ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಹೊಸ ಭರವಸೆ

Last Updated 25 ಜೂನ್ 2017, 19:30 IST
ಅಕ್ಷರ ಗಾತ್ರ

‘ಪಾಕಿಸ್ತಾನವಿಡೀ ನಮ್ಮ ಬೆಂಬಲಕ್ಕೆ ನಿಂತಿತ್ತು. ಇದರೊಂದಿಗೆ ಅಲ್ಲಾಹುವಿನ ಕರುಣೆಯೂ ನಮ್ಮ ಮೇಲೆ ಇತ್ತು. ಹೀಗಾಗಿ ಗುರಿ ಸಾಧಿಸಿದೆವು. ಜನರ ಪ್ರೋತ್ಸಾಹಕ್ಕೆ ತಂಡ ಸದಾ ಋಣಿಯಾಗಿರುತ್ತದೆ....’

ಪಾಕಿಸ್ತಾನದ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್‌ ಅವರ ಮಾತುಗಳಿವು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ಟ್ರೋಫಿ ಹಿಡಿದುಕೊಂಡು ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅದ್ದೂರಿಯಾಗಿ ಸ್ವಾಗತಿಸಿದ ಜನರ ಬಗ್ಗೆ ಅವರು ಆಡಿದ ಮಾತುಗಳು .

ಪಾಕಿಸ್ತಾನ ತಂಡದಲ್ಲಿ ವಿವಿಧ ಸಂದರ್ಭದಲ್ಲಿ ಆಪದ್ಭಾಂದವನ ಪಾತ್ರ ವಹಿಸಿದ ಅವರು ಈಗ ಏಕದಿನ ಮತ್ತು ಟ್ವೆಂಟಿ–20 ತಂಡಗಳ ನಾಯಕ. ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಮಣಿಸಿ ಚಾಂಪಿಯನ್ಸ್‌ ಟ್ರೋಫಿ ಎತ್ತಿ ಹಿಡಿದ ನಂತರ ಇಡೀ ದೇಶದ ಯುವಜನರಿಗೆ ಮಾದರಿ ಎನಿಸಿದ್ದಾರೆ. ಆತ್ಮೀಯರು ‘ಸೈಫಿ’ ಎಂದು ಪ್ರೀತಿಯಿಂದ ಕರೆಯುವ ಸರ್ಫರಾಜ್‌ ಜನರ ಕಣ್ಮಣಿಯಾಗಿದ್ದಾರೆ.

ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ನಡೆಯುವ ಸರಣಿಯಲ್ಲಿ ಅವರಿಗೆ ಟೆಸ್ಟ್‌ ತಂಡದ ನಾಯಕನ ಹೊಣೆ ಹೊರಿಸುವುದಕ್ಕೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ಧವಾಗಿದೆ. ಸಿಕ್ಕಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರುವುದೇ ತಂಡದ ಆಡಳಿತ ಅವರ ಮೇಲೆ ವಿಶ್ವಾಸವಿರಿಸಲು ಕಾರಣ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಆಟವಾಡಿದ್ದ ಸರ್ಫರಾಜ್‌ 2006ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಕಪ್ ಎತ್ತಿ ಹಿಡಿದಿದ್ದರು. 2007ರಿಂದ ಪಾಕಿಸ್ತಾನ ಏಕದಿನ ತಂಡದಲ್ಲಿದ್ದರೂ ಅವರ ಸಾಧನೆ ಸದ್ದಿಲ್ಲದೆ ಸಾಗಿತ್ತು. ಸ್ಫೋಟಕ ಬ್ಯಾಟ್ಸ್‌ಮನ್‌, ವಿಕೆಟ್ ಕೀಪರ್‌ ಕಮ್ರಾನ್ ಅಕ್ಮಲ್‌ ಅವರ ಬೆರಳಿಗೆ ಗಾಯವಾಗಿದ್ದರಿಂದ 2007ರಲ್ಲಿ ಕಣದಿಂದ ದೂರ ಉಳಿದಿದ್ದರು. ಆಗ ಒಳ್ಳೆಯ ವಿಕೆಟ್ ಕೀಪರ್‌ನನ್ನು ಹುಡುಕುತ್ತಿದ್ದ ಆಯ್ಕೆ ಸಮಿತಿಗೆ ಸುಲಭವಾಗಿ ಸಿಕ್ಕಿದವರು ಸರ್ಫರಾಜ್‌.

ಆ ವರ್ಷ ಭಾರತ ಎದುರಿನ ಏಕದಿನ ಸರಣಿಯಲ್ಲಿ ಅಕ್ಮಲ್‌ಗೆ ಬದಲಾಗಿ ತಂಡದಲ್ಲಿ ಸೇರಿಕೊಂಡ ಅವರು 2008ರ ಏಷ್ಯಾಕಪ್‌ನಲ್ಲಿ ಪೂರ್ಣಪ್ರಮಾಣದ ವಿಕೆಟ್‌ ಕೀಪರ್‌ ಆದರು. ಆದರೆ 2015ರ ವಿಶ್ವಕಪ್‌ ಕ್ರಿಕೆಟ್ ವರೆಗೆ ಹೆಚ್ಚು ಬೆಳಕಿಗೆ ಬರಲಿಲ್ಲ. ವಿಶ್ವಕಪ್‌ನ ಐದನೇ ಪಂದ್ಯದಲ್ಲಿ 49 ರನ್‌ ಗಳಿಸಿದ ಅವರು ಆರು ಕ್ಯಾಚ್‌ ಪಡೆದು ಮಿಂಚಿದರು. ವಿಶ್ವಕಪ್‌ನ ಏಕೈಕ ಇನಿಂಗ್ಸ್‌ನಲ್ಲಿ ಹೆಚ್ಚು ಕ್ಯಾಚ್‌ ಪಡೆದ ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರೈಸ್ಟ್ ಅವರ ದಾಖಲೆ ಸರಿಗಟ್ಟಿದರು. ಮುಂದಿನ ಪಂದ್ಯದಲ್ಲಿ ಔಟಾಗದೇ 101 ರನ್‌ ಗಳಿಸಿದರು.

ನಾಯಕ–ಉಪನಾಯಕ–ನಾಯಕ 2015ರ ವಿಶ್ವಕಪ್‌ ನಂತರ ಏಕದಿನ ಕ್ರಿಕೆಟ್‌ಗೆ ಮಿಸ್ಬಾ ಉಲ್‌ ಹಕ್‌ ವಿದಾಯ ಹೇಳುತ್ತಿದ್ದಂತೆ ಕ್ರಿಕೆಟ್‌ ಪ್ರಿಯರ ಮನದಲ್ಲಿ ಇದ್ದ ಹೆಸರು ಸರ್ಫರಾಜ್ ಅಹಮ್ಮದ್ ಅವರದ್ದು. ಆದರೆ ಅವರನ್ನು ಮತ್ತೆ 19 ವರ್ಷದೊಳಗಿನವರ ತಂಡದ ನಾಯಕನನ್ನಾಗಿ ಮಾಡಿದ ತಂಡದ ಆಡಳಿತ ಏಕದಿನ ತಂಡದ ಉಪನಾಯಕ ಪಟ್ಟವನ್ನೂ ನೀಡಿತು.

ಅಜರ್ ಅಲಿ ಅವರನ್ನು ನಾಯಕನನ್ನಾಗಿ ಮಾಡಿತು. ಆದರೆ ಅದೃಷ್ಟ ಅವರ ಕೈಬಿಡಲಿಲ್ಲ. ಅದೇ ವರ್ಷದ ಕೊನೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಗಾಯಗೊಂಡ ಅಜರ್ ಅಲಿ ಬದಲಿಗೆ ಸರ್ಫರಾಜ್ ತಂಡವನ್ನು ಮುನ್ನಡೆಸಿದರು. ನಾಯಕನಾಗಿ ಮೊದಲ ಪಂದ್ಯದಲ್ಲಿ ತಂಡಕ್ಕೆ ಜಯ ತಂದುಕೊಟ್ಟರು. 2017ರ ಫೆಬ್ರುವರಿಯಲ್ಲಿ ಅಜರ್ ಅಲಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ ಸರ್ಫರಾಜ್ ಪೂರ್ಣ ಪ್ರಮಾಣದ ನಾಯಕನಾದರು.

2016ರಲ್ಲಿ ಶಾಹೀದ್ ಅಫ್ರಿದಿ ಅವರನ್ನು ಟ್ವೆಂಟಿ–20 ತಂಡದ ನಾಯಕತ್ವದಿಂದ ಕೆಳಗಿಳಿಸಿದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಆ ತಂಡದ ಜವಾಬ್ದಾರಿಯನ್ನು ಸರ್ಫರಾಜ್‌ಗೆ ವಹಿಸಿತ್ತು. ಮೊದಲ ಪಂದ್ಯದಲ್ಲೇ ಅವರು ಇಂಗ್ಲೆಂಡನ್ನು ಮಣಿಸಿ ಯಶಸ್ಸು ಕಂಡರು.

ಟೆಸ್ಟ್‌ನಲ್ಲೂ ಅವರು ಕಮ್ರಾನ್ ಅಕ್ಮಲ್‌ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿದ್ದರು. 2010ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಪಾಕಿಸ್ತಾನ ತಂಡದಲ್ಲಿ ಅಕ್ಮಲ್ ಕಳಪೆ ಆಟವಾಡಿದ್ದರಿಂದ ಸರ್ಫರಾಜ್‌ಗೆ ಅವಕಾಶ ನೀಡಲಾಗಿತ್ತು. 2015ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನದ ಮೊದಲ ಟೆಸ್ಟ್‌ನಲ್ಲಿ 85 ಎಸೆತಗಳಲ್ಲಿ 96 ರನ್‌ ಗಳಿಸಿದ ನಂತರ ಮೂರೂ ಪ್ರಕಾರಗಳಲ್ಲಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡರು.

88888

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT