ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಯೋಗ ನಮಗೆ ಒದಗಲಿ

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ವಿಶ್ವ ಯೋಗ ದಿನ ಮುಗಿದಿದೆ. ಪ್ರಪಂಚದ ತುಂಬೆಲ್ಲ ಈಗ ಯೋಗ ಮಾನ್ಯತೆಯನ್ನು ಪಡೆಯುತ್ತಿದೆ. ಆರೋಗ್ಯವನ್ನು ಕಾಪಾಡಬಲ್ಲ ಶಕ್ತಿ ಯೋಗಕ್ಕಿದೆ – ಎನ್ನುವುದೇ ಯೋಗಕ್ಕೆ ಒದಗುತ್ತಿರುವ ಆದರಕ್ಕೆ ಕಾರಣ. ಆರೋಗ್ಯ ನಮ್ಮೆಲ್ಲರಿಗೂ ಬೇಕಿದೆ. ಆರೋಗ್ಯವನ್ನು ಕಳೆದುಕೊಂಡರೆ ನಮ್ಮ ಜೀವನವು ಯಾತನೆಗೆ ಒಳಗಾಗುವುದು ಸಹಜ. ಆರೋಗ್ಯವೇ ಮಹಾಭಾಗ್ಯ – ಎನ್ನುವುದು ಸುಳ್ಳಲ್ಲ.

ಯೋಗದಿಂದ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು; ಅದು ನಮ್ಮ ಕಾಯಿಲೆಗಳನ್ನೂ ಗುಣಪಡಿಸುತ್ತದೆ – ಎಂಬುದು ನಿಜವೋ, ಸುಳ್ಳೋ – ಅದರ ಚರ್ಚೆ ಇಲ್ಲಿ ಬೇಡ. ಆದರೆ ನಮಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿರುವುದಂತೂ ಸ್ಪಷ್ಟ. ಆರೋಗ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ; ಹೀಗಾಗಿ ನಮಗೆ ಆರೋಗ್ಯದ ಮಹತ್ವ ಅರಿವಿಗೆ ಬರುತ್ತಿದೆ – ಎನ್ನುವುದು ಸುಳ್ಳಲ್ಲ. ನಾವು ಆರೋಗ್ಯವನ್ನು ಹೇಗೆ ಕಳೆದುಕೊಳ್ಳುತ್ತಿದ್ದೇವೆ? ಇದನ್ನು ಎಂದಾದರೂ ಯೋಚಿಸಿದ್ದೇವೆಯೇ?
‘ಧರ್ಮಸಾಧನೆಗೂ ಶರೀರವೇ ಕಾರಣ’ ಎಂಬುದು ನಮ್ಮ ಪೂರ್ವಜರ ನಿಲುವಾಗಿತ್ತು.

ದೇಹವನ್ನು ತುಚ್ಛ ಎಂದೇನೂ ಅವರು ಭಾವಿಸಲಿಲ್ಲ. ದೇಹದ ಮೂಲಕವೇ ನಾವು ಎಲ್ಲ ಅನುಭವವನ್ನೂ ಪಡೆಯಬೇಕಾಗಿರುವುದರಿಂದ ಅದನ್ನು ಚೆನ್ನಾಗಿ ಕಾಪಾಡಿಕೊಳ್ಳತಕ್ಕದ್ದು ಎನ್ನುವುದನ್ನು ಅವರು ಒಪ್ಪಿಕೊಂಡಿದ್ದರು. ಆದುದರಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಲವು ವಿಧಾನಗಳನ್ನು ಕಂಡುಕೊಂಡರು. ಅನಾರೋಗ್ಯದಿಂದ ಪಾರಾಗುವ ವಿಧಾನವನ್ನು ‘ಆಯುರ್ವೇದ’ ಎಂದೂ, ಆರೋಗ್ಯವನ್ನು ಕಾಪಾಡುವ ವಿಧಾನವನ್ನು ‘ಯೋಗ’ ಎಂದೂ ಕರೆದರು.

ಇಂದು ಯೋಗ ಜನಪ್ರಿಯವಾಗಿರುವುದು ಅದು ಆರೋಗ್ಯವನ್ನು ಕಾಪಾಡುತ್ತದೆ; ಕಾಯಿಲೆ ಗಳನ್ನೂ ಗುಣಪಡಿಸುತ್ತದೆ ಎಂದಷ್ಟೆ. ನಾವಿಲ್ಲಿ ಆಲೋಚಿಸಬೇಕಾದದ್ದು: ನಮ್ಮ ಆರೋಗ್ಯ ಹೇಗೆ ಕೆಡುತ್ತಿದೆ? ನಮ್ಮ ಆರೋಗ್ಯವನ್ನು ನಾವೇ ಕೆಡಿಸಿಕೊಳ್ಳುತ್ತಿದ್ದೇವೆ. ಇದು ಹೇಗೆ ಎಂದು ಹೆಚ್ಚಾಗಿ ವಿವರಿಸಬೇಕಿಲ್ಲ. ನಮ್ಮ ಮನಸ್ಸು ಮತ್ತು ದೇಹ – ಎರಡನ್ನೂ ನಾವೇ ಕೆಡಿಸಿಕೊಳ್ಳುತ್ತಿದ್ದೇವೆ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ನಾವು ಅತ್ಯಾಸೆ ಎಂಬ ಕುದುರೆಯನ್ನೇರಿ ಗುರಿಯಿಲ್ಲದೆ ಓಡುತ್ತಿದ್ದೇವೆ. ಆಸೆಯೇ ತಪ್ಪಲ್ಲ; ಆದರೆ ಅತಿಯಾದ ಆಸೆ ಖಂಡಿತ ದುರಂತಕ್ಕೆ ದಾರಿ ಮಾಡಿಕೊಡುತ್ತದೆ. ಜೀವನದ ಸೊಗಸನ್ನು ಹೆಚ್ಚಿಸುವುದಕ್ಕೆ ‘ಆಸೆ’ ಬೇಕಾಗುತ್ತದೆ; ‘ಅತಿಯಾಸೆ’ ಅತೃಪ್ತಿಯನ್ನು ನಮ್ಮಲ್ಲಿ ಬೆಳೆಸುತ್ತದೆ. ಅತೃಪ್ತಿಯು ಅಸಹನೆ, ಉದ್ವೇಗ, ಗೊಂದಲ, ಕೋಪ, ದ್ವೇಷ ಮುಂತಾದ ದುಷ್ಟಗುಣಗಳಿಗೆ ಕಾರಣವಾಗುತ್ತದೆ. ಇವೆಲ್ಲದರ ಪರಿಣಾಮವಾಗಿ ಮನಸ್ಸು ಕೆಡುತ್ತದೆ.

ಅಕ್ಷರಜ್ಞಾನ ನಮ್ಮ ಜೀವನದ ದಿಟವಾದ ಉದ್ದೇಶವನ್ನೇ ಮಂಕುಗೊಳಿಸುತ್ತದೆ. ಜ್ಞಾನ ಎಂದರೆ ಪುಸ್ತಕಜ್ಞಾನವಷ್ಟೇ ಎಂಬ ತಪ್ಪಾದ ಸಮೀಕರಣ ಆಧುನಿಕ ಜಗತ್ತನ್ನು ಆಳತೊಡಗಿದೆ. ಅದರ ಪರಿಣಾಮ ಎಂದರೆ ಅಕ್ಷರವನ್ನು ಕಲಿತವನಷ್ಟೇ ಶ್ರೇಷ್ಠ; ಅವನು ಬರಿಯ ಪುಸ್ತಕ–ಪೆನ್ನು–ಮೌಸ್‌ಗಳನ್ನಷ್ಟೆ ಹಿಡಿಯಬೇಕು; ಮೈ ಬಗ್ಗಿಸಿ ದುಡಿಯುವುದು ಅವನು ಪಡೆದಿರುವ ಪದವಿಗೆ ಅವಮಾನ ಮಾಡಿದಂತೆ ಎಂಬ ಅಲಿಖಿತ ಸಂವಿಧಾನ ನಮ್ಮ ವಿದ್ಯಾವಂತ ಸಮಾಜವನ್ನು ಪ್ರಭಾವಿಸುತ್ತಿದೆ.

ನಮ್ಮ ಮನೆಯ ಸಣ್ಣ ಪುಟ್ಟ ಕೆಲಸಗಳನ್ನೂ ನಾವು ಮಾಡಿಕೊಳ್ಳತಕ್ಕದ್ದಲ್ಲ; ದೈಹಿಕ ಶ್ರಮವೇ ಮಹಾಪಾಪ – ಎನ್ನುವ ಅತಿರೇಕಕ್ಕೆ ಈ ಪ್ರಭಾವ ನಮ್ಮನ್ನು ಮುಟ್ಟಿಸಿದೆ. ಯಾವ ವಿದ್ಯೆ ವಿನಯವನ್ನು ಕಲಿಸಬೇಕಿತ್ತೋ ಅದೇ ನಮ್ಮಲ್ಲಿ ಅಹಂಕಾರವನ್ನು ಹುಟ್ಟಿಸುತ್ತಿದೆ. ಅದರ ಪರಿಣಾಮ ಎಂದರೆ ದೈಹಿಕವಾಗಿ ಸಣ್ಣ ಪುಟ್ಟ ಕೆಲಸಗಳನ್ನೂ ನಾವು ಮಾಡದೆ ಬೇರೆಯವರನ್ನು ಆಶ್ರಯಿಸುತ್ತಿದ್ದೇವೆ.

ಈ ಕಾರಣದಿಂದ ನಮ್ಮ ದೇಹಕ್ಕೆ ಸ್ವಲ್ಪವೂ ವ್ಯಾಯಾಮವೇ ಇಲ್ಲದೆ ಜಡ್ಡುಗಟ್ಟುತ್ತಿರುತ್ತದೆ. ದೈಹಿಕವಾಗಿಯೂ ಮಾನಸಿಕವಾಗಿಯೂ ಲವಲವಿಕೆ ಯನ್ನು ಕಳೆದುಕೊಂಡಮೇಲೆ ಅನಾರೋಗ್ಯದ ದಾಳಿ ಸಹಜವೇ ಹೌದಲ್ಲವೆ?

ಇದರ ಜೊತೆಗೆ ನಾವು ಇಂದು ಸೇವಿಸುತ್ತಿರುವ ಆಹಾರ ಕೂಡ ನಮ್ಮ ಆರೋಗ್ಯವನ್ನು ಕೆಡಿಸುತ್ತಿದೆ. ಈ ವಿಷಯದಲ್ಲೂ ನಾವೇ ತಪ್ಪನ್ನು ಮಾಡುತ್ತಿರುವವರು. ತಿನ್ನುವ ಅನ್ನವನ್ನೇ ಅತಿಯಾಸೆಯ ಕಾರಣದಿಂದ ಹಲವು ವಿಧಗಳಿಂದ ಕಲುಷಿತಗೊಳಿಸುತ್ತಿದ್ದೇವೆ.

ಹಾಗಾದರೆ ನಮ್ಮ ಆರೋಗ್ಯವನ್ನು ಕಾಪಾಡುವ ಯೋಗ ಹೇಗಿರಬೇಕು? ಅದು ಯಾವುದು? ವಿವೇಕಯೋಗ ನಮಗಿಂದು ಬೇಕಾಗಿರುವುದು. ಎಂದರೆ ನಮ್ಮ ಜೀವನಶೈಲಿಯನ್ನು ಸಹಜಗೊಳಿಸಿಕೊಳ್ಳುವ ವಿಧಾನವೇ ಈಗಿನ ನಮ್ಮ ಯೋಗವಾಗಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT