ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಜೋಸ್ನಾ ಮಿಂಚು

Last Updated 25 ಜೂನ್ 2017, 19:30 IST
ಅಕ್ಷರ ಗಾತ್ರ

ಸಾಧನೆಯ ಹಸಿವು ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಜೋಸ್ನಾ ಸಾಕ್ಷಿ. ಹಳಿಯಾಳ ತಾಲ್ಲೂಕಿನ ನಾಗಶೆಟ್ಟಿಕೊಪ್ಪ ಗ್ರಾಮದ ಅಥ್ಲೀಟ್ ವಿಶ್ವ ಶಾಲಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಅವಕಾಶ ಪಡೆದ ಕರ್ನಾಟಕದ ಏಕೈಕ ಅಥ್ಲೀಟ್ ಎನ್ನುವುದೇ ಹೆಮ್ಮೆ. ಇದರ ಬಗ್ಗೆ ಪ್ರಮೋದ ಜಿ.ಕೆ. ಬರೆದಿದ್ದಾರೆ.

ಅನಿವಾರ್ಯತೆಗಳೇ ಸಾಧನೆಗೆ ನಾಂದಿ ಎನ್ನುವ ಮಾತಿದೆ. ಎದುರಾದ ಸಂಕಷ್ಟಗಳನ್ನು ಸಕಾರಾತ್ಮಕ ಸ್ವೀಕರಿಸಿ ಅವುಗಳನ್ನೇ ಯಶಸ್ಸಿನ ಮೆಟ್ಟಿಲು ಮಾಡಿಕೊಂಡ ಅಥ್ಲೀಟ್ ಜೋಸ್ನಾ ಈಗ ವಿಶ್ವ ಶಾಲಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ನಾಗಶೆಟ್ಟಿ ಕೊಪ್ಪ ಗ್ರಾಮದ ಜೋಸ್ನಾ ಜೂನ್‌ 27ರಿಂದ ಫ್ರಾನ್ಸ್‌ನ ನ್ಯಾನ್ಸಿಯಲ್ಲಿ ನಡೆಯಲಿರುವ ಕೂಟದಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಏಕೈಕ ಅಥ್ಲೀಟ್‌ ಎನ್ನುವುದು ಇನ್ನೊಂದು ವಿಶೇಷ.

ವಿಶ್ವ ಕೂಟಕ್ಕೆ ಅರ್ಹತೆ ಪಡೆಯುವ ಸಲುವಾಗಿ ಗುಜ ರಾತ್‌ನ ವಡೋದರಲ್ಲಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟ ನಡೆದಿತ್ತು. ಅಲ್ಲಿ ಜೋಸ್ನಾ 17 ವರ್ಷದ ಒಳಗಿನವರ ಬಾಲಕಿಯರ ವಿಭಾಗದ 100 ಮೀಟರ್ಸ್‌ (ಕಾಲ: 12.32ಸೆಕೆಂಡ್‌) ಮತ್ತು 200 ಮೀಟರ್ಸ್‌ (ಕಾಲ: 25.36ಸೆ.) ಚಿನ್ನದ ಪದಕ ಜಯಿಸಿದ್ದರು. ಇದಕ್ಕೂ ಮೊದಲು ಧಾರವಾಡದಲ್ಲಿ ನಡೆದಿದ್ದ ರಾಜ್ಯ ಶಾಲಾ ಕೂಟದಲ್ಲಿ ಅವರು 100 ಮತ್ತು 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಹೆಚ್ಚುತ್ತಿದೆ ವೇಗ    
ಜೋಸ್ನಾ ಪ್ರತಿ ಕ್ರೀಡಾಕೂಟ ದಲ್ಲಿಯೂ ಉತ್ತಮ ಸಾಮರ್ಥ್ಯ ನೀಡುತ್ತಿದ್ದಾರೆ. ಹಂತ ಹಂತವಾಗಿ ವೇಗ ಹೆಚ್ಚಿಸಿ ಕೊಳ್ಳುತ್ತಿದ್ದಾರೆ. ಶಾಲಾ ಕೂಟದಲ್ಲಿ ರಾಜ್ಯ ದಾಖಲೆಯ ಸಮೇತ ಚಿನ್ನದ ಪದಕ ಜಯಿಸಿದ್ದು ಇದಕ್ಕೆ ಸಾಕ್ಷಿ.

100 ಮೀ ಟರ್ಸ್‌ ಓಟದ ಗುರಿಯನ್ನು ಅವರು 12.00 ಸೆಕೆಂಡುಗಳಲ್ಲಿ ಮುಟ್ಟಿದ್ದರು. 200 ಮೀಟರ್ಸ್ ತಲುಪಲು 24.94 ಸೆಕೆಂಡುಗಳನ್ನು ತೆಗೆದುಕೊಂಡಿದ್ದರು. 4X100 ಮೀ. ರಿಲೆ ತಂಡದಲ್ಲಿಯೂ ಇದ್ದರು.

ಸಿದ್ಧಿ ಜನಾಂಗದ ಸಾಧಕಿ
ಸಿದ್ಧಿ ಜನಾಂಗದ ಜೋಸ್ನಾ ಕಡುಬಡತನದಲ್ಲಿ ಬೆಳೆದವರು. ಅಪ್ಪ , ಅಮ್ಮ ಇಬ್ಬರೂ ಕೂಲಿ ಕಾರ್ಮಿಕರು. ‘ನಿತ್ಯ ಶಾಲೆಗೆ ಹೋಗುವಾಗ, ಮಕ್ಕಳ ಜೊತೆ ಆಡುವಾಗ ವೇಗವಾಗಿ ಓಡುತ್ತಿದ್ದೆ. ಓಡುವುದೆಂದರೆ ತುಂಬಾ ಇಷ್ಟ. ಇದನ್ನು ಗಮನಿಸಿದ ಕಾರ್ಮೆಂಟ್‌ ಶಾಲೆಯ ಕೋಚ್‌ ಚರ್ಚಿಲ್‌ ಸರ್‌ ವೃತ್ತಿಪರ ತರಬೇತಿ ಪಡೆದರೆ ಉತ್ತಮ ಭವಿಷ್ಯವಿದೆ. ನಿನಗೆ ಅಗತ್ಯವಿರುವ ಸೌಲಭ್ಯಗಳು ಹಳಿಯಾಳದಲ್ಲಿ ಇಲ್ಲ.

ಆದ್ದರಿಂದ ಆಳ್ವಾಸ್‌ ಸೇರಿಕೊಳ್ಳುವಂತೆ ಸಲಹೆ ನೀಡಿದರು. ಮೂಡುಬಿ ದಿರೆಗೆ ಬಂದಿದ್ದರಿಂದ ಸಾಕಷ್ಟು ಅವಕಾಶಗಳು ಲಭಿಸಿದವು. ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಲಭಿಸಿದೆ’ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

‘ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ ನಮ್ಮ ಜನಾಂಗದ ಸುಮಾರು 30 ಮನೆಗಳು ಇವೆ. ಮನೆಯಲ್ಲಿ ನಿತ್ಯ ಬಡತನ. ಅಪ್ಪ ಸಿಮೊವ್‌ ಮಂಗಳವಾಡ್ಕರ್, ಅಮ್ಮ ರೇಣುಕಾ ಕೂಲಿ ಮಾಡಿ ತಂದ ಹಣದಿಂದಲೇ ಮನೆ ನಡೆಯಬೇಕು. ಮನೆಯಲ್ಲಿ ಈ ರೀತಿಯ ಪರಿಸ್ಥಿತಿ ಇರುವಾಗ ಸಾಧನೆಯ ಕನಸು ಕಾಣುವುದಾದರೂ ಹೇಗೆ. ಆಗ ಬೆಳಕಾಗಿ ಬಂದಿದ್ದು ಆಳ್ವಾಸ್‌ ಸಂಸ್ಥೆ’ ಎಂದು ಜೋಸ್ನಾ ಹೇಳಿದರು.

ಆಳ್ವಾಸ್‌ಗೆ ಆಯ್ಕೆಯಾಗಿದ್ದು ಹೀಗೆ:
ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್‌ ಸಂಸ್ಥೆ ಪ್ರತಿವರ್ಷ ಪ್ರತಿಭಾನ್ವೇಷಣೆ ನಡೆಸುತ್ತದೆ. ಅಲ್ಲಿ ನಡೆದ ಟ್ರಯಲ್ಸ್‌ನಲ್ಲಿ ವೇಗವಾಗಿ ಓಡಿ ಉಚಿತ ಕ್ರೀಡಾ ತರಬೇತಿ ಮತ್ತು ಶಿಕ್ಷಣ ಪಡೆಯಲು ಅವಕಾಶ ಪಡೆದುಕೊಂಡಿದ್ದಾರೆ. ಈಗ ಪಿ.ಯು.ಸಿ. ಪ್ರಥಮ ವರ್ಷ ಓದುತ್ತಿದ್ದಾರೆ.

‘ಆಳ್ವಾಸ್‌ಗೆ ಬಂದ ಆರಂಭದಲ್ಲಿ 100 ಮೀ. ಗುರಿ ತಲುಪಲು 15 ಸೆಕೆಂಡ್‌ ತೆಗೆದುಕೊಳ್ಳುತ್ತಿದ್ದಳು. ವೇಗದಲ್ಲಿ ಈಗ ಸಾಕಷ್ಟು ಸುಧಾರಣೆಯಾಗಿದೆ. ಈಗಿರುವ ಸಾಮರ್ಥ್ಯ ಮುಂದುವರಿಸಿದರೆ ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಅವಕಾಶ ಇದೆ’ ಎಂದು ಆಳ್ವಾಸ್ ಸಂಸ್ಥೆಯ ಅಥ್ಲೆಟಿಕ್‌ ಕೋಚ್‌ ಶಾಂತರಾಮ ರೈ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT