ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್‌ನಿಂದ ಪಠ್ಯ ಬದಲಾವಣೆ: ಎಸ್‌.ಎಲ್‌. ಭೈರಪ್ಪ

Last Updated 26 ಜೂನ್ 2017, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ವೋಟ್ ಬ್ಯಾಂಕ್‌ಗಾಗಿ ಪಠ್ಯದಲ್ಲಿ ಇತಿಹಾಸ ತಿರುಚುವ ಮೂಲಕ ರಾಡಿ ಮಾಡಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ಈ ಕೆಲಸ ಆರಂಭವಾಯಿತು’ ಎಂದು ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ವಿಷಾದಿಸಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಸಭಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಷ್ಟ್ರೀಯ ಸಮಗ್ರತೆ ಸಂರಕ್ಷಣೆ ಹೆಸರಿನಲ್ಲಿ ಪಠ್ಯದಲ್ಲಿರುವ ಇತಿಹಾಸವನ್ನು ಬದಲಾಯಿಸಲು ಇಂದಿರಾ ಗಾಂಧಿ ಸರ್ಕಾರ 1970ರಲ್ಲಿ ಸಮಿತಿ ರಚಿಸಿತ್ತು. ನಾನೂ ಅದರ ಸದಸ್ಯನಾಗಿದ್ದೆ. ಕಾಶಿಯ ವಿಶ್ವನಾಥ ದೇವಾಲಯದ ಮೇಲೆ ಔರಂಗಜೇಬ್‌ ದಾಳಿ ನಡೆಸಿದ ವಿಷಯವನ್ನು ಪಠ್ಯದಿಂದ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. 15 ದಿನಗಳ ಬಳಿಕ ನನ್ನನ್ನು ಸಮಿತಿಯಿಂದ ಕೈ ಬಿಟ್ಟು, ಬೇರೆಯವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. ನಂತರ ಎನ್‌ಸಿಇಆರ್‌ಟಿ ಮೂಲಕ ಇತಿಹಾಸ, ಸಮಾಜ ವಿಜ್ಞಾನದ ಪಠ್ಯ ಬದಲಾಯಿಸಲಾಯಿತು. ಆಗ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದ ಕಾರಣ ಇದಕ್ಕೆ ವಿರೋಧ ಬಂದಿಲ್ಲ. ಎಲ್ಲ ರಾಜ್ಯಗಳಲ್ಲೂ ಅದನ್ನೇ ಸ್ಥಳೀಯ ಭಾಷೆಗೆ ಅನುವಾದ ಮಾಡಲಾಯಿತು’ ಎಂದು ವಿವರಿಸಿದರು.

‘ಈಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹಿಂದಿನ ಇತಿಹಾಸವನ್ನು ಪಠ್ಯದಲ್ಲಿ ಸೇರಿಸಲು ಚಿಂತನೆ ನಡೆಸಿದೆ. ಪಠ್ಯವನ್ನು ತಿದ್ದಲು ಮುಂದಾದರೆ ಮಾಧ್ಯಮ, ಕಾಂಗ್ರೆಸ್‌, ಸಮಾಜವಾದಿ, ಜೆಡಿಎಸ್‌, ಜೆಡಿಯುನವರು ದೇಶದ ಜಾತ್ಯತೀತತೆ ಹೋಗುತ್ತದೆ ಎಂದು ಗಲಾಟೆ ಮಾಡುತ್ತಾರೆ’ ಎಂದು ಹೇಳಿದರು.

‘ಪೂರ್ವಿಕರು ಮಾಡಿದ ತಪ್ಪನ್ನು ಒಪ್ಪಿಕೊಂಡಾಗ ಮಾತ್ರ ನಾವು ಉತ್ತಮರಾಗಲು ಸಾಧ್ಯ. ಇಲ್ಲದಿದ್ದರೆ ನಮ್ಮ ಬೆಳವಣಿಗೆ ಆಗುವುದಿಲ್ಲ. ಇತಿಹಾಸದ ವಾಸ್ತವವನ್ನು ಒಪ್ಪಿಕೊಳ್ಳಬೇಕು’ ಎಂದು ಭೈರಪ್ಪ ಪ್ರತಿಪಾದಿಸಿದರು.

ತುರ್ತು ಪರಿಸ್ಥಿತಿ ವಾತಾವರಣವಿಲ್ಲ:  ‘ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕಾಲದಂತಹ ವಾತಾವರಣ ಈಗಿನ ಸರ್ಕಾರದ ಅವಧಿಯಲ್ಲಿ ಖಂಡಿತ ಇಲ್ಲ. ಆಗ ಮಾಧ್ಯಮ, ನ್ಯಾಯಾಲಯವೂ ಹೆದರಿ ನಡುಗುತ್ತಿದ್ದವು. ತುರ್ತು ಪರಿಸ್ಥಿತಿ ವೇಳೆ ಜನರಿಗೆ ‘ಬದುಕುವ ಹಕ್ಕು ಇಲ್ಲ’ ಎಂದೂ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಆದರೆ, ಈಗ ಸಮಾಜದಲ್ಲಿ ಬದಲಾವಣೆಯಾಗಿದೆ. ನವ ಮಾಧ್ಯಮಗಳ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೊರಹಾಕುತ್ತಿದ್ದಾರೆ’ ಎಂದು ಭೈರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT