ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕಿನ ಕಣ್ಣಿನ ಸೂರಜ್‌

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಕಿರುತೆರೆಯೆಂಬ ಕಿರುಹಾದಿಯಿಂದ ಹಿರಿತೆರೆಯೆಂಬ ಹೆದ್ದಾರಿಗೆ ಪಯಣ ಬೆಳೆಸುವವರು ಅನೇಕ ಮಂದಿ. ಆದರೆ ಇಲ್ಲೊಬ್ಬ ನಟ ಹೆದ್ದಾರಿಯಿಂದ ಕಿರುದಾರಿಯತ್ತ ಪಾದ ಬೆಳೆಸಿದ್ದಾರೆ. ಅವರೇ ಸೂರಜ್‌. ಸ್ಟಾರ್ ಸುವರ್ಣ ವಾಹಿನಿಯ ‘ನಿಹಾರಿಕಾ’ ಧಾರಾವಾಹಿಯ ಪಾತ್ರಧಾರಿ.

ನಟನೆಯ ಹಿನ್ನೆಲೆಯಿಲ್ಲದ ಇವರು, ಸ್ನೇಹಿತ ಮುರಳಿ (ನಟ) ಮಾತಿನ ಮೇರೆಗೆ ಮೊದಲ ಬಾರಿ ‘ಸೇವಂತಿ ಸೇವಂತಿ’ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ‘ನಿಹಾರಿಕಾ’ದ ಪ್ರೀತಿ ಅರಸುವ, ಮುಗ್ಧ ಹುಡುಗ ಸೂರಜ್ ‘ಗುಲ್‌ಮೊಹರ್‌’ನೊಂದಿಗೆ ಮಾತಿಗೆ ಸಿಕ್ಕಾಗ...

* ಸಿನಿಮಾದಿಂದ ಕಿರುತೆರೆಗೆ ಹೆಜ್ಜೆ ಇರಿಸಲು ಕಾರಣ?
ನಾನು ‘ಸೇವಂತಿ, ಸೇವಂತಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿರಿಸಿದೆ. ‘ಶಿವಾನಿ’, ‘ನೀನ್ಯಾರೆ’ ಸಿನಿಮಾದಲ್ಲಿ ನಾಯಕ ನಟನಾಗಿದ್ದೆ. ‘ಸಿರಿವಂತ’, ‘ದೇವರು ಕೊಟ್ಟ ತಂಗಿ’,  ‘ಪರೋಲ್’ ಸಿನಿಮಾಕ್ಕೂ ಬಣ್ಣ ಹಚ್ಚಿದ್ದೆ. ಆದರೆ ಕೆಲ ವರ್ಷ ವೃತ್ತಿ ಬದುಕಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಚಿತ್ರರಂಗದಿಂದ ದೂರ ಉಳಿದಿದ್ದೆ. ಈಗ ನಿರ್ದೇಶಕ ವಿನು ಬಳಂಜ ಅವರ ಕರೆಯ ಮೇರೆಗೆ ಮತ್ತೆ ಧಾರಾವಾಹಿಗೆ ಬಣ್ಣ ಹಚ್ಚಿದ್ದೇನೆ.

* ಸೂರಜ್ ಅನ್ನೋದು ನಿಮ್ಮ ಧಾರಾವಾಹಿ ಹೆಸರು ಅಲ್ವಾ?
ಹ್ಹಹ್ದ (ನಗು)... ಧಾರಾವಾಹಿಯವರು ಹೆಸರು ಕೊಟ್ಟಿದ್ದು ಅಲ್ಲಾರೀ ಅದು, ನಮ್ಮ ಅಪ್ಪ, ಅಮ್ಮ ಇಟ್ಟ ಹೆಸರು. ಧಾರಾವಾಹಿಯಲ್ಲಿ ದೇವ್ ಅಂತ ಪಾತ್ರದ ಹೆಸರಿತ್ತು. ಆದರೆ ನನ್ನ ನಿಜ ಹೆಸರು ಚೆನ್ನಾಗಿದೆ ಅಂತ ಧಾರಾವಾಹಿಯಲ್ಲೂ ಸೂರಜ್ ಅಂತ ಹೆಸರು ಇಟ್ಟಿದ್ದಾರೆ.

* ಹಿರಿತೆರೆಯಿಂದ ಕಿರುತೆರೆಗೆ ಬಂದಿದ್ದಕ್ಕೆ ಬೇಸರ ಇಲ್ವಾ?
ಅಯ್ಯೋ ಖಂಡಿತಾ ಇಲ್ಲ... ನನಗೆ ಧಾರಾವಾಹಿ, ಸಿನಿಮಾ ಅನ್ನೋದಕ್ಕಿಂತ ಕತೆ, ನಿರ್ದೇಶಕ, ಸಹ ನಟರು ಹೇಗಿದ್ದಾರೆ ಅನ್ನೋದು ಮುಖ್ಯ. ನನ್ನ ಸ್ನೇಹಿತರು ‘ಧಾರಾವಾಹಿಯಲ್ಲಿ ನಟಿಸು, ಇದರಿಂದ ನಿನ್ನ ಅಭಿನಯ ಇನ್ನಷ್ಟು ಪಕ್ವವಾಗುತ್ತದೆ’ ಎಂದು ಸಲಹೆ ನೀಡಿದ್ದರು.  ವಿನು ಬಳಂಜ ಅವರಿಗೆ ಧಾರಾವಾಹಿ ಕ್ಷೇತ್ರದಲ್ಲೇ ದೊಡ್ಡ ಹೆಸರಿದೆ. ಅವರ ನಿರ್ದೇಶನದ ಧಾರಾವಾಹಿಯಲ್ಲಿ ಕಲಿಯುವುದು ಸಾಕಷ್ಟಿದೆ ಎಂಬ ಕಾರಣಕ್ಕೆ ಮತ್ತೆ ಬಣ್ಣದ ಲೋಕ ಪ್ರವೇಶಿಸಿದೆ.

* ನಿಮ್ಮದು ಮೃದು ಸ್ವಭಾವವಂತೆ?
ನನ್ನ ನಿಜ ವ್ಯಕ್ತಿತ್ವ ಧಾರಾವಾಹಿ ಪಾತ್ರದಂತೆ. ನಾನು ಎಲ್ಲರನ್ನೂ ಪ್ರೀತಿ, ಆದರದಿಂದ ನೋಡುತ್ತೇನೆ. ನಾನು ಎಲ್ಲರಂತೆ ಸಾಮಾನ್ಯ ಮನುಷ್ಯ. ನಟ ಎಂದಾಕ್ಷಣ ನಾನೇನು ಬೇರೆಯಾಗಲು ಸಾಧ್ಯವಿಲ್ಲ. ಸಿನಿಮಾದಲ್ಲಿ ನಟಿಸಿ ಈಗ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ ಎಂಬ ಮುಜಗರ ಕೂಡ ಇಲ್ಲ.

* ಅಳೋ ಗಂಡಸರನ್ನ ನಂಬಬಾರದು ಅಂತಾರೇ...‌
ಯಪ್ಪಾ...ಯಾರ್ರಿ ಹೇಳಿದ್ದೂ, ನಾನು ಆ ಗಾದೇನೇ ಒಪ್ಪಲ್ಲ. ಹುಡುಗೀರು ಹಾಕೋ ಕಣ್ಣೀರನ್ನ ಮೊಸಳೆ ಕಣ್ಣೀರು ಅಂತಾರೆ ಗೊತ್ತಾ ನಿಮಗೆ? ಅವರು ಕಣ್ಣೀರು ಹಾಕಿ ‘ಎಮೋಷನಲ್ ಅತ್ಯಾಚಾರ’ ಮಾಡ್ತಾರೆ. ಆದ್ರೆ ಒಬ್ಬ ಗಂಡಸು ಅಳ್ತಾನೆ ಅಂದ್ರೆ ಅವನಿಗೆ ನಿಜವಾಗ್ಲೂ ನೋವಾಗಿದೆ ಅಂತ ಅರ್ಥ. ಗಂಡಸು ಹೆಂಗಸರ ಥರ ಮಾತು ಮಾತಿಗೂ ಕಣ್ಣೀರು ಹಾಕೋಲ್ಲ.

* ಪ್ರೀತಿ ಮಾಡಿದ ಹುಡುಗಿ ಕಣ್ಣ ಮುಂದೆ ಇದ್ರೂ ಗುರುತಿಸೋಕೆ ಆಗಲ್ವಾ?
ನಂಗೆ ನಿಹಾರಿಕಾನೇ ನಿತ್ಯಾ ಅಂತ ಗೊತ್ತಾದ್ರು ಹೇಳೋಕೆ ಆಗ್ತಾ ಇಲ್ಲ. ಅದಕ್ಕೆ ನಾನು ಆಫ್‌ ಸ್ಕ್ರೀನ್‌ನಲ್ಲಿ ವಿನು ಸರ್‌ಗೆ  ಹೇಳ್ತಾ ಇರ್ತೀನಿ. ‘ನಂದೇ ಒಂದು ಹೊಸ ಲವ್ ಟ್ರ್ಯಾಕ್ ಶುರು ಮಾಡಿ, ಹೊಸ ಹುಡುಗಿ ಎಂಟ್ರಿ ಕೊಡ್ಸಿ, ಆಗ ನಿಹಾರಿಕಾ ಹೊಟ್ಟೆ ಉರ್ಕೊಂಡು ಅವಳಾಗೇ ನನ್ನ ಹತ್ರ ಬರ್ತಾಳೆ’ ಅಂತ.

* ನಿಮ್ಮ ಕಣ್ಣಿಗೆ ತುಂಬಾ ಅಭಿಮಾನಿಗಳಿದ್ದಾರಂತೆ?
ನಿಜ... ಇದು ನನ್ನ ತಂದೆ– ತಾಯಿ ಕೊಟ್ಟ ದೊಡ್ಡ ಗಿಫ್ಟ್‌. ಇದೇ ನನ್ನ ಹೈಲೈಟ್. ನನ್ನ ಕಣ್ಣಿಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ.

* ನೀವು ಇಷ್ಟ ಪಡೋ ಥರಾನೇ ಹೆಂಡ್ತಿ ಸಿಕ್ಕಿದಾರಂತೆ?
ಹೌದು... ಆ ವಿಷಯದಲ್ಲಿ ನಾನು  ಲಕ್ಕಿ. ನಂಗೆ ಬಬ್ಲಿ ಆಗಿರೋ, ಕುಟುಂಬದ ಬೆಲೆ ತಿಳಿದಿರೋ ಹುಡುಗೀನಾ ಮದ್ವೆ ಆಗಬೇಕು ಅಂತ ಆಸೆ ಇತ್ತು. ಮಾತು ಮಾತಿಗೆ ಅಳೋ ಹುಡ್ಗಿ ನಂಗೆ ಇಷ್ಟ ಇಲ್ಲ. ನನ್‌ ಹೆಂಡ್ತಿ ನನ್ನ ನಿರೀಕ್ಷೆಗಿಂತ ಜಾಸ್ತಿ ಮಾತಾಡ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT