ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜೋಪಚಾರ ಹೀಗೆ ಮಾಡಿ...

Last Updated 26 ಜೂನ್ 2017, 19:30 IST
ಅಕ್ಷರ ಗಾತ್ರ

ಡಾ.ಸಿ.ಪಿ. ಮಂಜುಳಾ

ಬೀಜದಂತೆ ಬೆಳೆ. ಆದ್ದರಿಂದ ಯಾವುದೇ ಬೆಳೆ ಬೆಳೆಯಬೇಕಾದರೆ ಬೀಜ ಮತ್ತು ಅದಕ್ಕೆ ಮಾಡುವ ಉಪಚಾರ  ಮುಖ್ಯ. ಬೀಜೋಪಚಾರ ಎಂದರೆ ಬೀಜಕ್ಕೆ ಮಾಡುವ ಉಪಚಾರ. ಆ ಮೂಲಕ ಬೀಜ ಹಾಗೂ ಸಸಿಯ ಸಂರಕ್ಷಣೆ ಮಾಡುವುದು ಅಥವಾ ಅದಕ್ಕೆ ಅಧಿಕ ಪೋಷಕಾಂಶ ಒದಗಿಸುವ ಕ್ರಿಯೆ.

ಮುಂಗಾರಿನಲ್ಲಿ ಕೈಗೊಳ್ಳುವ ಬಿತ್ತನೆ ಕಾರ್ಯಕ್ಕೆ ಮುಖ್ಯವಾಗಿ ಕೃಷಿಯಲ್ಲಿ ಒತ್ತು ನೀಡಬೇಕಾಗಿರುವ ಕಚ್ಚಾವಸ್ತು ಬೀಜ. ಬೀಜದ ಆಯ್ಕೆಯಲ್ಲಿ ಗಮನಿಸಬೇಕಾದ ವಿಷಯಗಳೆಂದರೆ, ಆಯಾ ಪ್ರದೇಶದಲ್ಲಿ ಬೆಳೆಯುವ ಬೆಳೆಯ ಸೂಕ್ತ ತಳಿಯ ಆಯ್ಕೆ, ಉತ್ತಮ ಗುಣಮಟ್ಟದ ದೃಢೀಕೃತ ಬೀಜಗಳ ಬಳಕೆ. ಬೀಜೋಪಚಾರವನ್ನು ಮಣ್ಣಿನ ಮಡಿಕೆ ಅಥವಾ ಪ್ಲಾಸ್ಟಿಕ್ ಚೀಲ ಇಲ್ಲವೆ ಪಾತ್ರೆಯಲ್ಲಿ ಮಾಡಬಹುದು.

ಮೂರು ವಿಧಾನಗಳಲ್ಲಿ ಈ ಉಪಚಾರ ಮಾಡಲು ಸಾಧ್ಯ. ಮೊದಲನೆಯದಾಗಿ ಬೀಜವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ತೆಗೆದುಕೊಂಡು ಪೋಷಕಾಂಶವನ್ನು ತಕ್ಕ ಪ್ರಮಾಣದಲ್ಲಿ ಬೀಜದ ಮೇಲೆ ಉದುರಿಸಿ, ನಂತರ ಸ್ವಲ್ಪ ನೀರು ಚಿಮುಕಿಸಿ, ಮಿಶ್ರಣ ಮಾಡಿ, ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡುವುದು.

ಎರಡನೆಯದಾಗಿ ಬೀಜವನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಅದಕ್ಕೆ ಪೋಷಕಾಂಶ ಹಾಕಿ, ನೀರು ಚಿಮುಕಿಸಿ, ಬ್ಯಾಗನ್ನು ಬಲೂನಿನಂತೆ ಊದಿ ಬ್ಯಾಗ್‌ನ ಬಾಯಿಯನ್ನು ರಬ್ಬರ್ ಬ್ಯಾಂಡ್‌ನಿಂದ ಗಟ್ಟಿಯಾಗಿ ಕಟ್ಟುವುದು. ನಂತರ ಅದನ್ನು ಮೆಲ್ಲನೆ ವೃತ್ತಾಕಾರದಲ್ಲಿ ತಿರುಗಿಸುತ್ತ ಮಿಶ್ರಣ ಮಾಡಿ, ಬ್ಯಾಗ್‌ನಿಂದ ತೆಗೆದು ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡುವುದು.

ಮೂರನೆಯದಾಗಿ ಪೋಷಕಾಂಶ ಪೂರೈಸುವ ಜೀವಾಣುಗಳನ್ನು ಬೀಜಕ್ಕೆ ಅಂಟಿನ ಸಹಾಯದಿಂದ ಲೇಪನ ಮಾಡುವುದು. ಮೊದಲಿಗೆ ಬೆಲ್ಲ ಅಥವಾ ಸಕ್ಕರೆ ಪಾಕವನ್ನು ತೆಳುವಾಗಿ ತಯಾರಿಸಿ ತಣ್ಣಗಾದ ನಂತರ ಪೋಷಕಾಂಶದ ಪುಡಿ ಬೆರೆಸುವುದು. ಅದರಲ್ಲಿ ಬೀಜಮಿಶ್ರಣ ಮಾಡಿ,ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡುವುದು.

ಯಾವುದೇ ಪದಾರ್ಥದ ಉಪಚಾರ ಮಾಡುವಾಗ ಅದರ ಸಮನಾದ ಲೇಪನ ಪ್ರತಿಯೊಂದು ಬೀಜಕ್ಕೆ ಆಗಬೇಕು. ದ್ರವರೂಪ ಅಥವಾ ಅಂತರವ್ಯಾಪಿ ರಾಸಾಯನಿಕ ಬಳಸಿದಾಗ ಬೀಜೋಪಚಾರದ ನಂತರ ರಾತ್ರಿ ನೆರಳಲ್ಲಿ ಒಣಗಿಸಬೇಕು.

ಎರಡನೇ ವಿಧಾನದ ಬೀಜೋಪಚಾರ ಸೂಕ್ಷ್ಮವಿರುವ ಬೀಜ ಅಂದರೆ, ಕಡಲೆಬೀಜ ಅಥವಾ ಆಗ ತಾನೆ ಮೊಳಕೆ ಒಡೆದ (ಕುಡಿ ಮೊಳಕೆ-ಭತ್ತ) ಬೀಜಕ್ಕೆ ಉತ್ತಮ. ಇದೇ ತತ್ವ ಬಳಸಿ ಮಿಶ್ರಣ ಯಂತ್ರ ಅಥವಾ ಡ್ರಮ್ ಸೀಡರ್ ಉಪಯೋಗಿಸಿ ಹೆಚ್ಚಿನ ಪ್ರಮಾಣದಲ್ಲಿ ಬೀಜೋಪಚಾರ ಮಾಡಬಹುದು.

ಬೀಜೋಪಚಾರ ಸಸ್ಯಗಳಲ್ಲಿ ಪ್ರತಿರೋಧಕ ಶಕ್ತಿ ಉತ್ಪನ್ನವಾಗಲು ಪ್ರೇರೇಪಿಸುವುದು, ಇದರಿಂದ ಪೀಡೆ ಸಮಸ್ಯೆ ಕಡಿಮೆ ಆಗುವುದು ಮತ್ತು ಅದರ ನಿವಾರಣೆಗೆ ರಾಸಾಯನಿಕ ಸಿಂಪಡಣೆಗೆ ವ್ಯಯಿಸುವ ಖರ್ಚನ್ನು ಕೂಡ ಗಮನಾರ್ಹವಾಗಿ ಕಡಿಮೆಗೊಳಿಸುವುದು. ಕೆಲವು ಜೀವಾಣುಗಳಲ್ಲಿ ಸುತ್ತಲಿನ ಪರಿಸರದಲ್ಲಿರುವ ಪೋಷಕಾಂಶವನ್ನು ಹಿಡಿದು ಗಿಡಗಳಿಗೆ ಒದಗಿಸುವ ಗುಣವಿರುವುದು.

ಇಂತಹ ಜೀವಾಣುಗಳನ್ನು ಬೀಜೋಪಚಾರಕ್ಕೆ ಬಳಸಿದರೆ ಹೆಚ್ಚುವರಿ ಪೋಷಕಾಂಶಗಳನ್ನು ಗಿಡಗಳಿಗೆ ಒದಗಿಸುವುದರ ಜೊತೆಗೆ ರಾಸಾಯನಿಕ ಗೊಬ್ಬರದ ಬಳಕೆ ಪ್ರಮಾಣವನ್ನು ಕಡಿತಗೊಳಿಸಬಹುದು.  ಉಪಚಾರ ಮಾಡಿದ ಬೀಜವನ್ನು ಆಹಾರವಾಗಿ ಉಪಯೋಗಿಸಬಾರದು, ಪ್ರಾಣಿ-ಪಕ್ಷಿಗಳಿಗೂ ಅವು ಹಾನಿಕಾರಕ.   
(ಲೇಖಕಿ: ಸಹಾಯಕ ಪ್ರಾಧ್ಯಾಪಕರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT