ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆವ್ವ ಭೂತ ಪ್ರೇತಗಳ ಕಥೆ

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ನಾನು ಅಜ್ಜ ಅಜ್ಜಿಯರನ್ನು ನೋಡಿಯೂ ಇಲ್ಲ, ಅವರ ಕಥೆಗಳನ್ನು ಕೇಳಿಯೂ ಇಲ್ಲ. ನಾನು ಹುಟ್ಟುವಷ್ಟರಲ್ಲೇ ಅವರು ತೀರಿಕೊಂಡಿದ್ದರು. ನಾನು ಚಿಕ್ಕ ಹುಡುಗನಾಗಿದ್ದಾಗ ಕಥೆ ಕೇಳುತ್ತಿದ್ದುದು ತೋಟದ ನೌಕರನೊಬ್ಬನಿಂದ. ಆಗ ನಾವು ಒಂಟಿ ಮನೆಯಲ್ಲಿ ವಾಸವಾಗಿದ್ದೆವು. ಅಕ್ಕಪಕ್ಕ ಯಾವ ಮನೆಯೂ ಇರಲಿಲ್ಲ, ಹತ್ತಿರದಲ್ಲಿ ಯಾರೂ ಇರಲಿಲ್ಲ.

ನಮ್ಮ ಮನೆ ಸುತ್ತಮುತ್ತ ಮರ ಗಿಡಗಳೇ ಯಥೇಚ್ಚವಾಗಿ ಬೆಳೆದಿದ್ದವು. ನಮ್ಮ ಮನೆಯ ಎದುರುಗಡೆ ತೋಟಗಾರಿಕೆ ಇಲಾಖೆಗೆ ಸೇರಿದ ಒಂದು ಹೆಂಚಿನ ಮನೆ ಇತ್ತು. ಅದರಲ್ಲಿ ತೋಟಗಾರಿಕೆ ಇಲಾಖೆಯ ಸಲಕರಣೆಗಳನ್ನು ಇಡುತ್ತಿದ್ದರು. ಅದನ್ನು ನೋಡಿಕೊಳ್ಳಲು ಇಲಾಖೆಯ ಒಬ್ಬ ನೌಕರನಿದ್ದ. ಅವನ ಹೆಸರು ಕುಂಟುರಂಗಪ್ಪ.

ಪ್ರತಿ ದಿನ ಮಧ್ಯಾಹ್ನ 12.30 ಗಂಟೆಗೆ ಐದಾರು ನೌಕರರು ಅಲ್ಲಿ ಊಟ ಮಾಡಲು ಬರುತ್ತಿದ್ದರು. ಬಿಡುವಿನ ಸಮಯದಲ್ಲಿ ಕುಂಟುರಂಗಪ್ಪ ಅವರನ್ನು ಕೂರಿಸಿ ಕಥೆಗಳನ್ನು ಹೇಳುತ್ತಿದ್ದ. ಕಥೆ ಹೇಳುವುದರಲ್ಲಿ ಅವನು ನಿಸ್ಸೀಮ. ಅವನು ಬಾಯಿ ತೆರೆದರೆ ಬತ್ತಳಿಕೆಯಿಂದ ಕಥೆಗಳು ಪುಂಖಾನುಪುಂಖವಾಗಿ ಹೊರಬರುತ್ತಿದ್ದವು. ಕುತೂಹಲಕರವಾಗಿ ಕಥೆ ಹೇಳುವ ಕಲೆ ಅವನಿಗೆ ಕರಗತವಾಗಿತ್ತು. ಅವನು ಹೇಳುತ್ತಿದ್ದ ಕಟ್ಟುಕಥೆಗಳು ಅತ್ಯಂತ ಭಯಂಕರವಾಗಿರುತ್ತಿದ್ದವು.

ಯಾರಾದರೂ ತುಸು ಅಂಜುಬುರುಕರಾಗಿದ್ದರೆ, ಅಂಥವರು ರಾತ್ರಿ ಹೊತ್ತೇನು, ಹಗಲಿನಲ್ಲೇ ಮೂತ್ರ ಮಾಡಿಕೊಳ್ಳಬೇಕಿತ್ತು. ಅಲ್ಲಿ ಅವನ ಮುಂದೆ ಕುಳಿತು ಕಥೆ ಕೇಳುತ್ತಿದ್ದವರ ಪೈಕಿ ನಾನೊಬ್ಬನೇ ಚಿಕ್ಕ ಹುಡುಗ. ನನಗೆ ಆಗ ವಯಸ್ಸು ಏಳು. ಮಿಕ್ಕವರೆಲ್ಲರೂ ಮೀಸೆ ಮೊಳೆತ ಪ್ರೌಢಸ್ಥರೇ. ಅವರೇ ಅಷ್ಟು ಆಸಕ್ತಿಯಿಂದ ಕಥೆ ಕೇಳುತ್ತಿದ್ದರೆ, ಇನ್ನೂ ಚಿಕ್ಕ ಹುಡುಗನಾಗಿದ್ದ ನನಗೆ ಆಗ ಕಥೆ ಕೇಳಲು ಇನ್ನೆಷ್ಟು ಆಸಕ್ತಿ, ಕುತೂಹಲ ಇದ್ದಿರಬಹುದು? ಅವನು ಹೆಚ್ಚಾಗಿ ಹೇಳುತ್ತಿದ್ದುದು ದೆವ್ವ ಭೂತಗಳ ಕಥೆಗಳೇ.

ದೆವ್ವ ಭೂತಗಳು ಕಣ್ಣುಂಡೆಗಳನ್ನು ತಿರುಗಿಸುತ್ತಾ, ರಕ್ತ ಕಾರುತ್ತ ವಿಕಾರವಾಗಿ ಬರುವ ರಕ್ತೇಶ್ವರಿ ಕಥೆ, ಕೆಂಡದ ಮಳೆಯನ್ನೇ ಸುರಿಸುವ ಕೆಂಡ ಚಂಡಿಯ ಕಥೆಗಳು, ಮನುಷ್ಯನ ರೂಪದಲ್ಲಿಯೇ ನಮ್ಮೊಂದಿಗಿದ್ದು ಸಮಯ ಸಿಕ್ಕಾಗ ಗೋಣು ಮುರಿದು ರಕ್ತ ಕುಡಿಯುವ ರಕ್ತ ಪಿಪಾಸುಗಳು, ಗಂಡನಿಗೆ ಅಡುಗೆ ಮಾಡಲು ಕಟ್ಟಿಗೆಗೆ ಬದಲಾಗಿ ಕಾಲುಗಳನ್ನು ಇಟ್ಟು ಬೆಂಕಿ ಉರಿಸಿ ಅಡಿಗೆ ಮಾಡಿ ಬಡಿಸುವ ಮೋಹಿನಿ, ಕುದಿಯುವ ಮಡಿಕೆಯಲ್ಲಿ ಕೈಹಾಕುವ ಸ್ತ್ರೀರೂಪದ ಪಿಶಾಚಿ, ಮುಂತಾದ ಭಯಾನಕ ಕಥೆಗಳನ್ನು ಕೇಳುತ್ತಿದ್ದವರು ಬೆಚ್ಚಿ ಬೀಳುತ್ತಿದ್ದರು. ಅವನು ಹೇಳುತ್ತಿದ್ದ ಕಥೆಗಳನ್ನು ನಾನು ಕಣ್ಣೆವೆ ಇಕ್ಕದೆ, ಬಾಯಿ ಬಿಟ್ಟುಕೊಂಡು ಉಸಿರು ಬಿಗಿ ಹಿಡಿದು ಕೇಳುತ್ತಿದ್ದೆ. ಅವನು ಹೇಳುತ್ತಿದ್ದ ದೆವ್ವ ಭೂತದ ಕಥೆಗಳು ಕ್ಷಣಕ್ಷಣಕ್ಕೂ ಒಂದೊಂದು ತಿರುವು ಪಡೆದುಕೊಳ್ಳುತ್ತಿದ್ದವು.

ಅಮಾವಾಸ್ಯೆಯ ದಿನಗಳಲ್ಲಿ ದೆವ್ವಗಳೆಲ್ಲ ಬಿಳಿ ಸೀರೆ ಉಟ್ಟು ಅವುಗಳ ಆವಾಸಸ್ಥಾನವಾದ ಹುಣಸೇ ಮರದ ಕೆಳಗೆ ಆನಂದದಿಂದ ರುದ್ರ ನರ್ತನ ಮಾಡುತ್ತವಂತೆ. ಅಂದು ಪುಕ್ಕಲರು ಯಾರಾದರೂ ಮನೆಯಲ್ಲಿ ಮಾಂಸ ಬುಜಿಸಿ ಅತ್ತ ಹೊರಟರೆ, ದೆವ್ವಗಳು ಅವರ ಮೇಲೆ ಆಕ್ರಮಣ ಮಾಡಿ ಅವರನ್ನು ಆಹುತಿ ತೆಗೆದುಕೊಳ್ಳುತ್ತವಂತೆ. ಸತ್ತ ಮೇಲೆ ಅವರೂ ದೆವ್ವಗಳಾಗಿ ಬಿಡುತ್ತಾರಂತೆ ಎಂದು ಅವನು ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಿದ್ದಂತೆ ನಾನು ಭಯಭೀತನಾಗುತ್ತಿದ್ದೆ.

ಮೈ ರೋಮಗಳು ಸೆಟೆದು ನಿಲ್ಲುತ್ತಿದ್ದವು. ಅವನ ಭಯಾನಕ ಕಥೆಗಳು ನನ್ನ ಹರೆಯದ ಮನಸ್ಸಿನ ಮೇಲೆ ಭಾರಿ ಅಡ್ಡ ಪರಿಣಾಮವನ್ನೇ ಉಂಟುಮಾಡಿತು. ನಾನು ಒಬ್ಬನೇ ಮನೆಯಲ್ಲಿರಲು ಭಯಪಡುತ್ತಿದ್ದೆ. ಕತ್ತಲಾದ ಮೇಲೆ ಹೊರಗೆ ಹೋಗುತ್ತಿರಲಿಲ್ಲ. ಸದಾ ದೀಪದ ಮುಂದೆಯೇ ಕುಳಿತಿರುತ್ತಿದ್ದೆ. ತಲೆ ನೆಲಕ್ಕೆ ಕೊಟ್ಟರೆ, ಬೆಚ್ಚಿ ಬೀಳಿಸುವಂಥ ಭಯಂಕರ ಕನಸುಗಳು ಬೀಳುತ್ತಿದ್ದವು.

ಇಡೀ ರಾತ್ರಿ ಹಾಸಿಗೆಯಲ್ಲಿ ಒದ್ದಾಡುತ್ತ ಕಾಲ ಕಳೆಯುತ್ತಿದ್ದೆ. ಜೊತೆಗೆ ನಮ್ಮ ಮನೆ ಆಸುಪಾಸಿನ ಪರಿಸರವೂ ಅದಕ್ಕೆ ಪೂರಕವಾಗಿತ್ತು. ನಾನು ಅತ್ಯಂತ ಪುಕ್ಕಲು ಸ್ವಭಾವದ ಹುಡುಗನಾಗಿಯೇ ಬೆಳೆದೆ. ಆದರೆ ಹೈಸ್ಕೂಲಿಗೆ ಹೋದ ಮೇಲೆಯೇ ಆ ಭಯ ನನ್ನನ್ನು ಬಿಟ್ಟು ಹೋಗಿದ್ದು, ನಾನು ಎಲ್ಲರಂತೆ ಸಹಜ ಸ್ಥಿತಿಗೆ ಮರಳಿದ್ದು. ಅಷ್ಟು ಭಯಭೀತಗೊಳಿಸಿದ್ದವು ಅವನ ಕಥೆಗಳು.

–ಎಲ್.ಚಿನ್ನಪ್ಪ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT