ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜಾ ಕಲ್ಯಾಣ ಮಹೋತ್ಸವ ಆರಂಭ

ಶ್ರೀಕಂಠೇಶ್ವರ ದೇವಾಲಯದಲ್ಲಿ ಜೂನ್ 6ರವರೆಗೆ ಅದ್ಧೂರಿ ಆಚರಣೆ
Last Updated 30 ಜೂನ್ 2017, 4:22 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರ ಗಿರಿಜಾ ಕಲ್ಯಾಣ ಮಹೋತ್ಸವ ಆರಂಭವಾಯಿತು.

ಸ್ವಾಮಿಗೆ ತೈಲ ಹರಿದ್ರಾಚೂರ್ಣ ಪ್ರದಾನ ಮಾಡುವ ಮೂಲಕ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನ ಗಿರಿಜಾ ಕಲ್ಯಾಣ ಮಹೋತ್ಸವ ಆರಂಭಗೊಂಡಿತು. ಜೂನ್ 6ರವರೆಗೆ 8 ದಿನಗಳ ಕಾಲ ಮಹೋತ್ಸವ ನಡೆಯಲಿದೆ.

ಮಹೋತ್ಸವದಲ್ಲಿ ಪ್ರಮುಖವಾಗಿ ಶುಕ್ರವಾರ (ಇಂದು) ಬೆಳಿಗ್ಗೆ 9 ಗಂಟೆಗೆ ಕನ್ನಡಿ ಕಳಶ ಅಂಕುರಾರ್ಪಾಣಪೂರ್ವಕ ವಾಗಿ ಸ್ವಾಮಿಗೆ ಮಂಗಳಸ್ನಾನ, ಸಂಜೆ 5 ಗಂಟೆಗೆ ಕಾಶಿಯಾತ್ರೆ ಮಹೋತ್ಸವ, 6.40ರಿಂದ 7.40 ಗಂಟೆಯೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಧಾರಾ ಮಹೋತ್ಸವ ನಡೆಯಲಿವೆ. ಮಂಗಳವಾರದಿಂದ ಮೂರು ದಿನ ಪ್ರತಿ ದಿನ ಸಂಜೆ 7 ಗಂಟೆಗೆ ಕಪಿಲಾ ನದಿಯಲ್ಲಿ ಪಾರ್ವತಿ ಅಮ್ಮನ ಸಮೇತ ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ ನೆರವೇರಲಿದೆ.

ದೇವರ ಒಡವೆ ಹಸ್ತಾಂತರ: ಮಹೋತ್ಸವದ ಅಂಗವಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ್ ಅವರು ಕಂದಾಯ ಇಲಾಖೆ ಅಧಿಕಾರಿಗಳಿಂದ ದೇವಾಲಯದ ಭದ್ರತಾ ಕೊಠಡಿಯಲ್ಲಿ ಇರಿಸಿದ್ದ ದೇವರ ಒಡವೆ ಪಡೆದರು.

ದೇವರ ಅಲಂಕಾರಕ್ಕಾಗಿ ಮೈಸೂರು ರಾಜ ಮನೆತನದವರು ಹಾಗೂ ಟಿಪ್ಪುಸುಲ್ತಾನ್ ಕಾಣಿಕೆಯಾಗಿ ನೀಡಿದ್ದ ಪಚ್ಚೆ ಸರ, ಮಕರ ಕಠೀಹಾರ, ಚಿನ್ನದ ಕೊಳಗ, ಕಿರೀಟ, ಮುತ್ತಿನಹಾರ, ನವರತ್ನ ಹಾರ, ಚಿನ್ನದ ಕವಚ, ಡಾಬು, ಚಿನ್ನದ ಜಡೆ, ಛತ್ರಿ, ಹಸ್ತ ಹಾಗೂ ವಜ್ರ ವೈಡೂರ್ಯದಿಂದ ಕೂಡಿದ ಒಡವೆ ಪಡೆಯಲಾಯಿತು. ಉತ್ಸವದಲ್ಲಿ ಸಂಪ್ರದಾಯದಂತೆ ದೇವರ ವಿಗ್ರಹಕ್ಕೆ ಈ ಒಡವೆ ಅಲಂಕರಿಸಲಾಗುತ್ತದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಇಒ ಜಯಪ್ರಕಾಶ್, ‘ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಸಿದ್ಧತೆ ಮಾಡಲಾಗಿದೆ. ದೇವಾಲಯದ ಸಂಪ್ರದಾಯದಂತೆ ಅರ್ಜಿ ಸಲ್ಲಿಸಿದ್ದ 25 ಭಕ್ತರಿಗೆ ಗಿರಿಜಾ ಕಲ್ಯಾಣ ಮಹೋತ್ಸವದ ಸೇವಾರ್ಥ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿಯೊಬ್ಬರೂ ದೇವಾಲಯಕ್ಕೆ ₹ 25 ಸಾವಿರ ಕಾಣಿಕೆ ಸಲ್ಲಿಸಿ ಸೇವಾರ್ಥ ನಡೆಸುತ್ತಾರೆ. ಅವರ ಕುಟುಂಬದ 12 ಮಂದಿಗೆ ಮಹೋತ್ಸವದ ಪೂಜೆಗಳಲ್ಲಿ ಭಾಗವಹಿಸಲು 8 ದಿನವೂ ಅವಕಾಶ ನೀಡಲಾಗುತ್ತದೆ. ಸೇವಾರ್ಥ ನಡೆಸುವ ಭಕ್ತರನ್ನು ಬೀಗರೆಂದು ಮನ್ನಿಸಿ ಗೌರವಿಸುವ ಸಂಪ್ರದಾಯವಿದೆ. ಅದರಂತೆ ದೇವತಾ ಕಾರ್ಯದಲ್ಲಿ ಭಾಗವಹಿಸುತ್ತಾರೆ. 8 ದಿನವೂ ಸಂಜೆ ವಿವಿಧ ಕಲಾವಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನದಿಯ ನೀರಿನ ಹರಿವು ಹೆಚ್ಚಿದ್ದರೆ ಮಾತ್ರ ತೆಪ್ಪೋತ್ಸವ ನಡೆಸಲಾಗುವುದು. ಕಡಿಮೆಯಾದರೆ ನದಿ ಬಳಿಯ ಮಂಟಪದಲ್ಲಿ ದೇವರ ವಿಗ್ರಹ ಇರಿಸಿ ಪೂಜಾ ಕಾರ್ಯ ನೆರವೇರಿಸಿ ಮತ್ತೆ ದೇವಾಲಯಕ್ಕೆ ತರಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT