ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸು ರಾತ್ರೋ ರಾತ್ರಿ ಬರುವಂತಹದಲ್ಲ

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ನಮ್ರತಾ ಜೈನ್
‘ಅದು ನಕ್ಸಲ್ ಪೀಡಿತ ಪ್ರದೇಶ. ತಿಂಗಳಲ್ಲಿ ಐದಾರು ಬಾರಿಯಾದರೂ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಇಲ್ಲಿ ವಾಸಿಸುವವರು ಯಾವಾಗಲೂ ಜೀವ ಭಯದಲ್ಲೇ ಬದುಕಬೇಕು. ಮನೆಗೆ ಯಾರಾದರೂ ಹೊಸಬರು ಬಂದರೆ ಪೊಲೀಸರು ಗುಮಾನಿ ಪಡುತ್ತಾರೆ. ಹಾಗೇ ಮನೆಗಳಿಗೆ ಪೊಲೀಸರು ಬಂದು ಹೋದರೆ ನಕ್ಸಲರು ಗುಮಾನಿ ಪಡುತ್ತಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿನ ಬದುಕು ನಮ್ಮದು. ನಕ್ಸಲ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ನಾನು ಕೇಂದ್ರದ ನಾಗರಿಕ ಸೇವಾ ಪರೀಕ್ಷೆಗೆ ಕುಳಿತೆ’ ಎಂದು ನಮ್ರತಾ ಜೈನ್ ಹೇಳುತ್ತಾರೆ.

ನಮ್ರತಾ, ದಂತೇವಾಡ ಜಿಲ್ಲೆಯ ಬಸ್ತಾರ್‌ನವರು. ಈ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 99ನೇ ರ್‍ಯಾಂಕ್‌ ಪಡೆದಿದ್ದಾರೆ. ನಕ್ಸಲ್ ಪೀಡಿತ ಬಸ್ತಾರ್ ಪ್ರಾಂತ್ಯದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಅವರದ್ದು. ದಂತೇವಾಡದ ಜಿಲ್ಲಾಧಿಕಾರಿಯಾಗಬೇಕೆಂಬ ಅವರ ಕನಸು ಬಹುತೇಕ ಕೈಗೂಡಿದಂತೆ!. ಬಸ್ತಾರ್ ಹಾಗೂ ದಂತೇವಾಡದಲ್ಲಿ ಕಾಲೇಜು ಶಿಕ್ಷಣ ಮುಗಿಸಿ ನಮ್ರತಾ ದೆಹಲಿಯಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದರು.

ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಲು ಇಷ್ಟಪಡದ ಇವರು ಒಂದು ವರ್ಷ ಬಸ್ತಾರ್‌ನಲ್ಲೇ ಕಾಲಕಳೆದರು. ಈ ವೇಳೆ ಅವರಿಗೆ ತಲೆ ನೋವಾಗಿದ್ದು ನಕ್ಸಲ್–ಪೊಲೀಸರ ನಡುವಿನ ಸಂಘರ್ಷ! ನಕ್ಸಲ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದು ಇವರು ಯೋಚಿಸತೊಡಗಿದರು. ಆಗ ಗರಿಗೆದರಿದ್ದು ಜಿಲ್ಲಾಧಿಕಾರಿಯಾಗಬೇಕು ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಬೇಕು ಎಂಬ ಕನಸು. ಮೂರು ವರ್ಷಗಳ ಸತತ ಪ್ರಯತ್ನದಿಂದ ಆ ಕನಸನ್ನು ನನಸು ಮಾಡಿಕೊಂಡರು.

‘ನಿಮ್ಮ ಮೇಲೆ ನೀವು ನಂಬಿಕೆ ಇಟ್ಟರೆ ಯಶಸ್ಸಿನ ಅರ್ಧ ಮೆಟ್ಟಿಲು ಹತ್ತಿದಂತೆ. ಆತ್ಮವಿಶ್ವಾಸದಿಂದ, ಶ್ರಮಪಟ್ಟು ಓದಿದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು’ ಎಂದು ಪರೀಕ್ಷೆ ಬರೆಯುವ ಆಕಾಂಕ್ಷಿ ಗಳಿಗೆ ಕಿವಿ ಮಾತು ಹೇಳುತ್ತಾರೆ.

***
ಅಂಕಿತ್ ಕವಾತ್ರ
ಮನೆಗಳಲ್ಲಿ, ಕ್ಯಾಂಟೀನ್‌ಗಳಲ್ಲಿ, ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಅದನ್ನು ಹಸಿದವರಿಗೆ ನೀಡುವ ಕಾಯಕದಲ್ಲಿ ನಿರತರಾಗಿರುವ ದೆಹಲಿಯ ಅಂಕಿತ್ ಕವಾತ್ರ ಅವರ ಕಥೆ ಇದು.

2014ರಲ್ಲಿ ವಿಶ್ವಸಂಸ್ಥೆ ಒಂದು ವರದಿಯನ್ನು ಪ್ರಕಟಿಸುತ್ತದೆ. ಭಾರತದಲ್ಲಿ ಪ್ರತಿ ದಿನ ಶೇ 30ರಷ್ಟು ಆಹಾರ ಮಣ್ಣುಪಾಲಾಗುತ್ತಿದ್ದರೆ, ಶೇ 35ರಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬ ವರದಿ ಅದು. ಇದನ್ನು ಓದಿದ ಕೆಲವೇ ದಿನಗಳಲ್ಲಿ ಅಂಕಿತ್ ಮನೆ ಮನೆಗಳಿಗೆ ಹೋಗಿ, ಉಳಿದ ಆಹಾರ ಸಂಗ್ರಹಿಸಿ ಅದನ್ನು ಹಸಿದವರಿಗೆ ನೀಡುತ್ತಾರೆ. ಈ ಕಾರ್ಯಕ್ಕೆ ಗೆಳೆಯರು ಕೂಡ ಸಾಥ್ ಕೊಡುತ್ತಾರೆ. ಮುಂದೆ ಫೀಡಿಂಗ್ ಇಂಡಿಯಾ ಎಂಬ ಲಾಭರಹಿತ ಸ್ವಯಂ ಸೇವಾ ಸಂಸ್ಥೆಯನ್ನು ಅಂಕಿತ್ ಕಟ್ಟುತ್ತಾರೆ.

ಇಂದು ಫೀಡಿಂಗ್ ಇಂಡಿಯಾ ಸಂಸ್ಥೆ ದೊಡ್ಡದಾಗಿ ಬೆಳೆದಿದೆ. ದೇಶದ 43 ನಗರಗಳಲ್ಲಿ ಕೆಲಸ ಮಾಡುತ್ತಿದ್ದು, 4500ಕ್ಕೂ ಹೆಚ್ಚು ಕಾರ್ಯಕರ್ತರು ಉಳಿದ ಆಹಾರವನ್ನು ಸಂಗ್ರಹಿಸಿ ಹಸಿದವರಿಗೆ ನೀಡುತ್ತಿದ್ದಾರೆ. ಅಂಕಿತ್ ಅವರ ಈ ಸಮಾಜಮುಖಿ ಸೇವೆಯನ್ನು ಮೆಚ್ಚಿ ಬ್ರಿಟನ್ ರಾಣಿ ಅಂಕಿತ್‌ಗೆ ರಾಯಲ್ ಗೌರವ ಪ್ರಶಸ್ತಿ ನೀಡುತ್ತಿದ್ದಾರೆ. ಇದೇ ಜೂನ್ 29ರಂದು ಅಂಕಿತ್ ಲಂಡನ್‌ನಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಎಂಜಿನಿಯರಿಂಗ್ ಪದವಿ ಪಡೆದಿರುವ ಅಂಕಿತ್, ಯಾವ ಪ್ರತಿಫಲಾಪೇಕ್ಷೆ ಇಲ್ಲದೇ 24ನೇ ವರ್ಷಕ್ಕೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ದೆಹಲಿಯಲ್ಲಿ ಕಾರ್ಯಕರ್ತರ ಜತೆಯಲ್ಲಿ ಆಹಾರ ಸಂಗ್ರಹಿಸುವ ಅಂಕಿತ್, ಕೊಳೆಗೇರಿಗಳು ಮತ್ತು ಬಡವರು ವಾಸ ಮಾಡುವಂತಹ ಪ್ರದೇಶಗಳಿಗೆ ಹೋಗಿ ಆಹಾರವನ್ನು ಹಂಚುತ್ತಾರೆ. ಪಾರ್ಕ್‌ಗಳು, ಮಸೀದಿ, ದೇವಾಲಯ, ಚರ್ಚ್‌ಗಳು, ಗಲ್ಲಿಗಳು, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿರುವ ಭಿಕ್ಷುಕರು, ಅಂಗವಿಕಲರು, ಅಂಧರು, ಬುದ್ಧಿಮಾಂದ್ಯರಿಗೆ ಮೊದಲ ಆದ್ಯತೆಯಾಗಿ ಆಹಾರ ನೀಡುತ್ತಾರೆ. ಈ ಕಿರಿಯ ವಯಸ್ಸಿಗೆ ಅವರ ಹಿರಿದಾದ ಸಾಧನೆ ಹೆಮ್ಮೆಯ ವಿಚಾರವೇ ಸರಿ.
www.feedingindia.org
***

ಅದಿತಿ ಗುಪ್ತಾ
ನಾನು ಅದಿತಿ ಗುಪ್ತಾ. ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಇಲ್ಲಿನ ಸೋಫಿಯಾ ಕಾಲೇಜಿನಲ್ಲಿ ಪದವಿ ಪಡೆದು ಬ್ರಿಟನ್‌ನ ಬರ್ಮಿಂಗ್‌ ಹ್ಯಾಮ್‌ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಉನ್ನತ ವ್ಯಾಸಂಗ ಪೂರೈಸಿ ಮುಂಬೈಗೆ ಮರಳಿದೆ. ಒಂದೆರಡು ತಿಂಗಳಲ್ಲಿ ಐಟಿಸಿ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ದೊರೆಯಿತು. ಒಂದು ವರ್ಷ ಅಲ್ಲಿ ಕೆಲಸ ಮಾಡಿದೆ.

ಈ ಕ್ಷೇತ್ರದಲ್ಲಿ ನಾನು ಸಾಧನೆ ಮಾಡುವಂತಹದ್ದು ಏನೂ ಇಲ್ಲ ಎಂದು ಅನಿಸಿತು. ಕೂಡಲೇ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆ ಸೇರಿದೆ. ಬಳಿಕ ಅಪ್ಪ ನಡೆಸುತ್ತಿದ್ದ ಶಿಶು ಕೇಂದ್ರವನ್ನು ನೋಡಿಕೊಳ್ಳತೊಡಗಿದೆ. ಎರಡು ವರ್ಷ ಪುಟಾಣಿ ಮಕ್ಕಳೊಂದಿಗೆ ಹರಟುವುದು ಮತ್ತು ಅಡುಗೆ ಮಾಡಿಕೊಂಡು ತಿನ್ನುವುದರಲ್ಲೇ ಕಾಲ ಕಳೆದೆ. ಸಾಕಷ್ಟು ಬಿಡುವು ಇರುತ್ತಿದ್ದರಿಂದ ಪಾಕಶಾಸ್ತ್ರದ ಎಲ್ಲಾ ಪುಸ್ತಕಗಳನ್ನು ಓದಿ ಜೀರ್ಣಿಸಿಕೊಂಡು ಮನೆಯಲ್ಲಿ ಅಡುಗೆ ಪ್ರಯೋಗ ಮಾಡುತ್ತಿದ್ದೆ. ಈ ವೇಳೆ ನನ್ನ ಮದುವೆಯೂ ಆಯಿತು.

ಅದ್ಯಾಕೋ ಸಾಂಸಾರಿಕ ಜೀವನ, ಆ ಶಿಶು ಕೇಂದ್ರ ಬೇಸರ ಎನಿಸತೊಡಗಿತು. ಏನಾದರೂ ಮಾಡಬೇಕು, ಸದಾ ಚಟುವಟಿಕೆಯಿಂದ ಇರಬೇಕು ಎಂಬ ಭಾವನೆ ಒತ್ತಾಸೆಯಿಂದ ಮೂಡಿಬರುತ್ತಿತ್ತು. ಈ ಗೊಂದಲದಲ್ಲಿ ಹೊಳೆದ ಐಡಿಯಾ ಸಿದ್ಧ ಆಹಾರ ಉತ್ಪಾದನೆ. 35 ಲಕ್ಷ ರೂಪಾಯಿ ಬಂಡವಾಳದಲ್ಲಿ ಸಣ್ಣದಾದ ಸಿದ್ಧ ಆಹಾರ ಉತ್ಪಾದನೆಯ ‘ಪೋಶ್‌ನಾಶ್’ ಎಂಬ ಉದ್ಯಮ ಆರಂಭಿಸಿದೆ. ಅಪ್ಪ ಮತ್ತು ನನ್ನ ಪತಿ ಸಾಲ ಮಾಡಿ ತಂದುಕೊಟ್ಟ ಹಣದಲ್ಲಿ ಉದ್ಯಮ ತೆರೆಯುವ ಮುನ್ನ ಸಣ್ಣ ಅಳುಕಿದ್ದರೂ ಧೈರ್ಯಮಾಡಿ, ವಿಶ್ವಾಸದಿಂದ ಮುಂದಡಿ ಇಟ್ಟೆ.

ಸಾಸ್, ಪಾಸ್ತಾ, ಬೆಳ್ಳುಳ್ಳಿ ಪೇಸ್ಟ್, ಚಿಲ್ಲಿ ಪೇಸ್ಟ್ ತಯಾರಿಸಿ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡಲು ಮುಂದಾದೆ. ನಾವು ತಯಾರಿಸಿದ ಆಹಾರ ಉತ್ಪನ್ನಗಳು ರುಚಿ, ಶುಚಿಯಾಗಿದ್ದರಿಂದ ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಯಿತು. ಇಂದು ಪ್ರತಿ ದಿನ 2000 ಬಾಟಲಿಗಳು ಮಾರಾಟವಾಗುತ್ತಿವೆ. ತಿಂಗಳಿಗೆ ಹೆಚ್ಚು ಕಡಿಮೆ 1 ಕೋಟಿ ರೂಪಾಯಿ ವ್ಯಾಪಾರವಾಗುತ್ತಿದೆ.

ಈ ಯಶಸ್ಸು ನನಗೆ ರಾತ್ರೋ ರಾತ್ರಿ ಬಂದಿದ್ದಲ್ಲ! ಪರಿಶ್ರಮ ಮತ್ತು ತಾಳ್ಮೆಯ ಫಲದಿಂದ ಇಂದು ಯಶಸ್ವಿ ಉದ್ಯಮಿಯಾಗಿದ್ದೇನೆ ಎಂದು ಯುವ ಉದ್ಯಮಿಗಳಿಗೆ ಅದಿತಿ ಕಿವಿ ಮಾತು ಹೇಳುತ್ತಾರೆ.
Poshnoshfoods/facebook

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT