ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ: ಆತಂಕ ನಿವಾರಿಸುವ ಬಗೆ...

Last Updated 25 ಜೂನ್ 2017, 20:01 IST
ಅಕ್ಷರ ಗಾತ್ರ

ಹತ್ತು ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಿರುವ ಕುರಿತಂತೆ ‘ಪ್ರಜಾವಾಣಿ’ಯಲ್ಲಿ (ಜೂನ್‌ 5) ಪ್ರಕಟಗೊಂಡ ಸುದ್ದಿಯು ಸರ್ಕಾರಿ ಶಾಲೆಗಳ ಉಳಿಯುವಿಕೆಯ ಕುರಿತಂತೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ.

ಪೋಷಕರ ನಂಬಿಕೆ ಗಳಿಸುವ ಜೊತೆ ಮಕ್ಕಳ ಶೈಕ್ಷಣಿಕ ಪ್ರಗತಿಯೆಡೆ ಕಾಳಜಿ ಮತ್ತು ನಿಗಾ ವಹಿಸಿದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬಹುದು ಎಂದು ಜಿ.ಎಸ್.ಜಯದೇವ ಅವರು ಸಲಹೆ ನೀಡಿರುವುದು (ಪ್ರ.ವಾ., ಜೂನ್‌ 17) ಸೂಕ್ತವಾಗಿಯೇ ಇದೆ.

ಆ ಮೂಲಕ ಸರ್ಕಾರಿ ಶಾಲೆಗಳ ಮುಚ್ಚುವಿಕೆಗೆ ಮೂಲ ಸೌಕರ್ಯ ಕೊರತೆ ಹಾಗೂ ಇಂಗ್ಲಿಷ್‌ ಭಾಷಾ ಮಾಧ್ಯಮದ ಕಲಿಕೆ ಇಲ್ಲದಿರುವುದೇ ಕಾರಣ ಎಂಬ ವಾದಕ್ಕೆ ಮತ್ತೊಂದು ಆಯಾಮವನ್ನು ನೀಡಲಾಗಿದೆ. ಇದರ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸಾಧ್ಯವಿದೆಯಾದರೂ ಖಾಸಗಿ ಶಾಲೆಗಳ ಸಂಪೂರ್ಣ ಹೊಡೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಶಾಲೆಗಳ ನೈಜ ಅಗತ್ಯಗಳಿಗಿಂತ ಖಾಸಗಿ ಶಾಲೆಗಳ ಸಂಖ್ಯೆ ಮಿತಿಮೀರಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸರ್ಕಾರಿ ಶಾಲೆಗಳ ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳು ಸೇರಿ ಅಲ್ಲಲ್ಲಿ ಕೈಗೊಳ್ಳುತ್ತಿರುವ ಸಮರೋಪಾದಿಯ ಕ್ರಮಗಳು ಬಹುಕಾಲ ಮುಂದುವರೆಯುವುದು ಕಷ್ಟವೆನಿಸುತ್ತದೆ.

ಸದನದಲ್ಲಿ ಇತ್ತೀಚೆಗೆ ಆರೋಗ್ಯ ಸಚಿವ ರಮೇಶ್ ಕುಮಾರ್‌ ಅವರು ಖಾಸಗಿ ಶಾಲೆಗಳ ಮಿತಿಮೀರಿದ ಬೆಳವಣಿಗೆಯ ಬಗ್ಗೆ ಹಾಗೂ ಅದಕ್ಕೆ ಕಾರಣವಾಗುವ ವ್ಯವಸ್ಥೆಯ ಬಗ್ಗೆ ಚರ್ಚಿಸುತ್ತಾ ಸರ್ಕಾರಿ ಶಾಲೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ವರದಿಯಾಗಿದೆ. ಈ ರೀತಿಯ ಆತಂಕವನ್ನು ಸದನದಲ್ಲಿ  30 ವರ್ಷಗಳಿಗಿಂತ ಹಿಂದೆಯೇ ಅಂದಿನ ಶಾಸಕರು ವ್ಯಕ್ತಪಡಿಸಿದ್ದರು ಎಂದರೆ ಆಶ್ಚರ್ಯವಾಗದೇ ಇರದು.

ಶಾಸನ ರಚನೆಯ ಅಧಿಕಾರ ಹೊಂದಿದ ಶಾಸಕರ ಒತ್ತಾಸೆ ಇರುವವರೆಗೆ ಖಾಸಗಿ ಶಾಲೆಗಳ ನಿಯಂತ್ರಣ ಕಠಿಣವೆಂದೇ ಹೇಳಬೇಕಾಗುತ್ತದೆ. ಪ್ರಸ್ತುತ ಶಾಲಾ ವ್ಯವಸ್ಥೆಯ ನಿಯಂತ್ರಣ ಮಾಡಲು ಬಳಸಲಾಗುತ್ತಿರುವ ಕರ್ನಾಟಕ ಶಿಕ್ಷಣ ಕಾಯ್ದೆ– 1983ರ ಕುರಿತಂತೆ ವಿಧಾನ ಮಂಡಲದ ಉಭಯ ಸದನಗಳಲ್ಲಿ 1984ರಲ್ಲಿ ನಡೆದ ಚರ್ಚೆಗಳಲ್ಲಿ ಅಂದಿನ ಹಲವು ಸದಸ್ಯರು ಖಾಸಗಿ ಶಾಲೆಗಳ ನಿಯಂತ್ರಣದ ಕುರಿತು ಪ್ರಸ್ತಾಪ ಮಾಡಿದ್ದರು.

ಕರ್ನಾಟಕ ಶಿಕ್ಷಣ ಕಾಯ್ದೆ– 1983ರ ಮಸೂದೆಯ ಪ್ರಸ್ತಾವನೆಯಲ್ಲಿ ‘ಶಿಕ್ಷಣ ಸಂಸ್ಥೆಗಳ ಯೋಜಿತ ಬೆಳವಣಿಗೆಯ ಅವಶ್ಯಕತೆಯನ್ನು ಮನಗಂಡು...’ ಎಂಬ ವಿಷಯದ ಕುರಿತಂತೆ ಚಾಮರಾಜ ಕ್ಷೇತ್ರದ ಶಾಸಕರಾಗಿದ್ದ  ಎಚ್.ಗಂಗಾಧರನ್‌ ಅವರು 1984ರ ಮಾರ್ಚ್‌ 29ರಂದು  ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ‘ಇದು, ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಪಟ್ಟ ಮಸೂದೆಯಾಗಿದೆಯೇ ಹೊರತು ಶಿಕ್ಷಣ ವಿಧಾನದಲ್ಲಿ ಪರಿವರ್ತನೆಯನ್ನು ಮಾಡುವಂತಹ ಮಸೂದೆಯಾಗಿಲ್ಲ ಎಂದು ಹೇಳಬೇಕಾಗಿದೆ... It is nothing but a glorified grant in aid code…’  ಎಂದಿದ್ದಾರೆ.

ಅಂದರೆ ಇಡೀ ಶಿಕ್ಷಣ ಕ್ಷೇತ್ರವನ್ನು ಸಮತೋಲಿತ ರೀತಿಯಲ್ಲಿ ಕೊಂಡೊಯ್ಯಲು ಉದ್ದೇಶಿಸಿದ್ದ ಮಸೂದೆಯು ಬರೀ ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಸೀಮಿತವಾದದ್ದನ್ನು ಗಂಗಾಧರನ್ ಜೊತೆ ಇನ್ನಿತರ ಶಾಸಕರು ತಮ್ಮ ಚರ್ಚೆಯಲ್ಲಿ ಉಲ್ಲೇಖಿಸಿದ್ದರು.

ಸಾಗರ ಕ್ಷೇತ್ರದ ಶಾಸಕರಾಗಿದ್ದ ಎಲ್.ಟಿ.ತಿಮ್ಮಪ್ಪ ಹೆಗಡೆಯವರು 1984ರ ಮಾರ್ಚ್‌ 27ರಂದು ನಡೆದಿದ್ದ ಚರ್ಚೆಯಲ್ಲಿ ಖಾಸಗಿ ಶಾಲೆಗಳ ಕುರಿತು ಪ್ರಸ್ತಾಪಿಸುತ್ತಾ ‘... ಪೂರ್ವ ಪ್ರಾಥಮಿಕ ಶಾಲೆಗೆ ಸೇರಿಸಬೇಕಾದರೆ ಬೆಂಗಳೂರಿನಲ್ಲಿ ಬಹಳ ಕಷ್ಟವಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಂತ್ರಿಗಳ ಮಕ್ಕಳಿಗೂ ಪ್ರವೇಶ ಸಿಗಲಿಕ್ಕೆ ತೊಂದರೆಯಾಗಿರಬಹುದು... ನೀವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆಗೆದುಹಾಕಿ,  ಇಂತಹ ತಾರೀಕಿಗೆ ರಾಷ್ಟ್ರೀಕರಣವಾಗಿದೆ, ನಾವು ನಡೆಸುತ್ತೇವೆ ಎಂದು ಹೇಳಿ’ ಎಂದು ಹೇಳುತ್ತಾ ಎಲ್ಲಾ ಹಂತದ ಖಾಸಗಿ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡಲು ಒತ್ತಾಯಿಸುತ್ತಾರೆ.

ವಿಧಾನಸಭೆಯಂತೆಯೇ ವಿಧಾನ ಪರಿಷತ್ತಿನಲ್ಲೂ  ನಡೆದ ಚರ್ಚೆಯಲ್ಲಿ ಖಾಸಗಿ ಸಂಸ್ಥೆಗಳ ಬೆಳವಣಿಗೆಯ ಬಗ್ಗೆ ಅನೇಕ ಸದಸ್ಯರು ಪ್ರಸ್ತಾಪಿಸುತ್ತಾರೆ. ಪ್ರಸ್ತುತ ಪರಿಷತ್ತಿನ ಸದಸ್ಯರಾಗಿರುವ  ಬಸವರಾಜ ಹೊರಟ್ಟಿಯವರು 1984ರ ಏ. 10ರಂದು ನಡೆದ ಚರ್ಚೆಯಲ್ಲಿ ಅವೈಜ್ಞಾನಿಕವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಕುರಿತಂತೆ ಪ್ರಸ್ತಾಪಿಸಿರುವುದು ಈಗಲೂ ಪ್ರಸ್ತುತವೆನಿಸುತ್ತದೆ. ಅವರು ‘ಯಾವುದೇ ಒಂದು ಶಿಕ್ಷಣ ಸಂಸ್ಥೆಯನ್ನು ತೆಗೆಯಬೇಕಾದರೆ ಕೆಲವೊಂದು ನಿಯಮಗಳು ಇವೆ. ಹತ್ತಿರ ಹತ್ತಿರ ಶಾಲೆಗಳನ್ನು ತೆರೆಯಬಾರದು.

ಕನಿಷ್ಠ 5 ಕಿ.ಮೀ. ಆದರೂ ಅಂತರವಿರಬೇಕೆಂದು ನಿಯಮ ಇದೆ. ಆದರೆ ರಾಜಕೀಯ ಒತ್ತಡ ತಂದೋ ಅಥವಾ ಭ್ರಷ್ಟಾಚಾರದಿಂದಲೋ, ಒಂದು ಶಾಲೆಯ  ಪಕ್ಕದಲ್ಲಿಯೇ  ಮತ್ತೊಂದು ಶಾಲೆ ತೆರೆಯುತ್ತಿದ್ದಾರೆ’ ಎಂದು ಚರ್ಚಿಸುತ್ತಾರೆ. ತಮ್ಮ ಚರ್ಚೆಯನ್ನು ಮುಂದುವರೆಸುತ್ತಾ ಖಾಸಗಿ ಶಾಲೆಗಳ ರಾಷ್ಟ್ರೀಕರಣಕ್ಕೆ ಒತ್ತಾಯಿಸುತ್ತಾರೆ. ಅವರಂತೆಯೇ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವೆಂಬ ಭೇದವಿಲ್ಲದೆ ಕೆಲವು ಸದಸ್ಯರು ಖಾಸಗಿ ಶಾಲೆಗಳ ನಿಯಂತ್ರಣಕ್ಕೆ, ರಾಷ್ಟ್ರೀಕರಣಕ್ಕೆ ಒತ್ತಾಯಿಸುತ್ತಾರೆ.

33 ವರ್ಷಗಳ ಹಿಂದೆಯೇ ಆತಂಕಪಡುವಂತೆ ಇದ್ದ ಪರಿಸ್ಥಿತಿಗಿಂತ ಇಂದು ಖಾಸಗಿ ಶಾಲೆಗಳ ಬೆಳವಣಿಗೆ ಮಿತಿಮೀರಿದೆಯೆಂದೇ ಹೇಳಬೇಕು. ಅದರಲ್ಲೂ ರಾಜ್ಯದ ದಕ್ಷಿಣ ಭಾಗ ಹಾಗೂ ನಗರಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಿಗೆ ಕಂಟಕವಾಗುವಂತೆ ಬೆಳೆಯುತ್ತಿವೆಯೆಂದೇ ಹೇಳಬಹುದು.

ಗ್ರಾಮೀಣ ಭಾಗ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ತಮ್ಮ ಬಾಹುಗಳನ್ನು ಚಾಚುತ್ತಿವೆ. ಆದಾಗ್ಯೂ ಅತ್ಯುತ್ತಮವಾದ ಗುಣಮಟ್ಟದ ಶಿಕ್ಷಣ ಹಾಗೂ ನವೀನ ಕಾರ್ಯತಂತ್ರಗಳ ಮೂಲಕ ಅನೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸಡ್ಡುಹೊಡೆಯುತ್ತಿರುವುದು ಆಶಾಕಿರಣವಾಗಿದೆ. ಆದರೆ ಖಾಸಗಿ ಶಾಲೆಗಳನ್ನು ನಿಯಂತ್ರಿಸಿ, ಸಂಖ್ಯೆ ಹಾಗೂ ಗುಣಮಟ್ಟಗಳೆರಡರಲ್ಲೂ ಸರ್ಕಾರಿ ಹಾಗೂ ಖಾಸಗಿ ಶಾಲೆಗಳೆರಡರ ಸಮತೋಲಿತ ಬೆಳವಣಿಗೆಗೆ ಅವಕಾಶ ನೀಡದಿದ್ದಲ್ಲಿ ಸಮಸ್ಯೆ ತಪ್ಪಿದ್ದಲ್ಲ. ಇದಕ್ಕಾಗಿ ಭದ್ರವಾದ ಕಾನೂನಿನ ಬೆಂಬಲ ಹಾಗೂ ಪ್ರಬಲ ಇಚ್ಛಾಶಕ್ತಿಯ ಅಗತ್ಯವಿದೆ.

ಶಿಕ್ಷಣದ ಸಾರ್ವತ್ರೀಕರಣದಲ್ಲಿ ಖಾಸಗಿ ಶಾಲೆಗಳ ಪಾತ್ರ ಮಹತ್ವದ್ದೆಂದೇ ಹೇಳಬಹುದು. ಆದರೆ ಎಲ್ಲೋ ಒಂದು ಕಡೆ ತಾಳ ತಪ್ಪಿದ ರಾಗದಂತೆ ಬಹುಜನರ ಹಿತದ ದೃಷ್ಟಿಯ ಖಾಸಗಿ ಶಾಲೆಗಳಿಗಿಂತ ಬಂಡವಾಳ ಹಾಕಿ ಬಂಡವಾಳ ತೆಗೆಯುವ ಖಾಸಗಿ ಶಾಲೆಗಳೇ ಕಣ್ಣಿಗೆ ರಾಚುವಂತೆ ಕಾಣುತ್ತಿರುವುದು ವಿಪರ್ಯಾಸ.

ಈ ಹಿನ್ನೆಲೆಯಲ್ಲಿ ಗುಣಮಟ್ಟವಿಲ್ಲದ ಹಾಗೂ ಸಂಪೂರ್ಣ ವ್ಯಾಪಾರಿ ಮನೋಭಾವದ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಗೊಳಿಸುವ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸರ್ಕಾರಿ ಶಾಲೆಗಳ ಭವಿಷ್ಯದ ಕುರಿತ ಆತಂಕ ತಪ್ಪದು.

ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕೆಂಬುದೇನೋ ಸರಿ. ಜೊತೆಗೆ ಪೋಷಕರಿಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವಂತೆ ಮಾಡಿ, ಪೋಷಕರು ತಮ್ಮ ಆಯ್ಕೆಯ ಶಾಲೆ ಸರ್ಕಾರಿಯದೇ ಎನ್ನುವಂತೆ ಸರ್ಕಾರಿ ಶಾಲೆಗಳು ಬದಲಾಗಬೇಕೆಂಬುದೂ ಸರಿಯೇ. ಆದರೆ ಖಾಸಗಿ ಶಾಲೆಗಳ ಜೊತೆ ಸೆಣಸಲು ಸರ್ಕಾರಿ ಶಾಲೆಗಳು ಮೊದಲು ಗಟ್ಟಿಯಾಗಿ ನೆಲೆಯೂರಬೇಕು. ಅದಕ್ಕೆ ಅನುವಾಗುವಂತೆ  ಖಾಸಗಿ ಶಾಲೆಗಳ ಬೆಳವಣಿಗೆಯನ್ನು ಒಂದಷ್ಟು ವರ್ಷ ನಿಯಂತ್ರಿಸಲೇಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT