ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧದ ಶಾಖೆಗಳಾಗಬೇಕೇ?

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

‘ನಮ್ಮ ವಿಶ್ವವಿದ್ಯಾಲಯಗಳಿಗೆ ಏಕೆ ಗರ ಬಡಿದಿದೆ? ಎಂಬ ಶೀರ್ಷಿಕೆಯಡಿ ಪದ್ಮರಾಜ ದಂಡಾವತಿ ಅವರು  ವಿಚಾರಪ್ರಚೋದಕ ಲೇಖನವನ್ನು ಬರೆದಿದ್ದಾರೆ  (ಪ್ರ.ವಾ., ಜೂನ್‌ 25). ಅದಕ್ಕೆ ಪೂರಕವಾಗಿ ಈ ಕಿರುಲೇಖನ.

ಅನೇಕ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿರುವ ಕರ್ನಾಟಕ ಸರ್ಕಾರ, ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಮೊದಲಿನಿಂದಲೂ ಎಡವುತ್ತಾ ಬಂದಿರುವುದು ದುಃಖದ ಸಂಗತಿ. ಪ್ರಾರಂಭದಲ್ಲಿ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ.) ಆಧರಿಸಿ, ಖಾಸಗಿ ಶಾಲೆಗಳಿಗೆ ತಾನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕಡ್ಡಾಯ ಮಾಡಿ, ಅದಕ್ಕಾಗಿ ಆ ಶಾಲೆಗಳಿಗೆ ಪ್ರತಿವರ್ಷ ₹316ಕೋಟಿ  ನೀಡುತ್ತಾ,  ನೂರಾರು ಸರ್ಕಾರಿ ಶಾಲೆಗಳು ಮುಚ್ಚುವಂತೆ ಮಾಡಿತು.

ಈಗ, ರಾಜ್ಯದ  ವಿಶ್ವವಿದ್ಯಾಲಯಗಳಿಗಿರುವ ಅಲ್ಪಸ್ವಲ್ಪ ಸ್ವಾಯತ್ತತೆಯನ್ನೂ ಕಿತ್ತುಕೊಂಡು, ಅವೆಲ್ಲವೂ ಸರ್ಕಾರದ ಸಂಪೂರ್ಣ ನಿಯಂತ್ರಣಕ್ಕೆ ಒಳಪಡುವಂತೆ ಮಾಡಲು ಈಗಿರುವ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ.  ಈ ತಿದ್ದುಪಡಿಗಳ ಉದ್ದೇಶವೇನು?  

‘ಎಲ್ಲಾ ವಿಶ್ವವಿದ್ಯಾಲಯಗಳಲ್ಲಿಯೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ’. ಅಂತಹ ಭ್ರಷ್ಟಾಚಾರವನ್ನು ತೊಡೆದು ಹಾಕುವುದು ಮತ್ತು ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದು ಈ ತಿದ್ದುಪಡಿಗಳ ಉದ್ದೇಶ ಎಂದು ಹೇಳಲಾಗಿದೆ. ‘ಎಲ್ಲಾ ವಿಶ್ವವಿದ್ಯಾಲಯಗಳಲ್ಲಿಯೂ ಭ್ರಷ್ಟಾಚಾರ ತುಂಬಿದೆಯೇ’ ಎಂಬುದು ಚರ್ಚಾಸ್ಪದ ಸಂಗತಿ.  ಈ  ವಾದವನ್ನು  ‘ಸತ್ಯ’ ಎಂದು ಒಪ್ಪಿಕೊಂಡರೂ ಉದ್ದೇಶಿತ ತಿದ್ದುಪಡಿಗಳು ಆ ಭ್ರಷ್ಟಾಚಾರವನ್ನು ತೊಡೆದುಹಾಕುತ್ತವೆಯೇ ಎಂಬುದು ಪ್ರಶ್ನಾರ್ಹ.  ತಿದ್ದುಪಡಿಗಳ ಕುರಿತು ಮಾತನಾಡುವ ಮುನ್ನ  ಒಂದು ಮುಖ್ಯ ಪ್ರಶ್ನೆ: ‘ಭ್ರಷ್ಟ’ ಕುಲಪತಿಗಳನ್ನು ಅಮಾನತು ಮಾಡಲು ಆಧರಿಸಿರುವ ಈಗಿನ ಶಾಸನದ ಅಡಿಯಲ್ಲೇ ಅವರ ವಿಚಾರಣೆ ಮಾಡಲು ಹಾಗೂ ಆಪಾದನೆ ಸತ್ಯವೆಂದು ಕಂಡುಬಂದರೆ ಶಿಕ್ಷಿಸಲು ಸಾಧ್ಯವಿಲ್ಲವೇ?  ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಯೊಬ್ಬರು ತಾನೇ ನೇಮಿಸಿದ ಕುಲಪತಿಗಳ ಬಗ್ಗೆ ಇಂತಹ ಆಪಾದನೆ ಮಾಡುವುದು ನ್ಯಾಯವೇ?
ಈಗ ತರಲು ಉದ್ದೇಶಿಸಿರುವ ತಿದ್ದುಪಡಿಗಳನ್ನು ನೋಡುತ್ತಾ ಹೋದಂತೆ ಇಂದು ಶಿಕ್ಷಣ ಕ್ಷೇತ್ರದಲ್ಲಿರುವ ಎಲ್ಲಾ ಬಗೆಯ ಕುಂದು ಕೊರತೆಗಳಿಗೂ ಇರುವ ಒಂದು ದಿವ್ಯ ಔಷಧಿ ಎಂದರೆ ‘ಸರ್ಕಾರಿ ನಿಯಂತ್ರಣ’ ಎಂದು ಉನ್ನತ ಶಿಕ್ಷಣ ಸಚಿವರು ನಂಬಿರುವುದು ಮನದಟ್ಟಾಗುತ್ತದೆ.  (ಸರ್ಕಾರಿ ಅಧಿಕಾರಿಗಳು ಅಷ್ಟು ದಕ್ಷರೂ ಪ್ರಾಮಾಣಿಕರೂ ಆಗಿದ್ದರೆ ಪ್ರತಿ ದಿನವೂ ಒಬ್ಬರಲ್ಲಾ ಒಬ್ಬರು ಸರ್ಕಾರಿ ಉನ್ನತಾಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಂದ  ದಾಳಿ ಏಕೆ ಆಗುತ್ತಿದೆ?)  ತಿದ್ದುಪಡಿಗಳ ಉದ್ದೇಶ ಸಂಪೂರ್ಣ ಸರ್ಕಾರಿ ನಿಯಂತ್ರಣ ಎಂಬುದನ್ನು ಈ ಕೆಳಗಿನ ಅಂಶಗಳು ದಾಖಲಿಸುತ್ತವೆ.   

ಅ) ಕುಲಪತಿಯ ‘ಆಯ್ಕೆ ಸಮಿತಿ’ಯಲ್ಲಿ ಇಲ್ಲಿಯತನಕ ಮೂವರು ಸದಸ್ಯರಿರುತ್ತಿದ್ದರೆ, ತಿದ್ದುಪಡಿಯ ಪ್ರಕಾರ ಆ ಸಮಿತಿಯಲ್ಲಿ ಐವರು ಸದಸ್ಯರು ಇರುತ್ತಾರೆ ಮತ್ತು ಅವರಲ್ಲಿ ಇಬ್ಬರು ಸರ್ಕಾರದಿಂದ ನಾಮನಿರ್ದೇಶಿತರಾಗುವರು.   ಈ ತಿದ್ದುಪಡಿಯ ಉದ್ದೇಶ ಸ್ಪಷ್ಟ: ಈ ಇಬ್ಬರು, ಉಳಿದ ಮೂವರಲ್ಲಿ  ಒಬ್ಬರನ್ನು ತಮ್ಮವರನ್ನಾಗಿ ಮಾಡಿಕೊಂಡರೆ ಬಹುಮತ ಅವರದಾಗಿ, ತಮಗೆ (ಸರ್ಕಾರಕ್ಕೆ) ಬೇಕಾದ ಮೂರು ಹೆಸರುಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಬಹುದು. ಅವರಲ್ಲಿ ರಾಜ್ಯಪಾಲರು ಕೂಡಾ ‘ರಾಜ್ಯ ಸರ್ಕಾರದ ಸಹಮತಿಯೊಡನೆ’ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಕುಲಪತಿಯ ಅವಧಿಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದರೆ, ಅದರ ವಿಚಾರಣೆಯೂ ರಾಜ್ಯ ಸರ್ಕಾರದ ಸಹಮತಿಯೊಡನೆ ಕುಲಾಧಿಪತಿಯಿಂದ ನಡೆಯುತ್ತದೆ.

ಆ) ಮತ್ತೊಂದು ಬಾಲಿಶ ತಿದ್ದುಪಡಿಯೆಂದರೆ, ‘ಕುಲಪತಿಗಳೂ ಪಾಠ ಮಾಡಬೇಕು’.  ಕುಲಪತಿಯ ಕೆಲಸ ಪಾಠ ಮಾಡುವುದಲ್ಲ, ಪಾಠ ಮಾಡುವುದಕ್ಕೆ ಅವಶ್ಯಕವಾದ ಅರ್ಹ ಶಿಕ್ಷಕರು, ಯೋಗ್ಯ ಕೊಠಡಿಗಳು,  ಗ್ರಂಥಾಲಯ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.

ಇ) ಇಲ್ಲಿಯವರೆಗೆ ವಿಶ್ವವಿದ್ಯಾಲಯಗಳ ಶಿಕ್ಷಕರನ್ನು ಆಯ್ಕೆ ಮಾಡಲು ಆಯಾ ವಿ.ವಿ. ಆಡಳಿತ ಮಂಡಳಿ (ಸಿಂಡಿಕೇಟ್) ಒಂದು ಸಮಿತಿಯನ್ನು ಅಗತ್ಯವಾದಾಗಲೆಲ್ಲಾ ನೇಮಿಸಿ, ಶಿಕ್ಷಕರನ್ನು ಆಯ್ಕೆ ಮಾಡುತ್ತಿತ್ತು.  ಕರಡು ತಿದ್ದುಪಡಿ ಈ ಸ್ವಾತಂತ್ರ್ಯವನ್ನೂ ಸರ್ಕಾರಕ್ಕೇ ಕೊಡುತ್ತದೆ: ಸರ್ಕಾರವು ಒಂದು ‘ಸಾಮಾನ್ಯ ನೇಮಕಾತಿ ಮಂಡಳಿ’ಯನ್ನು ಸ್ಥಾಪಿಸುತ್ತದೆ. ಅದರಲ್ಲಿ ಮೂವರು ವಿಶ್ರಾಂತ ಕುಲಪತಿಗಳು, ಸರ್ಕಾರದ ಕಾರ್ಯದರ್ಶಿ ಮತ್ತಿತರರು ಇರುತ್ತಾರೆ.   ವಿಷಯತಜ್ಞರು ಇಬ್ಬರು ಮಾತ್ರ ಇದ್ದು, ಮಂಡಳಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರುತ್ತದೆ.  ಎಂದರೆ, ಯಾವ ವಿಶ್ವವಿದ್ಯಾಲಯವೂ ತನಗೆ ಅವಶ್ಯವಿದ್ದಾಗ ಯಾವ ಶಿಕ್ಷಕರನ್ನೂ ನೇಮಿಸಿಕೊಳ್ಳುವಂತಿಲ್ಲ; ತುಂಬಬೇಕಾದ ಎಲ್ಲಾ ಖಾಲಿ ಹುದ್ದೆಗಳನ್ನೂ ವಿ.ವಿ.ಗಳು ಈ ನೇಮಕಾತಿ ಮಂಡಳಿಗೆ ತಿಳಿಸುತ್ತವೆ; ಅದು ತನಗೆ ಸಾಧ್ಯವಾದಾಗ, ಸರಿತೋರಿದಷ್ಟು ಬೋಧಕರನ್ನು ಆಯ್ಕೆ ಮಾಡಿ ವಿ.ವಿ.ಗಳಿಗೆ ಹಂಚುತ್ತದೆ- ಈಗಿನ ಲೋಕಸೇವಾ ಆಯೋಗದಂತೆ.  ಅರೆಕಾಲಿಕ ಹಾಗೂ ಅತಿಥಿ ಉಪನ್ಯಾಸಕರನ್ನೂ ಈ ಮಂಡಳಿಯೇ ಆಯ್ಕೆ ಮಾಡುತ್ತದೆ.

ಈ)  ಈ ತಿದ್ದುಪಡಿಗಳು ಹೀಗೆಯೇ ಮುಂದುವರೆಯುತ್ತಾ, ವಿಶ್ವವಿದ್ಯಾಲಯಗಳ ಮೇಲಿರುವ ಸರ್ಕಾರದ ನಿಯಂತ್ರಣವನ್ನು ಮತ್ತಷ್ಟು ಬಿಗಿಯಾಗಿಸುತ್ತವೆ.  ವಿ.ವಿ.ಗಳು ಆಗಾಗ್ಗೆ ಅವಶ್ಯಕ ಕಟ್ಟಡಗಳು, ಸಭಾಂಗಣ, ಪೀಠೋಪಕರಣಗಳು ಇತ್ಯಾದಿಗಳಿಗಾಗಿ ಯೋಜನೆ ಹಾಕಿಕೊಂಡು ಹಾಲಿ ಇರುವ ನಿಯಮಗಳಿಗನುಸಾರವಾಗಿಯೇ ಮುಂದುವರೆಯುತ್ತವೆ.  ಆದರೆ, ಇನ್ನು ಮುಂದೆ ‘ಒಂದು ಕೋಟಿ ರೂಪಾಯಿಗೂ ಮೀರಿದ ಕಾಮಗಾರಿಯ ಅನುಮೋದನೆ-ಮೇಲ್ವಿಚಾರಣೆಗಾಗಿ ‘ಉನ್ನತ ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ’ ಸ್ಥಾಪನೆಯಾಗುತ್ತದೆ’. ಈ ಮಂಡಳಿಯ ಅಧ್ಯಕ್ಷರು (ನಾವು ಊಹಿಸುವಂತೆಯೇ) ಉನ್ನತ ಶಿಕ್ಷಣ ಸಚಿವರು. 

ಈ ಬಗೆಯ ‘ಸರ್ಕಾರೀಕರಣ’ ಇಷ್ಟಕ್ಕೇ ನಿಲ್ಲುವುದಿಲ್ಲ.  ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವಂತೆ, ಕಾಲೇಜು ಶಿಕ್ಷಣ ಇಲಾಖೆಯು  ಕಾಲೇಜುಗಳಲ್ಲಿ ಮುಖ್ಯ ವಿಷಯಗಳಿಗಿಂತ ಅಮುಖ್ಯ ವಿಷಯಗಳ (core and non-core subjects)  ಕಲಿಕೆಗೇ ವಿದ್ಯಾರ್ಥಿಗಳ ಸಮಯ ಹಾಳಾಗುತ್ತಿರುವುದರ ಬಗ್ಗೆ ಏನಾದರೂ ಪರಿಹಾರ ಸೂತ್ರಗಳನ್ನು ಸೂಚಿಸಬೇಕೆಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ್ನು  ಕೇಳಿದೆ.   ಕಾಲೇಜು ಶಿಕ್ಷಣ ಇಲಾಖೆಯ ಅನುಸಾರ ‘ಅಮುಖ್ಯ’ ವಿಷಯಗಳೆಂದರೆ ಭಾಷೆಗಳು, ಭಾರತೀಯ ಸಂವಿಧಾನ,  ಮಹಿಳಾ ಅಧ್ಯಯನ, ಪರಿಸರ ವಿಜ್ಞಾನ ಇತ್ಯಾದಿ.  ಎಂದರೆ, ಸಾಹಿತ್ಯ, ಸಂಗೀತ, ತಾತ್ವಿಕ ಚಿಂತನೆ, ಆಧುನಿಕ ಜಗತ್ತಿನ ಜ್ಞಾನ- ಇವೆಲ್ಲವೂ ನಿಷ್ಪ್ರಯೋಜಕ. ಏಕೆಂದರೆ, ಅವುಗಳನ್ನು ಅಧ್ಯಯನ ಮಾಡಿದರೆ ಯಾವ ಉದ್ಯೋಗವೂ ಸಿಕ್ಕುವುದಿಲ್ಲ ಎಂಬುದು ಉನ್ನತ ಶಿಕ್ಷಣ ಇಲಾಖೆಯ ಹಾಗೂ ಸಚಿವರ  ನಿಲುವು. ಇಲ್ಲಿ employability ಒಂದೇ ನಿಕಷ ಎಂಬುದು ಸ್ಪಷ್ಟ.

ಉದ್ದೇಶಿತ ತಿದ್ದುಪಡಿ ವ್ಯಾಪ್ತಿಗೆ ಒಳಪಡುವ ನಮ್ಮ ಎಲ್ಲ ವಿಶ್ವವಿದ್ಯಾಲಯಗಳೂ ಬಹು ಬೇಗ  ‘ಶ್ರೇಷ್ಠ ವೃತ್ತಿ-ತರಬೇತಿ ಕೇಂದ್ರ’ಗಳಾಗುವುದರಲ್ಲಿ ಸಂದೇಹವೇ ಇಲ್ಲ.  ಈ ಪರಿಸ್ಥಿತಿಯ ಬಗ್ಗೆ ಅಳಬೇಕೋ ನಗಬೇಕೋ ಗೊತ್ತಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT