ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನದ ತಂಗಾಳಿ

Last Updated 26 ಜೂನ್ 2017, 19:30 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಯ ಶಿಕ್ಷಕರು ಈಗ ಟ್ಯಾಬ್ಲೆಟ್‌ ನೆರವಿನಿಂದ ಪಾಠ ಹೇಳಿಕೊಡುತ್ತಾರೆ. ತರಗತಿಯ ಗೋಡೆಗಂಟಿಕೊಂಡಿದ್ದ ಕರಿಬೋರ್ಡ್‌ಗಳು ಪ್ರೊಜೆಕ್ಟರ್‌ನ ಬೆಳಕಿನಲ್ಲಿ ಮಿಂಚುತ್ತಿವೆ. ಬಿಳಿ ಬೋರ್ಡ್‌ನ ಮೇಲೆ ಮೂಡುವ ಸಂಗತಿಗಳನ್ನು ಬೆರಗುಗಣ್ಣಿಂದ ನೋಡುತ್ತಾ ಕಲಿಕೆಯ ಹೊಸದಾರಿ ಅನಾವರಣಗೊಂಡ ಖುಷಿಯಲ್ಲಿದ್ದಾರೆ ವಿದ್ಯಾರ್ಥಿಗಳು...

ಇದು ಕಲ್ಪನೆಯಲ್ಲ; ಬೆಂಗಳೂರಿನ ಮೇಘಶಾಲಾ ಎಂಬ ಸರ್ಕಾರೇತರ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಗಳು ಸರ್ಕಾರಿ ಶಾಲೆಗಳಲ್ಲಿ ಹೀಗೆ ಸಾಕಾರಗೊಂಡ ಬಗೆ. ಬೆಂಗಳೂರಿನ ಕೆಲ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲದೆ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಮೈಸೂರು, ಸುಳ್ಯ ತಾಲ್ಲೂಕಿನ ಬಳ್ಪದ ಸರ್ಕಾರಿ ಶಾಲೆಗಳಲ್ಲಿ ‘ಮೇಘಶಾಲಾ’ ಯೋಜನೆ ಅನುಷ್ಠಾನಗೊಂಡಿದೆ. ವಿವಿಧ ದೇಶಗಳಲ್ಲಿ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ ಜ್ಯೋತಿ ತ್ಯಾಗರಾಜನ್‌ ಅವರ ಕಲ್ಪನೆಯ ಕೂಸು ಈ ‘ಮೇಘಶಾಲಾ’.

ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರಬೇಕು ಎನ್ನುವ ಅವರ ತುಡಿತ ಈ ಸಾಹಸಕ್ಕೆ ಕೈಹಾಕುವಂತೆ ಮಾಡಿದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಮಟ್ಟವನ್ನು ಉತ್ತಮಪಡಿಸಬೇಕು ಎನ್ನುವ ಅವರ ಚಿಂತನೆಗೆ ಬೆಂಬಲ ಹಾಗೂ ತಂತ್ರಜ್ಞಾನದ ಆಯಾಮ ನೀಡಿದವರು ಶ್ರೀಧರ್‌ ರಂಗನಾಥನ್‌. ಶಂಕರ ಮಹದೇವನ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿರುವ ಅವರು ಇಂದಿನ ಯುಗಕ್ಕೆ ಸರ್ಕಾರಿ ಶಾಲೆಯ ಮಕ್ಕಳ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆ ಸೂಕ್ತ ಎಂದು ಪ್ರತಿಪಾದಿಸಿ ಸಹಕಾರ ನೀಡಿದರು.

‘ಇತ್ತೀಚಿಗೆ ವಿದ್ಯಾರ್ಥಿಗಳಿಲ್ಲ ಎನ್ನುವ ಕಾರಣಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಅಗತ್ಯ ಸೌಕರ್ಯ ನೀಡುವಲ್ಲಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ, ಶಿಕ್ಷಕರನ್ನು ನೇಮಿಸಿಕೊಳ್ಳುವ ವಿಷಯದಲ್ಲಿ ಸರ್ಕಾರ ಗಮನಾರ್ಹ ಕೆಲಸ ಮಾಡಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳು ಸರಿಯಿಲ್ಲ ಎನ್ನುವ ಹಣೆಪಟ್ಟಿ ಕಟ್ಟಿ ಮುಚ್ಚಲಾಗುತ್ತಿದೆ. ಆದರೆ ಈಗಿನ ಎಷ್ಟೋ ಸಾಧಕರು ಕಲಿತಿರುವುದು ಸರ್ಕಾರಿ ಶಾಲೆಗಳಲ್ಲಿಯೇ. ಹೀಗಾಗಿ ಸರ್ಕಾರಿ ಶಾಲೆಗಳನ್ನೇ ಆರಿಸಿಕೊಂಡಿದ್ದೇವೆ’ ಎನ್ನುತ್ತಾರೆ ಜ್ಯೋತಿ.

ರಾಜ್ಯದ ವಿವಿಧ ಭಾಗಗಳಲ್ಲಿನ ಸುಮಾರು 150 ಶಾಲೆಗಳೊಂದಿಗೆ ಮೇಘಶಾಲಾ ಕೆಲಸ ಮಾಡುತ್ತಿದೆ. ಶಾಲಾ ಶಿಕ್ಷಕರಿಗಾಗಿ ಆ್ಯಪ್‌ ಅಭಿವೃದ್ಧಿಪಡಿಸಿರುವುದು ಮೇಘಶಾಲಾ ವಿಶೇಷ. ಮಕ್ಕಳಲ್ಲಿ ಕಲಿಕೆ ಉತ್ತಮವಾಗಬೇಕು ಎಂದರೆ ಅದು ಶಿಕ್ಷಕರ ಮೂಲಕವೇ ಆಗಬೇಕು. ಹೀಗಾಗಿ 1ರಿಂದ 8ನೇ ತರಗತಿವರೆಗಿನ ಪಠ್ಯವನ್ನು ಪಿಪಿಟಿ (ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌) ಮಾದರಿಗೆ ಅಳವಡಿಸಲಾಗಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಆಂಗ್ಲ ಭಾಷೆಯನ್ನು ಈ ಮೂಲಕ  ಸುಲಭವಾಗಿ ಹೇಳಿಕೊಡಬಹುದು.

ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಸಂಗ್ರಹಿಸಿ ಆ ಹಣವನ್ನು ಬಳಸಿಕೊಂಡು ಶಾಲೆಗಳಿಗೆ ಪ್ರೊಜೆಕ್ಟರ್‌ ಹಾಗೂ ಟ್ಯಾಬ್ಲೆಟ್‌ ಅನ್ನು ಉಚಿತವಾಗಿ ಸಂಸ್ಥೆ ನೀಡುತ್ತದೆ. ಟ್ಯಾಬ್ಲೆಟ್‌ನಿಂದ ಶಿಕ್ಷಕರು ಪಾಠದ ಪೂರ್ವ ತಯಾರಿ ಮಾಡಿಕೊಳ್ಳಬಹುದು. ಅಲ್ಲದೆ ಪರಿಣಾಮಕಾರಿಯಾಗಿ ಹೇಗೆ ಪಾಠ ಮಾಡಬಹುದು ಎನ್ನುವ ಬಗೆಗೂ ಅಲ್ಲಿ ಮಾಹಿತಿ ಇರುತ್ತದೆ.   ಶಿಕ್ಷಕರು ತಮ್ಮ ಸೃಜನಶೀಲತೆ ಬಳಸಿ ಪಾಠವನ್ನು ಇನ್ನಷ್ಟು ಆಸಕ್ತಿಕರವಾಗಿ ಮಾಡುವ ಅವಕಾಶವಿದೆ.

ಅನುಭವಿ ಶಿಕ್ಷಕರ ಚಿಂತನಧಾರೆ: ಮೇಘಶಾಲಾ ಸಂಸ್ಥೆಯಲ್ಲಿ 30 ಜನ ಕೆಲಸ ಮಾಡುತ್ತಿದ್ದಾರೆ. ಇಬ್ಬರು ವಿನ್ಯಾಸಕರು, ಒಬ್ಬರು ಖಜಾಂಚಿ. ಉಳಿದ 27 ಮಂದಿ ಸರ್ಕಾರಿ, ಖಾಸಗಿ ಹಾಗೂ ಅಂತರರಾಷ್ಟ್ರೀಯ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿದವರು. ಒಂದರಿಂದ ಎಂಟನೇ ತರಗತಿಗಳ ಪಠ್ಯವನ್ನು ತಂತ್ರಜ್ಞಾನಕ್ಕಿಳಿಸುವ ಕೆಲಸವನ್ನು ಈ ನುರಿತ ಶಿಕ್ಷಕ ವೃಂದವೇ ಮಾಡುತ್ತಿದೆ. ಮೇಘಶಾಲಾ ತಲುಪಿರುವ ಶಾಲೆಗಳಲ್ಲಿ ಹೆಚ್ಚಿನವು ಕನ್ನಡ ಶಾಲೆಗಳೇ.

ಕೆಲವೇ ಕೆಲವು ಶಾಲೆಗಳಲ್ಲಿ ಐದರಿಂದ ಎಂಟನೇ ತರಗತಿವರೆಗೆ ಆಂಗ್ಲ ಮಾಧ್ಯಮ ಇದೆ. ಹೀಗಾಗಿ ಆ್ಯಪ್‌ನಲ್ಲಿ ಪಠ್ಯ ಕನ್ನಡ ಹಾಗೂ ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಲಭ್ಯವಿದೆ.ಅಂದಹಾಗೆ, ಕೇಂದ್ರ ಸರ್ಕಾರ ನೀಡುವ ‘ಸಾಮಾಜಿಕ ಆವಿಷ್ಕಾರ ರಾಷ್ಟ್ರೀಯ ಸ್ಪರ್ಧೆ’ ಮೇಘಶಾಲಾ ಸಂಸ್ಥೆಯನ್ನು ಟಾಪ್‌ 20ಯಲ್ಲಿ ಗುರುತಿಸಲಾಗಿತ್ತು. ‘ನ್ಯಾಷನಲ್‌ ಟೀಚರ್ಸ್‌ ಪ್ಲಾಟ್‌ಫಾರ್ಮ್‌’ಗೂ ಮೇಘಶಾಲಾ ಸಂಸ್ಥೆ ಆಯ್ಕೆಯಾಗಿದೆ.

***

ಮೇಘಶಾಲಾ, ತಲುಪುವುದು ಹೇಗೆ?
ಸಿಎಸ್‌ಆರ್‌ ಯೋಜನೆಯಡಿ ಇಲ್ಲವೆ ಬಿಇಒಗಳ ಮುಖಾಂತರ ಸರ್ಕಾರಿ ಶಾಲೆಗಳನ್ನು ತಲುಪಲಾಗುತ್ತದೆ. ಶಾಲೆಗೆ ಒಂದು ಪ್ರಾಜೆಕ್ಟರ್‌ ಹಾಗೂ ಟ್ಯಾಬ್ಲೆಟ್‌ ನೀಡಿ ಮೊದಲ ವರ್ಷ ಅದರ ಜವಾಬ್ದಾರಿಯನ್ನು ಒಬ್ಬ ಶಿಕ್ಷಕರಿಗೆ ನೀಡಲಾಗುತ್ತದೆ.

ಪ್ರತಿ 30 ಶಾಲೆಗಳನ್ನು ಒಂದು ಬ್ಲಾಕ್‌ನಂತೆ ವಿಂಗಡಿಸಿ ಪ್ರತಿಶಾಲೆಯ ಆಯ್ದ ಶಿಕ್ಷಕರಿಗೆ ಆ್ಯಪ್‌, ಪ್ರಾಜೆಕ್ಟರ್‌ ಬಳಕೆ ಕುರಿತ ತರಬೇತಿ ನೀಡಲಾಗುತ್ತದೆ. ಪ್ರತಿ 15 ಶಾಲೆಗೆ ಒಬ್ಬರಂತೆ ಅನುಷ್ಠಾನ ವ್ಯವಸ್ಥಾಪಕರು ಇರುತ್ತಾರೆ. ಶಾಲೆಯಲ್ಲಿ ಆ್ಯಪ್‌ನ ಸಮರ್ಪಕ ಬಳಕೆ, ಸಮಸ್ಯೆ, ಅವುಗಳಿಗೆ ಪರಿಹಾರ ನೀಡುವ ಹೊಣೆ ಅವರದು.

ಪ್ರಸ್ತುತ, ಸುಮಾರು 150 ಶಾಲೆಗಳ 500 ಶಿಕ್ಷಕರನ್ನು ತಲುಪಿರುವ ಈ ಆ್ಯಪ್‌, ಶಿಕ್ಷಕರ ದಿನಾಚರಣೆ ಹೊತ್ತಿಗೆ 50 ಸಾವಿರ ಶಿಕ್ಷಕರನ್ನು, 2020ರ ಹೊತ್ತಿಗೆ ಒಂದು ಲಕ್ಷ ಶಿಕ್ಷಕರನ್ನು ತಲುಪುವ ಗುರಿ ಹೊಂದಿದೆ.

ಎಲ್ಲರಿಗೂ ಟ್ಯಾಬ್ಲೆಟ್‌ ನೀಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರು ತಮ್ಮ ಬಳಿ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಆ್ಯಪ್‌ ಬಳಸಿಕೊಳ್ಳಲು ಸಾಧ್ಯವಾಗುವಂತೆ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ. ಮೇಘಶಾಲಾ ಸಂಪರ್ಕಕ್ಕೆ: 72597 04180/ 94829 37434. ಇಮೇಲ್‌– info@meghshala.org. ವೆಬ್‌ಸೈಟ್‌ ಕೊಂಡಿ www.meghshala.com

***

ಖಾಸಗಿ ಸಹಭಾಗಿತ್ವ
ಬೇರೆ ದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಮುದಾಯ–ಖಾಸಗಿ ಸಹಭಾಗಿತ್ವ (ಪಿಪಿಪಿ) ಪರಿಕಲ್ಪನೆಯನ್ನು ಬಳಸಿಕೊಳ್ಳುವ ಚಿಂತನೆಯಲ್ಲಿದೆ ಮೇಘಶಾಲಾ. ‘ಪಿಪಿಪಿ ಅತ್ಯುತ್ತಮ ಮಾದರಿಯಾಗಿದ್ದು ಅದು ಭಾರತದಲ್ಲಿ ಎಷ್ಟರ ಮಟ್ಟಿಗೆ ಸೂಕ್ತ ಎಂಬುದನ್ನು ಇನ್ನೂ ಅಭ್ಯಸಿಸುತ್ತಿದ್ದೇವೆ.

ಎಲ್ಲ ಬಗೆಯ ಅಧ್ಯಯನ ಕೈಗೊಂಡು ಸೂಕ್ತ ಎನಿಸಿದರೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಯೋಜನೆ ರೂಪಿಸಲಾಗುವುದು’ ಎಂದು ಮಾಹಿತಿ ನೀಡುತ್ತಾರೆ ಎಜುಕೇಶನ್‌ ಆಪರೇಶನ್ಸ್‌ನ ಉಪಾಧ್ಯಕ್ಷ ಉಲ್ಲಾಸ ಕುಮಾರ್.

***

ಭಾರತೀಯ ಶಿಕ್ಷಣ ಪದ್ಧತಿಯು ಇತಿಹಾಸವನ್ನು ತಿಳಿಸಿಕೊಡುವುದರಲ್ಲೇ ನಿರತವಾಗಿದೆ. ಭವಿಷ್ಯದ ಬಗೆಗೆ ಯೋಚಿಸುವ, ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವ ಮನೋಭಾವವನ್ನು ನಾವು ಮಕ್ಕಳಿಗೆ ಕಲಿಸುತ್ತಿಲ್ಲ
–ಜ್ಯೋತಿ ತ್ಯಾಗರಾಜನ್‌, ಸಂಸ್ಥಾಪಕ ಟ್ರಸ್ಟಿ, ಮೇಘಶಾಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT