ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಉದ್ಯೋಗ ಸೃಷ್ಟಿ ಭರವಸೆ

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ದಿನ ಹತ್ತಿರ ಬರುತ್ತಿದ್ದಂತೆ ಜನಸಾಮಾನ್ಯರು, ಕೃಷಿಕರು, ವಣಿಕ ಸಮುದಾಯ ಮತ್ತು ಕಾರ್ಪೊರೇಟ್‌ ಜಗತ್ತಿನಲ್ಲಿ ಹಲವಾರು ನಿರೀಕ್ಷೆ, ಆತಂಕ, ಆಶಾವಾದ ಕಂಡುಬರುತ್ತಿದೆ. ಕೆಲ ವಿಷಯಗಳಲ್ಲಿ ಸ್ಪಷ್ಟತೆಗಾಗಿ ಉದ್ದಿಮೆ ಸಂಸ್ಥೆಗಳು ಒತ್ತಾಯಿಸುತ್ತಿವೆ.

ಹೊಸ ರಾಷ್ಟ್ರೀಯ ಮಾರಾಟ ತೆರಿಗೆ ಜಾರಿಗೆ ತರುವ ಆರಂಭಿಕ ಹಂತದಲ್ಲಿ  ಕೆಲ ನಿಯಮಗಳ ಪಾಲನೆಯಲ್ಲಿ ರಿಯಾಯ್ತಿ ನೀಡಲಾಗುವುದು ಎಂದು ಸರ್ಕಾರವೂ ಭರವಸೆ ನೀಡಿದೆ.

‘ರಿಟರ್ನ್ಸ್‌ ಸಲ್ಲಿಕೆಯಲ್ಲಿನ ಸಹಜ ತಪ್ಪುಗಳು ಮತ್ತು  ತೆರಿಗೆ ತಪ್ಪಿಸುವ ಉದ್ದೇಶದಿಂದ ಮಾಡುವ ತಪ್ಪುಗಳನ್ನು ಗುರುತಿಸಲಾಗುವುದು. ಹೊಸ ವ್ಯವಸ್ಥೆ ಸುಲಲಿತವಾಗಿ ಜಾರಿಗೆ ಬರಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಆರಂಭಿಕ ಹಂತದಲ್ಲಿ ಯಾರಿಗೂ ಕಿರುಕುಳ ನೀಡುವ ಉದ್ದೇಶ ಇಲ್ಲ’ ಎಂದೂ ರೆವೆನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಸ್ಪಷ್ಟಪಡಿಸಿದ್ದಾರೆ.

ಸಂಘಟಿತ ವಲಯದ ಉದ್ದಿಮೆಗಳು   ಹೆಚ್ಚು ಪ್ರಯೋಜನ ಪಡೆಯುವ ಸಾಧ್ಯತೆ ಇದೆ.  ಸಿದ್ಧ ಉಡುಪು, ಟೈಲ್ಸ್‌, ಪ್ಲೈವುಡ್‌, ಪಾದರಕ್ಷೆ, ವಿದ್ಯುತ್‌ ಸಲಕರಣೆ ಮತ್ತು ಪ್ಲಾಸ್ಟಿಕ್‌ ಉದ್ದಿಮೆಗಳಿಗೆ ಹೆಚ್ಚು ಲಾಭ ಆಗಲಿದೆ.

ದಾಸ್ತಾನಿಗೆ ಮಿತಿ
ಕೆಲ ಸಗಟು ಮತ್ತು ಚಿಲ್ಲರೆ ವಹಿವಾಟುದಾರರು ಜಿಎಸ್‌ಟಿ ಜಾರಿ  ಮುನ್ನ ತಮ್ಮ ದಾಸ್ತಾನಿಗೆ ಮಿತಿ  ಹಾಕಿಕೊಂಡಿದ್ದಾರೆ. ಬೃಹತ್‌ ಪ್ರಮಾಣದಲ್ಲಿ ವಹಿವಾಟು ನಡೆಸುವ ರಿಟೇಲ್‌ ಸಂಸ್ಥೆಗಳು  ಹೊಸದಾಗಿ ಸರಕು ಖರೀದಿಸಿ ದಾಸ್ತಾನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಜುಲೈ 1 ರ ಮುಂಚೆ ಮಾರಾಟವಾಗದ ಸರಕಿನ ಕುರಿತ ಗೊಂದಲಗಳನ್ನು ನಿವಾರಿಸಬೇಕು ಎನ್ನುವುದು ಅವರ ಒತ್ತಾಯವಾಗಿದೆ.  ದಾಸ್ತಾನು ಕರಗಿಸಲು ಭಾರಿ ರಿಯಾಯ್ತಿ ಪ್ರಕಟಿಸಿವೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕುಗಳನ್ನು ಮಾರಾಟ ಮಾಡುವ ಸಂಘಟಿತ ರಿಟೇಲ್‌ ವಹಿವಾಟುದಾರರು  ಸೇರಿದಂತೆ ಅನೇಕ ವ್ಯಾಪಾರಸ್ಥರು ಜುಲೈ 1 ಮುಂಚೆ ತಮ್ಮ ದಾಸ್ತಾನಿನ ಮೇಲೆ ಕಡಿವಾಣ ವಿಧಿಸಲು ಮುಂದಾಗಿದ್ದಾರೆ.

ಇದು ಜಿಎಸ್‌ಟಿ ಜಾರಿಯ ಆರಂಭಿಕ ದಿನಗಳಲ್ಲಿ ಬೆಲೆ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂತಕ್ಕೆ ಎಡೆಮಾಡಿಕೊಟ್ಟಿದೆ. ಹೊಸ ವ್ಯವಸ್ಥೆಗೆ ವಲಸೆ ಹೋಗುವ ಈ ಸಂಕ್ರಮಣ ಕಾಲ ಘಟ್ಟದಲ್ಲಿನ ಸಮಸ್ಯೆಯಿಂದ ಶೀಘ್ರವೇ ಹೊರ ಬರುವ ಬಗ್ಗೆ ಸಂಸ್ಥೆಗಳು ಆಶಾವಾದ ಹೊಂದಿವೆ.

ಚಿಲ್ಲರೆ ವಹಿವಾಟಿನ ಹಂತದಲ್ಲಿ ಯಾವುದೇ ನಷ್ಟ ಆಗದಂತೆ ಮತ್ತು ಹೊಸ ವ್ಯವಸ್ಥೆಗೆ ಸುಲಲಿತವಾಗಿ ವರ್ಗಾವಣೆಗೊಳ್ಳಲು ವರ್ತಕರಿಗೆ  ನೆರವು ನೀಡುವುದಾಗಿ ಕೆಲ ಸಂಸ್ಥೆಗಳು ಭರವಸೆ ನೀಡಿವೆ. ಗೋದ್ರೆಜ್‌ ಕನ್ಸುಮರ್‌ ಪ್ರಾಡಕ್ಟ್ಸ್‌, ಡಾಬರ್‌ ಮತ್ತು ಮ್ಯಾರಿಕೊ ಸಂಸ್ಥೆಗಳು ಇಂತಹ ಭರವಸೆ ನೀಡಿವೆ.

ಹೊಸ ವ್ಯವಸ್ಥೆಗೆ ವರ್ಗಾವಣೆ ಆಗುವ ಹಂತದಲ್ಲಿ ನಮ್ಮ ವಿತರಕರು ಮತ್ತು ವರ್ತಕರಿಗೆ  ಯಾವುದೇ ನಷ್ಟ ಉಂಟಾಗದಂತೆ ನೋಡಿಕೊಳ್ಳುವುದಾಗಿ ಡಾಬರ್‌ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಲಲಿತ್‌ ಮಲಿಕ್‌ ಅವರೂ ಭರವಸೆ ನೀಡಿದ್ದಾರೆ. ಅಲ್ಪಾವಧಿಯಲ್ಲಿ ವಿತರಕರಿಂದ ಬೇಡಿಕೆ ಕುಸಿಯಲಿರುವುದು ನಿಜ. ಆದರೆ,ಇದು ದೀರ್ಘ ಸಮಯದವರೆಗೆ ಮುಂದುವರೆಯಲಾರದು ಎಂದೂ ಅವರು ಭರವಸೆ ನೀಡುತ್ತಾರೆ.

‘ಸ್ಪಷ್ಟತೆಯ ಕೊರತೆಯ ಕಾರಣಕ್ಕೆ ಕೆಲದಿನಗಳವರೆಗೆ ವಹಿವಾಟಿಗೆ ಧಕ್ಕೆ ಒದಗಲಿದೆ’ ಎಂದು ಮ್ಯಾರಿಕೊದ ಸಿಎಫ್‌ಒ ವಿವೇಕ್‌ ಕರ್ವೆ ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರವೃತ್ತಿ ಬಹಳ ದಿನ  ಮುಂದುವರೆಯಲಾರದು.  ಗ್ರಾಹಕ ಬಳಕೆ ಸರಕುಗಳ ವಿತರಕರಿಗೆ ಯಾವುದೇ ನಷ್ಟ ಸಂಭವಿಸದಂತೆ ಕಾಳಜಿ ವಹಿಸಿರುವುದಾಗಿ ಸರಕು ತಯಾರಿಕಾ ಸಂಸ್ಥೆಗಳು ಭರವಸೆ ನೀಡಿವೆ. ಅನಿಶ್ಚಿತತೆ ಬಹಳ ದಿನ ಮುಂದುವರೆಯಲಾರದು ಎಂದೂ ಹೇಳಿವೆ.

ದಿನಬಳಕೆಯ ಅಗತ್ಯ ಸರಕುಗಳ ಬೆಲೆಗಳು ದುಬಾರಿಯಾಗುವುದಿಲ್ಲ ಎಂದು ಸರ್ಕಾರ ಪುನರುಚ್ಚರಿಸುತ್ತಿದೆ.  ಕಡಿಮೆ ದರದ ತೆರಿಗೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿಯೂ ಭರವಸೆಯ ಮಾತು ಆಡಿದೆ.

ಜಿಎಸ್‌ಟಿ’ಯು ಉದ್ಯೋಗ ಮಾರುಕಟ್ಟೆಯಲ್ಲಿಯೂ ಹೊಸ ಆಶಾವಾದ ಮೂಡಿಸಿದೆ. ವಿವಿಧ ಕ್ಷೇತ್ರಗಳ ಉದ್ದಿಮೆ ಸಂಸ್ಥೆಗಳು, ವಹಿವಾಟುದಾರರು ಜಿಎಸ್‌ಟಿ ಸಿದ್ಧತೆ ಪೂರ್ಣಗೊಳಿಸಲು ಮುಂದಾಗಿರುವುದರಿಂದ ತೆರಿಗೆ ಮತ್ತು ತಂತ್ರಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಸರಕು (ಎಫ್‌ಎಂಸಿಜಿ), ಗೃಹೋಪಯೋಗಿ ಸಲಕರಣೆ, ಔಷಧಿ ತಯಾರಿಕೆ, ರಿಯಲ್‌ ಎಸ್ಟೇಟ್‌, ಬ್ಯಾಂಕಿಂಗ್‌ ಮತ್ತು ವಿಮೆ ವಲಯಗಳಲ್ಲಿ   ಈ ಬೇಡಿಕೆ ಹೆಚ್ಚಿದೆ. ಹೊಸ ತೆರಿಗೆ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಲು ತೆರಿಗೆ ವಿಷಯಗಳಲ್ಲಿ ಪರಿಣತರಾದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತಿವೆ.

ಜಿಎಸ್‌ಟಿ ಜಾರಿಗೆ ಬಂದ ನಂತರವೂ ಉದ್ಯೋಗ ಮಾರುಕಟ್ಟೆಯಲ್ಲಿ ಇದೇ ಬಗೆಯ ಬೇಡಿಕೆ ಮುಂದುವರೆಯಲಿದೆ.   ಜುಲೈ ನಂತರದ ಮೂರು ತಿಂಗಳಲ್ಲಿಯೇ ಕನಿಷ್ಠ 1 ಲಕ್ಷದಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ತೆರಿಗೆಗೆ ಸಂಬಂಧಿಸಿದಂತೆ  ನ್ಯಾಯವಾದಿಗಳು, ತೆರಿಗೆ ಸಲಹೆಗಾರರು, ಚಾರ್ಟರ್ಡ್‌ ಅಕೌಂಟಂಟ್ಸ್‌, ಕಾಸ್ಟ್‌ ಅಕೌಂಟಂಟ್ಸ್‌ಗಳಿಗೆ ಭಾರಿ ಬೇಡಿಕೆ ಕುದುರಲಿದೆ. ಜತೆಗೆ ಸಾಫ್ಟ್‌ವೇರ್‌ ತಂತ್ರಜ್ಞರಿಗೂ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ.ಕಾರ್ಪೊರೇಟ್‌ ಜಗತ್ತಿನಲ್ಲಿ ಜಿಎಸ್‌ಟಿ ಮ್ಯಾನೇಜರ್‌, ಉಪಾಧ್ಯಕ್ಷ, ತಂಡದ ಮುಖ್ಯಸ್ಥ ಹುದ್ದೆಗಳೂ ಸೃಷ್ಟಿಯಾಗಲಿವೆ.

***

ಉದ್ಯೋಗ ಹೆಚ್ಚಳ ವಲಯಗಳು
ಆಟೊಮೊಬೈಲ್‌, ಸರಕು ಸಾಗಣೆ, ಗೃಹ ಅಲಂಕಾರ, ಇ–ವಾಣಿಜ್ಯ, ಮನರಂಜನೆ, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ವಿಮೆ, ಗೃಹೋಪಯೋಗಿ ಸಲಕರಣೆ ಮತ್ತು ದೂರ ಸಂಪರ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT