ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಾಕಾಶಮ್‌ ಪಚ್ಚಕಡಲ್‌ ಚುವನ್ನಾ ಭೂಮಿ

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ಇದ್ದಕ್ಕಿದ್ದಂತೆ ಈ ಎಲ್ಲವನ್ನೂ ಬಿಟ್ಟು ಎಲ್ಲಾದರೂ ದೂರ ಹೊರಟು ಹೋಗಿ ಬಿಡಬೇಕು. ನಮ್ಮನ್ನು ಯಾರೂ ಗುರ್ತಿಸಲಾಗದ ಜಾಗದಲ್ಲಿ ಅನಾಮಿಕರಾಗಿ ಅಲೆದಾಡಬೇಕು ಎಂಬ ಬಯಕೆ ನಮ್ಮೆಲ್ಲರಲ್ಲಿಯೂ ಆಗಾಗ ಗರಿಗೆದರುತ್ತಲೇ ಇರುತ್ತದೆ. ಹೀಗೆ ಅಲೆದಾಟದ ಆಸೆ ಇರುವವರೆಲ್ಲ ನೋಡಲೇಬೇಕಾದ ಸಿನಿಮಾ ಮಲಯಾಳಂನ ‘ನೀಲಾಕಾಶಮ್‌, ಪಚ್ಚಕಡಲ್‌ ಚುವನ್ನಾ ಭೂಮಿ’ (ನೀಲಾಕಾಶ ಹಸಿರು ಕಡಲು ಕೆಂಪಾದ ಭೂಮಿ).

ದುಲ್ಕರ್‌ ಸಲ್ಮಾನ್‌ ನಾಯಕನಾಗಿ ನಟಿಸಿರುವ ಈ ಚಿತ್ರ ತೆರೆಕಂಡಿದ್ದು 2013 ಆಗಸ್ಟ್‌ನಲ್ಲಿ. ಸಮೀರ್‌ ತಹೀರ್‌ ಈ ಚಿತ್ರದ ನಿರ್ದೇಶಕರು.

ಕೇರಳದ ಹುಡುಗ ಕಾಸಿಯ ಗೊತ್ತುಗುರಿಯಿಲ್ಲದ ಪ್ರವಾಸದಿಂದ ಸಿನಿಮಾ ಆರಂಭವಾಗುತ್ತದೆ. ಅವನೊಂದಿಗೆ ಅವನ ಪ್ರಾಣಸ್ನೇಹಿತ ಸುನಿ ಕೂಡ ಸೇರಿಕೊಳ್ಳುತ್ತಾನೆ. ದಾರಿ ಕೊಂಡೊಯ್ದಲ್ಲಿ ಹೋಗುವ, ಮನಸ್ಸು ಬಂದಲ್ಲಿ ನಿಲ್ಲುವ ಅನಾಮಿಕ ಪ್ರಯಾಣ ಅವರದು.

ಆ ಪ್ರಯಾಣದಲ್ಲಿಯೇ ಎದುರಾಗುವ ವಿಭಿನ್ನ ಸನ್ನಿವೇಶಗಳಲ್ಲಿ ಹಲವು ಸ್ನೇಹಿತರು ಜತೆಯಾಗುತ್ತಾರೆ. ಅಪರಿಚಿತರು ಆಪ್ತರಾಗುವ, ಹೆಸರಿಲ್ಲದ ಸಂಬಂಧಕ್ಕೆ ಬದುಕು ಎರವಾಗುವ ಗಳಿಗೆಗಳ ನೇಯ್ಗೆಯಲ್ಲಿಯೇ ಸಿನಿಮಾ ಬೆಳೆಯುತ್ತ ಹೋಗುತ್ತದೆ.

ಕೊನೆಗೆ ಕಾಸಿಯ ಈ ಪ್ರವಾಸದ ಗುರಿಯೂ ಸ್ಪಷ್ಟವಾಗುತ್ತದೆ. ತನ್ನ ಗೆಳತಿಯ ಮನೆಯಿರುವ ನಾಗಾಲ್ಯಾಂಡ್‌ಗೆ ಹೋಗುವುದು ಎಂದು ನಿರ್ಧರಿಸಿ ಹೊರಡುತ್ತಾನೆ. ಆ ದಾರಿಯಲ್ಲಿ ಎದುರಾಗುವ ಹಳ್ಳಿ, ಅಲ್ಲಿನ ಜನರ ಆತಿಥ್ಯ, ಊರ ಹಿರಿಯನ ಹೋರಾಟದ ನೆನಪುಗಳು ನಾಯಕ ಬದುಕನ್ನು ನೋಡುವ ದೃಷ್ಟಿಕೋನವನ್ನು ಮಾಗಿಸುತ್ತಾ ಹೋಗುತ್ತವೆ.

ಪ್ರವಾಸದ ಕಥನವೊಂದನ್ನು ಬದುಕಿನ ಹಲವು ಬಿಂಬಗಳೊಂದಿಗೆ ಹೆಣೆದಿರುವ ರೀತಿಯು ಬೆರಗು ಹುಟ್ಟಿಸುವಂತಿದೆ. ಸ್ನೇಹ, ಪ್ರೇಮ, ಹೋರಾಟ, ಬಡತನ, ಕ್ರೌರ್ಯ ಹೀಗೆ ಹಲವು ಮೂಲಭೂತ ಸಂಗತಿಗಳು ಕಾಸಿಯ ಬದುಕನ್ನು ವಿಸ್ತರಿಸುತ್ತ ಹೋಗುತ್ತವೆ. ಈ ನಿಟ್ಟಿನಲ್ಲಿ ಇದೊಂದು ಬಗೆಯ ಅರ್ಥಪೂರ್ಣ ಭಾರತದರ್ಶನವೂ ಹೌದು.

ಉರಿವ ಬೆಂಕಿಯೆದುರು ಅನಾಥಳಾಗಿ ಅಳುತ್ತ ಕೂತ ಪುಟ್ಟ ಹುಡುಗಿ ನಾಯಕನಷ್ಟೇ ನೋಡುಗನಿಗೂ ಕಾಡುತ್ತಾಳೆ. ಆಕಾಶ ಸಾಗರ ಭೂಮಿಯುದ್ದಕ್ಕೂ ವ್ಯಾಪಿಸಿಕೊಂಡಿರುವ ಸರಿ–ತಪ್ಪುಗಳ ಷರಾ ಮೀರಿದ ಈ ಬದುಕಿನ ದಿವ್ಯತೆಯ ಬಗ್ಗೆ ಗೌರವವನ್ನೂ, ಧನ್ಯತೆಯನ್ನೂ ಹುಟ್ಟಿಸುವಂಥ ಸಿನಿಮಾ ಇದು.

ಗಟ್ಟಿಯಾದ ಚಿತ್ರಕಥೆ, ಭಾವುಕತೆಯ ಅಲೆಯೆಬ್ಬಿಸುವ ಸಂಗೀತ, ನಯನ ಮನೋಹರ ಛಾಯಾಗ್ರಹಣ ಎಲ್ಲವೂ ಈ ಚಿತ್ರದ ಧನಾತ್ಮಕ ಅಂಶಗಳೇ. ದುಲ್ಕರ್‌ ಸಲ್ಮಾನ್‌ ಜತೆಗೆ ನಾಯಕನ ಸ್ನೇಹಿತನಾಗಿ ನಟಿಸಿರುವ ಸನ್ನಿ ವಾಯ್ನೇ ಅವರೂ ನೆನಪಲ್ಲುಳಿಯುತ್ತಾರೆ.

ಕಾಸಿಯ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಏರಿ ಕೋಲ್ಕತ್ತಾದಿಂದ ನಾಗಾಲ್ಯಾಂಡ್‌ವರೆಗೆ ಸುತ್ತಿಬರಲು ಅಂತರ್ಜಾಲದಲ್ಲಿ goo.gl/P6BHHV ಕೊಂಡಿಯನ್ನು ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT