ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಷೆ ಸೇರಿದ ಜಿಸ್ಯಾಟ್‌–17 ಸಂವಹನ ಉಪಗ್ರಹ

Last Updated 29 ಜೂನ್ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ರೊ ನಿರ್ಮಿತ ಸಂವಹನ ಉಪಗ್ರಹ ಜಿಸ್ಯಾಟ್‌–17ರ ಉಡಾವಣೆ ಯಶಸ್ವಿಯಾಗಿದೆ.

ಫ್ರೆಂಚ್‌ ಗಯಾನದ ಕೌರೊ ಉಡಾವಣೆ ಕೇಂದ್ರದಿಂದ  ಗುರುವಾರ ನಸುಕಿನಲ್ಲಿ (ಭಾರತೀಯ ಕಾಲಮಾನ 2.45ಕ್ಕೆ) ಉಪಗ್ರಹವನ್ನು ಹೊತ್ತ ‘ಏರಿಯಾನ್‌ 5’ ಉಡಾವಣಾ ವಾಹನ ನಭಕ್ಕೆ ಜಿಗಿಯಿತು.

3,477 ಕೆ.ಜಿ ತೂಕದ ಉಪಗ್ರಹವು ಉಡಾವಣೆಗೊಂಡ 39 ನಿಮಿಷಗಳಲ್ಲಿ ನಿಗದಿತ ದೀರ್ಘವೃತ್ತಾಕಾರದ ಭೂಸ್ಥಾಯಿ ವರ್ಗಾವಣೆ ಕಕ್ಷೆಯನ್ನು ಸೇರಿತು. ಉಡಾವಣಾ ವಾಹನದಿಂದ ಉಪಗ್ರಹವು ಬೇರ್ಪಟ್ಟ ತಕ್ಷಣವೇ ಹಾಸನದ ಮಾಸ್ಟರ್‌ ಕಂಟ್ರೋಲ್‌ ಫೆಸಿಲಿಟಿ ಕೇಂದ್ರ ನಿಯಂತ್ರಣಕ್ಕೆ ತೆಗೆದುಕೊಂಡಿತು ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಉಪಗ್ರಹ ಸುಸ್ಥಿತಿಯಲ್ಲಿದ್ದು, ಸಹಜವಾಗಿ ಕಾರ್ಯ ನಿರ್ವಹಣೆ ಆರಂಭಿಸಿದೆ. ಮುಂಬರುವ ದಿನಗಳಲ್ಲಿ ಉಪಗ್ರಹದ ಕಕ್ಷೆಯನ್ನು ಸಮಭಾಜಕ ವೃತ್ತದಿಂದ ಮೇಲಕ್ಕೆ ಏರಿಸುವ ಮೂಲಕ ಭೂಸ್ಥಾಯಿ ಕಕ್ಷೆಗೆ ಸೇರಿಸಲಾಗುವುದು  ಎಂದು ಅವರು ಹೇಳಿದ್ದಾರೆ.

ಕಕ್ಷೆಯನ್ನು ಏರಿಸುವ ಕಾರ್ಯಾಚರಣೆ ಸಂದರ್ಭದಲ್ಲೇ ಜಿಸ್ಯಾಟ್‌ನ ಎರಡು ಸೌರ ಫಲಕಗಳು ಮತ್ತು ಆ್ಯಂಟೆನಾ ಪ್ರತಿಬಿಂಬಕಗಳು ತೆರೆದುಕೊಳ್ಳುವ ಮೂಲಕ ಕಾರ್ಯಾರಂಭಿಸುತ್ತವೆ. ಭಾರತದ ಇತರ ಭೂಸ್ಥಾಯಿ ಉಪಗ್ರಹಗಳ ಸಮೀಪದಲ್ಲೇ ಇದನ್ನು ನೆಲೆಗೊಳಿಸಲಾಗುತ್ತದೆ. ಕೊನೆಯ ಹಂತದಲ್ಲಿ ಸಂವಹನ ಪೇಲೋಡ್‌ನ ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 ತಿಂಗಳಲ್ಲಿ ಮೂರು ಉಪಗ್ರಹ
ಎರಡು ತಿಂಗಳಲ್ಲಿ ಮೂರನೇ ಸಂವಹನ ಉಪಗ್ರಹವನ್ನು ಇಸ್ರೊ ಉಡಾವಣೆ ಮಾಡಿದೆ. ವಿವಿಧ ರೀತಿಯ ಸಂಪರ್ಕ, ಹವಾಮಾನ ದತ್ತಾಂಶ ಮತ್ತು ಉಪಗ್ರಹ ಆಧಾರಿತ ಶೋಧನೆಗೆ ಇದನ್ನು ಬಳಸಲಾಗುತ್ತದೆ.

21 ಉಪಗ್ರಹಗಳ ಉಡಾವಣೆ
* ಏರಿಯಾನ್‌ ರಾಕೆಟ್‌ ಮೂಲಕ ಒಟ್ಟು 21 ಉಪಗ್ರಹಗಳನ್ನು ಇಸ್ರೊ ಉಡಾವಣೆ ಮಾಡಿದೆ.
* ಮುಂದಿನ ಉಡಾವಣೆ 5000 ಕೆ.ಜಿ ತೂಕದ ಜಿಸ್ಯಾಟ್‌–11

31 ಸಂವಹನ ಉಪಗ್ರಹಗಳು
ಇಸ್ರೊ ಇಲ್ಲಿಯವರೆಗೆ 31 ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ  19 ಸಂವಹನ ಉಪಗ್ರಹಗಳನ್ನು ಏರಿಯಾನ್‌ ರಾಕೆಟ್‌ ಮೂಲಕವೇ ಹಾರಿ ಬಿಡಲಾಗಿದೆ. 10 ಉಪಗ್ರಹಗಳನ್ನು ಜಿಎಸ್‌ಎಲ್‌ವಿ, ಒಂದನ್ನು ಪಿಎಸ್‌ಎಲ್‌ವಿ ಹಾಗೂ ಇನ್ನೊಂದು ಉಪಗ್ರಹವನ್ನು ಜಿಎಸ್‌ಎಲ್‌ವಿ  ಮಾರ್ಕ್‌–3 ಮೂಲಕ ಉಡಾವಣೆ ಮಾಡಲಾಗಿದೆ. ಇವುಗಳಲ್ಲಿ ಮೂರು ಉಪಗ್ರಹಗಳು ಉಡಾವಣಾ ವೈಫಲ್ಯದಿಂದ ನಷ್ಟಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT