ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಫೋನ್ ಬಳಕೆ; ದ್ವಿಗುಣಗೊಳ್ಳುತ್ತಿದೆ ಫಲವಂತಿಕೆ ಸಮಸ್ಯೆ

Last Updated 30 ಜೂನ್ 2017, 19:30 IST
ಅಕ್ಷರ ಗಾತ್ರ

ಪುರುಷರಲ್ಲಿ ಫಲವಂತಿಕೆ ಸಮಸ್ಯೆಯ ಸಾಧ್ಯತೆಯನ್ನು ಮೊಬೈಲ್ ಫೋನ್‌ನ ಬಳಕೆ ದುಪ್ಪಟ್ಟುಗೊಳಿಸುತ್ತಿದೆ. ಮೊಬೈಲ್ ಅನಿವಾರ್ಯ ಎಂದೆನಿಸುತ್ತಿರುವ ಈ ದಿನಗಳಲ್ಲಿ ಅದರಿಂದ ದೂರ ಉಳಿಯಲೇಬೇಕಾದ ಅನಿವಾರ್ಯತೆಯೂ ಇದೆ. ಮೊಬೈಲ್ ಹೇಗೆಲ್ಲ ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಅಂಶಗಳನ್ನು ಇಲ್ಲಿ ಸರಳವಾಗಿ ಪರಿಚಯಿಸಲಾಗಿದೆ...

ಕೆಲವು ವರ್ಷಗಳಿಂದೀಚೆ ನಾವೆಲ್ಲರೂ ಮೊಬೈಲ್ ಗೀಳಿಗೆ ಅತಿ ಎನಿಸುವಷ್ಟೇ ಒಳಗಾಗಿದ್ದೇವೆ. ದಿನದ ಬಹುಪಾಲು ಸಮಯ ನಮ್ಮ ಕಿವಿ, ಕಣ್ಣುಗಳು ಮೊಬೈಲ್‌ಗೆ ಅಂಟಿಕೊಂಡಂತೆಯೇ ಇರುತ್ತವೆ. ಈ ಪುಟ್ಟ ಸಾಧನದ ನಿರಂತರ ಬಳಕೆಯು ಸಂವಹನ ಕೌಶಲ, ತಾಳ್ಮೆ, ಏಕಾಗ್ರತೆಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುದು ಸಾಮಾನ್ಯ ಗ್ರಹಿಕೆ. ಅಷ್ಟೇ ಅಲ್ಲ, ಅದರ ಹೊರತಾಗಿ ಫಲವಂತಿಕೆಯೂ ಒಳಗೊಂಡಂತೆ ಹೇಗೆ ಅದು ದೈಹಿಕ ಆರೋಗ್ಯದ ಮೇಲೂ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ಯೋಚಿಸುವುದೂ ಮುಖ್ಯ.

ತಂದೆಯಾಗುವ ಕನಸಿಗೆ ತಡೆಯಾಗುವುದೇ ಸೆಲ್‌ಫೋನ್?
ಮಾನವನ ಆರೋಗ್ಯದ ಮೇಲೆ ವಿದ್ಯುತ್ ಅಯಸ್ಕಾಂತೀಯ ವಿಕಿರಣದ (ಎಲೆಕ್ಟ್ರೊಮ್ಯಾಗ್ನೆಟಿಕ್ ರೇಡಿಯೇಷನ್ - ಇಎಂಆರ್) ಪ್ರಭಾವವನ್ನು ಕುರಿತು ವಿಜ್ಞಾನಿಗಳು ಹಲವು ವರ್ಷಗಳಿಂದ ಸಂಶೋಧನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ಇಎಂಆರ್ ನಮ್ಮ ಸುತ್ತಲೂ ಇರುತ್ತದೆ. ಟಿ.ವಿ, ಲ್ಯಾಪ್‌ಟಾಪ್, ಮೈಕ್ರೋವೇವ್‌ನಂಥ ಗೃಹಬಳಕೆ ವಿದ್ಯುತ್ ಉಪಕರಣಗಳಿಂದ ಅಲ್ಪ ಪ್ರಮಾಣದಲ್ಲಿ ಹಾಗೂ ವೈದ್ಯಕೀಯ ಎಕ್ಸ್‌ರೇಗಳ ಮೂಲದಿಂದ ಅಧಿಕ ಮಟ್ಟದಲ್ಲಿ ಹೊರಸೂಸುತ್ತವೆ. ಇದರ ಜೊತೆಗೆ ಮತ್ತೊಂದು ಮುಖ್ಯ ಉಪಕರಣವೂ ಇದೆ. ಅದೇ ಸೆಲ್‌ಫೋನ್.

ಇಎಂಆರ್‌ಗೂ ಕ್ಯಾನ್ಸರ್, ತಲೆನೋವು, ಫಲವಂತಿಕೆ ಒಳಗೊಂಡಂತೆ ಕೆಲವು ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧವನ್ನು ಇದುವರೆಗೂ ನಡೆದಿರುವ ಹಲವು ಅಧ್ಯಯನಗಳು ಪರಿಶೋಧಿಸಿವೆ. ನಿರಂತರವಾಗಿ ಅಧಿಕ ಮಟ್ಟದಲ್ಲಿ ಇಎಂಆರ್‌ಗಳಿಗೆ ದೇಹ ಒಡ್ಡಿಕೊಳ್ಳುವುದು ಆರೋಗ್ಯ ಸಮಸ್ಯೆಗಳಿಗೆ ಎರವಾಗುತ್ತದೆ ಎಂಬುದು ಒಂದು ಅಂಶವಾಗಿತ್ತು. ಹಾಗಿದ್ದರೆ ಅಲ್ಪ ಮಟ್ಟದ ಇಎಂಆರ್ ಹೊರಸೂಸುವಿಕೆಯು ಯಾವುದೇ ಪರಿಣಾಮ ಬೀರುವುದಿಲ್ಲವೇ? ಅದೂ ತಪ್ಪಿದ್ದಲ್ಲ. ಉದಾಹರಣೆಗೆ, ಮೊಬೈಲ್‌ನಲ್ಲಿ ಆಂಗ್ರಿ ಬರ್ಡ್‌ ಆಟವನ್ನು ನಿರಂತರ ಎರಡು ಗಂಟೆ ಆಡಿದರೆ ಅಥವಾ ಬ್ಲೂಟೂತ್ ಇಲ್ಲದೆಯೇ ಗಂಟಾನುಗಟ್ಟಲೆ ಕಾನ್ಫೆರೆನ್ಸ್ ಕಾಲ್‌ನಲ್ಲಿದ್ದರೂ ಪರಿಣಾಮ ತಪ್ಪಿದ್ದಲ್ಲ. ಇದು ನೇರವಾಗಿ ಫಲವಂತಿಕೆಯ ಸಮಸ್ಯೆಯನ್ನೇ ತಂದೊಡ್ಡಬಹುದು.

ಮೊಬೈಲ್ ಫೋನ್ ಬಳಕೆ ಹಾಗೂ ಫಲವಂತಿಕೆ: ಮೊಬೈಲ್ ಫೋನ್ ಬಳಕೆಗೂ ಆರೋಗ್ಯ ಸಮಸ್ಯೆಗಳಿಗೂ ಇರುವ ನಂಟನ್ನು ದೃಢವಾಗಿ ಸಾಕ್ಷೀಕರಿಸಲು ಹಲವು ವರ್ಷಗಳೇ ಹಿಡಿಯಬಹುದು. ಆದರೂ ಕೆಲವು ಅಧ್ಯಯನಗಳು, ಮೊಬೈಲ್ ಫೋನ್ ಬಳಕೆಯ ಮಟ್ಟ ಹಾಗೂ ವೀರ್ಯಾಣುವಿನ ಗುಣಮಟ್ಟದ ನಡುವಿನ ಸಂಬಂಧದ ಕುರಿತು ಪರಿಶೀಲನೆಗಳನ್ನು ನಡೆಸಿವೆ. ಇತ್ತೀಚೆಗೆ 106 ಪುರುಷರ ಮೊಬೈಲ್ ಫೋನ್ ಬಳಕೆಯ ಅಭ್ಯಾಸವನ್ನು ಕುರಿತು ಅಧ್ಯಯನ ನಡೆಸಿ ವೀರ್ಯವಿಶ್ಲೇಷಣೆಯನ್ನೂ ಮಾಡಲಾಗಿದೆ.

ಪುರುಷರು, ವೃಷಣದ ಸಮೀಪ ಅಥವಾ ಅರ್ಧ ಮೀಟರ್ ಅಂತರದಲ್ಲಿ ಮೊಬೈಲ್ ಫೋನನ್ನು ಇಟ್ಟುಕೊಂಡರೆ ವೀರ್ಯದ ಪ್ರಮಾಣ ಕಡಿಮೆಯಾಗಿ ಫಲವಂತಿಕೆಗೆ ಸಮಸ್ಯೆಯಾಗಬಹುದೆಂಬ ಅಂಶ ಕಂಡುಬಂದಿದೆ. ಇಡೀ ದಿನ ಪ್ಯಾಂಟ್‌ನ ಪ್ಯಾಕೆಟ್‌ನಲ್ಲಿ ಮೊಬೈಲ್ ಇಟ್ಟುಕೊಳ್ಳುವವರಲ್ಲಿ ವೀರ್ಯದ ಶೇಖರಣೆಯು ಅತಿ ಕಡಿಮೆ ಮಟ್ಟದಲ್ಲಾಗಿರುವುದು ದಾಖಲಾಗಿದೆ. ದಿನದಲ್ಲಿ ಒಂದು ಗಂಟೆಗೂ ಹೆಚ್ಚು ಅವಧಿ ಮೊಬೈಲ್ ಬಳಸುವ ಪುರುಷರಲ್ಲಿ, ವೀರ್ಯದ ಶೇಖರಣೆಯಲ್ಲಿ ಶೇ.60ರಷ್ಟು ಅಸಹಜತೆ ಕಂಡುಬಂದಿದ್ದು, ಮೊಬೈಲ್ ಬಳಸದೇ ಇರುವವರಲ್ಲಿ ಇದರ ಪ್ರಮಾಣ ಶೇ.35.

ಸಂಶೋಧನೆ ನಡೆಸಿದ ತಂಡ, ಸೆಲ್‌ಫೋನ್ ಬಳಕೆ ಹೇಗೆ ಪುರುಷರ ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕುರಿತು ಹಿಂದಿದ್ದ ಹತ್ತು ಅಧ್ಯಯನಗಳನ್ನು ಪರಿಶೀಲಿಸಿ ವಿಶ್ಲೇಷಿಸಿದೆ. ಮೊಬೈಲ್ ಬಳಸದೇ ಇರುವ ಪುರುಷರಲ್ಲಿ ಶೇ. 50ರಿಂದ ಶೇ.85ರಷ್ಟು ವೀರ್ಯಾಣುವು ಫಲವಂತಿಕೆಯನ್ನು ಪಡೆಯಲು ಸಮರ್ಥವಾಗಿರುವುದು ಕಂಡುಬಂದಿದೆ. ಮೊಬೈಲ್ ಫೋನ್‌ನ ವಿಕಿರಣಗಳಿಗೆ ಒಳಗಾದವರಲ್ಲೂ ಈ ಸಾಧ್ಯತೆಯಲ್ಲಿ ಶೇ.8ರಷ್ಟು ಇಳಿಕೆ ಕಂಡುಬಂದಿದೆ. ಮೊಬೈಲ್ ಫೋನ್‌ನ ಬಳಕೆಯು ವೀರ್ಯದ ಗುಣಮಟ್ಟ ಹಾಗೂ ಅವುಗಳ ಜೀವಾವಧಿಯಲ್ಲೂ ವ್ಯತ್ಯಾಸವನ್ನುಂಟುಮಾಡುತ್ತದೆ ಎಂದು ‘ಎನ್ವಿರಾನ್‌ಮೆಂಟಲ್ ಇಂಟರ್‌ನ್ಯಾಷನಲ್’ ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಪ್ರಕಟಗೊಂಡ ಅಧ್ಯಯನವೊಂದರ ವರದಿಯು ತಿಳಿಸಿದೆ.

ಪ್ರಪಂಚದಾದ್ಯಂತ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಸಾಕಷ್ಟಿದೆ. ಮಧ್ಯಮ ಹಾಗೂ ಅತಿ ಹೆಚ್ಚು ಆದಾಯ ಗಳಿಸುವ ದೇಶಗಳಲ್ಲಿ ಶೇ.14ರಷ್ಟು ದಂಪತಿಗಳು ಗರ್ಭಧಾರಣೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಅಂಶವನ್ನೂ ಸಂಶೋಧನೆಯೊಂದು ತಿಳಿಸಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಮೊಬೈಲ್‌ನಲ್ಲಿನ ರೇಡಿಯೊ ವಿದ್ಯುತ್ ಕಾಂತೀಯ ವಿಕಿರಣಗಳಿಗೆ ಒಡ್ಡಿಕೊಂಡದ್ದರ ಫಲವೂ ಸೇರಿದೆ.

ಕಾರಣಗಳು ಅಸ್ಪಷ್ಟ: ಮೊಬೈಲ್‌ನ ವಿದ್ಯುತ್ ಕಾಂತೀಯ ವಿಕಿರಣಗಳು ವೀರ್ಯೋತ್ಪತ್ತಿಯ ಪ್ರಕ್ರಿಯೆ ಹಾಗೂ ಡಿಎನ್‌ಎ ಹಾನಿಗೆ ಕಾರಣವಾಗುತ್ತವೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು, ಈ ವಿಕಿರಣಗಳಿಂದ ಉಂಟಾಗುವ ಮೊಬೈಲ್ ಶಾಖವು ವೀರ್ಯದ ಮೇಲೆ ಪರಿಣಾಮ ಬೀರುವ ಅಂಶ ಎಂದು ಹೇಳುತ್ತಾರೆ. ಇದಲ್ಲದೆ ಶೇ. 30ರಿಂದ ಶೇ.40ರಷ್ಟು ಫಲವಂತಿಕೆಯ ಸಮಸ್ಯೆಗಳಲ್ಲಿ ಪುರುಷರ ಫಲವಂತಿಕೆಯ ತೊಂದರೆಗಳ ಪಾಲು ಹೆಚ್ಚಿದೆ.

ಈ ವಿಷಯದ ಮೇಲೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿದ್ದು, ಇವು ಕಳೆದ ಹತ್ತು ವರ್ಷಗಳಲ್ಲಿ, ನಿರಂತರವಾಗಿ ಮೊಬೈಲ್‌ ಉಪಯೋಗಿಸುತ್ತಿರುವವರಲ್ಲಿ ವೀರ್ಯದ ಗುಣಮಟ್ಟ ಕುಸಿದಿರುವುದನ್ನು ದಾಖಲಿಸಿವೆ.ಮೊಬೈಲ್‌ ವಿಕಿರಣಗಳು ಪುರುಷರ ಫಲವಂತಿಕೆಯ ಮೇಲೆ ಪರಿಣಾಮ ಬೀರುವ ಎರಡು ಮುಖ್ಯ ಅಂಶಗಳೆಂದರೆ:

1. ಮೊಬೈಲ್ ಫೋನ್‌ನ ವಿಕಿರಣವು ಸಂತಾನೋತ್ಪತ್ತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಹೈಪೊಥಲಾಮಿಕ್, ಪಿಟ್ಯುಟರಿ, ಥೈರಾಯ್ಡ್, ಅಂಡಾಶಯದ ಕಾರ್ಯವೈಖರಿಗೆ ಅಡ್ಡಿಯುಂಟುಮಾಡುತ್ತದೆ. ಮಹಿಳೆಯರೂ ಈ ವಿಷಯದಲ್ಲಿ ತುಂಬ ಜಾಗರೂಕರಾಗಿರಬೇಕು. ಏಕೆಂದರೆ ಹೈಪೊಥಲಾಮಿಕ್ ಹಾಗೂ ಅಂಡಾಶಯವೂ ಇದರಿಂದ ಪ್ರಭಾವಿತವಾಗುವುದರಿಂದ ಮಹಿಳೆಯರಲ್ಲೂ ಫಲವಂತಿಕೆ ಸಮಸ್ಯೆಗಳೂ ತಲೆದೋರುತ್ತವೆ.

2. ಈ ಸಾಧನದಿಂದ ಹೊರಹೊಮ್ಮುವ ವಿಕಿರಣಗಳು ದೈಹಿಕವಾಗಿ, ಅದರಲ್ಲೂ ಸಾಧನದ ಸಮೀಪವಿರುವ ಜೀವಕೋಶದ ಮೇಲೆ, ಅಡ್ಡ ಪ್ರಭಾವ ಬೀರುತ್ತವೆ.

ಮಹಿಳೆಯರಲ್ಲಿ ಫಲವಂತಿಕೆಯ ಸಮಸ್ಯೆ ಬರುವುದಿಲ್ಲವೇ?: ಈ ಪ್ರಶ್ನೆಗೆ ಇದುವರೆಗೂ ಪೂರಕಸಾಕ್ಷ್ಯ ದೊರೆತಿಲ್ಲ. ಹೀಗೆ ದೊರೆಯದೇ ಇರುವುದಕ್ಕೆ ಕಾರಣ, ಮಹಿಳೆಯರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯ ಮಟ್ಟದ ಪರಿಶೀಲನೆ ಕುರಿತು ಸಾಕಷ್ಟು ಮಾಹಿತಿಯೂ ದೊರೆಯದಿರುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅಂಕಿ–ಅಂಶಗಳು ದೊರೆಯುವ ನಿರೀಕ್ಷೆಗಳಿವೆ. ರೇಡಿಯೊ ತರಂಗಾಂತರ ವಿದ್ಯುತ್ ಕಾಂತೀಯ ವಿಕಿರಣಗಳು ಪ್ರಾಣಿ ಹಾಗೂ ಮನುಷ್ಯರ ಗ್ರಾನುಸುಲಾ ಹಾಗೂ ಅಂಡಾಶಯದ ಫಾಲಿಸೆಲ್ ಸಂಖ್ಯೆ, ಎಂಡೋಮೆಟ್ರಿಯಲ್ ಅಂಗಾಂಶ, ಅಂಡಾಣುವಿನ ಗುಣಮಟ್ಟ, ಭ್ರೂಣದ ಮೇಲೆ ಅಡ್ಡ ಪರಿಣಾಮವನ್ನು ಬೀರುವುದು; ಜೊತೆಗೆ ಗರ್ಭಧಾರಣೆಯ ಸಮಯದಲ್ಲಿ ಭ್ರೂಣದ ಹೃದಯದಲ್ಲೂ ಕೆಲವು ವ್ಯತ್ಯಾಸಗಳಾಗುವುದು ತಿಳಿದುಬಂದಿದೆ.

ಏನು ಮಾಡಬಹುದು?
ಮೊಬೈಲ್ ಫೋನ್ ಬಳಕೆ ಎಲ್ಲರ ಜೀವನದ ಅನಿವಾರ್ಯಯ ಎಂಬಂತಾಗಿದೆ, ನಿಜ. ಆದರೆ ದುರದೃಷ್ಟವೆಂದರೆ, ತಿಳಿದು ತಿಳಿದೂ, ಆರೋಗ್ಯದ ಮೇಲೆ - ಅದರಲ್ಲೂ ಫಲವಂತಿಕೆಯ ಮೇಲೆ ಅದು ಬೀರುವ ಋಣಾತ್ಮಕ ಪರಿಣಾಮಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ವಾಸ್ತವ ಎಂದರೆ, ಕೆಲವು ದಂಪತಿಗಳಿಗೆ, ಈ ರೀತಿ ಅಸುರಕ್ಷಿತ ವಿಕಿರಣಗಳಿಗೆ ಒಡ್ಡಿಕೊಳ್ಳುವುದರೊಂದಿಗೆ ಕೆಲವು ಚಿಕ್ಕಪುಟ್ಟ ಜೀವನಶೈಲಿ ಅಂಶಗಳು ಕೂಡ ಮಗುವನ್ನು ಪಡೆಯಲು ಅಸಾಧ್ಯವಾಗುವಂಥ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಈ ವಿಕಿರಣಗಳಿಂದ ದೂರ ಉಳಿಯುವುದೇ ಆರೋಗ್ಯವನ್ನು ಕಾಪಾಡಿಕೊಳ್ಳುವ ಉತ್ತಮ ಮಾರ್ಗ.

ಮೊಬೈಲ್‌ ವಿಕಿರಣಗಳಂಥವುಗಳಿಂದ ಪೂರ್ಣವಾಗಿ ದೂರ ಉಳಿಯುವುದು ಇಂದಿನ ಕಾಲಧರ್ಮದಲ್ಲಿ ಅಸಾಧ್ಯ. ಏಕೆಂದರೆ ಎಲ್ಲ ಕಡೆಯೂ ಅಂಥ ವಿಕಿರಣಗಳು ಇದ್ದೇ ಇರುತ್ತವೆ. ಆದರೆ ಕೆಲವು ಎಚ್ಚರಿಕೆಗಳನ್ನು ಅನುಸರಿಸಿದರೆ ಅಂಥವುಗಳಿಂದ ಎದುರಾಗಬಹುದಾದ ಕೆಟ್ಟ ಪರಿಣಾಮಗಳ ಮಟ್ಟವನ್ನು ಸ್ವಲ್ಪವಾದರೂ ತಗ್ಗಿಸಬಹುದು.
ಮೊಬೈಲ್ ಬಳಕೆಯನ್ನು ಆದಷ್ಟೂ ತಗ್ಗಿಸುವುದು. ಇದಕ್ಕೆ ಬದಲಾಗಿ ಲ್ಯಾಂಡ್‌ಲೈನ್ ಫೋನ್ ಅಥವಾ ಹಳೆ ಫ್ಯಾಷನ್ನಿನ ಕಾರ್ಡೆಡ್ ಫೋನ್ ಬಳಕೆಯನ್ನು ಮತ್ತೆ ಚಾಲ್ತಿಗೆ ತರಬಹುದು.

ಬಳಸದಿರುವಾಗ ಮೊಬೈಲನ್ನು ನಮ್ಮ ಶರೀರದಿಂದ ಆದಷ್ಟು ದೂರ ಇಡುವುದು; ಬಳಸುವಾಗಲೂ ಸ್ಪೀಕರ್ ಬಳಕೆ ಒಳ್ಳೆಯದು. ಮೊಬೈಲನ್ನು ಪಾಕೆಟ್‌ನಲ್ಲಿಟ್ಟುಕೊಳ್ಳದೇ ಇರುವುದು. ಅದಕ್ಕೆಂದೇ ಈಗ ಪುರುಷರ ಹಲವು ಸ್ಟೈಲಿಶ್ ಬ್ಯಾಗ್‌ಗಳೇ ಬಂದಿವೆ. ರಾತ್ರಿ ಮಲಗುವಾಗ ಮೊಬೈಲ್ ಅಲಾರಂ ಇಡುವುದನ್ನು ತಪ್ಪಿಸಿ. ಬ್ಯಾಟರಿ ಆಧಾರಿತ ಅಲಾರಂ ಗಡಿಯಾರದ ಬಳಕೆ ಒಳ್ಳೆಯದು. ವಿಕಿರಣಗಳನ್ನು ಕಡಿಮೆ ಮಾಡುವ ಮೊಬೈಲ್ ಕವರ್‌ಗಳನ್ನು ಬಳಸಿ. ಹೀಗೆ ವಿಕಿರಣಗಳಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಉಳಿಯಲು ಪ್ರಯತ್ನಿಸುವುದು ಫಲವಂತಿಕೆ ಕಾರಣಕ್ಕಷ್ಟೆ ಒಳ್ಳೆಯದಲ್ಲದೆ, ಆರೋಗ್ಯಕರ ಮಗುವನ್ನು ಪಡೆಯಲೂ ಅನುಕೂಲ. ಆಗಾಗ ವೀರ್ಯದ ಮಟ್ಟ ಹಾಗೂ ಗುಣಮಟ್ಟ ಆರೋಗ್ಯಕರವಾಗಿದೆಯೇ, ಡಿಎನ್‌ಎ ಹಾನಿಯಾಗಿದೆಯೇ – ಎಂಬುದನ್ನೂ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT