ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿಯ ದಾರಿಯಲ್ಲಿ ಬದುಕನ್ನು ಸಂಭ್ರಮಿಸಿ!

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಇದು ನನ್ನ ಪರಿಚಯದ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರ ಕಥೆ.

ಅವನು ತುಂಬ ಒಳ್ಳೆಯ ಕೆಲಸಗಾರ. ಆದರೆ ಅವನು ಕೆಲಸ ಮಾಡುತ್ತಿರುವ ಕಂಪೆನಿ ನಷ್ಟದಲ್ಲಿತ್ತು. ಕೆಲವು ತಿಂಗಳು ಅವನು ಸಂಬಳವಿಲ್ಲದೆ ಕೆಲಸ ಮಾಡಬೇಕಾಯ್ತು. ಕೊನೆಗೊಂದು ದಿನ ಕಂಪೆನಿ ಮುಚ್ಚಿಯೇ ಹೋಯ್ತು. ಇಷ್ಟೆಲ್ಲ ಘಟಿಸಿ ಬದುಕು ಏರುಪೇರಿಗೊಳಗಾದರೂ ಆ ವ್ಯಕ್ತಿ ಮಾತ್ರ ಸಮಾಧಾನಿಯಾಗಿಯೇ ಇದ್ದ. ಅವನ ಮುಖದಲ್ಲಿ ಸದಾ ನಗುವೊಂದು ಅರಳಿರುತ್ತಿತ್ತು.

ಅವನ ಹೆಂಡತಿಗೆ ಗಂಡನ ಈ ಸ್ವಭಾವ ಅರ್ಥವೇ ಆಗುತ್ತಿರಲಿಲ್ಲ. ಬ್ಯಾಂಕ್‌ ಬ್ಯಾಲೆನ್ಸ್‌ನಲ್ಲಿನ ಹಣವೆಲ್ಲ ನೀರಿನ ಹಾಗೆ ಕರ್ಚಾಗುತ್ತಿರುವಾಗ, ಆದಾಯದ ದಾರಿ ಮುಚ್ಚಿಯೇ ಹೋಗಿರುವಾಗ ಇಷ್ಟು ಸಮಾಧಾನದಿಂದಿರಲು ಹೇಗೆ ಸಾಧ್ಯ? ಅಷ್ಟು ಬೇಜವಾಬ್ದಾರಿಯೇ? ಅಲಕ್ಷ್ಯವೇ? ಅದ್ಯಾವುದೂ ಆಗಿರಲಿಲ್ಲ.

ಏಕೆಂದರೆ ಅವನು ಜವಾಬ್ದಾರಿಯಿಂದಲೇ ಹೊಸ ಕೆಲಸದ ಶೋಧನೆಗೆ ತೊಡಗಿಕೊಂಡಿದ್ದ. ಸಾಕಷ್ಟು ಕಂಪೆನಿಗಳಿಗೆ ಅರ್ಜಿ ಕಳಿಸುತ್ತಿದ್ದ. ಆದರೆ ಅದ್ಯಾವುದರ ಟೆನ್ಷನ್‌ನ ಸಣ್ಣ ಕುರುಹೂ ಅವನ ಮುಖದಲ್ಲಿರದಿದ್ದುದು ಹೆಂಡತಿಗೆ ಅನುಮಾನಕ್ಕೆ ಕಾರಣವಾಗಿತ್ತು. ನಿಜವಾಗಿಯೂ ಅವನು ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾನೆಯೇ, ಸಂದರ್ಶನಕ್ಕೆ ಹಾಜರಾಗುತ್ತಿದ್ದಾನೆಯೇ – ಎನ್ನುವುದರ ಕುರಿತೇ ಅನುಮಾನ ಹುಟ್ಟುತ್ತಿತ್ತು.

ಈ ನಡುವೆಯೇ ಅವನಿಗೊಂದು ಒಳ್ಳೆಯ ಕೆಲಸ ಸಿಕ್ಕಿಬಿಟ್ಟಿತು. ಹೊಸ ಕೆಲಸದಲ್ಲಿ ಸಹೋದ್ಯೋಗಿ, ಮೇಲಧಿಕಾರಿಗಳ ಮೆಚ್ಚುಗೆಯನ್ನೂ ಅಷ್ಟೇ ಬೇಗ ಗಳಿಸಿದ. ಈ ಎಲ್ಲ ಪ್ರಕ್ರಿಯೆಯಲ್ಲಿಯೂ ಅವನ ಕೈ ಹಿಡಿದಿದ್ದದ್ದು ಅದೇ ಸಮಾಧಾನ; ಮಾಸದ ಮುಗುಳ್ನಗೆ! ಹೆಂಡತಿಗೆ ಈಗ ಗಂಡನ ಸ್ವಭಾವದ ಮಹತ್ವ ಅರ್ಥವಾಯಿತು. ಅಂದಿನಿಂದ ಅವಳು ಅವನನ್ನು ಪ್ರೀತಿಯಿಂದ ‘ನನ್ನ ದಲೈಲಾಮ’ ಎಂದು ಕರೆಯುತ್ತಾಳೆ!

ಸಮಾಧಾನ ಎನ್ನುವುದು ನಮ್ಮ ಬದುಕಿನಲ್ಲಿ ಅಷ್ಟು ಮಹತ್ವದ ಪಾತ್ರ ವಹಿಸುತ್ತದೆ. ಸದಾ ಖುಷಿಯಾಗಿರುವುದು ಸುಲಭವಲ್ಲ. ಆದರೆ ಆ ಸ್ವಭಾವವನ್ನು ಗಳಿಸಿ ಕೊಂಡರೆ ಎಂಥ ಸಂದರ್ಭವನ್ನು ದಾಟುವುದೂ ಕಷ್ಟವಲ್ಲ.

ಧ್ಯಾನ ಇಂಥ ಸಮಾಧಾನದ ಮನಃಸ್ಥಿತಿಯನ್ನು ಗಳಿಸಿಕೊಳ್ಳುವ ಒಂದು ಮಾರ್ಗ. ಹಾಗೆಂದು ನಾವ್ಯಾರೂ ದಲೈ ಲಾಮ ಅಲ್ಲವಲ್ಲ! ಆದರೆ ಆ ಸ್ಥಿತಿಯನ್ನು ತಲುಪಲು ಮಾಡುವ ಪ್ರಯತ್ನವೂ ನಮ್ಮ ಬದುಕನ್ನು ಇನ್ನಷ್ಟು ಸಹನೀಯವಾಗಿಸುತ್ತದೆ.

ಅಲ್ಲದೆ ಧ್ಯಾನವೇ ಎಲ್ಲ ಮಾನಸಿಕ ಕ್ಷೋಭೆಗಳಿಗೆ ಪರಿಹಾರವೂ ಆಗಿರುವುದಿಲ್ಲ. ಕೆಲವೊಮ್ಮೆ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಸೈಕಿಯಾಟ್ರಿಸ್ಟ್‌  ಚಿಕಿತ್ಸೆಯೂ ಬೇಕಾಗುತ್ತದೆ. ಅದರ ಜೊತೆಗೆ ಧ್ಯಾನವನ್ನೂ ಮಾಡಬಹುದು.

ಮಾನಸಿಕ ಕ್ಷೋಭೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಯಾವುದೇ ರೀತಿಯಲ್ಲಿ ನಾಚಿಕೆ ಪಡಬೇಕಾಗಿಲ್ಲ. ಮನುಷ್ಯನ ಮೆದುಳಿನ ಕಾರ್ಯಾಚರಣೆ ಹದತಪ್ಪಿದಾಗ ಔಷಧಗಳ ಮೂಲಕ ಸರಿಪಡಿಸಬೇಕಾಗುತ್ತದೆ. ಹಾಗೆ ಸರಿಪಡಿಸಿದ ನಂತರ ಅವನು ಮೊದಲಿನ ಮನುಷ್ಯನೇ ಆಗಿರುತ್ತಾನೆ.

ಯಾವ ಸಂಗತಿಗಳನ್ನು ನೀವು ಬದಲಿಸಬಲ್ಲಿರೋ ಅದರ ಮೇಲೆಯೇ ಹೆಚ್ಚು ಗಮನ ನೀಡಿ. ಆ ಬದಲಾವಣೆ ನಿಮ್ಮಲ್ಲಿ ಖುಷಿ ಹುಟ್ಟಿಸುವಂತಿರಬೇಕು. ಮತ್ತು ಬದುಕಿನ ಪ್ರತಿಕ್ಷಣವೂ ಪದೆ ಪದೆ ನೆನಪಿಸಿಕೊಳ್ಳುತ್ತಲೇ ಇರಿ; ‘ಈ ಜೀವನವನ್ನು ಉನ್ನತಮಟ್ಟಕ್ಕೇರಿಸುವ – ಖುಷಿಯ ಸೆಲೆಯನ್ನು ಉಕ್ಕಿಸುವ ಅಸಂಖ್ಯ ಮೂಲಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ಇವೆ’.

ನಮ್ಮನ್ನು ಚಿಂತೆಗೀಡು ಮಾಡುವ ಸಂಗತಿಗಳನ್ನು ಯೋಚಿಸಿ ಎಂದು ಯಾರೂ ನಿಮ್ಮನ್ನು ಒತ್ತಾಯಿಸುವುದಿಲ್ಲ. ಒಬ್ಬ ಬಡ ಮನುಷ್ಯನಿಗೆ ಒಂದು ಕೋಟಿ ರೂಪಾಯಿ ಲಾಟರಿ ಹೊಡೆಯಿತು. ಆದರೆ ಅವರು ಎಂಬತ್ತು ಲಕ್ಷ ರೂಪಾಯಿ ಮಾತ್ರವೇ ಕೊಡುವುದಾಗಿ ಹೇಳಿದರು. ಈ ಮನುಷ್ಯ ಒಪ್ಪಲಿಲ್ಲ. ಹೋರಾಟ ನಡೆಸಿದ. ಅವರು ಕೊಡಲೊಪ್ಪಲಿಲ್ಲ. ಇವನು ಬಿಡಲಿಲ್ಲ. ಹೋರಾಟ ಹಾಗೆಯೇ ವರ್ಷಾನುಗಟ್ಟಲೆ ನಡೆಯಿತು. ಆ ವ್ಯಕ್ತಿ ಇದರ ಬಗ್ಗೆಯೇ ಚಿಂತಿಸುತ್ತಾ ಡಿಪ್ರೆಷನ್‌ಗೂ ಹೋದ.

ಕೊನೆಗೆ ಒಬ್ಬ ಸ್ನೇಹಿತ ಹೇಳಿದ ‘ಸಾಕು ನಿಲ್ಲಿಸು! ಎಂಬತ್ತು ಲಕ್ಷ ಸಿಕ್ಕುತ್ತಿರುವುದೇ ನಿನ್ನ ಅದೃಷ್ಟ. ನಿನಗೆ ಖುಷಿಯಿಂದ ಬದುಕಲು ಆ ಹಣವೇ ಸಾಕಷ್ಟಾಯಿತು. ಸಿಗದೇ ಇರುವ ಹಣದ ಬಗ್ಗೆ ಯೋಚಿಸುವುದನ್ನು ಬಿಟ್ಟು ಸಿಕ್ಕಿದ್ದರಲ್ಲಿಯೇ ಖುಷಿಪಡು’.

ಬುದ್ಧಿವಂತ ಮನುಷ್ಯ ಯಾವಾಗಲೂ ಹೀಗೆಯೇ ‘ಇರುವುದರಲ್ಲಿಯೇ ಖುಷಿಯಾಗಿರುವುದು ಹೇಗೆಂದು’ ಯೋಚಿಸುತ್ತಾನೆ. ಅದೇ ಅವನ ಬದುಕಿನ ಖುಷಿಯನ್ನು ಹೆಚ್ಚಿಸಿಕೊಳ್ಳುವ ಕೀಲಿಕೈ ಕೂಡ ಆಗಿರುತ್ತದೆ.

ಸುತ್ತಲಿನ ಜಗತ್ತನ್ನು ನೋಡಬೇಡಿ, ನೀವು ಹೆಚ್ಚೆಂದರೆ ಅದರಿಂದ ಪ್ರಭಾವಿತರಾಗಬಹುದಷ್ಟೆ. ಬದುಕಿನಲ್ಲಿರುವ ಕೊರತೆಗಳನ್ನು ನೋಡಬೇಡಿ. ಮಾನಸಿಕ ಒತ್ತಡ ಕಾಡುತ್ತದೆ. ಸುಮ್ಮನೇ ಮುಂದೆ ನೇರವಾಗಿ ನೋಡಿ. ಬದುಕಿನ ಖುಷಿಯ ದಾರಿಗಳು ಎಲ್ಲೆಡಯಿಂದಲೂ ತೆರೆದುಕೊಳ್ಳುತ್ತವೆ. ಅವು ಅನಿರೀಕ್ಷಿತವಾಗಿರುತ್ತವೆ. ಖುಷಿಯ ದಾರಿ ತೆರೆದುಕೊಂಡಾಗ ಅದರಲ್ಲಿ ಸಾಗಿ; ಬದುಕನ್ನು ಸಂಭ್ರಮಿಸಿ. 

***

ಧ್ಯಾನದಿಂದ ಸಂತಸ
ಮನುಷ್ಯನಿಗೆ ಧ್ಯಾನ ಒಂದು ಸ್ಪೇಸ್‌ ನೀಡುತ್ತದೆ. ಆ ಸ್ಪೇಸ್‌ ಅವನ ಸಂತೋಷದ ಮಟ್ಟವನ್ನು ಹೆಚ್ಚಿಸಿಕೊಳ್ಳುವಂಥ ಜಾಗ. ಸಂತೋಷದ ಮಟ್ಟ ಎನ್ನುವುದು ಸ್ಥಿರವಾದುದಲ್ಲ. ಅದು ಹುಟ್ಟಿನೊಂದಿಗೆ ನಿರ್ಧಾರಗೊಂಡಿರುವುದೂ ಅಲ್ಲ. ನಿಮ್ಮ ಜೀವನದಲ್ಲಿ ಸಂತೋಷದ ಮಟ್ಟ ಕಡಿಮೆ ಇದೆ ಎನಿಸಿದಲ್ಲಿ ಅದನ್ನು ನೀವೇ ಹೆಚ್ಚಿಸಿಕೊಳ್ಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT