ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಡದ್ದೆಲ್ಲ ನಿಜವಲ್ಲ!

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

‘ನಾನು ಈ ರೀತಿ ಬಟ್ಟೆ ಧರಿಸಿದ್ದರಿಂದ ಸಭಾಂಗಣದಲ್ಲಿ ಸಹಿಸಲಸಾಧ್ಯವಾದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಅಲ್ವೆ?’

ಒಳ ಉಡುಪು ಉತ್ಪಾದಿಸುವ ಕಂಪೆನಿಗಳಿಗೆ ಮಾಡೆಲಿಂಗ್‌ ಮಾಡುವ ಮೂಲಕ ಸೌಂದರ್ಯದ ಆರಾಧಕರ ಕಣ್ಮಣಿ ಎನಿಸಿರುವ ಅಮೆರಿಕದ ಮಾಡೆಲ್‌, ಐದು ಅಡಿ, ಹತ್ತು ಇಂಚು ಎತ್ತರದ, ಸಪೂರ ಮೈಮಾಟದ, ಕಡು ಕಂದುಬಣ್ಣದ ಕಂಗಳ ಕ್ಯಾಮೆರನ್‌ ರಸೆಲ್‌, ‘ಟೆಡ್‌ ಟಾಕ್‌’ ಭಾಷಣಕ್ಕೆ ಬಂದೊಡನೆ ಹೀಗೆ ಹೇಳಿದಾಗ ಅಲ್ಲಿದ್ದವರೆಲ್ಲ ಸುಸ್ತು!

‘ಉದ್ವಿಗ್ನ ವಾತಾವರಣವನ್ನು ಶಮನ ಮಾಡಲೆಂದೇ ನಾನು ಹೊರ ಉಡುಪುಗಳನ್ನೂ ತಂದಿದ್ದೇನೆ’ ಎನ್ನುತ್ತಾ ವೇದಿಕೆಯಲ್ಲೇ ಅವುಗಳನ್ನು ಧರಿಸಿದ ಕ್ಯಾಮೆರನ್‌, ಕಾಲುಗಳಿಂದ ಹೀಲ್ಸ್‌ ತೆಗೆದು ಸಾದಾ ಚಪ್ಪಲಿಯನ್ನೂ ಹಾಕಿದ್ದರು. ‘ಮೊದಲಿನ ಚರ್ಯೆ ವಿಕಾರವಾಗಿತ್ತು. ಆದ್ದರಿಂದಲೇ ನನ್ನ ಬಾಹ್ಯರೂಪವನ್ನು ಬದಲಿಸಿದೆ. ಇದೇ ನೋಡಿ ನನ್ನ ಸಹಜ ಉಡುಗೆ’ ಎನ್ನುತ್ತಾ ಹೂನಗು ಬೀರಿದ್ದರು.

ಕ್ಯಾಮೆರನ್‌ ಅವರ ಆ ‘ಟೆಡ್‌ ಟಾಕ್‌’ ಪ್ರಪಂಚದಾದ್ಯಂತ ಸದ್ದು ಮಾಡಿತ್ತು. ಸುಮಾರು 7.7 ಕೋಟಿ ಜನ ಅವರ ಭಾಷಣ ಆಲಿಸಿದ್ದರು.

ವಿಕ್ಟೋರಿಯಾ ಸಿಕ್ರೀಟ್‌, ಪ್ರಾಡಾ, ಕೆಲ್ವಿನ್‌ ಕ್ಲೀನ್‌ದಂತಹ ಜಗದ್ವಿಖ್ಯಾತ ಕಂಪೆನಿಗಳ ಉತ್ಪನ್ನಗಳಿಗೆ ಮಾಡೆಲ್‌ ಆಗಿ, ಪ್ರಮುಖ ಫ್ಯಾಷನ್‌ ಷೋಗಳಲ್ಲಿ ಮಾರ್ಜಾಲ ನಡಿಗೆಯಿಂದ ಪ್ರಪಂಚದ ದೃಷ್ಟಿಯನ್ನು ತಮ್ಮತ್ತ ಹೊರಳಿಸಿ, ಡಾಲರ್‌ಗಳ ಹೊಳೆಯನ್ನೇ ತಮ್ಮ ಮನೆಯತ್ತ ಹರಿಯುವಂತೆ ಮಾಡಿದ ಈ ಯುವತಿ, ಯಶಸ್ಸಿನ ಪರ್ವತದ ಉತ್ತುಂಗವನ್ನೇ ಏರಿ ಕುಳಿತವರು. ಹತ್ತು ವರ್ಷಗಳ ತಮ್ಮ ಮಾಡೆಲಿಂಗ್‌ ಅನುಭವವನ್ನು ಒರೆಗೆ ಹಚ್ಚಿ ಅವರು ಮಾಡುವ ‘ಸೌಂದರ್ಯ ಮೀಮಾಂಸೆ’ಯನ್ನು ಅವರ ಮಾತುಗಳಲ್ಲೇ ಒಮ್ಮೆ ಕೇಳಬೇಕು:

‘ನಾನೀಗ ನಿರ್ಭೀತಿಯಿಂದ ಮಾತನಾಡುತ್ತಿದ್ದೇನೆ. ನಿರ್ಭೀತಿಯಿಂದ ಮಾತನಾಡುವುದು ಎಂದರೆ ಪ್ರಾಮಾಣಿಕವಾಗಿ ಸತ್ಯವನ್ನೇ ಹೇಳುವುದು ಎಂದರ್ಥ. ನನಗೆ ಜೀವನದಲ್ಲಿ ಒಬ್ಬ ಬಾಯ್‌ಫ್ರೆಂಡ್‌ ಸಹ ಇಲ್ಲ. ಆದರೆ, ಮೊದಲ ಬಾರಿಗೆ ನಾನು ಸ್ಟುಡಿಯೊಕ್ಕೆ ಹೋದಾಗ ಕ್ಯಾಮೆರಾ ಹಿಡಿದು ನಿಂತಿದ್ದ ಛಾಯಾಗ್ರಾಹಕ, ಜತೆಗಿದ್ದ ಹುಡುಗನ ತಲೆಗೂದಲಲ್ಲಿ ಬೆರಳು ಆಡಿಸಲು ಹೇಳಿದ. ಆ ಹುಡುಗನಿಗೆ ನನ್ನ ಸೊಂಟವನ್ನೇ ಹಿಡಿಯಲು ಹೇಳಿದ್ದರು. ನನಗೋ ಆ ಕ್ಷಣದಲ್ಲಿ ತುಂಬಾ ಕಸಿವಿಸಿ.

ಮಾಡೆಲಿಂಗ್‌ ಜಗತ್ತಿನ ನನ್ನ ಮೊದಲ ಫೋಟೊ ಅದು. ಶೂಟ್‌ಗೆ ನಿಗದಿಯಾಗಿದ್ದ ಎರಡು ದಿನಗಳ ಮುಂಚೆ ಶಸ್ತ್ರ ಚಿಕಿತ್ಸೆ ಮೂಲಕ ಚರ್ಮವನ್ನು ಹದಗೊಳಿಸಿ ನನ್ನ ಬಾಹ್ಯರೂಪದಲ್ಲೂ ಮಾರ್ಪಾಡು ಮಾಡಲಾಗಿತ್ತು. ಈ ಬದಲಾವಣೆ ಕೃತಕ ಹಾಗೂ ಅಸ್ಥಿರ ಎನ್ನುವುದು ನನಗೆ ಚೆನ್ನಾಗಿ ಗೊತ್ತಿತ್ತು.

ಸೆಕ್ಸಿ ಗರ್ಲ್‌
ನಾನು ಶ್ವೇತವರ್ಣದ, ಮುದ್ದಾದ ಯುವತಿಯಾಗಿದ್ದರಿಂದ ನನಗೆ ಇಷ್ಟೆಲ್ಲ ಅವಕಾಶ ಸಿಕ್ಕಿತು ಎಂಬುದನ್ನು ನಾನು ಬಲ್ಲೆ. ಇಂತಹ ಲಕ್ಷಣ ಹೊಂದಿದ ಯುವತಿಯರಿಗೆ ನನ್ನ ಉದ್ಯಮದಲ್ಲಿ ‘ಸೆಕ್ಸಿ ಗರ್ಲ್‌’ ಎಂದು ಹೆಸರು. ‘ನೀವು ಮಾಡೆಲಿಂಗ್‌ ಜಗತ್ತಿಗೆ ಹೇಗೆ ಕಾಲಿಟ್ಟಿರಿ’ ಎಂಬ ಪ್ರಶ್ನೆ ನಾನು ಹೋದಲ್ಲೆಲ್ಲ ಎದುರಾಗಿದ್ದಿದೆ.

‘ಅನುವಂಶೀಯ (ಜಿನೆಟಿಕ್‌) ಲಾಟರಿ ಹೊಡೆದಿದ್ದರಿಂದ ನಾನು ಮಾಡೆಲ್‌ ಆದೆ. ಪೂರ್ವಾರ್ಜಿತವಾಗಿ ಬಂದ ಕಾಣಿಕೆ ಇದು’ ಎಂಬ ಉತ್ತರವನ್ನು ನಾನು ನೀಡಿದ್ದೇನೆ.

‘ಏನು, ಮಾಡೆಲಿಂಗ್‌ ಅವಕಾಶ ಕೂಡ ಪೂರ್ವಾರ್ಜಿತವಾಗಿ ಬಂದ ಕಾಣಿಕೆಯೇ’ ಎಂದು ಹುಬ್ಬೇರಿಸುತ್ತೀರಾ? ಹೌದು, ಮೂರ್ನಾಲ್ಕು ಶತಮಾನಗಳಿಂದ ಸೌಂದರ್ಯ ಪ್ರಜ್ಞೆಯನ್ನು ಜೈವಿಕವಾಗಿ ಬೆಳೆಸುತ್ತಾ ಬರಲಾಗಿದೆ. ಎತ್ತರ ಹಾಗೂ ಸಪೂರವಾದ ಮೈಮಾಟ ಹೊಂದಿರುವ ಶ್ವೇತವರ್ಣದ ಮಹಿಳೆಯರಲ್ಲಷ್ಟೇ ಸೌಂದರ್ಯ ಅಡಗಿರುತ್ತದೆ ಎಂಬ ಭಾವವನ್ನು ಆಗಿನಿಂದಲೂ ಬಿತ್ತಲಾಗಿದೆ. ಹಾಗೆ ಪೂರ್ವಾರ್ಜಿತವಾಗಿ ಬೆಳೆದುಬಂದ ಮನೋಭಾವವೇ ನಾನಿವತ್ತು ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚುವಂತೆ ಮಾಡಿದೆ. ಕೋಟ್ಯಂತರ ಡಾಲರ್‌ ನನ್ನತ್ತ ಹರಿದುಬರುವಂತೆ ಮಾಡಿದೆ.

ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಫ್ಯಾಷನ್‌ ಷೋ ಒಂದರಲ್ಲಿ ಪಾಲ್ಗೊಂಡಿದ್ದ ಮಾಡೆಲ್‌ಗಳನ್ನು ಎಣಿಕೆ ಮಾಡುತ್ತಾ ಕುಳಿತಿದ್ದ. ಒಟ್ಟು 677 ಯುವತಿಯರು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದರು. ಅದರಲ್ಲಿದ್ದ ಕೃಷ್ಣ ವರ್ಣಿಯರ ಸಂಖ್ಯೆ 27 ಮಾತ್ರ. ಹೇಗಿದೆ ನೋಡಿ, ಜಗತ್ತಿನ ಸೌಂದರ್ಯ ಪ್ರಜ್ಞೆ!

ಸೂತ್ರದ ಗೊಂಬೆಗಳು
‘ನಾನೂ ಮಾಡೆಲ್‌ ಆಗಬಹುದೇ’ ಎಂದು ಸಾವಿರಾರು ಹುಡುಗಿಯರು ನನ್ನನ್ನು ಪ್ರಶ್ನಿಸಿದ್ದಾರೆ. ‘ನನಗೆ ಗೊತ್ತಿಲ್ಲ. ಈ ಕೆಲಸದ ಉಸ್ತುವಾರಿಯನ್ನೇನು ಉದ್ಯಮದಲ್ಲಿ ಇದ್ದವರು ನನಗೆ ನೀಡಿಲ್ಲ’ ಎಂಬ ತಮಾಷೆಯ ಉತ್ತರ ನೀಡಿದ್ದೇನೆ. ಮರುಕ್ಷಣವೇ ‘ಯಾಕೆ ಸಾಧ್ಯವಿಲ್ಲ? ನೀವು ಬಯಸಿದರೆ ಏನು ಬೇಕಾದರೂ ಆಗಬಹುದು. ಅಮೆರಿಕದ ಅಧ್ಯಕ್ಷೆ, ಹೃದಯ ಕಸಿತಜ್ಞೆ, ಕವಿಯತ್ರಿ... ಏನೂ ಆಗಬಹುದು. ಅಂತೆಯೇ ಮಾಡೆಲ್‌ ಕೂಡ’ ಎಂದು ಸಮಾಧಾನ ಹೇಳಿದ್ದೇನೆ.

ಈ ಕ್ಷೇತ್ರದಲ್ಲಿ ಸೂತ್ರಧಾರರು ಬೇರೆಯೇ ಇದ್ದಾರೆ. ನಾವೆಲ್ಲ ಬರಿ ಪಾತ್ರಧಾರಿಗಳು. ಕ್ಯಾಮೆರಾ ಹಿಡಿದ ಛಾಯಾಗ್ರಾಹಕ, ಶೂಟ್‌ಗೆ ಪೂರಕವಾದ ಬೆಳಕು ಇಷ್ಟು ಇದ್ದರೆ ಮುಗಿಯಲಿಲ್ಲ.

‘ಕ್ಯಾಮೆರನ್‌, ನಮಗೆ ನಡಿಗೆ ಶಾಟ್‌ ಬೇಕು’ ಎನ್ನುವುದು ಕ್ಲೈಂಟ್‌ಗಳ ಬೇಡಿಕೆ. ಈ ಕಾಲು ಮುಂದೆ ಇಡಬೇಕು, ಆ ತೋಳು ಹಿಂದೆ ಹೋಗಬೇಕು... ಈ ಮುಂಗೈ ತುಸುವೇ ಮುಂದೆ ಬರಬೇಕು... ಇಂತಹ ಬೇಡಿಕೆಗಳಿಗೆ ಎಲ್ಲಿದೆ ಮಿತಿ? ಆಮೇಲೆ... ಕಾಲ್ಪನಿಕ ಗೆಳೆಯರತ್ತ ದೃಷ್ಟಿ ಹರಿಸಬೇಕು. ಹೌದು, ಈ ಸನ್ನಿವೇಶಗಳ ಪುನರಾವರ್ತನೆಗೆ ಲೆಕ್ಕವೇ ಇಲ್ಲ.

ನಿಮಗೆ ಗೊತ್ತೆ? ನಾನು ಬಿಕಿನಿ ತೊಟ್ಟು ಶೂಟ್‌ಗೆ ಅಣಿಯಾದಾಗ ನಾನಿನ್ನೂ ಋತುಮತಿ ಸಹ ಆಗಿರಲಿಲ್ಲ. ಅಷ್ಟೊಂದು ಚಿಕ್ಕವಳಾಗಿದ್ದೆ. ಸದ್ಯ ನೀವೆಲ್ಲ ನೋಡುತ್ತಿರುವ ಚಿತ್ರಗಳು ನೈಜವಾಗಿ ನನ್ನವಲ್ಲ. ಅವುಗಳೆಲ್ಲ ವೃತ್ತಿಪರ ತಂಡ ಒಟ್ಟಾಗಿ ವಿನ್ಯಾಸಗೊಳಿಸಿ ನಿರ್ಮಾಣ ಮಾಡಿದಂಥವು. ಹೇರ್‌ ಸ್ಟೈಲ್‌ ವಿನ್ಯಾಸಕಾರರು, ಮೇಕ್‌ಅಪ್‌ ಕಲಾವಿದರು, ಛಾಯಾಗ್ರಾಹಕರು, ಚಿತ್ರ ನಿರ್ಮಾಣದ ಪೂರ್ವ ಹಾಗೂ ನಂತರ ಅವುಗಳಿಗೆ ಅಂತಿಮ ಸ್ವರೂಪ ನೀಡುವ ಸಹಾಯಕ ತಂತ್ರಜ್ಞರು ಸೇರಿ ನಿರ್ಮಿಸಿದ ಫೋಟೊಗಳವು. ಹೀಗಾಗಿ ಅವುಗಳು ನನ್ನವಲ್ಲ.

ಅಭದ್ರತೆಯ ಭಾವ
ವೇದಿಕೆ ಮೇಲಿದ್ದಾಗ ‘ಈ ಪ್ರವಾಸ ಬೆರಗು ಮೂಡಿಸುವಂತಿತ್ತು. ಸೃಜನಶೀಲ, ಉತ್ಸಾಹಿ ಜನರೊಂದಿಗೆ ಕೆಲಸ ಮಾಡಿದ ಕ್ಷಣಗಳು ತುಂಬಾ ಖುಷಿ ನೀಡಿದವು’ ಎಂದು ನಾನು ಬಾರಿ ಬಾರಿ ಹೇಳುವುದುಂಟು. ಈ ಮಾತು ಅರ್ಧಸತ್ಯ. ಕ್ಯಾಮೆರಾ ಮುಂದೆ ನಾನು ಹೇಳಲಾಗದ ಮಾತೆಂದರೆ ‘ನನಗೆ ಅಭದ್ರತೆಯ ಭಾವ ಪ್ರತಿಕ್ಷಣವೂ ಬಲವಾಗಿ ಕಾಡುತ್ತಿದೆ’! ಈ ಅಭದ್ರತೆಯ ಭಾವ ಏಕೆಂದರೆ ನನ್ನ ದೇಹ ಇವತ್ತು ಯಾವ ರೀತಿ ಕಾಣಬೇಕಿದೆಯೋ ಎಂಬ ಯೋಚನೆ ಪ್ರತಿದಿನ ಕಾಡುತ್ತಲೇ ಇರುತ್ತದೆ.

‘ಹಾಗಾದರೆ ನಿಮ್ಮಂತಹ ಸಪೂರ ಮೈಮಾಟದವರನ್ನು ಬಿಡಿ, ದಪ್ಪ ತೊಡೆಗಳ, ಹೊಳೆಯುವ ಕೇಶರಾಶಿಯ ಮಾಡೆಲ್‌ಗಳು ಹೆಚ್ಚು ಸಂತೋಷಿಗಳು ಆಗಿರಬಹುದಲ್ಲವೇ’ ಎಂಬ ಪ್ರಶ್ನೆ ನಿಮ್ಮದಾಗಿದೆಯೇ? ಈ ಜಗತ್ತಿನಲ್ಲಿ ದೈಹಿಕವಾಗಿ ಅತ್ಯಂತ ಅಭದ್ರತೆಯ ಭಾವವನ್ನು ಅನುಭವಿಸುವವರು ಮಾಡೆಲ್‌ಗಳೇ ಎಂದು ಖಚಿತವಾಗಿ ಹೇಳಬಲ್ಲೆ. ಫೋಟೊ ಶೂಟ್‌ಗೆ ದೇಹ ಯಾವ ರೀತಿ ಬಳಕೆಯಾಗುವುದೋ ಎಂಬ ಆತಂಕ ಕಾಡುತ್ತಲೇ ಇರುತ್ತದೆ.

ಈ ಕ್ಷೇತ್ರದಿಂದ ಜೀವನದ ಸಕಲವನ್ನು ಪಡೆದೂ ಅದರಿಂದಲೇ ಅಭದ್ರತೆಯ ಭಾವದಿಂದ ಬಳಲುತ್ತಿರುವ ನಾನು ದ್ವಂದ್ವದಲ್ಲಿದ್ದೇನೆ. ಲಿಂಗ ಹಾಗೂ ಜನಾಂಗೀಯ ತಾರತಮ್ಯ ಪೋಷಿಸಿದ ಈ ಪೂರ್ವಾರ್ಜಿತ ಮನೋಭಾವದಿಂದಲೇ ಎಲ್ಲವನ್ನೂ ಪಡೆದಿರುವ ನನಗೆ ಅದರ ವಿರುದ್ಧ ತಾರಕ ಸ್ವರದಲ್ಲಿ ಧ್ವನಿ ಎತ್ತುವುದು ಕಠಿಣವಾಗಿದೆ. ಆದರೆ, ನಾನು ಮೌನ ವಹಿಸಲಾರೆ.

ತೆರೆಯ ಹಿಂದಿನ ನೋಟಗಳನ್ನು ಕಟ್ಟಿಕೊಡುತ್ತಲೇ ಸ್ವಗತ ರೂಪದಲ್ಲಿ ಜಗತ್ತಿನ ವಿಕಾರಗಳ ಕುರಿತು ಕ್ಯಾಮೆರನ್‌ ಅವರು ಆಡಿರುವ ಈ ಮಾತುಗಳು ತುಂಬಾ ದಿಟ್ಟವಾಗಿವೆ, ಅಲ್ಲವೆ?
*****
ಮೊದಲ ಸಲ ಕ್ಯಾಮೆರನ್‌ ಅವರು ಕ್ಯಾಮೆರಾ ಮುಂದೆ ನಿಂತಾಗ ಅವರಿಗೆ 16ರ ಪ್ರಾಯ. ಅವರ ಫೋಟೊ, ಫ್ಯಾಷನ್‌ ಮ್ಯಾಗಝಿನ್‌ವೊಂದರ ಮುಖಪುಟದಲ್ಲಿ ಪ್ರಕಟವಾಗಿತ್ತು. ಸ್ವತಃ ಮಳಿಗೆಗೆ ಹೋಗಿ ಆ ಮ್ಯಾಗಝಿನ್‌ ಖರೀದಿಸಿ ತಂದಿದ್ದ ಕ್ಯಾಮೆರನ್‌ಗೆ ಅದರಲ್ಲಿದ್ದ ಫೋಟೊ ತನ್ನದಲ್ಲ ಎನಿಸಿತ್ತಂತೆ.

ಅದಕ್ಕೆ ಅವರು ಕೊಡುವ ಕಾರಣ: ಮೇಕ್‌ಅಪ್‌ ಕಲಾವಿದರು, ವಿನ್ಯಾಸಕಾರರು, ತಂತ್ರಜ್ಞರು ತಮ್ಮ ನೈಜ ಸ್ವರೂಪಕ್ಕೆ ಭಿನ್ನವಾದಂತಹ ಫೋಟೊವನ್ನು ನಿರ್ಮಾಣ ಮಾಡಿದ್ದರಂತೆ. ಫ್ಯಾಷನ್‌ ಲೋಕದಿಂದ ನಿಮ್ಮ ಗಳಿಕೆ ಎಷ್ಟು ಎಂದು ಕೇಳಿದರೆ, ಅಮ್ಮನ ಗಳಿಕೆಗಿಂತಲೂ ಹೆಚ್ಚು ಎಂದು ಮಗುಮ್ಮಾಗಿ ಉತ್ತರಿಸುತ್ತಾರೆ.

‘ಪುರುಷರಿಗಿಂತ ಮಹಿಳೆಯರೇ ಹೆಚ್ಚು ಗಳಿಸುವ ಕೆಲವೇ ಕ್ಷೇತ್ರಗಳಲ್ಲಿ ಮಾಡೆಲಿಂಗ್‌ ಕೂಡ ಒಂದು. ನಾವಿಲ್ಲಿ ಒಂಥರ ಆಭರಣಗಳಿದ್ದಂತೆ’ ಎನ್ನುತ್ತಾರೆ ಅವರು.

ಎತ್ತರದ ಸಾಧನೆ
ಕ್ಯಾಮೆರನ್‌ ಅವರು ಸಿಎನ್‌ಎನ್‌ಗೆ ಸಂಪಾದಕೀಯ ಬರೆಯುವ ಗೌರವ ಗಿಟ್ಟಿಸಿದ್ದಾರೆ. ಇಂಗ್ಲೆಂಡ್‌ನ ‘ದಿ ಟೆಲಿಗ್ರಾಫ್‌’, ಅಮೆರಿಕದ ‘ದಿ ನ್ಯೂಯಾರ್ಕ್‌ ಟೈಮ್ಸ್‌’, ಫ್ರಾನ್ಸ್‌ನ ‘ವೋಗ್‌’ ಸೇರಿದಂತೆ ಜಗತ್ತಿನ ಪ್ರಮುಖ ಪತ್ರಿಕೆಗಳ ಮುಖಪುಟ ಅಲಂಕರಿಸಿದ್ದಾರೆ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಅಸಾಮಾನ್ಯ ಛಾಯಾಗ್ರಾಹಕರಾಗಿ ಹೆಸರು ಮಾಡಿದ ಸ್ಟೀವನ್‌ ಮಿಸೆಲ್‌, ಕ್ರೇಗ್‌ ಮ್ಯಾಕ್‌ಡೀನ್‌, ನಿಕ್‌ ನೈಟ್‌ ಅವರಂತಹ ಘಟಾನುಘಟಿಗಳ ಜತೆ ಕೆಲಸ ಮಾಡಿದ್ದಾರೆ. ಹವಾಮಾನ ವೈಪರೀತ್ಯ ತಡೆಯಲು ನಡೆದ ಆಂದೋಲನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಲಿಂಗ ತಾರತಮ್ಯದ ವಿರುದ್ಧ ದೊಡ್ಡದಾಗಿ ಧ್ವನಿ ಎತ್ತಿದ್ದಾರೆ. ‘ಮಾಡೆಲ್‌ ಮಾಫಿಯಾ’ ಎಂಬ ಸಂಘಟನೆ ಕಟ್ಟುವ ಮೂಲಕ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಇಷ್ಟೆಲ್ಲ ಸಾಧನೆ ಮಾಡಿರುವ ಕ್ಯಾಮೆರನ್‌ಗೆ ಈಗ ಕೇವಲ 30ರ ಪ್ರಾಯ. ವ್ಯವಸ್ಥೆಯ ಒಳಗಿದ್ದು ಅದರ ವಿರುದ್ಧವೇ ಧ್ವನಿ ಎತ್ತುವುದು ಸುಲಭದ ಮಾತಲ್ಲ. ಅಂತಹ ದಿಟ್ಟತನ ಮೆರೆದ ಕ್ಯಾಮೆರನ್‌ ವೇದಿಕೆಯಲ್ಲಿ ಮಾತ್ರವಲ್ಲದೆ ನೈಜ ಬದುಕಿನಲ್ಲೂ ಯುವ ಸಮುದಾಯದ ನೆಚ್ಚಿನ ‘ಮಾಡೆಲ್‌’
ಆಗಿ ಬೆಳೆದಿದ್ದಾರೆ!

ಅಧ್ಯಕ್ಷೆಯಾಗುವ ಕನಸು ಕಂಡ ಹುಡುಗಿ
ಕ್ಯಾಮೆರನ್‌ ರಸೆಲ್‌ ಜನಿಸಿದ್ದು ಅಮೆರಿಕದ ಬೋಸ್ಟನ್‌ನಲ್ಲಿ; ಓದಿದ್ದು ಕೇಂಬ್ರಿಜ್‌ನಲ್ಲಿ. ಅವರ ಅಮ್ಮ ರಾಬಿನ್‌ ಚೇಸ್‌ ಅಮೆರಿಕದಲ್ಲಿ ಬಲು ಜನಪ್ರಿಯವಾದ ಕಾರು ಪೂಲಿಂಗ್‌ ಕಂಪೆನಿ ಜಿಪ್‌ಕಾರ್‌ ಸ್ಥಾಪಕಿ. ಅಮ್ಮನಿಗಿಂತ ಎತ್ತರಕ್ಕೆ ಬೆಳೆದವರು ಈ ಮಾಡೆಲ್‌. ಸಣ್ಣ ವಯಸ್ಸಿನಲ್ಲೇ ಅವರಲ್ಲಿ ರಾಜಕೀಯ ಆಸಕ್ತಿ ಮೂಡಿತ್ತು. 1998ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಾಗ ಪ್ರಚಾರಕ್ಕಾಗಿ ಬಂದಿದ್ದ ಬಿಲ್‌ ಕ್ಲಿಂಟನ್‌ ಅವರಿಗೆ ಈ ಹುಡುಗಿಯನ್ನು ಪರಿಚಯಿಸಲಾಗಿತ್ತು.

‘ಓದನ್ನು ಮುಂದುವರಿಸುವ ಜತೆ ಜತೆಗೆ ಸಮಾಜದ ವಿವಿಧ ಸ್ತರದ ವ್ಯಕ್ತಿಗಳನ್ನು ಭೇಟಿಯಾಗುತ್ತಾ ಅವರ ಕನಸು ಮತ್ತು ಆಸೆಗಳ ಕುರಿತು ತಿಳಿದುಕೊ’ ಎಂದು ಆಕೆಗೆ ಕ್ಲಿಂಟನ್‌ ಸಲಹೆಯಿತ್ತರು. ಅರ್ಥಶಾಸ್ತ್ರ ಹಾಗೂ ರಾಜಕೀಯಶಾಸ್ತ್ರದಲ್ಲಿ ಪದವಿ ಪಡೆದಿರುವ ಕ್ಯಾಮೆರನ್‌, ‘ಫೋರ್ಡ್‌ ಮಾಡೆಲ್ಸ್‌’ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನ ಸ್ನೇಹಿತೆಯ ಸಹಾಯದಿಂದ ಮಾಡೆಲಿಂಗ್‌ ಜಗತ್ತಿಗೆ ಕಾಲಿಟ್ಟರು. ನಂತರ ಜಗತ್ತಿನ ಪ್ರಮುಖ ಬ್ರ್ಯಾಂಡ್‌ಗಳ ಕಂಪೆನಿಗಳೆಲ್ಲ ಮಾಡೆಲಿಂಗ್‌ಗಾಗಿ ಇವರ ಮನೆಯ ಮುಂದೆ ಸರದಿ ನಿಂತವು!

‘ನಾನು ಚಿಕ್ಕವಳಿದ್ದಾಗ ಅಮೆರಿಕ ಅಧ್ಯಕ್ಷೆಯಾಗಬೇಕು ಎನ್ನುವ ಕನಸು ಕಂಡಿದ್ದೆ. ಆದ್ದರಿಂದಲೇ ರಾಜಕೀಯದ ಬಗೆಗೆ ವಿಶೇಷ ಆಸಕ್ತಿ ಇತ್ತು. ಆದರೆ, ಅಕಸ್ಮಾತ್‌ ಆ ಹುದ್ದೆ ಅಪೇಕ್ಷಿಸಿ ಈಗೇನಾದರೂ ಹೋದರೆ ಕೊಡುವ ವ್ಯಕ್ತಿ ಪರಿಚಯದಲ್ಲಿ ‘ಹತ್ತು ವರ್ಷಗಳಿಂದ ಒಳ ಉಡುಪುಗಳ ರೂಪದರ್ಶಿ’ ಎಂದು ಬರೆಯಬೇಕಾಗುತ್ತದೆ. ಆಗ ಜನ ನನ್ನತ್ತ ಒಂದು ಹುಸಿನಗೆ ಬೀರುತ್ತಾರೆ’ ಎಂದು ಹೇಳುತ್ತಾರೆ.

‘ಫ್ಯಾಷನ್‌ ಒಂದು ಬಂಡವಾಳಶಾಹಿ ವ್ಯವಸ್ಥೆ. ಮಾರುಕಟ್ಟೆಯ ಬೇಡಿಕೆ ಏನಿರಬೇಕು ಎಂಬುದನ್ನು ನಿರ್ಧರಿಸುವುದೇ ಈ ವ್ಯವಸ್ಥೆ’ ಎಂದು ತಮ್ಮ ವೃತ್ತಿ ಬದುಕಿಗೆ ನೆರವಾದ ಫ್ಯಾಷನ್‌ ಲೋಕವನ್ನು ನಿಷ್ಠುರವಾಗಿ ವಿಮರ್ಶಿಸುತ್ತಾರೆ. ‘ಒಂದೊಮ್ಮೆ ನೀವು ಮಾಡೆಲ್‌ ಆಗಿಬಿಟ್ಟರೆ ಲಕ್ಷಾಂತರ ಕಣ್ಣುಗಳು ನಿಮ್ಮತ್ತ ನೆಟ್ಟಿರುತ್ತವೆ. ಡಾಲರ್‌ಗಳ ಹೊಳೆಯೇನೋ ಹರಿದುಬರುತ್ತದೆ ನಿಜ. ಆದರೆ, ಕ್ಲೈಂಟ್‌ಗಳ ಅಗತ್ಯಕ್ಕೆ ತಕ್ಕಂತೆ ಪ್ರತಿದಿನ ಕುಣಿಯಬೇಕು, ದಣಿಯಬೇಕು’ ಎಂದು ವಾಸ್ತವವನ್ನು ತೆರೆದಿಡುತ್ತಾರೆ.

****
ಅನುವಂಶೀಯ (ಜಿನೆಟಿಕ್‌) ಲಾಟರಿ ಹೊಡೆದಿದ್ದರಿಂದ ನಾನು ಮಾಡೆಲ್‌ ಆದೆ. ಪೂರ್ವಾರ್ಜಿತವಾಗಿ ಸಿಕ್ಕ ಕಾಣಿಕೆ ಇದು. ಎತ್ತರ ಹಾಗೂ ಸಪೂರ ಮೈಮಾಟದ ಬಿಳಿಚರ್ಮದ ಮಹಿಳೆಯರಲ್ಲಷ್ಟೇ ಸೌಂದರ್ಯ ಅಡಗಿದೆ ಎಂಬ ಭಾವವನ್ನು ಹಿಂದಿನಿಂದಲೂ ಬಿತ್ತುತ್ತಾ ಬರಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT