ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 28ರಂದು ಪ್ರೊ ಕಬಡ್ಡಿ ಆರಂಭ

ಹೈದರಾಬಾದ್‌ನಲ್ಲಿ ಉದ್ಘಾಟನೆ; ಬೆಂಗಳೂರಿನಲ್ಲಿ 11 ಪಂದ್ಯ
Last Updated 28 ಜೂನ್ 2017, 19:36 IST
ಅಕ್ಷರ ಗಾತ್ರ

ಮುಂಬೈ: ಕ್ರೀಡಾಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಪ್ರೊ ಕಬಡ್ಡಿ ಲೀಗ್‌ನ ಐದನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಜುಲೈ 28ರಂದು ಹೈದರಾಬಾದ್‌ನಲ್ಲಿ ಲೀಗ್‌ ಆರಂಭವಾಗಲಿದ್ದು, ಬರೋಬ್ಬರಿ 90 ದಿನ ನಡೆಯಲಿದೆ.

ಇಲ್ಲಿನ ಗ್ರ್ಯಾಂಡ್‌ ಹಯಾಟ್‌ ಹೋಟೆಲ್‌ನಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಆಟಗಾ ರರು ಹಾಗೂ ತಂಡಗಳ ಮಾಲೀಕರ ಸಮ್ಮುಖದಲ್ಲಿ ಲೀಗ್‌ ಕಮಿಷನರ್‌ ಅನುಪಮ್‌ ಗೋಸ್ವಾಮಿ ಹಾಗೂ ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ ಸಿಇಒ ದೇವರಾಜ್‌ ಚತುರ್ವೇದಿ ವೇಳಾಪಟ್ಟಿ ಬಿಡುಗಡೆ ಮಾಡಿದರು.

ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ಹಾಗೂ ತಮಿಳು ತಲೈವಾಸ್‌ ಪೈಪೋಟಿ ನಡೆಸಲಿವೆ. ಅಕ್ಟೋಬರ್‌ 28ರಂದು ಚೆನ್ನೈನಲ್ಲಿ ಫೈನಲ್‌ ಪಂದ್ಯ ಜರುಗಲಿದೆ. ಬೆಂಗಳೂರಿನಲ್ಲಿ ಆಗಸ್ಟ್‌ 4ರಿಂದ 10ರವರೆಗೆ 11 ಪಂದ್ಯಗಳು ನಡೆಯಲಿವೆ.

ಈ ಬಾರಿಯ ಲೀಗ್‌ ವೇಳಾಪಟ್ಟಿ ಸುದೀರ್ಘವಾಗಿರುವುದಕ್ಕೆ ತುಸು ವಿರೋಧ ವ್ಯಕ್ತವಾಯಿತು. ಆದರೆ, 12 ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಹೆಚ್ಚು ದಿನಗಳ ಆಯೋಜನೆ ಅನಿ ವಾರ್ಯ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಈ ಬಾರಿ ತಂಡಗಳ ಸಂಖ್ಯೆ 12ಕ್ಕೇರಿದೆ. ಈ ತಂಡಗಳು 130 ಪಂದ್ಯಗಳನ್ನು ಆಡಲಿವೆ. ಎರಡು ಗುಂಪುಗಳನ್ನಾಗಿ ವಿಂಗಡಿಸಿದ್ದು ಪ್ರತಿ ತಂಡಕ್ಕೆ 22 ಪಂದ್ಯಗಳು ಇರಲಿವೆ. ಐಪಿಎಲ್‌ ಮಾದರಿಯಲ್ಲಿ ಈ ಬಾರಿ ಪ್ಲೇ ಆಫ್‌ ಪಂದ್ಯಗಳು ನಡೆಯಲಿವೆ.

‘ದೇಶದಲ್ಲಿ ಕ್ರಿಕೆಟ್‌ ನಂತರ ಎರಡನೇ ಅತಿ ದೊಡ್ಡ ಕ್ರೀಡೆಯಾಗಿ ಕಬಡ್ಡಿ ಸದ್ದು ಮಾಡುತ್ತಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಐಪಿಎಲ್‌ ಟೂರ್ನಿಗಿರುವಷ್ಟೇ ಪ್ರೇಕ್ಷಕರು ಕಬಡ್ಡಿ ಲೀಗ್‌ಗೆ ಇದ್ದಾರೆ. ಇದೊಂದು ಅಚ್ಚರಿಯ ಬೆಳವಣಿಗೆ’ ಎಂದು ಅನುಪಮ್‌ ಗೋಸ್ವಾಮಿ ಹೇಳಿದರು.

ಚೀನಾದ ವಿವೋ ಮೊಬೈಲ್‌ ಕಂಪೆ ನಿಯು ಲೀಗ್‌ನ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಐದು ವರ್ಷಗಳ ಅವಧಿಗೆ ₹ 300 ಕೋಟಿ ಒಪ್ಪಂದ ಮಾಡಿಕೊಂಡಿದೆ.

ವಿದೇಶಗಳಿಂದ ಬಂದಿದ್ದ ಯುರೋ ಪಿಯನ್‌ ಫುಟ್‌ಬಾಲ್‌ ಅಸೋಸಿಯೇ ಷನ್‌ನ ಕ್ರೇಗ್‌ ಥಾಂಪ್ಸನ್‌, ಪ್ರೀಮಿಯರ್‌ ಲೀಗ್‌ನ (ಇಂಗ್ಲೆಂಡ್‌) ನಿಕ್‌ ಕೊವಾರ್ಡ್‌, ಕೀನ್ಯಾ ಕಬಡ್ಡಿ ತಂಡದ ಕೋಚ್‌ ಲವೆಂಟರ್‌ ಒಗುಟಾ ಅವರು ಕಬಡ್ಡಿ ಕ್ರೀಡೆಯ ಜಾಗತಿಕ ಬೆಳವಣಿಗೆ ಕುರಿತು ಚರ್ಚಿಸಿದರು.

ಫಾರ್ಚುನ್‌ಗೆ ಸುಕೇಶ್‌ ನಾಯಕ
ಕರ್ನಾಟಕದ ಸುಕೇಶ್‌ ಹೆಗ್ಡೆ ಅವರು ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯಲ್ಲಿ ಗುಜರಾತ್‌ ಫಾರ್ಚುನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ಮೊದಲ ಬಾರಿ ರಾಜ್ಯದ ಆಟಗಾರನಿಗೆ ಕಬಡ್ಡಿ ಲೀಗ್‌ನಲ್ಲಿ ತಂಡ ಮುನ್ನಡೆಸಲು ಅವಕಾಶ ಲಭಿಸಿದೆ.

‘ನನ್ನ ಜೀವನವನ್ನೇ ಬದಲಾಯಿಸಿರುವ ಟೂರ್ನಿಯಲ್ಲಿ ಈಗ ತಂಡ ಮುನ್ನಡೆಸುವ ಜವಾಬ್ದಾರಿ ಲಭಿಸಿದೆ. ಎರಡು ದಿನಗಳ ಹಿಂದೆಯಷ್ಟೇ ತಂಡದ ಆಡಳಿತ ಈ ನಿರ್ಧಾರ ಪ್ರಕಟಿಸಿದೆ. ನಮ್ಮದು ಯುವ ಆಟಗಾರರನ್ನು ಒಳಗೊಂಡಿರುವ ತಂಡ. ಮಾರ್ಗದರ್ಶನ ನೀಡುತ್ತಾ ನನ್ನ ಆಟದ ಮೇಲೆ ಚಿತ್ತ ಹರಿಸುವುದು ಕಷ್ಟದ ವಿಷಯ. ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ’ ಎಂದು ಸುಕೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*
ಒಂದು ತಿಂಗಳಿನಿಂದ ಪುಣೇರಿ ಪಲ್ಟಾನ್‌ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ನಾಯಕ ರಾಹುಲ್‌ ಚೌಧರಿ ಉತ್ತಮ ಫಾರ್ಮ್‌ನಲ್ಲಿದ್ದು, ಚಾಂಪಿಯನ್‌ ಆಗಲು ಉತ್ತಮ ಅವಕಾಶವಿದೆ.
-ಬಿ.ಸಿ.ರಮೇಶ್‌,
ಕೋಚ್‌, ಪುಣೇರಿ ಪಲ್ಟಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT