ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಕೆಂಪೇಗೌಡರ ಮಾಹಿತಿ ಇರಲಿ

Last Updated 28 ಜೂನ್ 2017, 10:41 IST
ಅಕ್ಷರ ಗಾತ್ರ

ವಿಜಯಪುರ: ‘ನಾಡಪ್ರಭು ಕೆಂಪೇಗೌಡ ಅವರು ಅಸಾಮಾನ್ಯ ಆಡಳಿತಗಾರ, ಜಾತ್ಯತೀತ ಜನ ನಾಯಕರಾಗಿ ಆಡಳಿತ ನಡೆಸಿದ ಮಹಾನ್‌ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಅನ್ನಪೂರ್ಣ ಚಂದ್ರಪ್ಪ ಹೇಳಿದರು. ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಮಂಗಳವಾರ  ನಾಡಪ್ರಭು ಕೆಂಪೇಗೌಡರ 507ನೇ ವರ್ಷದ ಜಯಂತಿ ಅಂಗವಾಗಿ ಪಲ್ಲಕ್ಕಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅವರು ಈ ನಾಡಿನ ಆಸ್ತಿಯಾಗಿದ್ದಾರೆ. ಅವರ ಜಯಂತಿ ಆಚರಣೆಗೆ ಎಲ್ಲಾ ವರ್ಗದವರು ಜಾತಿ, ಮತಗಳನ್ನು ಮರೆತು ಭಾಗವಹಿಸಬೇಕು ಎಂದರು.

ಮುಖಂಡ ನಂಜಪ್ಪ ಮಾತನಾಡಿ, ಜಗತ್ತನ್ನು ನೂರಾರು ರಾಜರು ಆಳ್ವಿಕೆ ಮಾಡಿದ್ದಾರೆ. ಅವರು ಇತಿಹಾಸ ಪುಟದಲ್ಲಿದ್ದಾರೆ. ವಿಶ್ವದಲ್ಲೇ ನಾಡಿನ ಭವಿಷ್ಯಕ್ಕೆ ಅದ್ಭುತ ಪರಿಕಲ್ಪನೆಯನ್ನು ಕೆಂಪೇಗೌಡರು ನೀಡಿದ್ದಾರೆ ಎಂದರು.

ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಪಠ್ಯಪುಸ್ತಕಗಳ ಮೂಲಕ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಇಂದಿನ ‘ಸ್ಮಾರ್ಟ್ ಸಿಟಿ’ಯ ಪರಿಕಲ್ಪನೆ ಅನೇಕ ದಶಕಗಳ ಹಿಂದೆಯೇ ಕೆಂಪೇಗೌಡರು ಹೊಂದಿದ್ದರು ಎಂದು ಅವರು ಹೇಳಿದರು.

ವಿಜಯಪುರ ಹೋಬಳಿಯ ಹೊಸಹುಡ್ಯ, ಚಿಕ್ಕನಹಳ್ಳಿ, ದಂಡಿಗಾನಹಳ್ಳಿ, ಬೈರಾಪುರ, ಗೊಡ್ಲುಮುದ್ದೇನಹಳ್ಳಿ, ವೆಂಕಟೇನಹಳ್ಳಿ, ಹರಳೂರು ನಾಗೇನಹಳ್ಳಿ, ಮಂಡಿಬೆಲೆ, ಧರ್ಮಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ಪಲ್ಲಕ್ಕಿಗಳ ಮೂಲಕ ಕೆಂಪೇಗೌಡರ ಪ್ರತಿಮೆಗಳನ್ನು ಮೆರವಣಿಗೆ ಮಾಡಿಕೊಂಡು ತಾಲ್ಲೂಕು ಕೇಂದ್ರಕ್ಕೆ ತೆರಳಿದರು.

ವಿಜಯಪುರ ಹೋಬಳಿಯ ಎಲ್ಲಾ ಗ್ರಾಮಗಳಿಂದ ಪಲ್ಲಕ್ಕಿಗಳೊಂದಿಗೆ ವೆಂಕಟಗಿರಿಕೋಟೆಗೆ ಆಗಮಿಸಿದ್ದ ಮುಖಂಡರು, ಕಾರು ರ್‌್ಯಾಲಿಯೊಂದಿಗೆ ಆವತಿಯಲ್ಲಿ ಪೂಜೆ ಸಲ್ಲಿಸಿ ದೇವನಹಳ್ಳಿಗೆ ಹೊರಟರು.

ಹಾರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಮುನಿನಾರಾಯಣಮ್ಮ, ಎಚ್.ಸಿ.ಮುನಿರಾಜು, ಸೊಣ್ಣೇಗೌಡ, ನಾರಾಯಣಸ್ವಾಮಿ, ಎಂ.ಪಿಳ್ಳಪ್ಪ, ಎನ್.ರಾಜಗೋಪಾಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT