬ ಮುಖ್ಯವಾಗಿರುತ್ತದೆ. ವ್ಯಕ್ತಿಯೊಬ್ಬನಿಗೆ ಅರ್ಹತೆ ಇರಲಿ ಅಥವಾ ಇಲ್ಲದಿರಲಿ, ಘನತೆಯನ್ನು ಹೆಚ್ಚಿಸಿಕೊಳ್ಳುವುದೇ ಇಲ್ಲಿ ನಿಜವಾದ ಸವಾಲು ಇರುತ್ತದೆ.

ನಮ್ಮ ಸಂವಿಧಾನದಲ್ಲಿ ರಾಷ್ಟ್ರಪತಿ ಹುದ್ದೆಯೊಂದು ಬರೀ ಅಲಂಕಾರಿಕ ಹುದ್ದೆಯಾಗಿದೆಯಷ್ಟೆ. ರಾಜ್ಯಪಾಲ ಹುದ್ದೆಗಿಂತ ಹೆಚ್ಚು ನಾಮಕಾವಾಸ್ತೆಯದಾಗಿದೆ. ರಾಜ್ಯಪಾಲರೊಬ್ಬರು ರಾಜಕೀಯ ಚದುರಂಗದಾಟ ನಡೆಸಬಹುದು ಮತ್ತು ರಾಷ್ಟ್ರಪತಿ ಅಧಿಕಾರಾವಧಿಯಲ್ಲಿ ನಿಜವಾದ ಅಧಿಕಾರ ಚಲಾಯಿಸಬಹುದು. ರಾಷ್ಟ್ರಪತಿಯು ಸಂವಿಧಾನದ ಮುಖ್ಯ ಪೋಷಕನಾಗಿ ಮತ್ತು ಗಣರಾಜ್ಯದ ವೈಭವದ ಸಂಕೇತವಾಗಿ ಇರಬೇಕು ಎಂದು ನಮ್ಮ ಸಂವಿಧಾನ ರಚನೆಕಾರರು ಅಭಿಪ್ರಾಯ ಹೊಂದಿದ್ದರು.

ಕೋವಿಂದ್‌ ಅವರ ಸಾಮರ್ಥ್ಯವನ್ನು ನಾವು ಮೊದಲೇ ಅಂದಾಜಿಸಲು ಸಾಧ್ಯವಿಲ್ಲ. ಅವರು ಎಲ್ಲ ಸಿನಿಕರನ್ನು ಚಕಿತ ಗೊಳಿಸಿ ಅನೇಕರ ನಿರೀಕ್ಷೆಗಳನ್ನು ಹುಸಿಗೊಳಿಸಲೂಬಹುದು. ರಾಷ್ಟ್ರಪತಿ ಹುದ್ದೆಯ ಘನತೆಗೆ ಸಂಬಂಧಿಸಿದಂತೆ ಎರಡೂ ಕಡೆಯ ರಾಜಕೀಯ ಪಕ್ಷಗಳು ರಾಷ್ಟ್ರಪತಿ ಹುದ್ದೆಯ ಮಹತ್ವ ಕುಗ್ಗಿಸುವಂತಹ ನಿಲುವು ತಳೆದಿದ್ದರೆ, ಜನಸಾಮಾನ್ಯರು ಆ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ.

ಕೊನೆಯದಾಗಿ ಇಲ್ಲಿ, ರಾಷ್ಟ್ರಪತಿ ಗ್ಯಾನಿ ಜೈಲ್‌ ಸಿಂಗ್ ಅವರ ಹಾಸ್ಯ ಪ್ರಜ್ಞೆ ಮತ್ತು ಅವರಲ್ಲಿನ ಚತುರ ರಾಜಕಾರಣದ ಗುಣಗಳ ಬಗ್ಗೆ ಉಲ್ಲೇಖಿಸಲೇಬೇಕು. ಪಾಕಿಸ್ತಾನದ ಅಧ್ಯಕ್ಷ ರಾಗಿದ್ದ ಜಿಯಾ ಉಲ್‌ ಹಕ್‌ ಅವರು 1987ರ ಫೆಬ್ರುವರಿ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್‌ ಪಂದ್ಯ ವೀಕ್ಷಿಸುವ ನೆಪದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ‘ಆಪರೇಷನ್‌ ಬ್ರಾಸ್‌ಟ್ಯಾಕ್ಸ್‌’ ಕುರಿತು ಉಭಯ ದೇಶಗಳ ಮಧ್ಯೆ ಉದ್ಭವಿಸಿದ್ದ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಭೇಟಿಯಾಗುವುದೂ ಅವರ ಉದ್ದೇಶವಾಗಿತ್ತು.

ಈ ಸಂದರ್ಭದಲ್ಲಿ ಜೈಲ್‌ ಸಿಂಗ್‌ ಅವರನ್ನು ಭೇಟಿ ಯಾದಾಗ, ‘ಅಲಂಕಾರಿಕ ರಾಷ್ಟ್ರಪತಿ ಹುದ್ದೆಯಲ್ಲಿ ನೀವು ಇರು ವಂತೆ, ನಮ್ಮಲ್ಲಿಯೂ ಇರುವ ಪ್ರಧಾನಿ ಮುಹಮ್ಮದ್‌ ಖಾನ್‌ ಜುನೆಜೊ ಅವರದ್ದು ಕೂಡ ಬರೀ ಅಲಂಕಾರಿಕ ಹುದ್ದೆ’ ಎಂದು ಜಿಯಾ ಪಂಜಾಬಿ ಭಾಷೆಯಲ್ಲಿ ಲೇವಡಿ ಮಾಡಿದ್ದರು. ‘ಜಿಯಾ ಸಾಹೇಬರೆ, ಇಲ್ಲೊಂದು ಮುಖ್ಯ ವ್ಯತ್ಯಾಸ ಇದೆ. ನನ್ನ ನೌಕರಿ ಎಂದು ಕೊನೆಗೊಳ್ಳಲಿದೆ ಎನ್ನುವುದು ನನಗೆ ಗೊತ್ತು. ಆದರೆ, ನೀವು ಎಷ್ಟು ದಿನ ಅಧಿಕಾರದಲ್ಲಿ ಇರಬೇಕು ಎನ್ನುವುದನ್ನು ನೀವೇ ನಿರ್ಧರಿಸುವಿರಿ’ ಎಂದು ಜೈಲ್‌ ಸಿಂಗ್‌ ಅವರು ಹಾಸ್ಯದ ಧಾಟಿಯಲ್ಲಿಯೇ ತಕ್ಕ ಉತ್ತರ ನೀಡಿದ್ದರು.

ಈ ಭೇಟಿ ನಡೆದ ನಂತರದ ಕೆಲವೇ ದಿನಗಳಲ್ಲಿ ಜೈಲ್‌ ಸಿಂಗ್‌ ಅವರು ರಾಷ್ಟ್ರಪತಿ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಆದರೆ, 1988ರಲ್ಲಿ ನಡೆದ ‘ಸಿ–130’ ವಿಮಾನ ದುರ್ಘಟನೆಯಲ್ಲಿ ವಿಧಿಯು ಬಲಿಪಡೆಯುವವರೆಗೆ ಜಿಯಾ ಉಲ್ ಹಕ್‌ ಅವರು ಇನ್ನೂ ಒಂದು ವರ್ಷ ಕಾಲ ಅಧಿಕಾರದಲ್ಲಿ ಮುಂದುವರೆದಿದ್ದರು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

Comments
ಈ ವಿಭಾಗದಿಂದ ಇನ್ನಷ್ಟು
ಕವಲು ಹಾದಿಯಲ್ಲಿ ‘ಎಎಪಿ’

ರಾಷ್ಟ್ರಕಾರಣ
ಕವಲು ಹಾದಿಯಲ್ಲಿ ‘ಎಎಪಿ’

18 Mar, 2018
ಬದಲಾವಣೆಗೆ ಒಗ್ಗದ ಎಡಪಕ್ಷಗಳು

ರಾಷ್ಟ್ರಕಾರಣ
ಬದಲಾವಣೆಗೆ ಒಗ್ಗದ ಎಡಪಕ್ಷಗಳು

11 Mar, 2018
ಬಿಜೆಪಿಯ ದಂಗುಬಡಿಸುವ ಚಾಣಾಕ್ಷತೆ

ರಾಷ್ಟ್ರಕಾರಣ
ಬಿಜೆಪಿಯ ದಂಗುಬಡಿಸುವ ಚಾಣಾಕ್ಷತೆ

4 Mar, 2018
ಸಂಯಮ ರೂಢಿಸಿಕೊಳ್ಳದ ಕೇಜ್ರಿವಾಲ್‌

ರಾಷ್ಟ್ರಕಾರಣ
ಸಂಯಮ ರೂಢಿಸಿಕೊಳ್ಳದ ಕೇಜ್ರಿವಾಲ್‌

25 Feb, 2018
ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶ ವಿಫಲ

ರಾಷ್ಟ್ರಕಾರಣ
ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶ ವಿಫಲ

18 Feb, 2018