ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಜ್ಞತೆ ಎಂಬ ವಿಶ್ವಪ್ರಜ್ಞೆ

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಬಹಳ ವರ್ಷಗಳ ಹಿಂದೆ ಒಂದು ಸಂಸ್ಥೆಯ ವತಿಯಿಂದ ವಿಶೇಷ ಸಂದರ್ಭದ ನೆನಪಿನ ಹೊತ್ತಗೆ ಸಂಪಾದಿಸಿಕೊಡಬೇಕೆಂಬ ಕೋರಿಕೆ ಬಂತು. ನಾನೂ ಸಂತೋಷದಿಂದಲೇ ಒಪ್ಪಿ ಮಾಡಿಕೊಟ್ಟೆ. ಯೋಜನೆ ಯಶಸ್ವಿಯಾಗಿ ಮುಗಿದು ಶುಭಾಶಂಸನೆಯಲ್ಲಿ ಮುಕ್ತಾಯಗೊಂಡಿತು.

ಆದರೆ ಆ ಬಳಿಕ ಆ ಮಹಾಶಯರು ರಸ್ತೆಯಲ್ಲಿ ಕಂಡೂ ಕಾಣದವರಂತೆ ಓಡಾಡಲಾರಂಭಿಸಿದರು. ಮಾನುಷಸಂಬಂಧಗಳೆಲ್ಲ ಕ್ಷಣಿಕ, ಸ್ನೇಹವೂ ತೋರಾಣಿಕೆ ಎಂಬ ತಾತ್ತ್ವಿಕ ಅಂಶ ನಿಜ ಎಂದೆನಿಸುವುದು ಇಂತಹ ಸಂದರ್ಭಗಳಲ್ಲಿಯೇ. ಅವರಿವರು ಹಾಗೆ ಮಾಡಿದ ಮಾತ್ರಕ್ಕೆ ನಾವು ಮಾನವತೆಯ ಮಹಾಗುಣವಾದ ಕೃತಜ್ಞತೆಯನ್ನು ಮರೆಯಲಾದೀತೆ?

ಕಾಶಿಯ ಗಂಗೆಯಲ್ಲಿ ಸಾಧುಗಳೊಬ್ಬರು ಸ್ನಾನ ಮಾಡುತ್ತಿದ್ದರಂತೆ. ನದಿಯಲ್ಲಿ ತೇಲಿಹೋಗುತ್ತಿದ್ದ ಚೇಳನ್ನು ನೋಡಿ ಕನಿಕರದಿಂದ ಅದನ್ನು ಮೇಲೆತ್ತಲು ಹಸ್ತ ಚಾಚಿ ಅದನ್ನು ಎತ್ತಿಕೊಂಡರಂತೆ. ಅದು ಕುಟುಕಿತು. ನೋವಿಗೆ ಅವರು ಕೈ ಒದರಿದಾಗ ಅದು ಮತ್ತೆ ನೀರಿಗೆ ಬಿತ್ತು. ಈ ಸಾಧುಗಳು ಮತ್ತೆ ಅದನ್ನು ಮೇಲೆತ್ತಿದರು. ಅದು ಮತ್ತೆ ಕುಟುಕಿತು, ಅವರು ಕೈ ಒದರಿದರು, ಅದು ನೀರಿಗೆ ಬಿತ್ತು. ಹೀಗೆ ನಾಲ್ಕಾರು ಬಾರಿ ಆದ ಮೇಲೆ ಹತ್ತಿರವಿದ್ದ ಮತ್ತೊಬ್ಬರು ಕೇಳಿದರು, ‘ಅಲ್ಲ, ಅದು ನೀವೆಷ್ಟೇ ಪ್ರೀತಿಯಿಂದ ಮೇಲೆತ್ತಿದರೂ ಕುಟುಕುವುದನ್ನು ಬಿಡದ ಕ್ಷುದ್ರಜೀವಿ. ಅದನ್ನು ಮೇಲೆತ್ತಲು ಹೋಗಿ ನೀವೇಕೆ ನೋವು ಅನುಭವಿಸುತ್ತೀರಿ?’ ಆಗ ಆ ಸಾಧುಗಳು ಉತ್ತರಿಸಿದರು, ‘ನೀವು ಕ್ಷುದ್ರವೆನ್ನುವ ಆ ಜೀವಿಯೇ ತನ್ನ ಸ್ವಭಾವಸಹಜ ಕುಟುಕುವಿಕೆಯನ್ನು ಬಿಡುವುದಿಲ್ಲಎಂದಾದರೆ, ಸಕಲ ಜೀವಿಗಳಲ್ಲೂ ಸ್ನೇಹಭಾವ, ಜೀವಕರುಣೆ ಹೊಂದಿರಬೇಕೆಂಬ ಸಾಧುವಿನ ಗುಣವನ್ನು ನಾನು ಬಿಡಬೇಕೆ?’ ಕೊನೆಗೂ ಆ ಚೇಳು ನೀರಿನಿಂದ ಪಾರಾಯಿತು.

ಸಾಧುವಿನ ಸ್ವಭಾವವೇ ಗೆದ್ದಿತು. ಬೋಧಿಸತ್ವನ ಅನೇಕ ಕಥೆಗಳಲ್ಲೂ ಇಂತಹ ಅನೇಕ ಪ್ರಸಂಗಗಳನ್ನು ಕಾಣುತ್ತೇವೆ. ಉಪಕಾರಸ್ಮರಣೆ ಇಲ್ಲದೆ ಒಳಿತು ಮಾಡುವವರಿಗೇ ಕೆಡುಕು ಮಾಡುವವರು ಇರುತ್ತಾರೆ. ಅದರಿಂದ ನಾವು ವಿಚಲಿತರಾಗಬಾರದು.

ಕೃತಜ್ಞತೆ ಎಂಬುದು ಮಹಾಗುಣ. ಅದೊಂದಿದ್ದರೆ ಮನುಷ್ಯ ದೊಡ್ಡವನಾಗಿ ಬೆಳೆಯುವುದರಲ್ಲಿ ಯಾವ ಸಂದೇಹವೂ ಇಲ್ಲ. ದೊಡ್ಡವನಾದ ಮೇಲೂ ತನಗೆ ಉಪಕಾರವೆಸಗಿದವರನ್ನು ಮರೆಯದಿರುವುದು ಮಹಾವ್ಯಕ್ತಿಗಳ ಲಕ್ಷಣ. ಸರ್ ಎಂ. ವಿಶ್ವೇಶ್ವರಯ್ಯನವರು ಚಿಕ್ಕಬಳ್ಳಾಪುರದ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿ ಕಡಲೆಕಾಯಿ ಮಾರಲು ಹೆಂಗಸರೊಬ್ಬರು ಬರುತ್ತಿದ್ದರಂತೆ.

ಸರ್ ಎಂ. ವಿ. ಮುಂದೆ ದಿವಾನರಾಗಿ ಅದೇ ಶಾಲೆಯಲ್ಲಿ ಭಾಷಣ ಮಾಡಿ ಹೊರಬಂದಾಗ ‘ದಿವಾನ’ರನ್ನು ನೋಡಲು ನೆರೆದ ಜನಸಂದಣಿಯಲ್ಲಿ ಅವಳೂ ನಿಂತಿದ್ದಳಂತೆ. ಈಗ ಆಕೆ ಹಣ್ಣುಹಣ್ಣು ಮುದುಕಿ. ಸರ್ ಎಂ. ವಿ. ಆ ಅಜ್ಜಿಯನ್ನು ಗುರುತಿಸಿ ಗುಂಪಿನ ಬಳಿ ನಡೆದು ಅವಳ ಸಮೀಪ ಹೋಗಿ ನಿಂತರಂತೆ. ಅಕ್ಕ-ಪಕ್ಕದಲ್ಲಿದ್ದವರು ಆ ವೃದ್ಧೆಗೆ, ‘ಇವರು ದಿವಾನ್ ವಿಶ್ವೇಶ್ವರಯ್ಯ’ ಎಂದು ತಿಳಿಸಿದಾಗ, ಆ ಅಜ್ಜಿ ಸಂತೋಷದಿಂದ, ‘ನೀನು ನಮ್ಮ ವಿಶುನೇ?! ನೀನು ದಿವಾನ್ ಆಗಿದ್ದೀಯ? ಒಳ್ಳೆಯದಾಗಲಿ’ ಎನ್ನುತ್ತ ಹರಸಿ ಅವರನ್ನು ಮುಟ್ಟಲು ಕೈಚಾಚಿದಾಗ ವಿಶ್ವೇಶ್ವರಯ್ಯನವರು ಬಾಗಿ ಮುದುಕಿಗೆ ತಮ್ಮ ಶಿರಸ್ಪರ್ಶದ ಅನುವು ಮಾಡಿಕೊಟ್ಟು ಹಾಗೇ ನೂರು ರೂಪಾಯಿ ನೋಟನ್ನು ಅವಳ ಕೈಗಿತ್ತು, ಅಜ್ಜಿಯ ಆನಂದವನ್ನು ತಮ್ಮ ಹೃನ್ಮನದಲ್ಲಿ ತುಂಬಿಕೊಂಡು ಹಿಂದಿರುಗಿದರಂತೆ. ಇದು ಸಜ್ಜನಿಕೆ, ಸನ್ನಡತೆ, ಕೃತಜ್ಞತೆ.

ಜೀವನದಲ್ಲಿ ಯಶಸ್ಸು ಗಳಿಸಿದವರನ್ನೆಲ್ಲ ಅಧ್ಯಯನ ಮಾಡಿದಾಗ ಗೋಚರಿಸುವುದು, ಜೀವನವಿಡೀ ಅವರು ಉಳಿಸಿಕೊಂಡು ಬಂದ ವಿಶ್ವಾಸದ ಬುತ್ತಿ, ಕೃತಜ್ಞತೆಯ ನೆನಪಿನ ಬುತ್ತಿ.  ಸಮಯಸಾಧಕರು ಬಹಳ ಎತ್ತರಕ್ಕೆ ಬೆಳೆಯಲಾರರು. ಎತ್ತರಕ್ಕೆ ಏರಿದವರು ಪ್ರತಿಯೊಂದು ಮೆಟ್ಟಿಲನ್ನೂ ನೆನಪಿಟ್ಟುಕೊಳ್ಳುವರು, ಪ್ರತಿ ಮಜಲನ್ನೂ ಸ್ಮರಿಸುವರು, ಪ್ರತಿಯೊಂದು ಉಪಕಾರಕ್ಕೂ ಪ್ರತ್ಯುಪಕಾರ ಎಸಗುವರು. ಸ್ವಾಮಿ ವಿವೇಕಾನಂದರು ಭಾರತವನ್ನು ಪರಿವ್ರಾಜಕರಾಗಿ ಸಂಚರಿಸುತ್ತಿದ್ದ ದಿನಗಳು.

ಖೇತ್ರಿಸಂಸ್ಥಾನದ ಗ್ರಾಮಾಂತರ ಪ್ರದೇಶದಲ್ಲಿ ಅವರು ಮೂರು ಹಗಲು ಮೂರು ರಾತ್ರಿ ಸತತವಾಗಿ ಜನರೊಂದಿಗೆ ಆಧ್ಯಾತ್ಮಿಕ ವಿಚಾರಗಳನ್ನು ಚರ್ಚಿಸುತ್ತಾ ಕಳೆದಿದ್ದಾರೆ. ಜ್ಞಾನಪಿಪಾಸುಗಳಾಗಿ ಬಂದವರಿಗೆ ಸ್ವಾಮಿಗಳ ಕ್ಷುದ್ಬಾಧೆಗಳತ್ತ ಗಮನವಿರಲಿಲ್ಲ. ತಮ್ಮ ಆಧ್ಯಾತ್ಮಿಕ ಹಸಿವನ್ನು ನೀಗಿಸಿಕೊಳ್ಳುವತ್ತಲೇ ಅವರ ಗಮನವೆಲ್ಲ. ಆದರೆ ಮೂರನೆಯ ರಾತ್ರಿ ಜನರೆಲ್ಲ ಚದುರಿದ ಬಳಿಕ ಒಬ್ಬ ಬಡ ಅಂತ್ಯಜ ಅವರನ್ನು ಸಮೀಪಿಸುತ್ತಾನೆ: ‘ಸ್ವಾಮೀಜಿ, ಮೂರು ದಿನಗಳಿಂದ ಗಮನಿಸುತ್ತಿದ್ದೇನೆ.

ನೀವೇನೂ ಆಹಾರವನ್ನೇ ಸೇವಿಸಿಲ್ಲ. ನೀವು ಅನುಮತಿ ನೀಡಿದರೆ ಆಹಾರ ಸಾಮಗ್ರಿಗಳನ್ನು ತಂದುಕೊಡುತ್ತೇನೆ. ನೀವು ಆಹಾರ ತಯಾರಿಸಿಕೊಂಡು ತಿನ್ನಿ’. ಹೀಗೆ ಹೇಳಲು ಕಾರಣವೇನೆಂದರೆ ಅವನು ಚಮ್ಮಾರ. ಅವನು ತಂದ ಆಹಾರವನ್ನು ಇವರು ತಿನ್ನಬಾರದೆಂಬ ಸಮಾಜರೂಢಿ. ಇದನ್ನು ಮೀರಿದರೆ ಮಹಾರಾಜರ ಶಿಕ್ಷೆಯ ಭಯ. ಸ್ವಾಮೀಜಿ ಇದಕ್ಕೆ ಒಪ್ಪಲಿಲ್ಲ. ‘ನಿನಗೆ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ.....ನೋಡು, ನಾನು ಹಸಿದಿದ್ದೇನೆ. ಏನಾದರೂ ತರುತ್ತೀಯೋ ಇಲ್ಲವೋ ಹೇಳು’ ಎಂದು ಪ್ರೀತಿಯಿಂದ ಒತ್ತಾಯಿಸಿದರು.

ಬಡಚಮ್ಮಾರ ಹೆದರುತ್ತಲೇ ಒಂದಿಷ್ಟು ಚಪಾತಿ, ಪಲ್ಯ ಮಾಡಿ ತಂದುಕೊಟ್ಟ. ಸ್ವಾಮೀಜಿ ಅದನ್ನು ಅಷ್ಟೇ ಆದರದಿಂದ ಸ್ವೀಕರಿಸಿದರು. ಅದು ಅವರಿಗೆ ದೇವಲೋಕದ ಅಮೃತಕ್ಕಿಂಥ ಸವಿಯಾಗಿ ತೋರಿತು. ಕೆಲವು ದಿನಗಳಾದ ಬಳಿಕ ರಾಜಾ ಅಜಿತಸಿಂಗನ ಅತಿಥಿಯಾದ ಸ್ವಾಮೀಜಿ ಈ ಪ್ರಸಂಗವನ್ನು ಅವನಿಗೆ ತಿಳಿಸಿದರು. ಅವನು ಆ ಚಮ್ಮಾರನಿಗೆ ಹೇಳಿ ಕಳುಹಿಸಿದ. ಚಮ್ಮಾರ, ತಾನು ಸಾಧುವಿಗೆ ಆಹಾರ ನೀಡಿದ್ದು, ಸಾಮಾಜಿಕ ಕಟ್ಟಳೆ ಮೀರಿದ್ದು ಮಹಾರಾಜನ ಕಿವಿಗೆ ಬಿದ್ದಿದೆ, ತನಗಿನ್ನೇನು ಘೋರಶಿಕ್ಷೆ ಕಾದಿದೆಯೊ  – ಎಂದು ಅಂಜುತ್ತಲೇ ರಾಜನ ಬಳಿಗೆ ಬಂದ. ಆದರೆ ಅವನಿಗೆ ಶಿಕ್ಷೆಯಾಗಲಿಲ್ಲ; ಸಿರಿರಕ್ಷೆ ದೊರೆಯಿತು. ಮುಂದೆ ಅವನ ಜೀವನಕ್ಕೆ ಎಂದೂ ತೊಂದರೆಯಾಗದಂತಹ ಇನಾಮು ದೊರೆಯಿತು.  (‘ವಿಶ್ವವಿಜೇತ ವಿವೇಕಾನಂದ’, ಸ್ವಾಮಿ ಪುರುಷೋತ್ತಮಾನಂದ, ಪು. 137–138)

ಇಂತಹುದೇ ಇನ್ನೊಂದು ಪ್ರಸಂಗವೂ ಇದೆ. ಪರಿವ್ರಜನದ ದಿನಗಳಲ್ಲಿ ಬಡಮುದುಕಿಯ ಗುಡಿಸಲ್ಲಿ ರೊಟ್ಟಿ ತಿಂದಿದ್ದ ಸ್ವಾಮೀಜಿ ಮುಂದೆ ವಿಶ್ವವಿಖ್ಯಾತರಾದ ಬಳಿಕ ಆಳ್ವರಿಗೆ ಬಂದಾಗ ಆ ಅಜ್ಜಿಗೆ ಇವರನ್ನು ಮತ್ತೆ ಸತ್ಕರಿಸುವ ಆಸೆ. ಆದರೆ ವಿಖ್ಯಾತರಾದ ಅವರೀಗ ಬರುತ್ತಾರೋ ಇಲ್ಲವೋ ಎಂಬ ಆತಂಕ. ಆದರೆ ಸ್ವಾಮೀಜಿ ತಾವಾಗಿಯೇ ಕೆಲವು ಆಯ್ದ ಶಿಷ್ಯರೊಂದಿಗೆ ಅವಳ ಗುಡಿಸಿಲಿಗೇ ಬಂದು ಅವಳಿತ್ತುದುದನ್ನು ಆನಂದದಿಂದ ಸೇವಿಸಿದರು. ಕೊನೆಗೆ ಹೊರಡುವಾಗ ಅವಳಿಗೆ ಗೊತ್ತಾಗದಂತೆ ಆ ಮನೆಯ ಯಜಮಾನನ ಕೈಗೆ ನೂರರ ನೋಟು ಇತ್ತು ಬರುತ್ತಾರೆ. (‘ವಿಶ್ವಮಾನವ ವಿವೇಕಾನಂದ’, ಸ್ವಾಮಿ ಪುರುಷೋತ್ತಮಾನಂದ, ಪು. 180).

ಹೀಗೆಂದ ಮಾತ್ರಕ್ಕೆ ಜೀವನದಲ್ಲಿ ಕಹಿಪ್ರಸಂಗಗಳು, ಉಪಕಾರಸ್ಮರಣೆ ಮಾಡದವರು ದೊರೆಯುವುದೇ ಇಲ್ಲವೆಂದಲ್ಲ. ಈ ಕೃತಜ್ಞತೆಯೆಂಬ ಗುಣ ಉಳ್ಳವರು ಮಾತ್ರ ಬೇಗ ಅಭಿವೃದ್ಧಿಗೆ ಬರುತ್ತಾರೆ. ಇದೆಂತೆಂದರೆ ಮನುಷ್ಯತ್ವದಲ್ಲಿ ಬಂಡವಾಳ ಹೂಡಿದಂತೆ. ನಾವು ಪ್ರೀತಿಯಿಂದ ಸ್ಮರಿಸಿದುದು ಬಡ್ಡಿ ಸಮೇತ ನಮಗೇ ಹಿಂದಿರುಗುತ್ತದೆ. ನಮಗೆ ಒಳಿತು ಮಾಡಿದವರನ್ನು ಮರೆತಂತೆ ನಟಿಸಬಹುದು; ಆದರೆ ನಿಜವಾಗಿಯೂ ಮರೆಯಲಾದೀತೆ? ಅದರ ಬದಲು ಇಂತಹವರು ನೆರವು ನೀಡಿದ್ದರೆಂಬುದನ್ನು ಸ್ಮರಿಸಿಕೊಂಡರೆ ಮತ್ತು ಸಮಯ ಬಂದಾಗ ಅದನ್ನು ಹಂಚಿಕೊಂಡರೆ ಪ್ರೀತಿಯ ಭಾವ ಮತ್ತಷ್ಟು ಗಟ್ಟಿಯಾಗುತ್ತದೆ. ಅದರಿಂದ ನೆಮ್ಮದಿ ಆನಂದ ಹೆಚ್ಚಾಗುತ್ತದೆಯೇ ಹೊರತು ಕುಂದೇನು ಉಂಟಾಗುವುದಿಲ್ಲ.

ನಮ್ಮ ದಿನನಿತ್ಯದ ಕೊನೆಯಲ್ಲಿ ಒಂದು ಪರಿಪಾಟಿಯನ್ನು ಇಟ್ಟುಕೊಳ್ಳಬೇಕು. ಅದೆಂದರೆ ಆ ದಿನ ನಾವು ಯಾರಿಗೆ ಕೃತಜ್ಞತೆ ಸಲ್ಲಿಸಬೇಕು ಎಂಬ ಗುರುತು ಹಾಕಿಕೊಳ್ಳಬೇಕು. ಬೆಳಗ್ಗೆ ಪೇಪರ್/ಹಾಲು ಹಾಕಿ ಹೋದವನು ಯಾರು? ಹಣ ಕೊಟ್ಟೆ, ಅವನು ಹಾಕಿದ ಎಂಬ ತರ್ಕ ಸಲ್ಲದು. ಚಳಿ, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೆ ನಾವು ಕೊಡುವ ಅಲ್ಪಮೊತ್ತದ ಹಣಕ್ಕೆ ಪ್ರತಿಯಾಗಿ ಅವನು ನಮಗೆ ಸಲ್ಲಿಸುತ್ತಿರುವ ನಿತ್ಯಸೇವೆ ಕಡಿಮೆಯದೇ? ಯಾವುದೇ ಚಿಂತೆಯಿಲ್ಲದೆ ಎದ್ದು ಬ್ರಷ್ ಮಾಡಿ ಹದವಾದ ಕಾಫಿ ಬಟ್ಟಲು ಹಿಡಿದು ದಿನಪತ್ರಿಕೆಯ ಮೇಲೆ ಕಣ್ಣಾಡಿಸುವ ನಾವು ಆ ಸೇವಾಕರ್ತರಿಗೆ ಕೃತಜ್ಞತೆ ಹೇಳಬಾರದೆ? ಇದೊಂದು ಉದಾಹರಣೆ ಅಷ್ಟೆ.

ಕಿಕ್ಕಿರಿದ ಬಸ್‌ಗಳಲ್ಲಿ ಸಂದಣಿಯನ್ನು ಸಂಭಾಳಿಸುತ್ತಾ ಟಿಕೇಟುಗಳನ್ನು ವಿತರಿಸಿ ಸಾರಿಗೆ ಸೇವೆ ನೀಡುವ ಕಂಡಕ್ಟರ್, ದಿನವಿಡೀ ನಿಂತಿರುವ ಹೋಟೆಲಿನ ಮಾಣಿ, ಅಡುಗೆಯವ ಇವರಿಗೆಲ್ಲ ಯಾರೂ ಕೃತಜ್ಞತೆ ಹೇಳುವುದೇ ಬೇಡವೆ? ನೆನಪಿಟ್ಟುಕೊಳ್ಳಬೇಕು, ನಾವು ಹೆಚ್ಚು ಹೆಚ್ಚು ಜನರನ್ನು ಕೃತಜ್ಞತೆಯಿಂದ ಕಾಣುವಂತಾದಾಗ ಜಗತ್ತು ಹೆಚ್ಚು ಹೆಚ್ಚು ಸುಂದರವಾಗಿಯೂ ಆತ್ಮೀಯವಾಗಿಯೂ ಕಾಣಲಾರಂಭಿಸುತ್ತದೆ. ಬಾಳಬುತ್ತಿಯಲ್ಲಿ ನೆನಪು ಸಿಹಿ. ಮೊಸರನ್ನ ಮೆಲ್ಲುವಾಗ ಹರಳು ಸಿಗುವಂತೆ ಒಮ್ಮೊಮ್ಮೆ ಕಹಿ ಅನುಭವವಾಗುವುದು. ಅದನ್ನು ಮರೆತು ಉಪಕಾರಕ್ಕೆ ಪ್ರತ್ಯುಪಕಾರ ಮಾಡುತ್ತ, ಪ್ರೀತಿ, ವಿಶ್ವಾಸ, ದಯೆಗಳಿಂದ ಮಾನವೀಯ ಮೌಲ್ಯಗಳನ್ನೇ ಬಿತ್ತಿ-ಬೆಳೆಯುವ ಸಂಕಲ್ಪ ಮಾಡೋಣ.
(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT