ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ ಖಾಸಗೀಕರಣ ದಿಟ್ಟ ಆರ್ಥಿಕ ಸುಧಾರಣಾ ಕ್ರಮ

Last Updated 29 ಜೂನ್ 2017, 20:25 IST
ಅಕ್ಷರ ಗಾತ್ರ

ನಿರಂತರವಾಗಿ ನಷ್ಟದಲ್ಲೇ ನಡೆಯುತ್ತಿರುವ, ಸಾಲದ ಸುಳಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ  ಏರ್‌ ಇಂಡಿಯಾ(ಎಐ) ಖಾಸಗೀಕರಣಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ.

ಕೇಂದ್ರೋದ್ಯಮಗಳನ್ನು ಸರ್ಕಾರದ ನಿಯಂತ್ರಣದಿಂದ ಕೈಬಿಡುವ ಮಹತ್ವದ ಆರ್ಥಿಕ ಸುಧಾರಣಾ ಕ್ರಮ ಇದಾಗಿದೆ. ಖಾಸಗಿ ವಿಮಾನಯಾನ ಸಂಸ್ಥೆಗಳ ತೀವ್ರ ಸ್ಪರ್ಧೆಯಿಂದ ನಿರಂತರವಾಗಿ ಮುಗ್ಗರಿಸುತ್ತಿರುವ ಸಂಸ್ಥೆಗೆ ಇದು ಜೀವದಾನ ನೀಡಲಿದೆ.

ಸರ್ಕಾರದ ‘ಚಿಂತಕರ ಚಾವಡಿ’ಯಾಗಿರುವ ನೀತಿ ಆಯೋಗದ ಪ್ರಸ್ತಾವಕ್ಕೆ ಸರ್ಕಾರ ತ್ವರಿತವಾಗಿ ಸ್ಪಂದಿಸಿರುವುದು ಸ್ವಾಗತಾರ್ಹ. ಆರ್ಥಿಕ ಸುಧಾರಣಾ ಕ್ರಮಗಳ ಜಾರಿಗೆ ಸರ್ಕಾರ ತೋರುತ್ತಿರುವ ಆಸಕ್ತಿ ಮತ್ತು  ದಿಟ್ಟ ನಡೆಗೆ ಇದು ಸಾಕ್ಷಿಯಾಗಿದೆ.

ದಶಕದ ಹಿಂದೆ ಶೇ 35ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ  ಎಐ ಪಾಲು ಈಗ ಶೇ 14ಕ್ಕೆ ಕುಸಿದಿದೆ. 1932ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಟಾಟಾ ಏರ್‌ಲೈನ್ಸ್‌ ಅನ್ನು ನಂತರ ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗ ಮತ್ತೆ ಖಾಸಗೀಕರಣದತ್ತ ಒಲವು ಕಂಡುಬರುತ್ತಿದೆ. ಅರ್ಥ ವ್ಯವಸ್ಥೆಯ ಚಕ್ರ ಒಂದು ಸುತ್ತು ಪೂರ್ಣಗೊಳಿಸಿರುವುದಕ್ಕೆ ಇದು ನಿದರ್ಶನವಾಗಿದೆ.

ಈಗ ಟಾಟಾ ಸಮೂಹವೇ ಖರೀದಿಗೆ ಆಸಕ್ತಿ ತೋರಿಸಿರುವುದು ಆಸಕ್ತಿದಾಯಕ ವಿದ್ಯಮಾನವಾಗಿದೆ. ಶೇ 86ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಖಾಸಗಿ ವಿಮಾನಯಾನ ಸಂಸ್ಥೆಗಳು ಲಾಭದಲ್ಲಿ ಮುನ್ನಡೆದಿರುವಾಗ, ಏರ್‌ ಇಂಡಿಯಾ ಮಾತ್ರ ಸತತ ನಷ್ಟದಲ್ಲಿ ಸಾಗುತ್ತಿದೆ. ಕಾರ್ಯನಿರ್ವಹಣೆ ಮೇಲೆ ನಿರಂತರ ನಿಗಾ ಕೊರತೆ, ದೋಷಪೂರಿತ ನಿರ್ವಹಣೆ, ಸಿಬ್ಬಂದಿಯ ಅದಕ್ಷತೆಯೇ ಇದಕ್ಕೆ ಕಾರಣ.

2012ರಲ್ಲಿ ಯುಪಿಎ ಸರ್ಕಾರ ₹ 32 ಸಾವಿರ ಕೋಟಿಗಳ ಪರಿಹಾರ ಕೊಡುಗೆ ನೀಡಿತ್ತು. ಈ ನೆರವಿನ ಬಳಿಕವೂ ಸಂಸ್ಥೆಯು ನಷ್ಟ ಕಳಚಿಕೊಳ್ಳಲು ವಿಫಲವಾಗಿತ್ತು. ಪ್ರತಿ ವರ್ಷ ಏರ್‌ ಇಂಡಿಯಾ ಸಾಲದ ಹೊರೆ ದೊಡ್ಡದಾಗುತ್ತಿದೆ. ಈ ಕೋಟಿಗಟ್ಟಲೆ ನಷ್ಟ ಭರ್ತಿ ಮಾಡಿಕೊಡಲು ಸಾರ್ವಜನಿಕರ ತೆರಿಗೆ ಹಣ ವಿನಿಯೋಗಿಸುವುದು ಸಲ್ಲದು. ಇದೇ ಹಣವನ್ನು ಸಾಮಾಜಿಕ ವಲಯದ ಕಾರ್ಯಗಳಿಗೆ ಸರ್ಕಾರ ವಿನಿಯೋಗಿಸಲಿ. 

‘ಬಿಸಿನೆಸ್‌ನಲ್ಲಿರುವುದು ಸರ್ಕಾರದ ಬಿಸಿನೆಸ್ ಅಲ್ಲ’ ಎಂದಿದ್ದರು ಪ್ರಧಾನಿ ಮೋದಿ. ನೀತಿಗಳನ್ನು ರೂಪಿಸುವುದು ಹಾಗೂ ಆಡಳಿತಕ್ಕೆ ಆದ್ಯತೆ ನೀಡಬೇಕಾದುದನ್ನು ಅವರ ಮಾತುಗಳು ಧ್ವನಿಸಿದ್ದವು. ವಾಣಿಜ್ಯ ಚಟುವಟಿಕೆಗಳಿಗಿಂತ ಸರ್ಕಾರಕ್ಕೆ ನೂರೆಂಟು ಹೊಣೆಗಾರಿಕೆಗಳು ಇರುತ್ತವೆ.

ಷೇರು ವಿಕ್ರಯ ಪ್ರಮಾಣ ಸೇರಿದಂತೆ ಖಾಸಗೀಕರಣ ಪ್ರಕ್ರಿಯೆ ಅಂತಿಮಗೊಳಿಸುವುದಕ್ಕಾಗಿ ಈಗ ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬರಲಿರುವ ಸಮಿತಿಯು ಇತರ ಆಯ್ಕೆ ಬದಿಗಿಟ್ಟು, ಸಂಪೂರ್ಣ ಖಾಸಗೀಕರಣಕ್ಕೆ ಶಿಫಾರಸು ಮಾಡುವುದು ಒಳಿತು.

ಮಿಶ್ರ ಆರ್ಥಿಕತೆಗೆ ಅನುಗುಣವಾಗಿ ಸರ್ಕಾರ ಆರಂಭದಿಂದಲೂ ಕೇಂದ್ರೋದ್ಯಮಗಳನ್ನು ಆರಂಭಿಸಿ ನಿರ್ವಹಿಸಿಕೊಂಡು ಬಂದಿದೆ. ಆದರೆ, ಬಹುತೇಕ ಸರ್ಕಾರಿ ಉದ್ದಿಮೆಗಳು ನಷ್ಟದಲ್ಲೇ ನಡೆಯುತ್ತ ಬಿಳಿಯಾನೆಗಳಾಗಿ ಪರಿಣಮಿಸಿವೆ. ಕೇಂದ್ರೋದ್ಯಮಗಳ ಷೇರು ವಿಕ್ರಯದ ಮೂಲಕ ಸರ್ಕಾರ ತನ್ನ ಪಾಲು ಬಂಡವಾಳ ತಗ್ಗಿಸುತ್ತಿದೆ.

ಈ ಹಿಂದೆ ಖಾಸಗಿಯವರು ಸಂಪನ್ಮೂಲ ಕೊರತೆಯಿಂದ ಉದ್ದಿಮೆಗಳ ಸ್ಥಾಪನೆ ಅಥವಾ ಸ್ವಾಧೀನಕ್ಕೆ ಹಿಂದೇಟು ಹಾಕುತ್ತಿದ್ದರು. ಈಗ ಕಾಲ ಬದಲಾಗಿದೆ. ಖಾಸಗಿಯವರಲ್ಲಿ ಬಂಡವಾಳ ಹೂಡಿಕೆ ಶಕ್ತಿ ಇದೆ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಕೆಲವು ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಖಾಸಗೀಕರಣ ಪ್ರಯತ್ನಕ್ಕೆ ಅಡ್ಡಗಾಲು ಹಾಕುವುದಕ್ಕೆ ತಡೆ ಒಡ್ಡಬೇಕು.

ಸರ್ಕಾರಿ ನೌಕರಿಯ ಭದ್ರತೆಯ ಆಶ್ರಯದಲ್ಲಿ ಇರುವ 21 ಸಾವಿರಕ್ಕೂ ಹೆಚ್ಚು ನೌಕರರ ಭವಿಷ್ಯವನ್ನು ಹಣಹೂಡಿಕೆ ಹಿಂತೆಗೆತ ಪ್ರಕ್ರಿಯೆಯಲ್ಲಿ ರಕ್ಷಿಸುವ ಭರವಸೆಯನ್ನೂ ನೀಡಲಾಗಿದೆ. 

ಖರೀದಿಗೆ ಮುಂದೆ ಬರುವ ಖಾಸಗಿ ಸಂಸ್ಥೆಗಳ ಪಾಲಿಗೆ ಸಾಲದ ಹೊರೆ ಅಡ್ಡಿಯಾಗದಂತೆ ಏರ್ ಇಂಡಿಯಾದ ಆಸ್ತಿಪಾಸ್ತಿ ಮಾರಾಟದ ಚಿಂತನೆಯೂ ನಡೆದಿದೆ. ಸಾಲದ ಹೊರೆ, ಸಿಬ್ಬಂದಿಯ ವಿರೋಧ, ವೇತನ ಬಾಕಿ ಪಾವತಿಯಂತಹ ಅಡೆತಡೆಗಳನ್ನು ಸರ್ಕಾರ ನಿವಾರಿಸಿಕೊಳ್ಳಬೇಕು. ಹಾಗಾದಾಗ ‘ಮಹಾರಾಜ’ ಸಂಕೇತದಿಂದ ಗುರುತಿಸಲಾಗುತ್ತಿದ್ದ ಈ 70 ವರ್ಷಗಳ ವಿಮಾನಯಾನ ಸಂಸ್ಥೆ  ಮತ್ತೆ ಗತ್ತಿನಿಂದ ಹಾರಾಟ ನಡೆಸಬಹುದು. ಬಂಡವಾಳ ಹಿಂತೆಗೆತದ ಈ ಕಠಿಣ ಹಾದಿಯಲ್ಲಿ ಪಾರದರ್ಶಕತೆಯನ್ನು ಸರ್ಕಾರ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT