ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನು ರಕ್ಷಣೆಗೆ ಕಂದಕ!

Last Updated 26 ಜೂನ್ 2017, 19:30 IST
ಅಕ್ಷರ ಗಾತ್ರ

ಆನೆಗಳು ಕಾಡಿನಿಂದ ನಾಡಿಗೆ ಬರಬಾರದು ಎಂದು ಕಂದಕ ತೋಡಲಾಗುತ್ತದೆ. ಕೆಲವು ಕಡೆ ಬೇಲಿಯನ್ನೂ ನಿರ್ಮಿಸಲಾಗುತ್ತದೆ. ಅದೇ ರೀತಿ ಜನರು ನಾಡಿನಿಂದ ಬಂದು ಕಾಡು ಅತಿಕ್ರಮಿಸಬಾರದು ಎಂದು ಕಂದಕ ತೋಡಿದರೆ ಹೇಗೆ? ಕಾಡನ್ನು ನಮ್ಮ ಮಕ್ಕಳಂತೆಯೇ ರಕ್ಷಿಸಿಕೊಳ್ಳಬೇಕು. ಕಾಡಿನ ಅತಿಕ್ರಮಣ ಮಾಡಬಾರದು ಎಂದು ಜನರ ಮನದೊಳಗೇ ಒಂದು ಬೇಲಿ ನಿರ್ಮಿಸಿದರೆ ಹೇಗೆ?

ಇಂಥದ್ದೊಂದು ಪ್ರಯೋಗ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಕಾಡಂಚಿನಲ್ಲಿ ನಡೆದಿದೆ. ಈ ಪ್ರಯೋಗದಿಂದ ಈಗಾಗಲೇ ಸುಮಾರು 40 ಸಾವಿರ ಹೆಕ್ಟೇರ್ ಕಾಡನ್ನು ರಕ್ಷಿಸಲಾಗಿದೆ. ಅಳಿವಿನ ಅಂಚಿನಲ್ಲಿದ್ದ ಕಾಡುಗಳು ಮನುಷ್ಯನ ಪ್ರವೇಶವಿಲ್ಲದೆ ಈಗ ನೈಸರ್ಗಿಕವಾಗಿ ಮತ್ತೆ ನಳನಳಿಸುತ್ತಿವೆ.

ಬಗರ್ ಹುಕುಂ ಭೂಮಿಯನ್ನು ಸಕ್ರಮ ಮಾಡಬೇಕು, ಡೀಮ್ಡ್ ಅರಣ್ಯವನ್ನು ಮತ್ತೆ ಕಂದಾಯ ಇಲಾಖೆಗೇ ನೀಡಬೇಕು ಎಂಬ ಚಳವಳಿ ತೀವ್ರವಾಗಿರುವಾಗಲೇ ಅರಣ್ಯ ರಕ್ಷಣೆಯಂತಹ ‘ಪವಾಡ’ವೂ ನಡೆದಿದೆ.

ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಅದೊಂದು ರೋಚಕ ಕತೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ‘ಕಾನು’ ಎಂದು ಕರೆಯಲಾಗುವ ಅರಣ್ಯ ಪ್ರದೇಶಗಳು ಹಳ್ಳಿ ಜನರ ಸುಪರ್ದಿಯಲ್ಲಿವೆ. ಇವುಗಳನ್ನು ಗ್ರಾಮಾರಣ್ಯ, ದೇವರ ಕಾನು, ದೇವಿ ಕಾನು, ಜಟಕಾ ಕಾನು, ಚೌಡಿಕೊಡ್ಲು, ಭೂತಪ್ಪನ ಕಾನು, ಹುಲಿದೇವರ ಕಾನು ಎಂದೆಲ್ಲಾ ಗುರುತಿಸಲಾಗುತ್ತದೆ.

ಈ ಕಾಡುಗಳು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಇಲ್ಲ. ಇವೆಲ್ಲ ಕಂದಾಯ ಇಲಾಖೆಯ ಭೂಮಿ. ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಪಶ್ಚಿಮಘಟ್ಟ ಪ್ರದೇಶವಾಗಿದ್ದರಿಂದ ಇಲ್ಲೆಲ್ಲ ಮರಗಿಡಗಳು ತುಂಬಿವೆ. ಅದಕ್ಕೇ ಇವು ಕಾಡಿನಂತೆಯೇ ಕಾಣಿಸುತ್ತವೆ. ಈ ಕಾನುಗಳು ಹಳ್ಳಿಗಳ ಜಲಮೂಲಗಳೂ ಆಗಿದ್ದವು. ಕಾನುಗಳ ಜೊತೆಯಲ್ಲಿಯೇ ನೂರಾರು ಕೆರೆಗಳೂ ಇದ್ದವು. ಔಷಧೀಯ ಗಿಡಗಳು ಇದ್ದವು.

ಆದರೆ ವಾಣಿಜ್ಯ ಬೆಳೆಗಳಾದ ಕಾಫಿ, ಅಡಕೆ, ಶುಂಠಿ, ರಬ್ಬರ್, ಹತ್ತಿ ಮತ್ತು ವೆನಿಲಾ ಬೆಳೆಗಳ ಬಗ್ಗೆ ರೈತರ ಆಸಕ್ತಿ ಹೆಚ್ಚಾದ ಹಾಗೆ ಈ ಕಾನುಗಳು ಒತ್ತುವರಿಯ ರೋಗಕ್ಕೆ ತುತ್ತಾದವು. ಬಹುತೇಕ ಎಲ್ಲ ಕಾನುಗಳ ಬಳಿಯಲ್ಲಿ ಇರುವ ಗ್ರಾಮದ ರೈತರು ಕಾನುಗಳನ್ನು ಅತಿಕ್ರಮಣ ಮಾಡಿ ಅಲ್ಲೆಲ್ಲ ಕೃಷಿ ಮಾಡಲು ಆರಂಭಿಸಿದರು. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ, ವರದಾ, ತುಂಗಾ ನದಿಯ ಕಣಿವೆಗಳಿಗೆ ಹೊಂದಿಕೊಂಡಂತೆ ಇರುವ ಇಂತಹ ಕಾನುಗಳು ಒತ್ತುವರಿ ಆಗುತ್ತಿರುವುದನ್ನು ಗಮನಿಸಿದ ಪರಿಸರವಾದಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಆದರೆ ಆಗ ಈ ಕಾನುಗಳನ್ನು ಅರಣ್ಯ ವ್ಯಾಪ್ತಿಗೆ ಸೇರಿಸಲು ಕಾನೂನು ಇರಲಿಲ್ಲ. (ಈಗ ಡೀಮ್ಡ್ ಅರಣ್ಯದ ಕಾನೂನು ಬಂದಿದೆ.) ಇದರ ನಡುವೆಯೇ ಕಾನು ರಕ್ಷಣೆಗೆ ಮುಂದಾಗಬೇಕು ಹಾಗೂ ದೇವರ ಕಾನು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಇವುಗಳನ್ನು ಅರಣ್ಯ ಇಲಾಖೆಗೆ ವಹಿಸಿ ಅವುಗಳ ಸಂರಕ್ಷಣೆ ಮಾಡಬೇಕು ಎಂಬ ಒತ್ತಾಯ ಹೇರತೊಡಗಿದರು.

1998ರಲ್ಲಿಯೇ ಇಂತಹ ಒತ್ತಾಯ ಪರಿಸರವಾದಿಗಳಿಂದ ಕೇಳಿ ಬರತೊಡಗಿತು. ಆದರೆ ಸರ್ಕಾರದ ಇಲಾಖೆಗಳ ನಡುವೆ ಫೈಲುಗಳ ಓಡಾಟ ನಿಧಾನವಾಗಿದ್ದರಿಂದ ಕಾನುಗಳು ಅರಣ್ಯ ಇಲಾಖೆಯ ಸುಪರ್ದಿಗೆ ಹೋಗುವುದು ಸಾಧ್ಯವಾಗಲೇ ಇಲ್ಲ. ಕಂದಾಯ ಕಾನುಗಳನ್ನು ಅರಣ್ಯ ಇಲಾಖೆಗೆ ಸೇರಿಸಲಾಗುತ್ತದೆ ಎನ್ನುವುದು ತಿಳಿಯುತ್ತಲೇ ಮರ ಕಡಿಯುವುದು ಹೆಚ್ಚಾಯಿತು.

ಕಾನುಗಳ ಒತ್ತುವರಿಯೂ ಜಾಸ್ತಿಯಾಗತೊಡಗಿತು. ಮರ ಗಿಡಗಳನ್ನು ಕಡಿಯುವುದು ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ವ್ಯಾಪಕವಾಯಿತು. ಇದು ಅರಣ್ಯ ಪ್ರೇಮಿಗಳ ನಿದ್ದೆಗೆಡಿಸಿತು. ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಿಂತ ಹೆಚ್ಚಾಗಿ ಜನರ ಮನವೊಲಿಸುವುದೇ ಇದಕ್ಕೆ ಸೂಕ್ತ ಮಾರ್ಗ ಎಂದು ಅರಿತ ಪರಿಸರವಾದಿಗಳು ತಮ್ಮ ಕಾರ್ಯತಂತ್ರ ಬದಲಾಯಿಸಿದರು.

ಕಾನು ಅರಣ್ಯ ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂದು ಗುರುತಿಸುವುದು ಹಾಗೂ ಒತ್ತುವರಿಯನ್ನು ಬಿಟ್ಟುಕೊಡುವಂತೆ ರೈತರನ್ನು ವಿನಂತಿಸುವ ಕಾರ್ಯಕ್ಕೆ ವೃಕ್ಷ ಲಕ್ಷ ಆಂದೋಲನ ಸಂಘಟನೆ ಮುಂದಾಯಿತು. ಆದರೆ ಒತ್ತುವರಿ ತೆರವುಗೊಳಿಸಲು ರೈತರು ಮುಂದಾಗಲಿಲ್ಲ. ಆಗ ತನ್ನ ನಿಲುವನ್ನು ಬದಲಾಯಿಸಿದ ಸಂಘಟನೆ ಈಗಾಗಲೇ ಒತ್ತುವರಿಯಾದ ಜಾಗವನ್ನು ಬಿಟ್ಟು ಉಳಿದ ಕಾನನ್ನು ರಕ್ಷಿಸಲು ಕಂದಕ ನಿರ್ಮಿಸುವಂತೆ ಅರಣ್ಯ ಇಲಾಖೆಯನ್ನು ಕೋರಿಕೊಂಡಿತು.

ಅಲ್ಲದೆ ಒತ್ತುವರಿ ಮಾಡಿಕೊಂಡಿದ್ದ ರೈತರೂ ಸೇರಿದಂತೆ ಗ್ರಾಮಸ್ಥರ ಅರಣ್ಯ ಸಂರಕ್ಷಣಾ ಸಮಿತಿಗಳನ್ನು ರಚಿಸಲಾಯಿತು. ತಾವು ಒತ್ತುವರಿ ಮಾಡಿದ ಭೂಮಿಯನ್ನು ಬಿಟ್ಟುಕೊಡುವಂತೆ ಕೇಳುವುದಿಲ್ಲ ಎನ್ನುವುದು ಗೊತ್ತಾದ ತಕ್ಷಣವೇ ರೈತರೂ ಕಾನು ಅರಣ್ಯ ರಕ್ಷಿಸಲು ಮುಂದಾದರು. ಇನ್ನು ಮುಂದೆ ಯಾರೂ ಅರಣ್ಯ ಒತ್ತುವರಿ ಮಾಡುವುದಿಲ್ಲ ಎಂಬ ಶಪಥ ಮಾಡಿದರು. ಅರಣ್ಯ ಇಲಾಖೆಯವರು ಕಾನು ಅರಣ್ಯದ ಸುತ್ತ ಕಂದಕವನ್ನು ನಿರ್ಮಿಸುವ ಕಾರ್ಯ ಕೈಗೊಂಡರು. ಕಂದಕವನ್ನು ದಾಟಿ ಅರಣ್ಯವನ್ನು ಒತ್ತುವರಿ ಮಾಡುವ ಸಾಹಸಕ್ಕೆ ರೈತರು ಕೈ ಹಾಕಲಿಲ್ಲ. ಹೀಗಾಗಿ ಕಾನು ಅರಣ್ಯದ ಪ್ರದೇಶಗಳಲ್ಲಿ ಮನುಷ್ಯರ ಪ್ರವೇಶ ವಿರಳವಾಯಿತು.

ಕಾಡು ತಾನಾಗಿಯೇ ಬೆಳೆಯಲು ಆರಂಭಿಸಿತು. ನೈಸರ್ಗಿಕವಾಗಿಯೇ ಕಾಡು ಬೆಳೆಯಲು ಆರಂಭಿಸಿತು. ಹೀಗೆ ಪರಿಸರವಾದಿಗಳು, ರೈತರು, ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 40 ಸಾವಿರ ಹೆಕ್ಟೇರ್ ಕಾನು ಅರಣ್ಯವನ್ನು ಸಂರಕ್ಷಿಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ 1998ರಲ್ಲಿ ಕಾನು ಅರಣ್ಯ ಪ್ರದೇಶದಲ್ಲಿರುವ ಜೀವ ವೈವಿಧ್ಯಗಳನ್ನು ದಾಖಲಿಸುವ ಕೆಲಸ ಆರಂಭವಾಯಿತು. ಎರಡೂ ಜಿಲ್ಲೆಗಳ 40 ಗ್ರಾಮಗಳಲ್ಲಿ ಜೀವ ವೈವಿಧ್ಯ ದಾಖಲಾತಿ ನಡೆಯಿತು. ಈ ದಾಖಲೆಗಳ ಆಧಾರದಲ್ಲಿಯೇ 1999ರಿಂದ ದೇವರ ಕಾನು ಉಳಿಸಿ ಅಭಿಯಾನ ಆರಂಭಿಸಲಾಯಿತು. ದೇವರ ಕಾನುಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾಮ ಅರಣ್ಯ ಸಮಿತಿ ರಚನೆ ಹಾಗೂ ಇತರ ಕಾನುಗಳಲ್ಲಿನ ಜೀವ ವೈವಿಧ್ಯ ದಾಖಲಾತಿ ನಡೆಸುವ ಅಭಿಯಾನವೂ ಮುಂದುವರಿಯಿತು.

2010ರಲ್ಲಿ ಡಾ.ಕೇಶವ ಕೊರ್ಸೆ ಹಾಗೂ ಡಾ.ವಾಸುದೇವ್ ಅವರು ಕಾನು ಅರಣ್ಯಗಳ ಪರಿಸ್ಥಿತಿ ಮತ್ತು ಸಂರಕ್ಷಣಾ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಾದ ಡಾ.ಟಿ.ವಿ.ರಾಮಚಂದ್ರ ಮತ್ತು ಡಾ.ಸುಭಾಶ್ಚಂದ್ರನ್ ಅವರು ಶಿವಮೊಗ್ಗ ಜಿಲ್ಲೆಯ ಕಾನು ಅರಣ್ಯಗಳ ಪರಿಸ್ಥಿತಿಯ ಬಗ್ಗೆ ಅಧ್ಯಯನ ಕೈಗೊಂಡರು. ಅವರು 2013ರಲ್ಲಿ ತಮ್ಮ ವರದಿಯನ್ನು ಸಿದ್ಧಪಡಿಸಿದರು.

ಡಾ.ರಾಜಶ್ರೀ, ಡಾ.ಶ್ರೀಕಾಂತ ಗುನಗಾ, ಆನೆಗೋಳಿ ಸುಬ್ಬರಾವ್, ರಘುನಂದನ್, ಡಾ.ವಿನಾಯಕ, ಶ್ರೀಪಾದ ಬಿಚ್ಚುಗತ್ತಿ, ಶೈಲಜಾ ಈ ತಂಡದಲ್ಲಿದ್ದರು. ಕಾನು ಅರಣ್ಯ ಸಂರಕ್ಷಿಸುವುದು ಗ್ರಾಮೋದ್ಧಾರಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ಈ ಅಧ್ಯಯನ ವರದಿ ತಿಳಿಸಿತು.

ಪಶ್ಚಿಮಘಟ್ಟ ಕಾರ್ಯಪಡೆ ಶಿಫಾರಸಿನಂತೆ 2008–2009ರ ಸಾಲಿನ ಬಜೆಟ್‌ನಲ್ಲಿ ದೇವರ ಕಾಡು ರಕ್ಷಣಾ ಯೋಜನೆ ಪ್ರಕಟವಾಯಿತು. 2011–12ನೇ ಸಾಲಿನಲ್ಲಿ ಕಾನು ಅರಣ್ಯ ಅಭಿವೃದ್ಧಿ ಯೋಜನೆಯನ್ನೂ ಪ್ರಕಟಿಸಲಾಯಿತು. ಇದರ ಅಡಿ ಕಾನುಗಳ ರಕ್ಷಣೆಗೆ ಅರಣ್ಯದಂಚಿನಲ್ಲಿ ಕಂದಕ ನಿರ್ಮಿಸುವ ಹಾಗೂ ಇದು ಸಂರಕ್ಷಿತ ಅರಣ್ಯ ಎಂದು ಫಲಕಗಳನ್ನು ಹಾಕುವ ಕೆಲಸವನ್ನು ಅರಣ್ಯ ಇಲಾಖೆ ಕೈಗೊಂಡಿತು.

ಸೂಕ್ಷ್ಮ ಕಾನುಗಳನ್ನು ಗುರುತಿಸುವುದು, ಜನರ ಸಹಭಾಗಿತ್ವದಲ್ಲಿ ಕಾನು ಸುತ್ತ ಕಂದಕ ನಿರ್ಮಾಣ ಮಾಡುವುದು, ಫಲಕ ಹಾಕುವುದು, ವಿನಾಶದ ಅಂಚಿನಲ್ಲಿರುವ ಗಿಡಗಳನ್ನು ಬೆಳೆಸುವುದು, ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸುವುದು ಈ ಯೋಜನೆಯಲ್ಲಿದೆ.

ನಿರಂತರವಾಗಿ ಆಂದೋಲನವನ್ನು ಮುನ್ನಡೆಸಿದ್ದರಿಂದ ರೈತರೂ ಈಗ ಕಾನುಗಳ ಬಗ್ಗೆ ಕಾಳಜಿ ತೋರತೊಡಗಿದ್ದಾರೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ 191 ಹಳ್ಳಿಗಳಲ್ಲಿ ಗ್ರಾಮಸ್ಥರು ಕಾನುಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ‘ಪರಿಸರ ಕಾರ್ಯಕರ್ತರು, ವಿವಿಧ ಸಂಸ್ಥೆಗಳು, ಸಂಶೋಧಕರು, ರೈತರು, ಗ್ರಾಮಾರಣ್ಯ ಸಮಿತಿ, ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾನು ಸಂರಕ್ಷಣೆಯಲ್ಲಿ ತೊಡಗಿದ್ದರಿಂದ 40 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ರಕ್ಷಿಸಲು ಸಾಧ್ಯವಾಗಿದೆ’ ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಹೆಮ್ಮೆಯಿಂದ ಹೇಳುತ್ತಾರೆ.

ಜನರ ಸಹಭಾಗಿತ್ವದಲ್ಲಿ ಆಂದೋಲನವನ್ನು ನಡೆಸಿದರೆ ಯೋಜನೆ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಕಾಡು ಉಳಿಸಿಕೊಳ್ಳುವ ಮೂಲಕ ಗ್ರಾಮಸ್ಥರು ಜಲಮೂಲಗಳನ್ನೂ ಉಳಿಸಿಕೊಂಡಿದ್ದಾರೆ. ಕಾನುಗಳನ್ನು ಜತನದಿಂದ ನೋಡಿಕೊಳ್ಳತೊಡಗಿದ್ದಾರೆ.

ಕಾನು ಅರಣ್ಯಗಳನ್ನು ಡೀಮ್ಡ್ ಅರಣ್ಯ ಎಂದು ಘೋಷಿಸಬೇಕು, ದೇವರ ಕಾನುಗಳನ್ನು ನೈಸರ್ಗಿಕ ಪಾರಂಪರಿಕ ಪ್ರದೇಶ ಎಂದು ಘೋಷಿಸಬೇಕು, ರಾಜ್ಯದ ಇತರ ಪ್ರದೇಶಗಳಲ್ಲಿಯೂ ಕಾನುಗಳ ರಕ್ಷಣೆಗೆ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಬೇಕು, ಕಾನು–ಕೆರೆಗಳ ರಕ್ಷಣೆಯ ಜವಾಬ್ದಾರಿಯನ್ನು ಸ್ಥಳೀಯ ಪಂಚಾಯ್ತಿಗಳಿಗೆ ವಹಿಸಬೇಕು, ಶಾಸಕರು ಮತ್ತು ಸಂಸದರ ನಿಧಿಯಿಂದ ಕಾನು ರಕ್ಷಣೆಗೆ ಹಣ ಒದಗಿಸುವಂತೆ ಮಾಡಬೇಕು, ಪ್ರತಿ 10 ವರ್ಷಗಳಿಗೆ ಕಾನು ಕಂದಕ ಕಾಮಗಾರಿಗಳನ್ನು ಪುನಾ ಆರಂಭಿಸಬೇಕು. ಸಂರಕ್ಷಿಸಲಾದ ಕಾನುಗಳು ಮತ್ತೆ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ಕಾಡಿದ್ದರೆ ನಾಡು, ಕಾಡಿದ್ದರೆ ಮಳೆ ಬೆಳೆ ಎನ್ನುವುದು ನಮ್ಮ ರಾಜಕಾರಣಿಗಳಿಗೆ ಅರ್ಥವಾಗಬೇಕು. ಇವು ಕೇವಲ ನಾಮಫಲಕಗಳಲ್ಲಿ ಇರುವ ವಾಕ್ಯಗಳಲ್ಲ. ನಮ್ಮ ಮನದಲ್ಲೂ ಇವು ಅಚ್ಚೊತ್ತಬೇಕು. ಅಂದಾಗ ಮಾತ್ರ ಕಾಡು ನಳನಳಿಸುತ್ತದೆ. ನಾಡೂ ಆರೋಗ್ಯಪೂರ್ಣವಾಗಿರುತ್ತದೆ. ಚಿತ್ರಗಳು: ಲೇಖಕರವು

***

ಮತ್ತೆ ಮೈದಳೆಯಿತು ಆರೋಗ್ಯಪೂರ್ಣ ಕಾಡು
ಕಾನು ಸಂರಕ್ಷಣಾ ಯೋಜನೆ ಜಾರಿಗೆ ಬಂದ ಐದು ವರ್ಷದ ನಂತರ ಈ ಕಾನುಗಳ ಪರಿಸ್ಥಿತಿ ಹೇಗಿದೆ ಎಂದು ಸಸ್ಯಶಾಸ್ತ್ರಜ್ಞ ಡಾ.ಕೇಶವ ಕೊರ್ಸೆ ನೇತೃತ್ವದಲ್ಲಿ ಮತ್ತೊಂದು ಅಧ್ಯಯನ ನಡೆಸಲಾಯಿತು. ‘ಸಾಗರ ಅರಣ್ಯ ವಲಯದ ಭೀಮನಕೋಣೆ ಪಂಚಾಯ್ತಿ ವ್ಯಾಪ್ತಿಯ ಯಳಗಳಲೆ, ಹೆನಗೆರೆ, ವರದಾಮೂಲ, ಹೊಸನಗರ ಅರಣ್ಯ ವ್ಯಾಪ್ತಿಯ ಬಾಣಿಗಾ ಗ್ರಾಮದ ದರೋಡೆ ಕಾನು ಮುಂತಾದ ಕಡೆ ಅಧ್ಯಯನ ನಡೆಸಲಾಯಿತು.

ಇವೆಲ್ಲ ನಿತ್ಯ ಹರಿದ್ವರ್ಣದ ಕಾಡುಗಳು. ಕಾಡಿನ ಗಡಿ ಗುರುತಿಸಿ, ಅತಿಕ್ರಮಣಕ್ಕೆ ಒಳಗಾದ ಜಾಗ ಬಿಟ್ಟು ಉಳಿದಕಡೆ ಅಗಳ ತೆಗೆದು ಇವುಗಳನ್ನು ರಕ್ಷಿಸಲಾಗಿದೆ. ಜನರ ಸಹಭಾಗಿತ್ವ ಇರುವುದರಿಂದ ಅರಣ್ಯ ಲೂಟಿ ಕಡಿಮೆಯಾಗಿದೆ. ಹೊಸ ಗಿಡಗಳು ಬೆಳೆಯುತ್ತಿವೆ. ಕಾಡು ದಟ್ಟವಾಗುತ್ತಿದೆ.

ಗಿಡಮರಗಳ ಸಾಂದ್ರತೆ, ಮರ ಬೆಳವಣಿಗೆಯ ಗತಿ ಮುಂತಾದ ಮಾನದಂಡಗಳಿಂದಲೂ ಈ ಕಾಡುಗಳು ಆರೋಗ್ಯಪೂರ್ಣವಾಗಿವೆ. ಅಮೂಲ್ಯವಾದ ಸಸ್ಯ ವೈವಿಧ್ಯ ಕಾಣಸಿಗುತ್ತಿದೆ. ಈ ಪ್ರದೇಶಗಳಲ್ಲಿ ಕಾನು ಸಂರಕ್ಷಣಾ ಯೋಜನೆ ಯಶಸ್ವಿಯಾಗಿದೆ. ಇತರ ಪ್ರದೇಶಗಳಿಗೂ ಇದನ್ನು ವಿಸ್ತರಿಸಬೇಕು’ ಎಂದು ಡಾ.ಕೊರ್ಸೆ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT