ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಗೆ ಕ್ಷಣಗಣನೆ ರಿಯಾಲ್ಟಿ ಕ್ಷೇತ್ರ ತಲ್ಲಣ

Last Updated 29 ಜೂನ್ 2017, 19:30 IST
ಅಕ್ಷರ ಗಾತ್ರ

ನೋಟು ರದ್ದತಿ, ರೆರಾ ಕಾಯ್ದೆ ಆಯ್ತು. ಈ ಬದಲಾವಣೆಗಳು ಸೃಷ್ಟಿಸಿದ ಗೊಂದಲದಲ್ಲಿಯೇ ತೆವಳುತ್ತಿರುವ ರಿಯಾಲ್ಟಿ ವಲಯದಲ್ಲಿ ಇದೀಗ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಬಗೆಗಿನ ಚರ್ಚೆ ಹೊಸ ತಲ್ಲಣ ಸೃಷ್ಟಿಸಿದೆ.

ಹೊಸ ಬೆಳವಣಿಗೆಗಳನ್ನು ಅಳವಡಿಸಿಕೊಳ್ಳಲು ಮತ್ತು ಅದಕ್ಕೆ ಹೊಂದಿಕೊಳ್ಳಲು ಹೆಣಗುತ್ತಿರುವ ಉದ್ಯಮ, ಈಗ ಮತ್ತೊಂದು  ಆಯಾಮಕ್ಕೆ ತೆರೆದುಕೊಳ್ಳಬೇಕಿದೆ. ಮುಂದೇನಾಗಬಹುದು? ಯಾರಿಗೂ ಸ್ಪಷ್ಟತೆಯಿಲ್ಲ. ಸದ್ಯ ಗ್ರಾಹಕ–ಉದ್ಯಮಿಗಳಿಬ್ಬರೂ ‘ಕಾದು ನೋಡುವ’ ಮನಸ್ಥಿತಿಯಲ್ಲಿದ್ದಾರೆ.

ಜಿಎಸ್‌ಟಿಯಲ್ಲಿ ಯಾವ ಶುಲ್ಕಗಳು ಸೇರಿಕೊಳ್ಳುತ್ತವೆ, ಇದರ ಜೊತೆಗೆ ಮತ್ತೆ ಯಾವ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಇದು ರಿಯಾಲ್ಟಿ ಉದ್ಯಮಿಗಳಿಗೆ ಹೊರೆಯೇ ಅಥವಾ ಆ ಭಾರ ಗ್ರಾಹಕರಿಗೇ ವರ್ಗಾಯಿಸಲ್ಪಡುತ್ತದೆಯೇ ಎನ್ನುವ ಗೊಂದಲಗಳಿವೆ.

ಸದ್ಯ ಗ್ರಾಹಕ ವಿವಿಧ ಬಗೆಯ ಶುಲ್ಕಗಳು ಹಾಗೂ ತೆರಿಗೆಗಳು ಸೇರಿದಂತೆ ಶೇ 25ರಿಂದ 30ರಷ್ಟು ಶುಲ್ಕವನ್ನು ಭರಿಸಬೇಕಾಗುತ್ತದೆ. ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ (ಸೆಸ್‌), ಭೂ ಪರಿವರ್ತನೆ, ಭೂ ಸ್ವಾಧೀನ ತೆರಿಗೆ, ಕಾರ್ಮಿಕರ ತೆರಿಗೆ,  ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸೇರಿದಂತೆ ವಿವಿಧ ರೂಪದ ಹೊರೆಗಳು ಗ್ರಾಹಕನ ಹೆಗಲಿಗಿವೆ.

ಜಿಎಸ್‌ಟಿ ಈ ಎಲ್ಲಾ ಶುಲ್ಕಗಳನ್ನು ಒಳಗೊಳ್ಳುತ್ತದೆಯೇ ಅಥವಾ ಕೆಲವನ್ನು ಮಾತ್ರವೇ? ಎನ್ನುವ ಬಗ್ಗೆಯೂ ಸ್ಪಷ್ಟತೆ ಬೇಕಿದೆ. ನೋಂದಣಿ ಶುಲ್ಕವನ್ನು ಜಿಎಸ್‌ಟಿ ವ್ಯಾಪ್ತಿಯಡಿ  ತಂದರೆ ಅನುಕೂಲ.

ಆದರೆ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಇದೆಲ್ಲ ಸ್ಪಷ್ಟವಾಗಬೇಕಾದರೆ ಕನಿಷ್ಠ ಎರಡು ತಿಂಗಳು ಸಮಯ ಬೇಕು. ಮೊದಲು ಕಾಯ್ದೆ ಕಾರ್ಯರೂಪಕ್ಕೆ ಬರಬೇಕು. ಎದುರಾಗುವ ಅಡ್ಡಿ–ಆತಂಕಗಳನ್ನು ಪಟ್ಟಿ ಮಾಡಬೇಕು. ನಂತರ ಅಗತ್ಯ ಸುಧಾರಣೆ ಹಾಗೂ ತಿದ್ದುಪಡಿ ಬಗ್ಗೆ ಚರ್ಚೆ ನಡೆಯುತ್ತದೆ ಎನ್ನುತ್ತಾರೆ ತಜ್ಞರು.

ರಿಯಲ್‌ ಎಸ್ಟೇಟ್ ವಲಯದ ಮೇಲೆ ಜಿಎಸ್‌ಟಿ ಪರಿಣಾಮದ ಬಗ್ಗೆ ಕ್ರೆಡಾಯ್‌ (ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಬೆಂಗಳೂರು ಘಟಕದ ಕಾರ್ಯದರ್ಶಿ ಸುರೇಶ್‌ ಹರಿ ಪ್ರತಿಕ್ರಿಯಿಸಿದ್ದು ಹೀಗೆ...

‘ಇನ್ನೇನು ನಾಳೆಯಿಂದಲೇ ಜಿಎಸ್‌ಟಿ ಬರುತ್ತಿದೆ. ಆದರೆ ಇದರಲ್ಲಿ ಯಾವ ಶುಲ್ಕಗಳು ಸೇರಿಕೊಳ್ಳುತ್ತವೆ ಎನ್ನುವುದು ಗೊತ್ತಿಲ್ಲ. ಜಿಎಸ್‌ಟಿ ಜೊತೆಗೆ ತೆರಬೇಕಾದ ತೆರಿಗೆಯ ಬಗ್ಗೆ ಸರ್ಕಾರ ಇನ್ನೂ ಸ್ಪಷ್ಟ ನಿಲುವು ತಳೆಯಬೇಕಿದೆ.

‘ಯಾವುದೇ ಹೊಸ ಕಾಯ್ದೆ ಅಥವಾ ನಿಬಂಧನೆಗಳು ಬಂದಾಗ ಆರಂಭದಲ್ಲಿ ಜನರು  ಗೊಂದಲಕ್ಕೀಡಾಗುವುದು ಸಾಮಾನ್ಯ. ಜಿಎಸ್‌ಟಿ ಬಗೆಗಿನ ಈ ಎಲ್ಲಾ ಗೊಂದಲಗಳು ನಿವಾರಣೆಯಾಗಲು ಸ್ವಲ್ಪ ಸಮಯ ಬೇಕು. ಮೇಲ್ನೋಟಕ್ಕೆ ತುಸು ಹೊರೆ ಎನಿಸಿದರೂ ಒಟ್ಟಾರೆ ಫಲಿತಾಂಶ ಗ್ರಾಹಕರ ಪರವಾಗಿಯೇ ಇರುತ್ತದೆ.

‘ನಿವೇಶನದ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಉಂಟಾಗದು. ಮನೆಗಳ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು. ಅದು ಕಡಿಮೆಯೂ ಆಗಬಹುದು, ತುಸು ಹೆಚ್ಚೂ ಆಗಬಹುದು. ಆದರೆ ಉದ್ಯಮದಲ್ಲಿ ಪಾರದರ್ಶಕತೆ ಹೆಚ್ಚುತ್ತದೆ. ಯಾವುದೇ ನೀತಿ–ನಿಯಮ ಇಲ್ಲದೇ, ಎಲ್ಲಾ ಹೊರೆಯನ್ನು ಗ್ರಾಹಕರ ಮೇಲೆ ಹೇರಿ, ಕೇವಲ ಲಾಭ ಬಾಚಿಕೊಳ್ಳುವ ಆತುರದಲ್ಲಿರುವ ಡೆವೆಲಪರ್‌ಗಳು ಹಾಗೂ ಬಿಲ್ಡರ್‌ಗಳು ಇನ್ನು ಮುಂದೆ ಹೀಗೆ ಮಾಡಲು ಆಗದು.

‘ಗ್ರಾಹಕನ ಮೇಲೆ ಬೀಳುವ ಹೆಚ್ಚಿನ ಹೊರೆ ತಪ್ಪಿಸಲು  ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಶೇ 5ರಿಂದ ಶೇ1ಕ್ಕೆ ಇಳಿಸುವಂತೆ ಸರ್ಕಾರವನ್ನು ಕೇಳಿಕೊಂಡಿದ್ದೇವೆ. ಕಾಯ್ದೆ ಕಾರ್ಯರೂಪಕ್ಕೆ ಬಂದ ಮೇಲಷ್ಟೇ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಲಿದೆ’.

***

ಮಹತ್ವದ ಹೆಜ್ಜೆ
ಭಾರತೀಯ ರಿಯಲ್ ಎಸ್ಟೇಟ್ ವಲಯದಲ್ಲಿ ಜಿಎಸ್‌ಟಿ ಒಂದು ಮಹತ್ವದ ಹೆಜ್ಜೆ ಎನ್ನುವುದರಲ್ಲಿ ಅನುಮಾನವಿಲ್ಲ.  ಡೆವೆಲಪರ್‌ಗಳು, ಬಿಲ್ಡರ್‌ಗಳು, ಗ್ರಾಹಕರು... ಹೀಗೆ ಮೂರೂ ವರ್ಗದವರ ತೆರಿಗೆ ಸಂಬಂಧಿ ಗೊಂದಲಗಳಿಗೆ ಇದು ಒಂದು ಪರಿಹಾರದಂತಿದೆ.

ಹೊಸ ಕಾಯ್ದೆ ಮರೆಮಾಚಲಾದ ಮತ್ತು ಶ್ರೇಣೀಕೃತ ತೆರಿಗೆಗಳನ್ನು ತೆಗೆದುಹಾಕುತ್ತದೆ. ಸಿಮೆಂಟ್ ಮತ್ತು ಉಕ್ಕು ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಮೇಲಿನ ತೆರಿಗೆಗಳೂ ಗಣನೀಯವಾಗಿ ಕಡಿಮೆ ಆಗುತ್ತವೆ. ಇದರಿಂದ ಒಟ್ಟಾರೆ ಕಟ್ಟಡ ನಿರ್ಮಾಣ ವೆಚ್ಚದಲ್ಲಿ ಇಳಿಕೆ ಕಂಡುಬರುತ್ತದೆ.

ಹೀಗಾಗಿ ಜುಲೈ 1ರ ನಂತರ ಆರಂಭವಾಗುವ ನೂತನ ಪ್ರಾಜೆಕ್ಟ್‌ಗಳಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಿದೆ. ಡೆವೆಲಪರ್‌ಗಳೂ ಹೆದರಬೇಕಾಗಿಲ್ಲ. ಮೇಲ್ನೋಟಕ್ಕೆ ಇದು ಹೊರೆ ಎನಿಸಿದರೂ ಆಂತರಿಕವಾಗಿ ಈ ಹೊಸ ಕ್ರಮದಲ್ಲಿ ಸಾಕಷ್ಟು ಲಾಭಗಳೇ ಇವೆ. ಇದನ್ನು ಸರಿಯಾಗಿ ನಿರ್ವಹಿಸಬೇಕಷ್ಟೆ.
ಆಶಿಶ್‌ ಆರ್‌. ಪೂರ್ವಂಕರ, ವ್ಯವಸ್ಥಾಪಕ ನಿರ್ವೇಶಕರು, ಪೂರ್ವಂಕರ ಪ್ರಾಜೆಕ್ಟ್ಸ್ ಲಿಮಿಟೆಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT