ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದದ ಕಾಂತಿಯ ಕೆಂಪೇಗೌಡ

Last Updated 28 ಜೂನ್ 2017, 8:58 IST
ಅಕ್ಷರ ಗಾತ್ರ

ಮೈಸೂರು: ಯಲಹಂಕ ರಾಜವಂಶಸ್ಥರ ನಡುವೆ ಶಿರೋಮಣಿಯಾಗಿ ಕುಂದದ ಕಾಂತಿಯಿಂದ ಬೆಳಗುತ್ತಿರುವವರು ನಾಡಪ್ರಭು ಕೆಂಪೇಗೌಡ ಎಂದು ಲೇಖಕ ಪ್ರೊ.ಸಿ.ನಾಗಣ್ಣ ಬಣ್ಣಿಸಿದರು. ಜಿಲ್ಲಾಡಳಿತ ಹಾಗೂ ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ನಗರದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಕೆಂಪೇಗೌಡ ಹಾಗೂ ಅವರ ಮುಂದಿನ ಪೀಳಿಗೆಯವರ ರಾಜ್ಯಭಾರ, ವ್ಯಕ್ತಿತ್ವ, ನಡೆ, ನುಡಿ, ನಾಡಿನ ಬಗ್ಗೆ ಅವರಲ್ಲಿದ್ದ ಅಭಿಮಾನ ಎಲ್ಲವನ್ನೂ ಇತಿಹಾಸಕಾರರು ಮೆಚ್ಚಿದ್ದಾರೆ. ಯಲಹಂಕ ಪ್ರಭುಗಳು ಆಪತ್ಕಾಲದಲ್ಲಿ ಕುಗ್ಗುವವರಲ್ಲ, ಸಂಪತ್ತಿದ್ದಾಗ ಹಿಗ್ಗುವವರಲ್ಲ ಎಂಬ ಸಂಗತಿ ಚರಿತ್ರೆಗಳಿಂದ ಸ್ಪಷ್ಟವಾಗಿದೆ. ಹೀಗಾಗಿ ಕನ್ನಡ ಸಂಸ್ಕೃತಿಯೇ ಮೂರ್ತಿವೆತ್ತಂತಿದ್ದ ಯಲಹಂಕ ಪ್ರಭುಗಳ ಕೀರ್ತಿ ಅಜರಾಮರವಾದುದು ಎಂದು ಪ್ರಶಂಸಿಸಿದರು.

ಶಿವಗಂಗೆಯ ಗುರುಕುಲಕ್ಕೆ ಸೇರಿದ ಕೆಂಪೇಗೌಡರು ಧರ್ಮಶಾಸ್ತ್ರ, ಕಾವ್ಯ, ವ್ಯಾಕರಣ, ತತ್ವಶಾಸ್ತ್ರ, ಯುದ್ಧದ ಕಲೆ ಮೊದಲಾದವುಗಳನ್ನು ಕಲಿತರು. ಮುಂದೆ ಅವರು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಬೆಂಗಳೂರು ನಗರ ನಿರ್ಮಾಪಕರಾಗಲು ಶಿಕ್ಷಣ ತಳಹದಿಯಾಯಿತು. ಒಳ್ಳೆಯ ಶಿಕ್ಷಣ, ಸಾಹಸ ಪ್ರವೃತ್ತಿ, ಎಲ್ಲರನ್ನೂ ಸಮಾನವಾಗಿ ಕಾಣುವ ವಿಶಾಲ ಮನೋಭಾವ ಅವರದಾಗಿತ್ತು. ಹೀಗಾಗಿ 18ನೇ ವಯಸ್ಸಿನಲ್ಲಿಯೇ ತಮ್ಮ ತಂದೆಯ ಆಡಳಿತಕ್ಕೆ ನೆರವಾದರು ಎಂದು ಬಣ್ಣಿಸಿದರು.

ಬೆಂಗಳೂರನ್ನು ಕಟ್ಟುವಾಗ ಮೊದಲು ಬಸವನಗುಡಿ ಕಟ್ಟಿಸಿದರು. ಇದು ಆಡಳಿತದ ಸಂಕೇತವೂ ಆಯಿತು. ನಂತರ ನೀರಿನ ಪೂರೈಕೆಗಾಗಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕೆರೆಗಳನ್ನು ಕಟ್ಟಿಸಿದರು. ವ್ಯಾಪಾರಕ್ಕಾಗಿ ಮಾರುಕಟ್ಟೆಗಳು ಅಸ್ತಿತ್ವಕ್ಕೆ ಬಂದವು. ಅಕ್ಕಿಪೇಟೆ, ಅರಳಿಪೇಟೆ, ಬಳೆಪೇಟೆ, ಚಿಕ್ಕಪೇಟೆ ಮೊದಲಾದವುಗಳನ್ನು ಅಭಿವೃದ್ಧಿಪಡಿಸಿದರು. ರೂಪಿಸಿದ ಕೈಗಾರಿಕೆ ಹಾಗೂ ಕರಕುಶಲ ಕೆಲಸಗಳಿಗಾಗಿ ಬೇರೆ ಬೇರೆ ಸ್ಥಳಗಳಿಂದ ತಜ್ಞರನ್ನು ಕರೆಸಿದರು. ಅಂತಿಮವಾಗಿ 1537ರಲ್ಲಿ ಬೆಂಗಳೂರು ಒಂದು ಸುಂದರ ನಗರವಾಗಿ ರೂಪುಗೊಂಡಿತು ಎಂದು ವಿವರಿಸಿದರು.

ಕೆಂಪೇಗೌಡ ಪತ್ನಿ ಚೆನ್ನಮಾಂಬೆ ಪತಿಯ ಆಡಳಿತ ಸುಸೂತ್ರವಾಗುವಂತೆ ಕೌಟುಂಬಿಕ ಆಗುಹೋಗುಗಳನ್ನು ತಾವೇ ನೋಡಿಕೊಂಡರು. ಕೆಂಪೇಗೌಡ ನಾಡಿನ ಎಲ್ಲೆಡೆ ದುರ್ಗಗಳನ್ನು ಕಟ್ಟಲು ಸೇನೆ ಸಜ್ಜುಗೊಳಿಸಿದರು. ಸೇನಾ ತರಬೇತಿ ಶಿಬಿರಗಳನ್ನು ಆರಂಭಿಸಿದರು. ಇದರಲ್ಲಿ ತರಬೇತಿ ಪಡೆದ ಸೈನಿಕರನ್ನು ವಿಜಯನಗರದ ಸೇನೆಗೆ ಸೇರಿಸಿದರು. ಹೀಗೆ ಶ್ರೀಕೃಷ್ಣದೇವರಾಯನ ಜೊತೆ ಅವರ ಬಾಂಧವ್ಯ ಉತ್ತಮವಾಗಿತ್ತು. ಕೆಂಪೇಗೌಡರ ನಿಷ್ಠೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಕೃಷ್ಣದೇವರಾಯರು ಸಾರ್ವಜನಿಕ ಸಮಾರಂಭವೊಂದರಲ್ಲಿ ಸನ್ಮಾನಿಸಿ ‘ರಾಯ’ ಎಂಬ ಬಿರುದು ನೀಡಿ, 50,000 ಚಿನ್ನದ ನಾಣ್ಯಗಳನ್ನು ನೀಡಿದ್ದರು ಎಂದು ಸ್ಮರಿಸಿದರು.

ಆದಿಚುಂಚನಗಿರಿ ಮಠದ ಮೈಸೂರು ಶಾಖೆ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಮಠದ ಶಿವಾನಂದಪುರಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಚುಂಚನಕಟ್ಟೆ ಶಾಖೆಯ ಪುರುಷೋತ್ತಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮೃಗಾಲಯ ಪ್ರಾಧಿಕಾರದ ಅದ್ಯಕ್ಷೆ ಮಲ್ಲಿಗೆ ವೀರೇಶ್, ಮೇಯರ್‌ ಎಂ.ಜೆ.ರವಿಕುಮಾರ್, ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮಹಾಲಿಂಗು, ಪಾಲಿಕೆ ಸದಸ್ಯರಾದ ಕೆ.ವಿ.ಮಲ್ಲೇಶ್, ಲಿಂಗಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ವಿಜ್ಞಾನಿ ಡಾ.ವಸಂತಕುಮಾರ್‌ ತಿಮಕಾಪುರ ವೇದಿಕೆ ಮೇಲಿದ್ದರು. ಶಾಸಕ ವಾಸು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ ಸ್ವಾಗತಿಸಿದರು. ಇದಕ್ಕೂ ಮೊದಲು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಕಲಾಮಂದಿರದವರೆಗೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಜನಪದ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT