ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಪ್ರಶ್ನೆ ಎಂಬ ಅರಿವಿನ ಹತಾರ

Last Updated 25 ಜೂನ್ 2017, 19:30 IST
ಅಕ್ಷರ ಗಾತ್ರ

ನಿಜವಾದ ಕಲಿಕೆಗೆ ನಾವು ಪ್ರಶ್ನೆ ಕೇಳುವುದನ್ನು ಕಲಿಯಬೇಕು; ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಎಂದರೇ ಇರುವುದನ್ನು ಪ್ರಶ್ನೆ ಮಾಡಿ, ಪರೀಕ್ಷಿಸಿ, ಆನಂತರ ಮಾತ್ರ ಒಪ್ಪಿಕೊಳ್ಳುವುದು ಎಂದು ಕೇಳಿರುತ್ತೇವೆ. ಆದರೆ, ಇದರ ತರ್ಕ ಅರಿಯದೇ ಸುಮ್ಮನೇ ಪ್ರಶ್ನೆ ಕೇಳಿದರೆ ಆಯಿತು, ಅದಕ್ಕೆ ಉತ್ತರ ಹೇಳಿದರೆ ಆಯಿತು - ಎನ್ನುವ ರೀತಿಯಿಂದ ಏನೂ ಸಾಧಿಸಿದಂತೆ ಆಗುವುದಿಲ್ಲ. ಅರ್ಥವಾಗದಿದ್ದಾಗ ಪ್ರಶ್ನೆ ಕೇಳಿದರೆ ಸರಿ.

ಸುಮ್ಮಸುಮ್ಮನೆ ಏಕೆ ಕೇಳಬೇಕು? ಎಲ್ಲ ವಿಚಾರಗಳ ಬಗ್ಗೆಯೂ ಪ್ರಶ್ನೆ ಕೇಳುತ್ತ ಕುಳಿತರೆ, ಸಮಯ ಹಾಳಾಗುತ್ತದೆಯೇ ವಿನಾ ಜ್ಞಾನವೇನೂ ಬೆಳೆಯುವುದಿಲ್ಲ. ಹಾಗಾದರೆ ಏನಿದು ಪ್ರಶ್ನೆಯ ರಹಸ್ಯ? ಒಂದು ಕೆಲಸ ಮಾಡಲು ಬರುತ್ತದೆ ಎನ್ನುವುದನ್ನು ಸಾಬೀತು ಮಾಡುವುದು ಹೇಗೆ? ಆ ಕೆಲಸವನ್ನು ಕ್ಷಮತೆಯಿಂದ ಮಾಡಿದರಾಯಿತು. ಭಾಗಾಕಾರ ಮಾಡಲು ಬರುತ್ತದೆಯೇ ಎನ್ನುವುದಕ್ಕೆ ಪುರಾವೆ ಭಾಗಾಕಾರ ಮಾಡಿ ತೋರಿಸುವುದು. ಆದರೆ, ವಿಚಾರಗಳಿಗೆ ಸಂಬಂಧಿಸಿದಂತೆ ಈ ಕ್ರಮ ಸಾಕಾಗುವುದಿಲ್ಲ. ಸಸ್ಯಗಳು ಆಹಾರವನ್ನು ಹೇಗೆ ಉತ್ಪಾದಿಸುತ್ತವೆ ಎನ್ನುವ ಬಗ್ಗೆ ನನಗೆ ಜ್ಞಾನ ಇದೆ ಎಂದು ಸಾಬೀತು ಮಾಡುವುದು ಹೇಗೆ? ದ್ಯುತಿಸಂಶ್ಲೇಷಣೆಯಿಂದ ಸಸ್ಯಗಳು ಆಹಾರ ಉತ್ಪಾದನೆ ಮಾಡುತ್ತವೆ ಎಂದು ನಾನು ಹೇಳಿದರೆ ಸಾಕೆ? ಸಾಧ್ಯವಿಲ್ಲ. ಏಕೆಂದರೆ, ಏನೂ ತಿಳಿಯದ ಮಗುವಿಗೂ ಈ ವಾಕ್ಯವನ್ನು ಉರು ಹೊಡೆಸಿ ಹೇಳಿಸಬಹುದು.

ಹಾಗೆ ಹೇಳಿದ ಮಾತ್ರಕ್ಕೆ ಆ ಮಗುವಿಗೆ ಆಹಾರೋತ್ಪಾದನೆಯ ಬಗ್ಗೆ ಜ್ಞಾನವಿದೆ ಎಂದೇನೂ ಆಗುವುದಿಲ್ಲವಲ್ಲ? ಇಂತಹ ಸಮಸ್ಯೆಯನ್ನು ನಿವಾರಿಸಲು 20ನೇ ಶತಮಾನದ ತತ್ವಶಾಸ್ತ್ರಜ್ಞರು ಒಂದು ಪರಿಹಾರರೂಪಿಯಾದ ಸೂತ್ರವನ್ನು ಕಂಡುಹಿಡಿದಿದ್ದರು. ಜ್ಞಾನವೆಂದರೆ ಜಸ್ಟಿಫೈಡ್ ಟ್ರೂ ಬಿಲೀಫ್‌ಗಳಿಂದ (ಜೆಟಿಬಿ) ಕೂಡಿರುವ ಮಾತುಗಳು ಎನ್ನುವುದೇ ಅವರ ಸೂತ್ರ. ಏನಿದು ಜೆಟಿಬಿ ಸಿದ್ಧಾಂತ? ನಾವಾಡುವ ಮಾತುಗಳಿಗೆ ನಮಗೇ ಆಧಾರವಿದ್ದು, ಆ ಆಧಾರ ಸತ್ಯವಾಗಿದ್ದು, ಆ ಸತ್ಯವನ್ನು ನಂಬಬಹುದಾದ ಸ್ಥಿತಿಯಲ್ಲಿ ನಾವಿದ್ದರೆ ಮಾತ್ರ ನಮ್ಮ ಮಾತು ಜ್ಞಾನವಾಗುತ್ತದೆ. ಏಕೆ ಇಷ್ಟೆಲ್ಲಾ ದ್ರಾವಿಡ ಪ್ರಾಣಾಯಾಮ? ಇಲ್ಲಿದೆ ನೋಡಿ ಸಮಸ್ಯೆ. 

ಈಗ ಸಮಯ ಮಧ್ಯಾಹ್ನ ಮೂರೂವರೆ ಎಂದಿಟ್ಟುಕೊಳ್ಳಿ. ನೀವು ಗಂಟೆ ಎಷ್ಟು? ಎಂದು ನನ್ನನ್ನು ಕೇಳುತ್ತೀರಿ. ನಾನು ಗಡಿಯಾರ ನೋಡಿ 'ಈಗ ಸಮಯ ಮೂರೂವರೆ' ಎಂದೂ ಹೇಳುತ್ತೀನಿ. ಈಗ ನನಗೆ ನಿಜವಾಗಿಯೂ ಇದರ ಜ್ಞಾನ ಇದೆಯೇ ಎಂದು ಪರೀಕ್ಷಿಸುವುದು ಹೇಗೆ? ನನ್ನಂತೆಯೇ, ನನ್ನ ಗಡಿಯಾರವೂ ಈಗ ಮೂರೂವರೆ ಎಂದೇ ಹೇಳುತ್ತಿದೆ. ಹಾಗಾದರೆ, ಗಡಿಯಾರವೂ ಸತ್ಯ ಹೇಳುತ್ತಿದೆಯೇ? ನಾವು ರೂಪಿಸುವ ಯಾವುದೋ ನಿಯಮಕ್ಕೆ ಅನುಗುಣವಾಗಿ ಗಡಿಯಾರದ ಮುಳ್ಳುಗಳು ತಿರುಗುತ್ತದೆಯೇ ಹೊರತೂ ಗಡಿಯಾರಕ್ಕೆ ತಾನು ತೋರಿಸುವ ಸಮಯದ ಬಗ್ಗೆ ಯಾವ ನಂಬಿಕೆಯೂ ಇಲ್ಲ. ಆದರೆ ನನಗೆ ಹಾಗಲ್ಲ. ಈಗ ಗಂಟೆ ಇಷ್ಟು ಎಂದು ನಿಮಗೆ ನಾನು ಹೇಳುತ್ತಿದ್ದೇನೆ ಎಂದರೆ ಅರ್ಥ ನಾನೂ ಅದನ್ನು ನಂಬಿದ್ದೇನೆ ಎಂದೇ.

ನಾನೇ ನಂಬದ ವಿಚಾರವನ್ನು ನಿಮಗೆ ಹೇಳಿದರೆ ಅದು ಜ್ಞಾನವಾಗುವುದಿಲ್ಲ. ನಮ್ಮ ಮಾತಿನ ಮೇಲೆ ನಮಗೇ ನಂಬಿಕೆ ಇದ್ದರೆ ಸಾಲದು, ಆ ಮಾತು ಸತ್ಯವೂ ಆಗಿರಬೇಕು. ಇಲ್ಲದಿದ್ದರೆ ನನ್ನ ಮಾತು ಜ್ಞಾನವಾಗಲು ಸಾಧ್ಯವಿಲ್ಲ. ನನ್ನೆಲ್ಲಾ ನಂಬಿಕೆಯ ಬಲವನ್ನು ಒಟ್ಟುಗೂಡಿಸಿ ನಂಬಿದರೂ, ಈಗ ಗಂಟೆ ಮೂರೂವರೆ ಆಗುವುದಿಲ್ಲ. ಈಗ ಗಂಟೆ ಮೂರೂವರೆ ಆಗಿದ್ದರೆ ಮಾತ್ರ ಈಗ ಗಂಟೆ ಮೂರೂವರೆ ಎನ್ನುವ ನನ್ನ ನಂಬಿಕೆಗೆ ಬಲ ಬರುತ್ತದೆ. ನನ್ನ ಮಾತಿನ ಮೇಲೆ ನನಗೆ ನಂಬಿಕೆ ಇದ್ದು, ಆ ಮಾತು ಸತ್ಯವೇ ಆಗಿದ್ದರೂ ಸಾಕಾಗುವುದಿಲ್ಲ. ಈಗ ಸಮಯ ನಿಜವಾಗಿಯೂ ಮೂರೂವರೆ ಎಂದಿಟ್ಟುಕೊಳ್ಳಿ. ನನ್ನ ಗಡಿಯಾರವೂ ಮೂರೂವರೆ ಎಂದೇ ತೋರಿಸುತ್ತಿದೆ. ಆದರೆ, ನಿನ್ನೆಯೇ ಮೂರೂವರೆಗೆ ನನ್ನ ಗಡಿಯಾರ ಕೆಟ್ಟುಹೋಗಿದೆ.

ನಾನು ಅದನ್ನು ನೋಡಿಕೊಂಡಿಲ್ಲ. ಹಾಗಾಗಿ ಅದನ್ನೇ ನಿಜವೆಂದು ನಂಬಿ ಹೇಳುತ್ತಿದ್ದೇನೆ. ನನಗೆ ನನ್ನ ಉತ್ತರದ ಮೇಲೆ ನಂಬಿಕೆಯೂ ಇದೆ. ನನ್ನ ಉತ್ತರ ಸತ್ಯವೂ ಆಗಿದೆ. ಆದರೂ ಇದೂ ಜ್ಞಾನವಾಗಲು ಸಾಧ್ಯವಿಲ್ಲ. ಗಡಿಯಾರ ತೋರಿಸುವ ಸಮಯ ಸರಿಯಾಗಿದೆ ಎನ್ನುವುದಕ್ಕೆ ನನಗೆ ಆಧಾರವೂ ಇರಬೇಕು.

1963ರಲ್ಲಿ ಗೆಟಿಯರ್ ಎಂಬ ತತ್ವಶಾಸ್ತ್ರಜ್ಞ ಒಂದು ಕಾಲ್ಪನಿಕ ಸನ್ನಿವೇಶವನ್ನು ರೂಪಿಸಿ, ಈ ಸಿದ್ಧಾಂತವನ್ನೇ ತಲೆಕೆಳಗಾಗಿಸಿದ. ಪಾಟೀಲ ಮತ್ತು ಕುಲಕರ್ಣಿ ಎಂಬ ಇಬ್ಬರು ಕೆಲಸಕ್ಕೆ ಅರ್ಜಿ ಹಾಕಿದ್ದಾರೆ. ಕುಲಕರ್ಣಿಯ ಪ್ರಕಾರ ಪಾಟೀಲನಿಗೇ ಕೆಲಸ ಸಿಗುವುದು ಖಂಡಿತ. ಜೊತೆಗೇ, ಕುಲಕರ್ಣಿಗೆ ತಿಳಿದಿರುವಂತೆ, ಪಾಟೀಲನ ಜೇಬಿನಲ್ಲಿ ಹತ್ತು ರುಪಾಯಿ ಇದೆ. ಹಾಗಾಗಿ ಜೇಬಿನಲ್ಲಿ ಹತ್ತು ರೂಪಾಯಿ ಇರುವವರಿಗೆ ಕೆಲಸ ಸಿಗುತ್ತದೆ ಎನ್ನುವ ವಾಕ್ಯ ಸರಿಯಾಗುತ್ತದೆ. ಸಂದರ್ಶನದ ಫಲಿತಾಂಶ ಬಂದಾಗ, ಪಾಟೀಲನಿಗೆ ಕೆಲಸ ಸಿಗುವ ಬದಲು, ಕುಲಕರ್ಣಿಗೇ ಕೆಲಸ ಸಿಕ್ಕಿರುತ್ತದೆ.

ಜೊತೆಗೆ, ತನಗೇ ಗೊತ್ತಿಲ್ಲದೇ, ಕುಲಕರ್ಣಿಯ ಜೇಬಿನಲ್ಲೂ ಹತ್ತು ರೂಪಾಯಿ ಇರುತ್ತದೆ. ಈಗ ಕುಲಕರ್ಣಿಯ ಮಾತು ನಿಜವೇ ಆಯಿತು. ಜೇಬಿನಲ್ಲಿ ಹತ್ತು ರೂಪಾಯಿ ಇರುವವರಿಗೆ ಕೆಲಸ ಸಿಗುತ್ತದೆ. ಆದರೆ, ಕುಲಕರ್ಣಿ ಈ ಮಾತನ್ನು ಹೇಳಿಕೊಂಡಿದ್ದು ತನ್ನ ಬಗ್ಗೆ ಅಲ್ಲ. ಪಾಟೀಲನ ಬಗ್ಗೆ. ಕುಲಕರ್ಣಿಗೆ ತನ್ನ ಮಾತಿನಲ್ಲಿ ನಂಬಿಕೆಯೂ ಇದೆ. ಆ ಮಾತು ನಿಜವೂ ಆಗಿದೆ. ನಿಜವಾಗುವುದಕ್ಕೆ ಬೇಕಾದ ಆಧಾರವೂ ಕುಲಕರ್ಣಿಗಿದೆ. ಆದರೂ ಇಷ್ಟರಿಂದಲೇ ಕುಲಕರ್ಣಿಗೆ ಈ ವಿಚಾರದಲ್ಲಿ ಜ್ಞಾನವಿದೆ ಎಂದಾಗುವುದಿಲ್ಲ. ಇದ್ದ ಒಂದು ಸಿದ್ಧಾಂತವನ್ನು ಹೀಗೆ ತಲೆಕೆಳಗು ಮಾಡಿದ ಗೆಟಿಯರ್, ಹೊಸ ಸಿದ್ದಾಂತವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಹೀಗಾಗಿ, ಜ್ಞಾನ ಎಂದರೆ ನಿಜಕ್ಕೂ ಏನು ಎನ್ನುವ ಪ್ರಶ್ನೆ ಎಲ್ಲರನ್ನೂ ಮತ್ತೆ ಕಾಡಲು ಶುರುಮಾಡಿದೆ.

ಪ್ರಶ್ನೆ ಮತ್ತು ಪರಿಪ್ರಶ್ನೆಯ ವಿಚಾರ ಮುಖ್ಯವಾಗುವುದು ಈಗ. ಒಂದು ವಿಚಾರದಲ್ಲಿ ಒಬ್ಬ ವ್ಯಕ್ತಿಗೆ ಜ್ಞಾನವಿದೆ ಎಂದರೆ ಅರ್ಥ ಅವನಿಗೆ ಅದರ ಬಗ್ಗೆ ನಂಬಿಕೆ ಇದೆಯೇ ಎನ್ನುವುದಲ್ಲ. ಮಳೆಗಾಲದಲ್ಲಿ ಸಾಮಾನ್ಯವಾಗಿ ಮಳೆ ಬರುತ್ತದೆ ಎಂದು ನನಗೆ ಗೊತ್ತು. ಆದರೆ, ಅದರ ಹಿಂದೆ ಯಾವ ನಂಬಿಕೆಯೂ ಇಲ್ಲ. ಯಾಕೆ ಮಳೆ ಬರುತ್ತದೆ ಎನ್ನುವ ವಿಜ್ಞಾನ ನನಗೆ ಗೊತ್ತಿಲ್ಲ. ಹಾಗೆಂದು, ಕಪ್ಪೆ ಮದುವೆ ಮಾಡಿದ್ದರಿಂದ ಮಳೆ ಬಂತು ಎನ್ನುವ ಅಡಗೂಲಜ್ಜಿ ಕತೆಯನ್ನು ನಾನು ನಂಬುವುದೂ ಇಲ್ಲ. ಹೇಗೇ ನೋಡಿದರೂ, ನನ್ನ ಜ್ಞಾನಕ್ಕೆ ನಂಬಿಕೆಯನ್ನು ಆರೋಪಿಸುವುದು ಕಷ್ಟ. ಹಾಗೆಯೇ, ನನ್ನ ಜ್ಞಾನಕ್ಕೆ ಸತ್ಯದ ಜೊತೆಗೆ ನಿಕಟವಾದ ಸಂಬಂಧವೂ ಇಲ್ಲ. ಈ ಬಾರಿ ಮಳೆ ಕೈಕೊಟ್ಟಿತು ಎಂದುಕೊಳ್ಳಿ. ಅಷ್ಟಕ್ಕೇ, ಮಳೆಗಾಲದಲ್ಲಿ ಮಳೆ ಬರುತ್ತದೆ ಎನ್ನುವ ನನ್ನ ಜ್ಞಾನವೇನೂ ತಪ್ಪಾಗುವುದಿಲ್ಲ. ಈ ಬಾರಿ ಏನೋ ಮಳೆ ಕೈಕೊಟ್ಟಿದೆ ಅಷ್ಟೆ.

ಆದರೆ, ಒಟ್ಟಾರೆ ನನ್ನ ಜ್ಞಾನ ಸರಿಯಾಗಿಯೇ ಇದೆ. ಅಂತೆಯೇ, ನನ್ನ ಜ್ಞಾನಕ್ಕೆ ಆಧಾರವೇನು ಎಂದು ಕೇಳಿದರೆ, ನನ್ನ ಅನುಭವ ಎಂದು ಹೇಳಬಹುದಷ್ಟೆ. ಆದರೆ, ಅನುಭವಕ್ಕೂ ಸತ್ಯಕ್ಕೂ ಸಂಬಂಧ ಇದೆ ಎನ್ನುವುದು ನಿಜವಾದರೂ, ಆ ಸಂಬಂಧ ನಿರ್ದಿಷ್ಟವಾಗಿ ಏನು ಎಂದು ಹೇಗಿದ್ದರೂ ಯಾರಿಗೂ ತಿಳಿದಿಲ್ಲ. ದಿನಾ ಸೂರ್ಯ ಪೂರ್ವದಿಂದ ಪಶ್ಚಿಮಕ್ಕೆ ಹಾದುಹೋಗುವಂತೆ ಅನುಭವವಾಗುತ್ತದಲ್ಲ. ಅಷ್ಟಕ್ಕೇ ಅದೇನೂ ಸತ್ಯವಲ್ಲ.

ಹಾಗೆಂದು ಅದು ಸುಳ್ಳು ಎಂದಲ್ಲ. ಆದರೆ, ಹಾಗೆ ಕಾಣುತ್ತದೆ ಎನ್ನುವುದು ಸತ್ಯ ಅಷ್ಟೆ. ಹಾಗಾದರೆ, ಯಾರಿಗಾದರೂ ಯಾವುದರ ಬಗ್ಗೆಯಾದರೂ ಜ್ಞಾನ ಇದೆ ಎಂದು ಹೇಗೆ ಹೇಳುವುದು? ಒಂದು ವಿಚಾರದ ಬಗ್ಗೆ ನಾವು ಕೇಳುವ ಪ್ರಶ್ನೆಗಳು ಯಾವ ರೀತಿ ಇರುತ್ತವೆ ಎನ್ನುವುದರ ಮೇಲೆ ನಮಗೆ ಜ್ಞಾನವಿದೆಯೋ ಇಲ್ಲವೋ, ಇದ್ದರೆ ಎಷ್ಟಿದೆ ಎನ್ನುವುದನ್ನು ನಿರ್ಧರಿಸಬಹುದು. ಅಂಗಡಿಯ ಜಮಾ ಖರ್ಚಿನ ಲೆಕ್ಕದ ಪುಸ್ತಕ ನಿಮಗೆ ಕೊಡುತ್ತೇನೆ. ಆ ಪುಸ್ತಕವನ್ನು ತೆಗೆದು ನೋಡಿ ನೀವು, ಏನಿದು ಸಾಲು ಸಾಲು ಸಂಖ್ಯೆಗಳಿವೆಯಲ್ಲ? ಎಂದು ಕೇಳಿದರೆ, ನಿಮಗೆ ಅಕೌಂಟೆನ್ಸಿಯ ಜ್ಞಾನ ಅಷ್ಟಕ್ಕಷ್ಟೆ ಎಂದು ಹೇಳಬಹುದು. ಬದಲಾಗಿ, ಏಕೆ ಇಲ್ಲಿ ಜಮಾ ಮತ್ತು ಖರ್ಚು ತಾಳೆ ಆಗುತ್ತಿಲ್ಲವಲ್ಲ? ಎಂದು ಕೇಳಿದರೆ, ಆಗ ನಿಮಗೆ ಇದರ ಬಗ್ಗೆ ಜ್ಞಾನವಿದೆ ಎಂದು ತಿಳಿಯಬಹುದಷ್ಟೆ?

ಶಾಲಾದಿನಗಳಲ್ಲಿ, ನಮ್ಮ ಪಕ್ಕದ ಮನೆಗೆ ಅವರ ಸಂಬಂಧಿಕರ ಹುಡುಗ ಒಬ್ಬ ಬಹರೇನ್‌ನಿಂದ ಬಂದಿದ್ದ. ನಾವು ದಿನಾ ಸಂಜೆ ಗಲ್ಲಿ ಕ್ರಿಕೆಟ್ ಆಡುತ್ತಿದ್ದೆವು. ಅವನೂ ಬಂದು ಸೇರಿಕೊಂಡ. ಪ್ರತಿ ಟೀಮಲ್ಲೂ ಎಷ್ಟು ಜನ? ಎಂದು ಕೇಳಿದ. ನಾಲ್ಕು ನಾಲ್ಕು ಜನ ಎಂದೆವು. ಎಷ್ಟು ಓವರ್ ಮ್ಯಾಚು ಎಂದು ಕೇಳಿದ. ಎಂಟೆಂಟು ಓವರು ಎಂದೆವು. ಅದೇ ಗಾಂಭೀರ‍್ಯದಲ್ಲಿ, ಒಂದು ಓವರಿಗೆ ಎಷ್ಟು ಬಾಲ್‌ಗಳು - ಎಂದು ಕೇಳಿದ. ಆಗ ಬಯಲಾಯಿತು ಅವನ ದಗಾ. ಆಸಾಮಿಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿರಲಿಲ್ಲ. ಸುಮ್ಮನೆ ತನಗೂ ಗೊತ್ತಿದೆ ಎಂದು ತೋರಿಸಿಕೊಳ್ಳಲು ಪ್ರಶ್ನೆ ಕೇಳುತ್ತಿದ್ದ.

ಕ್ರಿಕೆಟ್ ಬಗ್ಗೆ ಗೊತ್ತಿರುವ ಯಾವನಿಗಾದರೂ ತಿಳಿದಿರುವ ವಿಚಾರವೇನೆಂದರೆ, ಸಾಮಾನ್ಯವಾಗಿ ಓವರುಗಳು, ಆಡುವವರು, ಇವನ್ನೆಲ್ಲಾ ನಮ್ಮನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತೇವೆ. ಆದರೆ, ಒಂದು ಓವರಿಗೆ ಆರು ಬಾಲ್‌ಗಳು ಎನ್ನುವ ನಿಯಮವನ್ನು ಮಾತ್ರ ತಪ್ಪದೇ ಪಾಲಿಸುತ್ತೇವೆ. ಪ್ರಶ್ನೆ ಕೇಳುವುದು ಮುಖ್ಯ. ಆದರೆ, ಅದಕ್ಕಿಂತ ಮುಖ್ಯ, ಯಾರಿಗಾದರೂ ಯಾವುದರ ಬಗ್ಗೆಯಾದರೂ ಜ್ಞಾನ ಇದೆ ಎಂದು ಹೇಳಬೇಕಾದರೆ, ಸದ್ಯಕ್ಕೆ ನಮಗಿರುವ ಏಕೈಕ ಮಾಪಕವೆಂದರೆ ಅವರು ಕೇಳುವ ಪ್ರಶ್ನೆಗಳು ಎಷ್ಟು ಪ್ರಸ್ತುತವಾಗಿದೆ ಮತ್ತು ಎಷ್ಟು ಪ್ರಮುಖವಾಗಿದೆ ಎಂದು ತಿಳಿಯುವುದು.

ಅಂದಮೇಲೆ, ಜ್ಞಾನವನ್ನು ಪಡೆಯುವುದು ಎಂದರೆ, ಒಂದು ವಿಚಾರದ ಬಗ್ಗೆ, ಒಂದು ಸಂದರ್ಭದ ಬಗ್ಗೆ ನಮ್ಮ ಪ್ರಶ್ನೆಗಳನ್ನು ನಿಶಿತಗೊಳಿಸಿಕೊಳ್ಳುತ್ತ ಹೋಗುವ ಪ್ರಯತ್ನ. ಬರೀ ಸರಿಯಾದ ಉತ್ತರಗಳನ್ನು ಕೂಡಿಟ್ಟುಕೊಳ್ಳುವ ಕೆಲಸವಲ್ಲ. ಜೆಟಿಬಿ ಸಿದ್ಧಾಂತದ ಒಂದು ಮುಖ್ಯ ದೋಷ ಇದ್ದದ್ದು ಇಲ್ಲಿಯೇ. ಅದು ಜ್ಞಾನವನ್ನು ನಮಗೆ ಗೊತ್ತಿರುವ ವಿಚಾರಗಳು ಅಥವಾ ನಮಗೆ ತಿಳಿದಿರುವ ಉತ್ತರಗಳು ಎಂದುಕೊಂಡಿತ್ತು. ಸರಿಯಾದ ಉತ್ತರ ಜ್ಞಾನಕ್ಕೆ ಪೂರಕವೇ ಹೊರತೂ, ಅದೇ ಜ್ಞಾನವಲ್ಲ. ಸರಿಯಾದ ಪ್ರಶ್ನೆಯನ್ನು ಕೇಳುವ ಛಾತಿಯೇ ನಿಜವಾದ ಜ್ಞಾನ. ಅದೂ ಮಾಡುತ್ತಲೇ ಕಲಿಯಬೇಕಾದ ಕೌಶಲ.
                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT