ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆತಂಕಕ್ಕೆ ದನಿಗೂಡಿಸಿದ ಅಮೆರಿಕ

ದೇಶಗಳ ಗಡಿ ಸಮಗ್ರತೆ, ಸಾರ್ವಭೌಮತ್ವವನ್ನು ಗೌರವಿಸಲು ಕರೆ
Last Updated 27 ಜೂನ್ 2017, 19:57 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಚೀನಾದ ಮಹತ್ವಕಾಂಕ್ಷೆಯ ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ಬಗ್ಗೆ ಭಾರತ ವ್ಯಕ್ತಪಡಿಸಿರುವ ಆತಂಕಕ್ಕೆ ಅಮೆರಿಕವೂ ಧ್ವನಿಗೂಡಿಸಿದೆ.

ಆರ್ಥಿಕ ಚಟುವಟಿಕೆಗಳ ವೃದ್ಧಿಗೆ ದೇಶಗಳ ಮಧ್ಯೆ ಆರ್ಥಿಕ ಕಾರಿಡಾರ್ ಸ್ಥಾಪಿಸುವಾಗ ಗಡಿ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಾದೇಶಿಕ ಆರ್ಥಿಕಾಭಿವೃದ್ಧಿಗೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು ತಪ್ಪಲ್ಲ, ಆದರೆ ಈ ಸಂದರ್ಭದಲ್ಲಿ ಇತರ ರಾಷ್ಟ್ರಗಳ ಗಡಿ ಸಮಗ್ರತೆ ಮತ್ತು ಸಾರ್ವಭೌಮತ್ವನ್ನು ಗೌರವಿಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ನೌಕಾಯಾನ ಸ್ವಾತಂತ್ರ್ಯಕ್ಕೆ ಧಕ್ಕೆ  ಬೇಡ: ನೌಕಾಯಾನ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಬಾರದು ಮತ್ತು ಭೂಪ್ರದೇಶ ಹಾಗೂ ಸಾಗರ ಗಡಿ ವಿವಾದಗಳನ್ನು ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ಶಾಂತಿಯುತವಾಗಿ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಇಬ್ಬರೂ ನಾಯಕರು ಪ್ರತಿಪಾದಿಸಿದ್ದಾರೆ.

ದಕ್ಷಿಣ ಚೀನಾ ಸಮುದ್ರದ ಬಗ್ಗೆ ಚೀನಾ ತಳೆದಿರುವ ಧೋರಣೆಯನ್ನು ಗುರಿಯಾಗಿಸಿಕೊಂಡು ಅವರು  ಈ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಭಾರತ– ಪೆಸಿಫಿಕ್ ವಲಯದಲ್ಲಿ ಶಾಂತಿ ಕಾಪಾಡಲು, ಸಮೃದ್ಧಿ ಮತ್ತು ಸ್ಥಿರತೆ ಸಾಧಿಸಲು ಭಾರತ ಹಾಗೂ ಅಮೆರಿಕ ಜಂಟಿ ಯೋಜನೆಯನ್ನು ಜಾರಿಗೊಳಿಸಿವೆ’ ಎಂದು ಮೋದಿ ಹೇಳಿದ್ದಾರೆ.

ಈ ಜಂಟಿ ಯೋಜನೆಯನ್ನು ಇನ್ನಷ್ಟು ಪರಿಣಾಕಾರಿಯಾಗಿ ಜಾರಿ ಮಾಡಲು ಒಪ್ಪಿಕೊಳ್ಳಲಾಗಿದೆ ಎಂದು ಇಬ್ಬರೂ ನಾಯಕರು  ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೆಸಿಫಿಕ್ ವಲಯದಲ್ಲಿ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಕಾಯ್ದೆಗೆ ಗೌರವ ಸಿಗಬೇಕು ಎಂದು ತಿಳಿಸುವ ಮೂಲಕ ಪರೋಕ್ಷವಾಗಿ ಇಬ್ಬರೂ, ದಕ್ಷಿಣ ಚೀನಾ ಸಮುದ್ರದ ವಿವಾದಕ್ಕೆ ಸಂಬಂಧಿಸಿದಂತೆ ಚೀನಾದ ನಿಲುವನ್ನು ಖಂಡಿಸಿದ್ದಾರೆ.

ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದ ಗಡಿಗಳ ಬಗ್ಗೆ ವಿವಾದ ಹುಟ್ಟು ಹಾಕಿರುವ ಚೀನಾ, ಈ ಪ್ರದೇಶದ ದ್ವೀಪಗಳಲ್ಲಿ ಸೇನಾ ನೆಲೆ ಸ್ಥಾಪಿಸಿ ಆಧಿಪತ್ಯ ಸಾಧಿಸುವ ಯತ್ನ ಮಾಡುತ್ತಿರುವ ಬಗ್ಗೆ ಭಾರತ ಮತ್ತು ಅಮೆರಿಕ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿವೆ.

ಚೀನಾದ ಕ್ರಮವನ್ನು ವಿಯೆಟ್ನಾಂ, ಮಲೇಷ್ಯಾ, ಫಿಲಿಪ್ಪೀನ್ಸ್‌್, ಬ್ರೂನೈ ಮತ್ತು ತೈವಾನ್ ಕೂಡ ವಿರೋಧಿಸುತ್ತಿವೆ.

ಈ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಮೋದಿ ಮತ್ತು ಟ್ರಂಪ್ ಸಲಹೆ ನೀಡಿದ್ದಾರೆ.

ಈ ವಲಯದ ಜಲ ಸಾರಿಗೆ ಮಾರ್ಗದ ಅಭಿವೃದ್ಧಿಗೆ ಸಹಕರಿಸುವ ಮೂಲಕ ಆರ್ಥಿಕ ಚಟುವಟಿಕೆ ವಿಸ್ತರಣೆಗೆ ಬೆಂಬಲ ನೀಡಬೇಕು ಎಂದೂ ಅವರು ಕರೆ ನೀಡಿದ್ದಾರೆ.

ಖಂಡನೆ: ಉತ್ತರ ಕೊರಿಯಾದ ಅಣ್ವಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಖಂಡಿಸಿರುವ ಉಭಯ ಮುಖಂಡರು, ಇದರಿಂದ ಜಾಗತಿಕ ಶಾಂತಿಗೆ ಧಕ್ಕೆ ಆಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರ ಕೊರಿಯಾಕ್ಕೆ ವಿಧಿಸಲಾಗಿರುವ ದಿಗ್ಬಂಧನಕ್ಕೆ ಬೆಂಬಲ ನೀಡಿದ ಭಾರತವನ್ನು ಟ್ರಂಪ್ ಶ್ಲಾಘಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಕಂಡು ಬರುತ್ತಿರುವ ಅಸ್ಥಿರತೆಯ ಬಗ್ಗೆಯೂ ಇಬ್ಬರೂ ಕಳವಳ ವ್ಯಕ್ತಪಡಿಸಿದ್ದಾರೆ.

ಶ್ವೇತಭವನದೊಳಗೆ ಒಂದು ಸುತ್ತು...

ಶ್ವೇತಭವನದ ಬ್ಲೂರೂಂನಲ್ಲಿ ಆಯೋಜಿಸಿದ್ದ ಔತಣಕೂಟ ಮುಗಿದ ಬಳಿಕ ಟ್ರಂಪ್, ಮೋದಿ ಅವರನ್ನು ಶ್ವೇತಭವನದಲ್ಲಿ ಸುತ್ತಾಡಿಸಿದರು.

ಶ್ವೇತಭವನದಲ್ಲಿನ ತಮ್ಮ ಅಧಿಕೃತ ನಿವಾಸಕ್ಕೂ ಮೋದಿ ಅವರನ್ನು ಟ್ರಂಪ್ ಕರೆದೊಯ್ದರು. ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಅವರ ಅಧಿಕೃತ ನಿವಾಸಕ್ಕೆ ವಿದೇಶಿ ನಾಯಕರೊಬ್ಬರು ಭೇಟಿ ನೀಡಿದ್ದು ಇದೇ ಮೊದಲು.

ಜತೆಗೆ, ಶ್ವೇತಭವನದಲ್ಲಿರುವ ಅಬ್ರಹಾಂ ಲಿಂಕನ್ ಅವರ ಕೊಠಡಿಗೆ ಪ್ರಧಾನಿಯವರನ್ನು ಅವರು ಕರೆದೊಯ್ದರು. ಲಿಂಕನ್ ಅವರ ಖ್ಯಾತ ‘ಗೆಟ್ಟಿಸ್‌ಬರ್ಗ್ ಭಾಷಣ’ದ ಪ್ರತಿಯನ್ನು ಮೋದಿ ಅವರಿಗೆ ತೋರಿಸಿದರು. ಅಲ್ಲದೆ, ಐತಿಹಾಸಿಕ ಭಾಷಣವನ್ನು ಬರೆಯಲು ಲಿಂಕನ್ ಅವರು ಬಳಸಿದ್ದ ಮೇಜನ್ನೂ ತೋರಿಸಿ, ಇತಿಹಾಸವನ್ನು ವಿವರಿಸಿದರು.

ಬ್ಲೂರೂಂನಲ್ಲಿ ಟ್ರಂಪ್ ಅವರು ಆಯೋಜಿಸಿದ್ದ ಔತಣಕೂಟಕ್ಕಿಂತಲೂ ಮೊದಲು, ಮೆಲಾನಿಯಾ ಟ್ರಂಪ್‌ ಅವರು ಪಾನೀಯ ಕೂಟ ಆಯೋಜಿಸಿದ್ದರು. ಔತಣಕೂಟ ಮತ್ತು ಅಲ್ಲಿದ್ದ ತಿನಿಸುಗಳನ್ನು ಮೆಲಾನಿಯಾ ಅವರೇ ನಿರ್ಧರಿಸಿದ್ದರು.

ಟ್ರಂಪ್ ದಂಪತಿಯ ಆತಿಥ್ಯ ಸ್ವೀಕರಿಸಿದ ಮೋದಿ, ‘ನಾನು ಇಲ್ಲಿ ಇದ್ದದ್ದು, ತೀರಾ ಕಡಿಮೆ ಸಮಯ. ಆದರೆ, ನಮ್ಮ ಮನೆಯಲ್ಲೇ ಇದ್ದಂತೆ ಭಾಸವಾಯಿತು. ಈ ಗೌರವ ಸಂದಿದ್ದು, ನನಗೆ ಮಾತ್ರವಲ್ಲ. ಬದಲಿಗೆ 125 ಕೋಟಿ ಭಾರತೀಯರಿಗೆ’ ಎಂದು ಹೇಳಿದರು.

ಆರ್ಥಿಕ ಸಂಬಂಧ ಬಲವರ್ಧನೆಗೆ ಒಪ್ಪಿಗೆ

ಜಗತ್ತಿನ ಎರಡು ಪ್ರಮುಖ ಆರ್ಥಿಕ ಶಕ್ತಿಗಳಾಗಿರುವ ಭಾರತ ಮತ್ತು ಅಮೆರಿಕಕ್ಕೆ ಅನುಕೂಲವಾಗುವಂತೆ ಮಾಡಲು ಉಭಯ ರಾಷ್ಟ್ರಗಳ ನಡುವಣ ಆರ್ಥಿಕ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಪ್ರಧಾನಿ ಮೋದಿ ಹಾಗೂ ಡೊನಾಲ್ಡ್‌ ಟ್ರಂಪ್‌ ಒಪ್ಪಿಕೊಂಡಿದ್ದಾರೆ.

ಹಣಕಾಸಿನ ಬಾಂಧವ್ಯಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಬಗ್ಗೆಯೂ ಅವರು ನಿರ್ಧರಿಸಿದ್ದಾರೆ.

ಭಾರತದೊಂದಿಗೆ ನ್ಯಾಯಸಮ್ಮತ ಮತ್ತು ಅನ್ಯೋನ್ಯ ವ್ಯಾಪಾರ ಸಂಬಂಧ ಬೆಳೆಸುವುದಕ್ಕಾಗಿ ಮೋದಿ ಅವರೊಂದಿಗೆ ಕಾರ್ಯನಿರ್ವಹಿಸಲು ಉತ್ಸುಕರಾಗಿರುವುದಾಗಿ ಟ್ರಂಪ್‌ ಹೇಳಿದ್ದಾರೆ.

‘ಅಮೆರಿಕದ ಸರಕುಗಳನ್ನು ಭಾರತಕ್ಕೆ ರಫ್ತು ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದು ಅತ್ಯಂತ ಮುಖ್ಯ. ಅಮೆರಿಕದ ಇಂಧನವನ್ನು ಅದರಲ್ಲೂ ಪ್ರಮುಖವಾಗಿ ನೈಸರ್ಗಿಕ ಅನಿಲವನ್ನು ಭಾರತಕ್ಕೆ ರಫ್ತು ಮಾಡುವುದಕ್ಕೆ ನಾವು ಕಾತರಿಸುತ್ತಿದ್ದೇವೆ. ನೈಸರ್ಗಿಕ ಅನಿಲ ಖರೀದಿ ಬಗ್ಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿದೆ’ ಎಂದು ಟ್ರಂಪ್‌ ವಿವರಿಸಿದ್ದಾರೆ.

ಭಾರತದ ಸ್ಪೈಸ್‌ಜೆಟ್‌ ಕಂಪೆನಿಯು ಅಮೆರಿಕದ ಬೋಯಿಂಗ್‌ನಿಂದ ವಿಮಾನಗಳನ್ನು ಖರೀದಿಸಲು ಮುಂದಾಗಿರುವುದನ್ನು ಪ್ರಸ್ತಾಪಿಸಿದ ಅವರು, ‘ಭಾರತದ ಕಂಪೆನಿಯೊಂದು 100 ವಿಮಾನಗಳಿಗೆ ಬೇಡಿಕೆ ಮುಂದಿಟ್ಟಿರುವುದನ್ನು ಕೇಳಿ ಸಂತಸವಾಗಿದೆ. ಇದು ಅಮೆರಿಕದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ’ ಎಂದು  ಹೇಳಿದ್ದಾರೆ.

100 ವಿಮಾನಗಳನ್ನು ತಯಾರಿಸಿ

ಕೊಡುವಂತೆ ಸ್ಪೈಸ್‌ಜೆಟ್‌ ಸಂಸ್ಥೆ  ಬೋಯಿಂಗ್‌ ಅನ್ನು ಕೇಳಿದೆ. ₹1.43 ಲಕ್ಷ ಕೋಟಿ ವೆಚ್ಚದ ಈ ಒಪ್ಪಂದವು ಅಮೆರಿಕದಲ್ಲಿ 1.32 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ.

ಜಿಎಸ್‌ಟಿಗೆ  ಶ್ಲಾಘನೆ: ಭಾರತದಲ್ಲಿ ಜುಲೈ1ರಿಂದ ಜಾರಿಗೆ ಬರಲಿರುವ ಸರಕು ಸೇವೆ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಟ್ರಂಪ್‌ ಶ್ಲಾಘಿಸಿದ್ದಾರೆ.

ಅಮೆರಿಕ ಸಖ್ಯ: ಚೀನಾ ಪತ್ರಿಕೆ ಎಚ್ಚರಿಕೆ

ಬೀಜಿಂಗ್: ಅಮೆರಿಕದ ಜತೆ ಸಖ್ಯ ಬೆಳೆಸುವ ಮೂಲಕ ಚೀನಾವನ್ನು ಸಮರ್ಥವಾಗಿ ಎದುರಿಸಬಹುದು ಎಂಬ ಭಾರತದ ಲೆಕ್ಕಾಚಾರವು ಮಹಾ ದುರಂತಕ್ಕೆ ಕಾರಣವಾಗಬಹುದು ಎಂದು ಚೀನಾದ ‘ಗ್ಲೋಬಲ್ ಟೈಮ್ಸ್‌’ ಎಚ್ಚರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ನಡೆಸಿದ ಪ್ರಥಮ ಸಭೆಯ ಬೆನ್ನಲ್ಲೇ ಚೀನಾ ಸರ್ಕಾರಿ ಒಡೆತನದ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.

ಅಮೆರಿಕ ಮತ್ತು ಭಾರತಕ್ಕೆ ಚೀನಾದ ಅಭಿವೃದ್ಧಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಚೀನಾ ಪ್ರಗತಿಗೆ ಅಡ್ಡಗಾಲು ಹಾಕಲು ಅಮೆರಿಕ ಜಾಗತಿಕವಾಗಿ ಒತ್ತಡ ಹೇರುತ್ತಿದೆ ಎಂದು ಲೇಖನದಲ್ಲಿ ಆಪಾದಿಸಲಾಗಿದೆ.

ಜಪಾನ್ ಮತ್ತು ಆಸ್ಟ್ರೇಲಿಯಾ ಅಮೆರಿಕದ ಬಣಕ್ಕೆ ಸೇರಿದ ರಾಷ್ಟ್ರಗಳು ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ತನ್ನ ವಿರುದ್ಧ ಬಳಸುವುದಕ್ಕಾಗಿ ಭಾರತವನ್ನು ಹೊರಠಾಣಾ ರಾಷ್ಟ್ರವನ್ನಾಗಿ ಮಾಡಲು ಅಮೆರಿಕ ಯತ್ನಿಸುತ್ತಿದೆ. ಈ ಪ್ರಯತ್ನವು ಚೀನಾ ಮತ್ತು ಭಾರತದ ಹಿತಾಸಕ್ತಿಗೆ ಮಾರಕವಾಗಿ ಮಹಾ ವಿನಾಶಕ್ಕೆ ಕಾರಣವಾಗಬಹುದು ಎಂದು ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT