ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಸುವಾತನ ಕೈ ಸೋತಾಗ..

Last Updated 25 ಜೂನ್ 2017, 19:30 IST
ಅಕ್ಷರ ಗಾತ್ರ

ಹೋದ ವರ್ಷ ಜೂನ್‌ನಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಿದಾಗ ಕೇವಲ ಒಂದು ವರ್ಷದ ಅವಧಿ ನೀಡಿದ್ದು ಏಕೆ? ಆಗ ರವಿಶಾಸ್ತ್ರಿ, ಟಾಮ್ ಮೂಡಿ, ಲಾಲ್‌ಚಂದ್ ರಜಪೂತ್ ಅವರನ್ನು ಬಿಟ್ಟು ಕುಂಬ್ಳೆಯವರನ್ನು ಆಯ್ಕೆ ಮಾಡಲಾಗಿತ್ತು.

ಈಗ ಏಕೆ ಅವರು ಬೇಡವಾದರು? ತಂಡಕ್ಕೆ ಯಾರು ಕೋಚ್ ಆಗಬೇಕು ಮತ್ತು ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ತಂಡದ ನಾಯಕನಿಗೆ ಕೊಟ್ಟಿದ್ದು ಯಾರು? ಕಳೆದ ಆರು ತಿಂಗಳಿಂದ ಕೋಚ್ ಮತ್ತು ನಾಯಕನ ನಡುವೆ ಮಾತುಕತೆ ಇರಲಿಲ್ಲವೆನ್ನಲಾಗುತ್ತಿದೆ.

ಹಾಗಿದ್ದರೆ ತಂಡದ ಮ್ಯಾನೇಜರ್ ಬಿಸಿಸಿಐಗೆ ಈ ವಿಷಯ ತಿಳಿಸಿರಲಿಲ್ಲವೇ? ತಂಡದ ಇಬ್ಬರು ಮುಖ್ಯ ವ್ಯಕ್ತಿಗಳ ನಡುವೆ ಸಂವಹನವೇ ಇಲ್ಲದಿದ್ದರೆ, ಯೋಜನೆ, ತರಬೇತಿ ಮತ್ತಿತರ ಕಾರ್ಯಗಳು ನಡೆದಿದ್ದಾದರೂ ಹೇಗೆ? ತಾರಾ ವರ್ಚಸ್ಸು ಇರುವ ಆಟಗಾರರು ತಮ್ಮಷ್ಟೇ ಅಥವಾ ತಮಗಿಂತ ಹೆಚ್ಚು ತಾರಾಮೌಲ್ಯ ಇರುವ ಕೋಚ್‌ಗಳನ್ನು ಇಷ್ಟಪಡುವುದಿಲ್ಲವೇ? ಒಬ್ಬ ವೃತ್ತಿಪರ ಎಂಜಿನಿಯರ್‌ ಮಾದರಿಯಲ್ಲಿ ತಂಡವನ್ನು ಕಟ್ಟಲು ಹೊರಟ ಕುಂಬ್ಳೆಯವರ ಕಾರ್ಯಶೈಲಿ ಉಳಿದವರಿಗೆ ಇಷ್ಟವಾಗಲಿಲ್ಲವೇ?

ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಅನಿಲ್ ಅವರು ರಾಜೀನಾಮೆ ಕೊಟ್ಟ ನಂತರ ಇಂತಹ ಹತ್ತಾರು ಪ್ರಶ್ನೆಗಳು ಕ್ರಿಕೆಟ್ ವಲಯದಲ್ಲಿ ಗಿರಕಿ ಹೊಡೆಯುತ್ತಿವೆ. ಆದರೆ, ಉತ್ತರ ಕೊಡಬೇಕಾದವರು ‘ಜಾಣ ಮೌನ' ವಹಿಸಿದ್ದರು.

ಈ ಎಲ್ಲ ಸಂಶಯಗಳ ಮೂಲ ಕೆದಕುತ್ತ ಹೋದರೆ ಆರೋಪಿ ಸ್ಥಾನದಲ್ಲಿ ನಿಲ್ಲುವುದು ಬಿಸಿಸಿಐ. ಮಂಡಳಿಯ ಪದಾಧಿಕಾರಿಗಳು ಕ್ರಿಕೆಟ್ ತಾರೆಯರ ಕೈಗೊಂಬೆಯಾಗಿದ್ದಾರೆ ಎನ್ನುವುದು ಇತ್ತೀಚೆಗೆ ಇತಿಹಾಸಕಾರ ರಾಮಚಂದ್ರ ಗುಹಾ ಅವರ ಪತ್ರದಿಂದ ಬಹಿರಂಗವಾಗಿದೆ.

ಕುಂಬ್ಳೆ ಅವರ ಪ್ರಕರಣದಲ್ಲಿ ಅದು ನಿಜವೂ ಆಗಿದೆ. ಕಳೆದ ಒಂದು ವರ್ಷದಲ್ಲಿ ಭಾರತ ತಂಡದ ಸೋಲು–ಗೆಲುವುಗಳನ್ನು ಬದಿಗಿಟ್ಟು ನೋಡಿದರೆ ಬಹುಶಃ ಈ ಪ್ರಶ್ನೆಗಳ ಮೇಲೆ ಕೊಂಚ ಬೆಳಕು ಬೀಳಬಹುದು.

ಕುಂಬ್ಳೆ ಬರೋಬ್ಬರಿ ಹದಿನೆಂಟು ವರ್ಷ ಭಾರತ ಕ್ರಿಕೆಟ್ ತಂಡಕ್ಕೆ ಆಡಿದ ಅನುಭವಿ. ಎಲ್ಲ ಮಾದರಿಗಳೂ ಸೇರಿ ಒಂದು ಸಾವಿರಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿಯೇ 619 ವಿಕೆಟ್‌ಗಳನ್ನು ಗಳಿಸಿದ್ದು ಅವರ ಸಾಧನೆ. ಪಂದ್ಯವೊಂದರಲ್ಲಿ ದವಡೆಗೆ ಬಲವಾದ ಪೆಟ್ಟು ಬಿದ್ದಾಗಲೂ ಹಿಂಜರಿಯದೇ ಬೌಲಿಂಗ್ ಮಾಡಿ ತಂಡದ ಗೆಲುವಿಗಾಗಿ ಹೋರಾಡಿದ್ದ ದಿಟ್ಟೆದೆಯ ಆಟಗಾರರಾಗಿದ್ದವರು.  

ಜೀವನದ ಯಾವುದೇ ಹಂತದಲ್ಲಿಯೂ ಸಭ್ಯತೆ ಮತ್ತು ದಿಟ್ಟ ಹೋರಾಟದ ಹಾದಿಯನ್ನು ಬಿಟ್ಟವರಲ್ಲ. ಆದರೆ ಇದೇ ಮೊದಲ ಬಾರಿ ಅವರು ಈ ರೀತಿ ವ್ಯವಸ್ಥೆಯಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣಗಳು ಹಲವಾರು ಇವೆ.

ಸುಧಾರಣೆಗಳ ಪರ್ವ: ಬಿಸಿಸಿಐ ಕೆಂಗಣ್ಣು ಹಲವು ವರ್ಷಗಳಿಂದ ಬಿಸಿಸಿಐ ವಿರೋಧಿಸಿಕೊಂಡು ಬಂದಿದ್ದ ಅಂಪೈರ್‌ ಮರುಪರಿಶೀಲನಾ ತೀರ್ಪು ವ್ಯವಸ್ಥೆಯು (ಯುಡಿಆರ್ಎಸ್) ಜಾರಿಗೊಳ್ಳಲು ಕಾರಣರಾದವರು ಕುಂಬ್ಳೆ ಅವರು. ಅವರು ಐಸಿಸಿ ಮತ್ತು ಇಂಗ್ಲೆಂಡ್‌ನ ಸಂಸ್ಥೆಯೊಂದರ ಜೊತೆಗೆ ಸೇರಿಕೊಂಡು ಯುಡಿಆರ್‌ಎಸ್‌ ಲೋಪಗಳನ್ನು ತಿದ್ದಿ ಭಾರತಕ್ಕೆ ತಂದವರು. ಹೋದ ವರ್ಷ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಅದು ಜಾರಿಗೆ ಬರಲು ಕಾರಣರಾದರು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಡಿಆರ್ಎಸ್ ಜಾರಿಯಾದ ನಂತರ ಐಸಿಸಿಯಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಆದರೆ ಬಿಸಿಸಿಐಗೆ ಇದು ದುಬಾರಿ ವ್ಯವಹಾರವಾಗಿತ್ತು. ಈ ಬಗ್ಗೆ ಮಂಡಳಿಯೊಳಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು. ಜನವರಿಯಲ್ಲಿ ಸುಪ್ರೀಂ ಕೋರ್ಟ್ ಚಾಟಿಯೇಟಿಗೆ ಅನುರಾಗ್ ಠಾಕೂರ್ ಮತ್ತು ಅಜಯ್ ಶಿರ್ಕೆ ಅವರು ಅಧಿಕಾರ ಕಳೆದುಕೊಂಡಿದ್ದರು. ನಂತರ ಆಡಳಿತದ ಉಸ್ತುವಾರಿ ವಹಿಸಿಕೊಂಡ ವಿನೋದ್ ರಾಯ್ ನೇತೃತ್ವದ ಸಮಿತಿಯು (ಸಿಒಎ) ಆಟಗಾರರ ಸಂಭಾವನೆ ಹೆಚ್ಚಳಕ್ಕೆ ಕುಂಬ್ಳೆ ಅವರಿಂದ ವರದಿ ಕೇಳಿತು. ಅನಿಲ್ ಅವರು ಆಟಗಾರರು, ನೆರವು ಸಿಬ್ಬಂದಿ, ತರಬೇತಿ ಸಿಬ್ಬಂದಿ ಮತ್ತು ತಮಗೂ ಸೇರಿದಂತೆ ಸಂಭಾವನೆಯನ್ನು  ಹೆಚ್ಚಳ ಮಾಡಬೇಕೆಂಬ ವರದಿಯನ್ನು ನೀಡಿದರು. ಈ ನಡೆಯೂ ಬಿಸಿಸಿಐ ಅಧಿಕಾರಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ಐಸಿಸಿ ಆದಾಯ ಹಂಚಿಕೆ ನೀತಿಯನ್ನು ಬಿಸಿಸಿಐ ವಿರೋಧಿಸಿತ್ತು. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ತಂಡವನ್ನು ಕಳುಹಿಸದಿರಲು ನಿರ್ಧರಿಸಿತ್ತು. ಆದರೆ, ಸಿಒಎ ಅದನ್ನು ಟೀಕಿಸಿತ್ತು. ಕುಂಬ್ಳೆಯವರೂ ತಂಡವು ಟೂರ್ನಿಯಲ್ಲಿ ಭಾಗವಹಿಸುವ ಪರವಾಗಿಯೇ ಪತ್ರ ಬರೆದರು. ಕೊನೆಗೂ ಬಿಸಿಸಿಐ ಮಣಿಯಿತು. ಆದರೆ, ‘ಜಂಬೋ’ ಮೇಲೆ ಮುನಿಸಿಕೊಂಡಿದ್ದು ಸುಳ್ಳಲ್ಲ. ಅದಕ್ಕಾಗಿಯೇ ಮೇ 25ರಂದು ಕೋಚ್ ಆಯ್ಕೆಗೆ ಅರ್ಜಿ ಆಹ್ವಾನಿಸಿತು.

ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರ ಕ್ರಿಕೆಟ್ ಸಲಹಾ ಸಮಿತಿಯು ಕುಂಬ್ಳೆಯವರು ನೇರ ಸಂದರ್ಶನಕ್ಕೆ ಅರ್ಹರು ಎಂದಿತ್ತು. ಅವರೆಲ್ಲರೂ ಸೇರಿ ಕೊಹ್ಲಿಯವರ ಮನವೋಲಿಸಲು ತೆರೆಮರೆಯಲ್ಲಿ ನಡೆದ ಪ್ರಯತ್ನ ವಿಫಲವಾಗಿತ್ತು. ಯಾರ ಮಾತಿಗೂ ವಿರಾಟ್ ಸೊಪ್ಪು ಹಾಕಲಿಲ್ಲ.

ಇದರಿಂದಾಗಿ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕೊಹ್ಲಿ ಮತ್ತು ಕುಂಬ್ಳೆ ನಡುವಿನ ಅಂತರ ಹೆಚ್ಚುತ್ತ ಹೋಗಿತ್ತು. ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕ್ ಎದುರು ಸೋಲಿಗೆ ತಂಡದೊಳಗಿನ ತಳಮಳಗಳು ಪ್ರಭಾವ ಬೀರಿರುವ ಸಾಧ್ಯತೆಯನ್ನೂ ಅಲ್ಲಗಳೆಯುಂತಿಲ್ಲ.

ಮುಂದೇನು?
ಈಗ ಮತ್ತೊಮ್ಮೆ ಹೊಸ ಕೋಚ್ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇಲ್ಲಿಯೂ ಹಲವು ಲೋಪಗಳಿವೆ. ಕೇವಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಆಟಗಾರರಾಗಿದ್ದವರು ಮಾತ್ರ ಕೋಚ್ ಆಗಬಹುದೇ? ಅದಕ್ಕೊಂದು ಅರ್ಹತೆ, ಪ್ರಮಾಣಪತ್ರ, ಮಾನದಂಡಗಳು ಇಲ್ಲವೇ?

1990ರವರೆಗೂ ಭಾರತ ತಂಡಕ್ಕೆ ಕೋಚ್‌ ಇರಲೇ ಇಲ್ಲ. ನಾಯಕನೇ ಸಾರ್ವಭೌಮನಾಗಿದ್ದ ಕಾಲ ಅದು. ಅದರ ನಂತರ ಭಾರತ ತಂಡಕ್ಕೆ ದೇಶ ಮತ್ತು ವಿದೇಶಗಳ ಕೋಚ್‌ಗಳು ಕೆಲಸ ಮಾಡಿ ಹೋಗಿದ್ದಾರೆ. ಈ ಅವಧಿಯಲ್ಲಿ ಕ್ರಿಕೆಟ್‌ ಮತ್ತು ಬಿಸಿಸಿಐ ಬಹಳಷ್ಟು ಬೆಳೆದಿವೆ.

ಆದರೆ ವೃತ್ತಿಪರ ಕೋಚ್‌ಗಳನ್ನು ರೂಪಿಸುವ ತರಬೇತಿ ವ್ಯವಸ್ಥೆಯಾಗಲಿ, ಕೋಚ್ ನೇಮಕದ ಮಾನದಂಡವಾಗಲಿ ರೂಪಿತವಾಗಿಲ್ಲ. ಕುಂಬ್ಳೆ ಸೇರಿದಂತೆ ಇಲ್ಲಿಯವರೆಗೆ ನೇಮಕವಾದ ಕೋಚ್‌ಗಳು ದೊಡ್ಡ ಕ್ರಿಕೆಟಿಗರಾಗಿರಬಹುದು ಆದರೆ ಕೋಚ್‌ ಆಗಿ ಕಾರ್ಯನಿರ್ವಹಿಸುವ ಅನುಭವ ಹೊಂದಿದವರಲ್ಲ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪರೀಕ್ಷೆ ಬರೆದು ಉತ್ತೀರ್ಣವಾಗಿಲ್ಲ.

ಈಗಲಾದರೂ ಅಂತಹ ವ್ಯವಸ್ಥೆ ಮಾಡಲು ಬಿಸಿಸಿಐ ಮುಂದಾದರೆ, ಕುಂಬ್ಳೆಯವರಂತಹ ‘ತಾರಾ ವರ್ಚಸ್ಸಿ’ನ ಕೋಚ್‌ಗಳು ಮುಜುಗರ ಅನುಭವಿಸುವುದನ್ನು ತಪ್ಪಿಸಬಹುದು. ಕೋಚ್ ಅಥವಾ ನಾಯಕರಿಗಿಂತ ಕ್ರಿಕೆಟ್ ಮತ್ತು ದೇಶದ ಮರ್ಯಾದೆ ದೊಡ್ಡದು ಎಂಬುದನ್ನು ತೋರಿಸಲು ಬಿಸಿಸಿಐಗೆ ಇದು ಸಕಾಲ.
****
‘ಸಮುದ್ರಕ್ಕೆ ಬಿಸಾಕ್ತಿನಿ’
ಕೋಚ್ ಮತ್ತು ನಾಯಕರ ನಡುವಣ ವಿವಾದಗಳು ಭಾರತ ಕ್ರಿಕೆಟ್ ತಂಡಕ್ಕೆ ಹೊಸದೇನಲ್ಲ. 1990ರಲ್ಲಿ ಮೊದಲ ಕೋಚ್ (ಮ್ಯಾನೇಜರ್)ಆಗಿ ನೇಮಕವಾಗಿದ್ದ ಬಿಷನ್‌ ಸಿಂಗ್ ಬೇಡಿ ಅವರ ಕಾಲದಿಂದಲೂ ಇಂತಹ ವಿವಾದಗಳು ಇವೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ರಾತ್‌ಮನ್ಸ್‌ ಕಪ್ ಟೂರ್ನಿಯಲ್ಲಿ ಭಾರತವು ಆಸ್ಟ್ರೇಲಿಯಾ ಎದುರು ಸೋತಿತ್ತು. ಆಗ ತಂಡವು ಭಾರತಕ್ಕೆ ವಿಮಾನದಲ್ಲಿ ಮರಳುವ ಸಂದರ್ಭದಲ್ಲಿ ಸಿಟ್ಟಿನಲ್ಲಿದ್ದ ಬೇಡಿ, ‘ಎಲ್ಲರನ್ನು ಎತ್ತಿ ಸಮುದ್ರಕ್ಕೆ ಬಿಸಾಕ್ತಿನಿ’ ಎಂದು ಅಬ್ಬರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ನಂತರದ ಬೆಳವಣಿಗೆಯಲ್ಲಿ ಅವರು ಸ್ಥಾನ ತೊರೆದಿದ್ದರು.

1996–97ರ ಅವಧಿಯಲ್ಲಿ ಮದನ್‌ಲಾಲ್, 1999-2000 ರಲ್ಲಿ ಕಪಿಲ್‌ದೇವ್ ಅವರು ತಂಡಕ್ಕೆ ಕೋಚ್ ಆದಾಗಲೂ ಇಂತಹ ಘಟನೆಗಳು ನಡೆದಿದ್ದವು.
ಆದರೆ, 2005 ರಿಂದ 07ರ ಅವಧಿಯಲ್ಲಿ ನಾಯಕ ಸೌರವ್‌ ಗಂಗೂಲಿ ಮತ್ತು ಆಗಿನ ಕೋಚ್ ಗ್ರೇಗ್‌ ಚಾಪೆಲ್ ನಡುವಣ ವಿವಾದವು ಬಹಳ ದೊಡ್ಡ ಸುದ್ದಿಯಾಗಿತ್ತು.

ಆಗ ನಡೆದಿದ್ದ ಘಟನೆಗಳು ಇಂದಿಗೂ ಹಲವು ವೇದಿಕೆಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ. ಸೌರವ್‌, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿ.ವಿ.ಎಸ್. ಲಕ್ಷ್ಮಣ್, ಜಹೀರ್ ಖಾನ್, ಹರಭಜನ್ ಸಿಂಗ್ ಅವರಂತಹ ಖ್ಯಾತನಾಮ ಆಟಗಾರರು ಆಗ ತಂಡದಲ್ಲಿದ್ದರು. ಇದೀಗ ಕೊಹ್ಲಿ ಮತ್ತು ಕುಂಬ್ಳೆಯವರ ನಡುವಣ ಭಿನ್ನಾಭಿಪ್ರಾಯವು ಮತ್ತೊಂದು ದೊಡ್ಡ ವಿವಾದವಾಗಿ ದಾಖಲಾಯಿತು.

****

ಇದು ಬೇಸರದ ಬೆಳವಣಿಗೆ
ಭಾರತ ಕ್ರಿಕೆಟ್‌ಗೆ ಇದು ನಿಜಕ್ಕೂ ಕಷ್ಟದ ಕಾಲ. ಅನಿಲ್ ಕುಂಬ್ಳೆ ಅವರನ್ನು ನಡೆಸಿಕೊಂಡು ರೀತಿ ಸರಿಯಲ್ಲ. ಯಾವುದೇ ತಂಡದಲ್ಲಿ ಕೋಚ್ ಮತ್ತು ಆಟಗಾರರ ನಡುವೆ ಒಂದು ಗೌರವದ ಗೆರೆ ಇರುತ್ತದೆ. ಎಲ್ಲರಿಗೂ ಅವರದ್ದೇ ಅದ ಮಿತಿಗಳು ಇರುತ್ತವೆ. ಪರಸ್ಪರರ ಮಿತಿಗಳನ್ನು ಗೌರವಿಸುವುದರಿಂದ ಸಮಸ್ಯೆಗಳು ಉದ್ಭವಿಸುವುದಿಲ್ಲ. ನಾನು ಕಂಡಂತೆ ಅನಿಲ್ ಕುಂಬ್ಳೆ ಅವರು ಎಲ್ಲರೊಂದಿಗೂ  ಗೌರವಯುತವಾಗಿ ನಡೆದುಕೊಳ್ಳುವ ವ್ಯಕ್ತಿ.

ಶಿಸ್ತು ಮತ್ತು ವೃತ್ತಿಪರತೆಯ ವಿಷಯದಲ್ಲಿ ಎಂದಿಗೂ ರಾಜೀ ಮನೋಭಾವ ತೋರಿದವರಲ್ಲ. ರಾಷ್ಟ್ರೀಯ ತಂಡದ ಕೋಚ್ ಯಾರಿಗೂ ಕ್ರಿಕೆಟ್‌ನ ಮೂಲ ಕೌಶಲ್ಯಗಳನ್ನು ಹೇಳಿಕೊಡುವುದಿಲ್ಲ. ಆದರೆ ಆಟಗಾರರ ಕೌಶಲ್ಯಗಳಿಗೆ ಸಾಣೆ ಹಿಡಿದು ವಿಶ್ವಾಸ ವೃದ್ಧಿಸುವ ಕೆಲಸ ಮಾಡುತ್ತಾರೆ. ಅನಿಲ್ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರು ಕೋಚ್ ಆದ ಒಂದು ವರ್ಷದಲ್ಲಿ ತಂಡದಲ್ಲಿ ಹಲವು ಉತ್ತಮ ಬದಲಾವಣೆಗಳಾಗಿವೆ.

ಸರಣಿಯ ನಡುವೆ ಗಾಯಗೊಂಡು ಹೊರಗುಳಿಯುವ ಆಟಗಾರ ದೇಶಿ ಕ್ರಿಕೆಟ್‌ನಲ್ಲಿ ಆಡಿ ಫಿಟ್‌ನೆಸ್ ಸಾಬೀತು ಪಡಿಸಬೇಕು. ನಂತರವೇ ಅವರನ್ನು ಭಾರತ ತಂಡದ ಆಯ್ಕೆಗೆ ಪರಿಗಣಿಸಬೇಕು ಎಂಬ ನಿಯಮ ಜಾರಿಗೆ ತಂದಿದ್ದು ಅನಿಲ್ ಹೆಗ್ಗಳಿಕೆ.

ಇದರಿಂದಾಗಿ ಆಟಗಾರರು ತಮ್ಮ ಫಿಟ್‌ನೆಸ್‌ ಅನ್ನು ಗಂಭೀರವಾಗಿ ಪರಿಗಣಿಸಿದ್ದರು. ದಾಖಲೆ ಪುಟಗಳನ್ನು ತಿರುವಿ ನೋಡಿದರೆ, ಕಳೆದ ಒಂದು ವರ್ಷದಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ ಆಟಗಾರರೆಲ್ಲರೂ ಯಶಸ್ವಿಯಾಗಿದ್ದಾರೆ. ಅದರಿಂದ ಆರೋಗ್ಯಕರ ಪೈಪೋಟಿ ಏರ್ಪಟ್ಟಿದೆ. ಬೆಂಚ್‌ ಶಕ್ತಿಯೂ ವೃದ್ಧಿಸಿದೆ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ.
ಸುನಿಲ್ ಜೋಶಿ , ಭಾರತ ತಂಡದ ಮಾಜಿ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT