ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಧವಮಂತ್ರಿ’ಗೆ ಕೂಡಿ ಬಂತು ಕಾಲ!

Last Updated 26 ಜೂನ್ 2017, 9:44 IST
ಅಕ್ಷರ ಗಾತ್ರ

ತಿ.ನರಸೀಪುರ: ತಾಲ್ಲೂಕಿನ ತಲಕಾಡು ಸಮೀಪದ ಐತಿಹಾಸಿಕ ಮಾಧವಮಂತ್ರಿ ಅಣೆಕಟ್ಟೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ₹ 62. 21 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.

527 ಮೀಟರ್ ಉದ್ದದ ಕಾಂಕ್ರೀಟ್ ಅಣೆಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ. ವಿವಿಧ ಅಳತೆಯುಳ್ಳ ವಿನ್ಯಾಸದ ಅಣೆಕಟ್ಟೆ ಪುನರ್ ನಿರ್ಮಿಸಲು ನಿರ್ದೇಶಿಸಲಾಗಿದೆ. 2016–17ನೇ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ನೀಡ ಲಾದ ಅನುದಾನದಲ್ಲಿ ₹ 21 ಕೋಟಿ ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿಯೇ ಕಾಮಗಾರಿಗೆ ಚಾಲನೆ ಸಿಗಲಿದೆ.

ಸುಮಾರು 800 ವರ್ಷಕ್ಕೂ ಹೆಚ್ಚು ಹಳೆಯದಾದ ಈ ಅಣೆಕಟ್ಟೆ 2013ರ ಆಗಸ್ಟ್ ತಿಂಗಳಲ್ಲಿ ಉಂಟಾದ ಭಾರೀ ಪ್ರವಾಹದಿಂದ ಹಾನಿಗೊಳಲಾಗಿತ್ತು. ಪ್ರವಾಹದಿಂದಾಗಿ ತಳಭಾಗದಲ್ಲಿ ಕೊರೆತ ಉಂಟಾಗಿ ಜೋಡಿಸಿದ್ದ ಕಲ್ಲುಗಳು ನೀರಿನ ಸೆಳೆತಕ್ಕೆ ಸಡಿಲಗೊಂಡ ಪರಿಣಾಮವಾಗಿ ಅಣೆಕಟ್ಟೆಯ ಸರಪಳಿ 120 ಮೀಟರ್‌ನಿಂದ 170 ಮೀಟರ್‌ವರೆಗಿನ ಭಾಗ ಕುಸಿದಿದೆ.

ಅಂದು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಪರಿಣಿತರ ಸಲಹೆಯಂತೆ ಬಾಕ್ಸ್ ಮಾದರಿ ತಯಾರಿಸಿ ಹಾನಿಗೊಳಾದ ತಳಭಾಗದ ಇಳಿಜಾರು ಭಾಗದಲ್ಲಿರಿಸಿ ಬೃಹತ್ ಗಾತ್ರದ ಕಲ್ಲು ಗಳನ್ನು ತುಂಬುವ ಮೂಲಕ ದುರಸ್ತಿ ಮಾಡಲಾಗಿತ್ತು. ಸೆಪ್ಟೆಂಬರ್ 2013ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು.

ಹಾನಿಗೊಳಾದ ಅಣೆಕಟ್ಟೆ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಯೋಜನಾ ವರದಿ ತಯಾರಿಸಲು ಸಂಸ್ಥೆಯೊಂದಕ್ಕೆ ಟೆಂಡರ್ ನೀಡಲಾಗಿತ್ತು. ಆ ಸಂಸ್ಥೆ ಸಮೀಕ್ಷೆ ನಡೆಸಿ, ಈಗಿರುವ ಅಣೆಕಟ್ಟೆ ಸಂಪೂರ್ಣವಾಗಿ ಶಿಥಿಲವಾಗಿದ್ದು, ಹೊಸದಾಗಿ ನಿರ್ಮಿಸುವ ಅಗತ್ಯವಿದೆ ಎಂದು ಪ್ರಸ್ತಾವ ಸಲ್ಲಿಸಿತ್ತು. ಇದರಂತೆ ಸರ್ಕಾರ ಕ್ರಮ ಕೈಗೊಂಡಿದೆ.

ಅಣೆಕಟ್ಟೆ ಇತಿಹಾಸ: ಕ್ರಿ.ಶ. 1140ರಲ್ಲಿ ಕಾವೇರಿ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ. ಕೆಳಮಟ್ಟದಿಂದ ದೊಡ್ಡದೊಡ್ಡ ಕಲ್ಲು ಜೋಡಿಸಿ ನಿರ್ಮಿಸಲಾಗಿದೆ. ಇದು 1,076 ಮೀಟರ್ ಉದ್ದವಿದೆ. ಇದರ ಎಡದಂಡೆ ನಾಲೆ 29 ಕಿ.ಮೀ ಉದ್ದವಿದ್ದು, 170 ಕ್ಯುಸೆಕ್ ನೀರಿನ ಸಾಮರ್ಥ್ಯ ಹೊಂದಿದೆ. ಈ ಅಣೆಕಟ್ಟೆಯಿಂದ ತಲಕಾಡು ಹೋಬಳಿಯ ಸುಮಾರು 5,828 ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಆಗುತ್ತಿದೆ. ಜತೆಗೆ, ನದಿಯ ಬಲದಂಡೆಯಲ್ಲಿ 3 ಮೆಗಾ ವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಘಟಕವೂ ಇದೆ.

‘ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಅಣೆಕಟ್ಟೆ ಪುನರ್‌ ನಿರ್ಮಾಣ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದರು. ಬಳಿಕ ಪ್ರಸ್ತಾವ ಸಲ್ಲಿಸಿದ್ದರಿಂದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರಕಿರುವುದು ಸಂತಸ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಎಚ್‌.ಸಿ. ಮಹದೇವಪ್ಪ, ನೀರಾವರಿ ಸಚಿವರಿಗೆ ರೈತರು ಹಾಗೂ ಜನತೆಯ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ’ ಎಂದು ತಲಕಾಡು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಚ್‌. ಮಂಜುನಾಥನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT