ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗೆ ಪ್ರಶಸ್ತಿಯ ಕನಸು ಆಸರೆಯೇ?

ಅಕ್ಷರ ಗಾತ್ರ

ಯುವ ಲೇಖಕಿ ಶಾಂತಿ ಕೆ. ಅಪ್ಪಣ್ಣ ಅವರಿಗೆ ಈ ಬಾರಿ ದೊರೆತಿರುವ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ನಮ್ಮ ಲೇಖಕರಿಂದ, ಅದರಲ್ಲೂ ಹೊಸ ತಲೆಮಾರಿನ ಲೇಖಕರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಇಂದಿನ ಸಾಹಿತ್ಯ ವಲಯದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆಗೆ ಒಂದು ಕೈಗನ್ನಡಿಯಾಗಿದೆ.

ನಮ್ಮ ಯುವ ಲೇಖಕರು ತಮ್ಮ ಸಹ ಲೇಖಕರಿಗೆ ಪ್ರಶಸ್ತಿ ದೊರೆತಾಗ ಅವರ ಕೃತಿಯನ್ನು ಪ್ರಾಮಾಣಿಕವಾಗಿ ವಿಮರ್ಶೆ ಮಾಡದೆ ‘ಅವರಿಗಿಂತ ಉತ್ತಮ ಬರಹಗಾರರು ಪಟ್ಟಿಯಲ್ಲಿದ್ದರೂ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ’ (ಪ್ರ.ವಾ., ಜೂನ್ 25) ಎಂಬ ತರಹದ ಗೊಣಗಾಟದಲ್ಲಿ ತೊಡಗಿದ್ದಾರೆ. ಇದು ಈ ಭಾವಿ ಸಾಹಿತಿಗಳು ಭವಿಷ್ಯದಲ್ಲಿ ಹಿಡಿಯಲಿರುವ ದಿಕ್ಕನ್ನು ಸೂಚಿಸುತ್ತದೆ.

ಸಾಹಿತ್ಯ ಅಕಾಡೆಮಿಯ ನಿಯಮಾವಳಿಗಳ ಪ್ರಕಾರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಮೊದಲ ಎರಡು ಹಂತಗಳಲ್ಲಿ ತೀರ್ಪುಗಾರರು ಮೂಲಪಟ್ಟಿಯಲ್ಲಿ ಸೂಚಿಸುವ ಯಾವುದೇ ಹೆಸರನ್ನು ಅಂಗೀಕರಿಸುವ, ತಿರಸ್ಕರಿಸುವ ಅಥವಾ ಬೇರೆ ಹೆಸರನ್ನು ಸೇರಿಸುವ ಅಧಿಕಾರವನ್ನು ಅಕಾಡೆಮಿ ಕಾಯ್ದಿರಿಸಿಕೊಂಡಿರುತ್ತದೆ. ಅಂದಮೇಲೆ ಮೊದಲ ಎರಡು ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಲೇಖಕ ಕೆ.ಎಂ. ದೊಡ್ಡಮನಿಯವರು ‘ಪುರಸ್ಕಾರಕ್ಕೆ ಪಾತ್ರರಾಗಿರುವ ಶಾಂತಿ ಕೆ. ಅಪ್ಪಣ್ಣ ಅವರ ಹೆಸರು ನನಗೆ ಕಳಿಸಿದ್ದ ಪಟ್ಟಿಯಲ್ಲಿ ಇರಲೇ ಇಲ್ಲ, ಪಟ್ಟಿಯಲ್ಲಿ ಇಲ್ಲದವರಿಗೆ ಪ್ರಶಸ್ತಿ ಸಿಕ್ಕಿದ್ದಾದರೂ ಹೇಗೆ?’ ಎಂದು ಪ್ರಲಾಪಿಸಿರುವುದು ಬಾಲಿಶತನ.

ಅಕಾಡೆಮಿ ಪ್ರಶಸ್ತಿಯ ತೀರ್ಪುಗಾರರ ಸ್ಥಾನದಲ್ಲಿ ಕುಳಿತಿರುವವರಿಗೆ ಅಕಾಡೆಮಿಯ ನಿಯಮಾವಳಿಗಳೇ ಗೊತ್ತಿಲ್ಲದಿದ್ದರೆ ಹೇಗೆ? ಅಥವಾ ಗೊತ್ತಿದ್ದೂ ಇವರ ತೀರ್ಪನ್ನು ಅಕಾಡೆಮಿ ಪುರಸ್ಕರಿಸಿರದಿದ್ದಲ್ಲಿ ಅಥವಾ ಅವರಿಗೆ ಅಕಾಡೆಮಿಯ ನಿರ್ಧಾರದ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಅದನ್ನು ಅವರು ಅಕಾಡೆಮಿಯ ಒಳಗೆ ಬಗೆಹರಿಸಿಕೊಳ್ಳಬೇಕಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಚರ್ಚೆಗೆ ತರಬಾರದು. ಸಾರ್ವಜನಿಕ ಚರ್ಚೆಗೆ ತರದೆ ಬೇರೆ ದಾರಿ ಇಲ್ಲ ಎಂಬ ಪರಿಸ್ಥಿತಿ ಉಂಟಾದರೆ ಅದು ಬೇರೆಯ ಮಾತು.

ಒಂದು ವೇಳೆ ಇವೆಲ್ಲ ಸಾರ್ವಜನಿಕ ಚರ್ಚೆಗೆ ಗ್ರಾಸವಾದರೆ ಶ್ರೀಸಾಮಾನ್ಯರಿಗೆ ಈ ಸಾಹಿತಿಗಳ ಸಣ್ಣತನ, ನೀಚ ಪ್ರಲೋಭನೆಗಳನ್ನು ಕಂಡು ಇನ್ನಷ್ಟು ಹೇವರಿಕೆ ಆಗುತ್ತದಲ್ಲದೆ ಮತ್ತಾವ ಫಲಪ್ರದವಾದ ಪ್ರಯೋಜನವೂ ಆಗದು ಎಂಬ ಅರಿವು ಅಂತಹವರಿಗೆ ಇರಬೇಕಾಗುತ್ತದೆ.

ಈಗಾಗಲೇ ಕನ್ನಡದ ಹಲವು ಯುವ ಸಾಹಿತಿಗಳು  ದೊಡ್ಡಮನಿಯವರ ಹಳಹಳಿಕೆಯನ್ನು ಬೆಂಬಲಿಸುವ ಮೂಲಕ ತಮ್ಮ ಉದಾತ್ತ ವೈಚಾರಿಕತೆಯ ಹಿಂದಿರುವ ಅಸಲಿ ಉದ್ದೇಶವೇನು ಎಂಬುದನ್ನು ಬಯಲು ಮಾಡಿದ್ದಾರೆ. ಇವರೆಲ್ಲ ಅಂತಿಮವಾಗಿ ಪ್ರಶಸ್ತಿಗಳನ್ನು ಬಾಚಿಕೊಳ್ಳಲೆಂದೇ ಬರವಣಿಗೆಯಲ್ಲಿ ತೊಡಗಿಕೊಂಡಿರುವರೇ ಎಂಬ ಅನುಮಾನವನ್ನು ಶ್ರೀಸಾಮಾನ್ಯನಲ್ಲಿ ಮೂಡಿಸಿದ್ದಾರೆ. ಆದರೆ ಒಬ್ಬ ಸಾಹಿತಿಯ ಶ್ರೇಷ್ಠತೆಯನ್ನು ಅಂತಿಮವಾಗಿ ಕಾಲ ನಿರ್ಧರಿಸುವುದಲ್ಲದೆ ಪ್ರಶಸ್ತಿ, ಪುರಸ್ಕಾರಗಳು ನಿರ್ಧರಿಸವು.

ಪಂಪನ ಕಾಲದಲ್ಲಿ ಅವನ ಪ್ರತಿಭೆಯ ಮುಂದೆ ಕೇವಲ ‘ಶಿಶುಮಕ್ಕಳು’ ಅಗಿದ್ದ ರನ್ನ, ಪೊನ್ನ, ಜನ್ನಾದಿಗಳು ‘ಕವಿಚಕ್ರವರ್ತಿ’ ಎಂಬ ಬಿರುದಿಗೆ ಪಾತ್ರರಾಗಿದ್ದರು (ಈ ‘ಕವಿಚಕ್ರವರ್ತಿ’ ಬಿರುದನ್ನು ಇಂದಿನ ‘ಜ್ಞಾನಪೀಠ’ಕ್ಕೆ ಹೋಲಿಸಬಹುದು). ಪಂಪ ಒಬ್ಬ ಸಾಮಂತ ದೊರೆಯ ಆಶ್ರಯದಲ್ಲಿದ್ದ ಕಾರಣ ಪಂಪನಿಗೆ ‘ಕವಿಚಕ್ರವರ್ತಿ’ ಎಂಬ ಬಿರುದು ನೀಡುವ ಅರ್ಹತೆ ಸಾಮಂತನಾಗಿದ್ದ ಅರಿಕೇಸರಿಗೆ ಇರಲಿಲ್ಲ. ಆದರೆ ಕಾಲ ಸರಿದಂತೆ ಕನ್ನಡಿಗರಿಗೆ ಪೊನ್ನ ರನ್ನಾದಿಗಳ ಬಿರುದು ಬಾವಲಿಗಳೆಲ್ಲ ಮರೆತು ಹೋದವು. ‘ನಾಡೋಜ’ ಎಂಬ ಪಂಪನ ಹೆಗ್ಗಳಿಕೆಯೊಂದೇ ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಿತು. ಈಗಲೂ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ನಾಡಿಗೆ ಸೇವೆ ಸಲ್ಲಿಸುತ್ತಿರುವವರನ್ನು ‘ನಾಡೋಜ’ ಎಂಬ ಹೆಸರಿನಿಂದಲೇ ಗೌರವಿಸುತ್ತಿದೆ.

ಸಾಹಿತಿಯಾದವನು ಪ್ರಶಸ್ತಿ ಪಡೆಯುವುದು ತನ್ನ ಅಧಿಕಾರವೆಂದಾಗಲಿ ಮತ್ತು ಪ್ರಶಸ್ತಿ ನೀಡುವುದು ಸರ್ಕಾರದ ಕರ್ತವ್ಯ ಎಂದಾಗಲಿ ಭಾವಿಸಬಾರದು. ಅದರಲ್ಲೂ ಸರ್ಕಾರಿ ಪ್ರಶಸ್ತಿಗಳಂತೂ ಸಾಹಿತಿಯ ಪ್ರತಿಭೆಯನ್ನು ಇನ್ನಿಲ್ಲದಂತೆ ನಿರ್ನಾಮ ಮಾಡಿಬಿಡುತ್ತವೆ. ಬಹುತೇಕ ಯಾವುದೇ ಭರವಸೆಯ ಸಾಹಿತಿಯೂ ಉನ್ನತ ಪ್ರಶಸ್ತಿ ಪಡೆದ ತರುವಾಯ ಶ್ರೇಷ್ಠ ಕೃತಿಗಳನ್ನು ರಚಿಸಿದಂತಿಲ್ಲ.

ಈ ಅರ್ಥದಲ್ಲಿ ಪ್ರಶಸ್ತಿಯು ಲೇಖಕನಾದವನಿಗೆ ಒಂದು ಅಭಿಶಾಪವಾಗಿದೆ. ಕನ್ನಡದಲ್ಲಿ ಎಲ್ಲೋ ಕೆಲವು ಕವಿಗಳು ಈ ಶಾಪದಿಂದ ಪಾರಾಗಿದ್ದಾರೆ. ಪ್ರಶಸ್ತಿಯ ಕಕ್ಕುಲತೆಯನ್ನು ‘ಕೀರ್ತಿಶನಿ’ ಎಂದು ಕರೆದುದರಿಂದ ಕುವೆಂಪುಗೆ (ಜ್ಞಾನಪೀಠ ಪ್ರಶಸ್ತಿ ದೊರೆತ ಮೇಲೆಯೂ) ಅರ್ಥಪೂರ್ಣವಾದುದನ್ನು ಬರೆಯಲು ಸಾಧ್ಯವಾಯಿತು.

ಇಂದಿನ ತರುಣ ಸಾಹಿತಿಗಳು ಕುವೆಂಪು ಅವರ ಈ ನಿಲುವನ್ನು ಅಳವಡಿಸಿಕೊಳ್ಳಬೇಕಲ್ಲದೆ ಪ್ರಶಸ್ತಿ ರಾಜಕಾರಣದ ಕ್ಷುಲ್ಲಕ ವಿವಾದದಲ್ಲಿ ಮುಳುಗಬಾರದು. ಅದರಲ್ಲೂ ಎಡಪಂಥೀಯ ಲೇಖಕರೇ ಈ ಬೀದಿ ಜಗಳದಲ್ಲಿ ನಿಂತಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ.

ಸಾಮಾಜಿಕ ಕಾಳಜಿಯ ಕನಸನ್ನು ಪುಸ್ತಕದಲ್ಲಿ ಸಾಕಾರಗೊಳಿಸುವ ಒಬ್ಬ ಸಾಹಿತಿ ಅದನ್ನು ವಾಸ್ತವದಲ್ಲೂ ಸಾಕಾರಗೊಳಿಸುವಲ್ಲಿ ಮಗ್ನನಾಗಬೇಕಲ್ಲದೆ ತನ್ನ ಕನಸಿಗೆ ಪ್ರಶಸ್ತಿ ಪುರಸ್ಕಾರಗಳೇನಾದರೂ ಬರುತ್ತವೆಯೇ ಎಂದು ಪುನಃ ಕನಸಬಾರದು. ಸಾಮಾಜಿಕ ಕಳಕಳಿ ಹೊಂದುವುದು ಬೇರೆ ಮತ್ತು ಪುಸ್ತಕ ಬರೆವ ಮೂಲಕ ಅದನ್ನು ವ್ಯಕ್ತಪಡಿಸುವುದು ಬೇರೆ.

ಸಾಮಾಜಿಕ ಕಾಳಜಿಯನ್ನು ಸುಮ್ಮನೆ ಪ್ರದರ್ಶಿಸುವವನಿಗೆ ಸರ್ಕಾರ ಮನ್ನಣೆ ನೀಡುತ್ತದೆ. ಆದರೆ ಆ ಕಾಳಜಿಯನ್ನು ಕಾರ್ಯರೂಪಕ್ಕೆ ತರುವವನು ಅನಿವಾರ್ಯವಾಗಿ ಸರ್ಕಾರದ ಹಾಗೂ ಪ್ರತಿಷ್ಠಿತ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಟಾಲ್ಸ್‌ಟಾಯ್ ನೊಬೆಲ್ ಪ್ರಶಸ್ತಿಯಿಂದ ವಂಚಿತರಾದುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗುತ್ತದೆ. ನೊಬೆಲ್ ಸಿಗದ ಮಾತ್ರಕ್ಕೆ ಟಾಲ್ಸ್‌ಟಾಯ್ ಎಲ್ಲಾದರೂ ನಗಣ್ಯರೆನಿಸುವರೇ?

ಇಂದಿನ ತರುಣ ಸಾಹಿತಿಗಳು ಕೃತಿರಚನೆಯೊಂದೇ ತನ್ನ ಪ್ರತಿಭೆಯ ಏಕಮೇವ ಮಾನದಂಡವಾಗಿದೆ ಎಂಬ ತಿಳಿವಳಿಕೆಯನ್ನಾಗಲಿ, ಪ್ರಶಸ್ತಿಗೆ ಪಾತ್ರರಾದ ಸಹಲೇಖಕರಿಂದ ಕನ್ನಡಕ್ಕೆ ಇನ್ನೂ ಸಾರ್ಥಕವಾದ ಕೃತಿಗಳು ಬರಲಿ ಎಂದು ಹಾರೈಸುವ ಉದಾರ ಮನಸ್ಸನ್ನಾಗಲಿ ಹೊಂದಿರದೆ ಹೀಗೆ ಕೆಸರೆರಚಾಟ ನಡೆಸುತ್ತಿರುವುದು ಅವರ ಅಸೂಕ್ಷ್ಮತೆಯನ್ನು ತೋರಿಸುತ್ತದೆ. ಕೊನೆಯಪಕ್ಷ ‘ಕಂಡವರು ನಮ್ಮ ಬಗ್ಗೆ ಏನೆಂದುಕೊಂಡಾರು’ ಎಂಬ ನಾಚಿಕೆಯಾದರೂ ಇವರಿಗೆ ಬೇಡವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT