ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ಕೇಂದ್ರವಾಗಿ ರೂಪಿಸಲು ಚರ್ಚೆ

Last Updated 28 ಜೂನ್ 2017, 10:50 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ವಂಶಸ್ಥ ನಾಡಪ್ರಭು ರಣಬೈರೇಗೌಡರ ಕರ್ಮಭೂಮಿ ಆವತಿ ಗ್ರಾಮಕ್ಕೆ ₹ 6 ಕೋಟಿ ಅನುದಾನ ನೀಡ ಲಾಗುವುದೆಂದು’ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಆವತಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ರಣ ಬೈರೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಂಗಳೂರಿನ ವಿಧಾನ ಸೌಧಕ್ಕೆ ಸಾಗಲು ಸಜ್ಜುಗೊಂಡಿದ್ದ ಅಮರಜ್ಯೋತಿಗೆ ಚಾಲನೆ ನೀಡಿದರು. ನಂತರ ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿನ ವೃತ್ತಕ್ಕೆ ಕೆಂಪೇಗೌಡರ ಹೆಸರಿನ ನಾಮಫಲಕವನ್ನು ಸಂಸದ ಡಾ. ಎಂ. ವೀರಪ್ಪ ಮೊಯಿಲಿ ಅವರೊಂದಿಗೆ ಅನಾವರಣ ಮಾಡಿದರು.

ಆವತಿ ಬೆಟ್ಟವನ್ನು ಐತಿಹಾಸಿಕವಾಗಿ ಉಳಿಸಿ ಅಭಿವೃದ್ಧಿಪಡಿಸಲು ಮೊದಲ ಹಂತವಾಗಿ ₹ 6 ಕೋಟಿ ಅನುದಾನ ಬಿಡುಗಡೆಗೊಳಿಸಿ ನಾಡ ಪ್ರಭು ರಣಬೈರೇಗೌಡ ಭವನ ನಿರ್ಮಾಣ ಮಾಡಲಾಗುತ್ತದೆ. ಪೂರ್ಣ ಬೆಟ್ಟದ ಸುತ್ತ ತಡೆಗೊಡೆ ನಿರ್ಮಾಣ ಮಾಡುವುದು, ಕೆಂಪೇಗೌಡರ ಕುಲದೈವ ಕೆಂಪಮ್ಮ ದೇವಿ ದೇವಾಲಯ ನಿರ್ಮಾಣ ಮತ್ತು ರಣಬೈರೇಗೌಡರ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಮಾಡಲು ಚಿಂತನೆ ನಡೆದಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್, ಟಿಎಪಿಸಿಎಸ್ ಮಾಜಿ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವಮಟ್ಟದಲ್ಲಿ ಬೆಂಗಳೂರು:‘ರಾಜಧಾನಿ ಬೆಂಗಳೂರು ನಗರ  ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ನಿರ್ಮಾತೃ ನಾಡಪ್ರಭು ಮೂಲ ಕಾರಣರಾಗಿದ್ದಾರೆ’ ಎಂದು ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ ತಿಳಿಸಿದರು.

ದೇವನಹಳ್ಳಿ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಮಂಗಳವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಒಕ್ಕಲಿಗರ ಸಂಘದ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ  507 ನೇ ಜಯಂತಿ ಕಾರ್ಯದಲ್ಲಿ ಪ್ರಾಸ್ತಾವಿಕ ಮಾತನಾಡಿ, ಸಾಮಾನ್ಯವಾಗಿದ್ದ ಬೆಂದಕಾಳೂರನ್ನು ದೇವನಹಳ್ಳಿ ಸೇರಿದಂತೆ ನಾಲ್ಕು ದಿಕ್ಕುಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆದು ಉದ್ಯಾನ ನಗರ ಶಾಶ್ವತವಾಗಿ ಉಳಿಯಲು ಪ್ರಭುವಿನ ಕೊಡುಗೆ ಅಸಾಮಾನ್ಯವಾದದ್ದು ಎಂದರು.

ಒಕ್ಕಲಿಗರ ಸಂಘ ರಾಜ್ಯ ನಿರ್ದೆಶಕ ಬಿ.ಮುನೇಗೌಡ ಮಾತನಾಡಿ, ಬೆಂಗಳೂರಿಗೆ ಮೀಸಲಾಗಿದ್ದ ಕೆಂಪೇಗೌಡರ ಹೆಸರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ತಲುಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವರಿಗೆ ಸಲ್ಲುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಮಾತನಾಡಿ, ಕೆಂಪೇಗೌಡ ಸ್ಥಾಪಿಸಿದ ಬೆಂಗಳೂರು ಇಂದು ವಿರಾಟ್‌ ರೂಪ ಪಡೆಯಲು ಕೆಂಪೇಗೌಡರ ಕಾಳಜಿ ಮುಖ್ಯವಾದ್ದು ಎಂದರು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮಾತನಾಡಿದರು.

ಪಕ್ಷಭೇದ ಬೇಡ: ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಪಕ್ಷ ಭೇದ ಮರೆತು ಜಯಂತಿಗೆ ಭಾಗವಹಿಸಿರುವುದು ಖುಷಿಯ ವಿಚಾರ ಎಂದು ಅವರು ಹೇಳಿದರು.
ಮಾಜಿ ಶಾಸಕ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ತಾಲ್ಲೂಕು ಒಕ್ಕಲಿಗರ ಸಂಘ ಅಧ್ಯಕ್ಷೆ ಕೆ.ವೆಂಕಟೇಗೌಡ,  ಪ್ರಧಾನ ಕಾರ್ಯದರ್ಶಿ ಶಿವರಾಮಯ್ಯ, ಜಿ.ಪಂ ಸದಸ್ಯರಾದ ಲಕ್ಷ್ಮಿ ನಾರಾಯಣಸ್ವಾಮಿ, ಕೆ.ಸಿ ಮಂಜುನಾಥ್, ರಾಧಮ್ಮ ಮುನಿರಾಜು, ಎಪಿಎಂಸಿ ಅಧ್ಯಕ್ಷೆ ಅಮರಾವತಿ, ನಿರ್ದೆಶಕರಾದ ಸುಧಾಕರ್, ಕೆ.ಎಂ ಮುನಿರಾಜು ಹಾಜರಿದ್ದರು.

ಕೆ.ವಿ ಮಂಜುನಾಥ್, ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ಪದ್ಮಾವತಿ ಜಗನ್ನಾಥ್, ತಾ.ಪಂ ಅಧ್ಯಕ್ಷ ಭಾರತಿ ಲಕ್ಷ್ಮಣ್ ಗೌಡ, ಉಪಾಧ್ಯಕ್ಷೆ ನಂದಿನಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ, ಬಮುಲ್ ನಿರ್ದೇಶಕ ಬಿ.ಶ್ರೀನಿವಾಸ್, ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಎ.ಸಿ.ನಾಗರಾಜ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ರವಿಕುಮಾರ್, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ,  ಹಾಪ್ ಕಾಮ್ ನಿರ್ದೆಶಕರಾದ ಹೆಚ್. ಸಿ.ನಂಜಪ್ಪ ,ಪದ್ಮಾವತಿ ,ಬಿಡಿಸಿಸಿ ನಿರ್ದೆಶಕ ಸೋಣ್ಣಪ್ಪ, ಟಿ.ಎಪಿಂಸಿಎಸ್ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಜಿ.ಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ ಇದ್ದರು.

ಸಮುದಾಯದ ಹಿರಿಯರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಿವೃತ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಿವೃತ್ತ ಶಿಕ್ಷಕ ಬಿ.ಜಿ ಗುರುಸಿದ್ದಯ್ಯ ಸಂಪಾದಕತ್ವದ ದೇವನದೊಡ್ಡಿಯಿಂದ ದೇವನಹಳ್ಳಿಯವರಗೆಗ ಹೆಜ್ಜೆ ಗುರುತು ಎಂಬ ಕೃತಿ ಬಿಡುಗಡೆ ಮಾಡಲಾಯಿತು.

ಭಾಷಣಕ್ಕೆ ಅಕ್ಷೇಪ: ಕೆಂಪೇಗೌಡ ವೇದಿಕೆ ಕಾರ್ಯಕ್ರಮದಲ್ಲಿ ಮೂರನೆಯವರಾಗಿ ಭಾಷಣ ಮಾಡಲು ಬಂದ ಮಾಜಿ ಶಾಸಕ ಡಿ.ಎಸ್.ಗೌಡ ಅವರಿಗೆ ಕೆಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಎಲ್ಲೆಲ್ಲೂ ಜನಜಾತ್ರೆ, ವಿಳಂಬ ಸಭೆ
ಆಹ್ವಾನ ಪತ್ರಿಕೆಯಲ್ಲಿ ನಿಗದಿ ಮಾಡಿದ್ದು ಬೆಳಿಗ್ಗೆ 11ಕ್ಕೆ ಆರಂಭಗೊಂಡಿದ್ದು ಮಧ್ಯಾಹ್ನ ನಂತರ 2ಕ್ಕೆ 6 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದರೂ ಜನಜಂಗುಳಿ ಇಡಿ ಮೈದಾನದಲ್ಲಿ ತುಂಬಿತ್ತು. 12 ಸಾವಿರಕ್ಕೂ ಹೆಚ್ಚು ಜನ ಸಮುದಾಯದ ಸಾಗರವೆಂಬಂತೆ ಭಾಸವಾಗಿ ಒಕ್ಕಲಿಗರ ಶಕ್ತಿಯನ್ನು ಬಿಂಬಿಸುತ್ತಿತ್ತು. 125 ಬಾಣಸಿಗರು ರಾತ್ರಿ ಯಿಂದ ವಿವಿಧ ರೀತಿಯ ಸಿಹಿ ತಿನಿಸು ಮತ್ತು ಸಸ್ಯಹಾರ ಸಿದ್ಧಪಡಿಸಿದ ಊಟವನ್ನು ಸರತಿ ಸಾಲಿನಲ್ಲಿ ನಿಂತು ಸವಿದರು.

ನಾಲ್ಕು ಕಡೆಯಿಂದ ವಿವಿಧ ಗ್ರಾಮ ಮತ್ತು ಗ್ರಾಮ ಪಂಚಾಯಿತಿ  ವ್ಯಾಪ್ತಿಯಿಂದ 125 ಕ್ಕೂ ಹೆಚ್ಚು ಕೆಂಪೇಗೌಡರ ಭಾವ ಚಿತ್ರ ಹೊತ್ತು ಬೆಳ್ಳಿ ರಥ ಸಾಗಿತ್ತು. ಪಟದ ಕುಣಿತ, ಡೊಳ್ಳು , ವೀರಗಾಸೆ, ನಂದಿ ಕೋಲು ಕುಣಿತ ಮೆರವಣಿಗೆಯಲ್ಲಿ ಗಮನ ಸೆಳೆದವು. ಕಾರ್ಯಕ್ರಮಕ್ಕೆ ₹ 65 ರಿಂದ ₹ 75 ಲಕ್ಷ ವೆಚ್ಚಮಾಡಲಾಗಿದೆ ಎಂದು ಕೆಲ ಮುಖಂಡರು ತಿಳಿಸಿದರು.

* * 

ಆವತಿ ಬೆಟ್ಟವನ್ನು  ಖಾಸಗಿಯವರಿಗೆ ಉಪಯೋಗಿಸಲು ಅವಕಾಶವಿಲ್ಲ,  ಉತ್ತಮ ಪ್ರವಾಸಿ ಕೇಂದ್ರವನ್ನಾಗಿಸಲು ಈಗಾಗಲೇ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಲಾಗಿದೆ
ಕೃಷ್ಣ ಬೈರೇಗೌಡ,
ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT