ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತನ ಕಥೆಯಲ್ಲಿ ಮರೆಯದ ರಸದೌತಣ

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ಆ ಬಾಲ್ಯದ ಸುಂದರ ದಿನಗಳು ನನಗಿನ್ನೂ ಚೆನ್ನಾಗಿ ನೆನಪಿವೆ. ನಮ್ಮ ತಾತ ಸುಬ್ಬರಾಯರು ಕಥೆಗಳನ್ನು ಹೇಳುವುದರಲ್ಲಿ ಹೆಸರುವಾಸಿ. ಅವರು ಶಾಲೆಯೊಂದರಲ್ಲಿ ಕನ್ನಡ ಪಂಡಿತರೂ ಆಗಿದ್ದುದರಿಂದ ಬಹಳ ಸ್ವಾರಸ್ಯಕರವಾಗಿ ಮನಮುಟ್ಟುವಂತೆ ಕಥೆಗಳನ್ನು ನಿರೂಪಿಸುತ್ತಿದ್ದರು.

ರಾತ್ರಿ ಊಟ ಮುಗಿದೊಡನೆ ನಾನು, ನನ್ನ ಅಣ್ಣ ಮತ್ತು ತಂಗಿ ಕಥೆ ಕೇಳಲು ಅವರ ಬಳಿಗೆ ಬರುತ್ತಿದ್ದೆವು. ನಮಗಾಗಿ ದಿನವೂ ಹೊಸ ಹೊಸ ಕಥೆಗಳನ್ನೇ ಹೇಳುತ್ತಿದ್ದರು ಅವರು. ಲೆಕ್ಕವಿಲ್ಲದಷ್ಟು ಕಥೆಗಳನ್ನು ಅವರಿಂದ ಕೇಳಿದ್ದೇವೆ. ಅವರು ಕಥೆಗಳನ್ನು ವರ್ಣಿಸಿ ಹೇಳುತ್ತಿದ್ದರೆ ಸಿನಿಮಾ ನೋಡಿದಂತೆಯೇ ಅನಿಸುತ್ತಿತ್ತು. ಇಂದಿಗೂ ಆ ಕಥೆಗಳನ್ನು ನಾನು ಮರೆತಿಲ್ಲ.

ರಾಮಾಯಣ, ಮಹಾಭಾರತದ ಕಥೆಗಳನ್ನು ಹಲವಾರು ಉಪಕಥೆಗಳೊಂದಿಗೆ ಹೇಳುತ್ತಿದ್ದ ಅವರ ರೀತಿ ನಿಜಕ್ಕೂ ಆಶ್ಚರ್ಯಕರ. ಹಾಗಾಗಿ ಇಂದಿಗೂ ನನ್ನ ಮನಸ್ಸಿನಲ್ಲಿ ರಾಮಾಯಣ, ಮಹಾಭಾರತದ ವಿವರವಾದ ಕಥೆಗಳು ಬೇರೂರಿವೆ. ಇಷ್ಟೇ ಅಲ್ಲ, ವಿಷ್ಣು ಶರ್ಮರ, ಪಂಚತಂತ್ರ, ಅಕ್ಬರ್‌ ಬೀರಬಲ್‌, ತೆನಾಲಿರಾಮ ಮುಂತಾದ ಕಥೆಗಳು ಕೂಡ ಅವರ ಬತ್ತಳಿಕೆಯಲ್ಲಿದ್ದವು. ಅವರಿಂದ ಕೇಳಿದ ಮುಖ್ಯ ಕಥೆಗಳಲ್ಲಿ ನನ್ನ ಮನಸಿನಲ್ಲಿ ಬಹಳ ಆಸಕ್ತಿ ಮೂಡಿಸಿದ ಕಥೆಗಳೆಂದರೆ, ಭಕ್ತಧ್ರುವ ಹಾಗೂ ಉತ್ತರ ಕುಮಾರನ ಕಥೆಗಳು.

ರಾಜಕುಮಾರ ಧ್ರುವ ತಂದೆಯ ಪ್ರೀತಿಗಾಗಿ ಹಂಬಲಿಸಿದ್ದು, ಮಲತಾಯಿಯ ತಾತ್ಸಾರ, ಇದನ್ನು ಮೆಟ್ಟಿನಿಲ್ಲಲು ಆರಿಸಿಕೊಂಡ ಅತಿಕ್ಲಿಷ್ಟಕರ ತಪಸ್ಸಿನ ದಾರಿ, ಆ ಚಿಕ್ಕ ವಯಸ್ಸಿನಲ್ಲಿ ಉಗ್ರ ತಪಸ್ಸಿನಿಂದಾಗಿ ಶ್ರೀಮನ್ನಾರಾಯಣನನ್ನು ಒಲಿಸಿಕೊಂಡ ರೀತಿ ಇವೆಲ್ಲವೂ ಆಗ ಬಹಳ ಚಿಕ್ಕವಳಾಗಿದ್ದ ನನ್ನನ್ನು ಬಹಳ ಸೆಳೆದಿತ್ತು. ಇದೇ ರೀತಿ ವಿರಾಟರಾಯನ ಪುತ್ರ ಉತ್ತರ ಕುಮಾರನ ಕಥೆಯು ಬಹಳ ಆಕರ್ಷಕವೆನಿಸಿತ್ತು. ಅವನು ಅಂತಃಪುರದಲ್ಲಿ ಬಡಾಯಿ ಕೊಚ್ಚಿಕೊಂಡು ನಂತರ ರಣರಂಗಕ್ಕೆ ಹೋದಾಗ, ಅಂಜಿ ರಥವನ್ನಿಳಿದು ಹೆದರಿ ಓಡಿಬಂದ ಪ್ರಸಂಗ ನಗೆ ತರಿಸುವಂತಿತ್ತು.

ಇದಕ್ಕೆ ಕಾಕತಾಳೀಯವೆಂಬಂತೆ, ನಾನು ಮುಂದೆ ಹೈಸ್ಕೂಲ್‌ ಓದುವಾಗ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ನನ್ನ ನೆಚ್ಚಿನ ಉಪಾಧ್ಯಾಯರು ನನ್ನಿಂದಲೇ ಭಕ್ತಧ್ರುವ ಹಾಗೂ ಉತ್ತರ ಭೂಪ ನಾಟಕಗಳನ್ನು ಆಡಿಸಿದ್ದರು. ನನ್ನ ಅದೃಷ್ಟದಿಂದಾಗಿ ನನ್ನ ನೆಚ್ಚಿನ ಪಾತ್ರಗಳಾದ, ಧ್ರುವ ಹಾಗೂ ಉತ್ತರ ಕುಮಾರನ ಪಾತ್ರಗಳಲ್ಲಿ ನಾನೇ ಅಭಿನಯಿಸಿದ್ದು ನನಗೆ ಬಹಳ ಸಂತೋಷ ತಂದಿತ್ತು.

ಹೀಗೆ ನಾನು ಕೇಳಿದ, ಚಿಕ್ಕಂದಿನಲ್ಲಿ ಅಜ್ಜನಿಂದ ಆಲಿಸಿದ್ದ ಎಷ್ಟೋ ಕಥೆಗಳು ನನ್ನ ಜೀವನದ ಹಾದಿಯಲ್ಲಿ ದಾರಿದೀಪವಾಗಿದ್ದು ಬಾಳಿನಲ್ಲಿ ಬೆಳಕು ಮೂಡಿಸಿವೆ.
–ರಾಧಾ ಬಾಲಕೃಷ್ಣ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT