ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 30 ಜೂನ್ 2017, 19:30 IST
ಅಕ್ಷರ ಗಾತ್ರ

1. ನನ್ನ ಹೆಸರು ಮೇಘಾ. ತಂದೆ–ತಾಯಿಗೆ ನಾನು ಮತ್ತು ತಮ್ಮ – ಇಬ್ಬರು ಮಕ್ಕಳು. ತಮ್ಮ ಅಂಗವಿಕಲ. ಅವನಿಗೆ ನಡೆಯುವುದಕ್ಕೆ ಆಗುವುದಿಲ್ಲ. ಅವನ ಕಾಯಿಲೆಗೆ ಔಷಧವಿಲ್ಲ ಎಂದು ಡಾಕ್ಟರ್ ಕೈ ಚೆಲ್ಲಿದ್ದಾರೆ. ಮನೆಯಲ್ಲೇ ಅವನನ್ನು ನೋಡಿಕೊಳ್ಳುತ್ತಿದ್ದೇವೆ. ನಾನು ಪಿ.ಯು. ಮುಗಿಸಿ ಬಿ.ಎಸ್ಸಿ. ಅಗ್ರಿಕಲ್ಚರ್ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದೆ. ಆದರೆ ಮನೆಯವರ ಆಸೆಯಂತೆ ಎಂಜಿನಿಯರಿಂಗ್ ಮುಗಿಸಿದೆ. ನನಗೆ ಕೆಲಸ ಮಾಡಿಕೊಂಡು ಹೊರ ಜಗತ್ತನ್ನು ನೋಡಬೇಕು ಎಂಬುದು ಆಸೆ. ಆದರೆ ಮನಯಲ್ಲಿ ಇರುವ ಸಮಸ್ಯೆಗಳು ನನ್ನನ್ನು ಏನು ಮಾಡದ ಹಾಗೇ ಕಟ್ಟಿಹಾಕುತ್ತಿದೆ. ಉನ್ನತ ವ್ಯಾಸಂಗ ಮಾಡು – ಎಂದು ಮನೆಯಲ್ಲಿ ಹೇಳುತ್ತಿರುವುದಾದರೂ ನನಗೆ ಓದುವುದಕ್ಕಿಂತಲೂ ಕೆಲಸ ಮಾಡಬೇಕು ಎನ್ನುವುದೇ ಇಷ್ಟ. ನಮ್ಮದು ಮಾಧ್ಯಮವರ್ಗದ ಕುಟುಂಬ. ಅಪ್ಪ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅವರಿಗೆ ಕೆಲಸದ ಒತ್ತಡ ಜಾಸ್ತಿ. ನನ್ನ ತಮ್ಮನ ಪ್ರತಿಯೊಂದು ಕೆಲಸವನ್ನು ಅಮ್ಮ ಒಬ್ಬರೇ ಮಾಡಲು ಸಾಧ್ಯವಿಲ್ಲ. ಅವರ ಜೊತೆಗೆ ಸಹಾಯಕ್ಕೆ ಒಬ್ಬರು ಬೇಕೆ ಬೇಕು. ಆ ಕಾರಣಕ್ಕೆ ನಾನು ಕೆಲಸಕ್ಕೆ ಹೋಗದೆ, ಮುಂದೆ ಓದಲು ಹೋಗದೆ ಒಂದು ವರ್ಷ ಕಳೆದೆ. ನಾನು ಸ್ವಲ್ಪ ಎತ್ತರ ಕಡಿಮೆ. ಹೀಗಾಗಿ ಮದುವೆ ಕೂಡ ತಡವಾಗುತ್ತಿದೆ. ನಾನು ದಡ್ಡಿ. ಎಲ್ಲದರಲ್ಲೂ ಡಲ್‌. ಯಾವುದರಲ್ಲೂ ಆಸಕ್ತಿ ಇಲ್ಲ. ವಿಷಯಗಳು ಅರ್ಥ ಆದ್ರೂ ಪ್ರಾಯೋಗಿಕವಾಗಿ ಸೋಲುವಂತ ಪೆದ್ದು ಹುಡುಗಿ. ಹತ್ತಿರದ ಸ್ನೇಹಿತೆಯರೂ ಇಲ್ಲ, ನಾನೇ ಕೊರಗುತ್ತಿರುವೆ. ನಾನು ಏನು ಮಾಡಲಿ?
ಅಂಗವಿಕಲರನ್ನು ಮನೆಯಲ್ಲಿ ನೋಡಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ನನಗೆ ಅರ್ಥವಾಗುತ್ತದೆ. ನೀವು ಮನೆಯವರೆಲ್ಲರೂ ಸೇರಿ ನಿಮ್ಮ ತಮ್ಮನನ್ನು ನೋಡಿಕೊಳ್ಳಬೇಕು. ಅದು ನಿಮ್ಮೆಲ್ಲರ ಜವಾಬ್ದಾರಿ ಕೂಡ. ನೀವು ಓದನ್ನು ಮುಂದುವರಿಸಿ ಅಥವಾ ಕೆಲಸಕ್ಕೆ ಸೇರಿಕೊಳ್ಳಿ. ಆಗ ನೀವು ಬ್ಯುಸಿ ಆಗಿರಬಹುದು. ಇದರೊಂದಿಗೆ ಸರಿಯಾಗಿ ಪ್ಲಾನ್ ಮಾಡಿಕೊಂಡರೆ ಕೆಲಸದ ಜೊತೆ ನಿಮ್ಮ ತಮ್ಮನ ಜವಾಬ್ದಾರಿಯನ್ನೂ ಹಂಚಿಕೊಳ್ಳಬಹುದು. ತಂದೆ–ತಾಯಿ ನಿಮಗೆ ಸರಿ ಹೊಂದುವ ಹುಡುಗನನ್ನು ಹುಡುಕುವವರೆಗೂ ಕೆಲಸ ಅಥವಾ ಓದನ್ನು ಮುಂದುವರೆಸಿ. ಜೊತೆಗೆ ಉತ್ತಮ ಪುಸ್ತಕಗಳನ್ನು ಓದುವ ಮೂಲಕ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಪ್ರತಿಯೊಬ್ಬರಿಗೂ ಜೀವನದಲ್ಲಿ ಅವರದೇ ಆದ ಹಂಚಿಕೊಳ್ಳುವ ಜವಾಬ್ದಾರಿ ಇದೆ ಎಂಬುದನ್ನು ಮರೆಯಬೇಡಿ. ನಾನು ಯಾವುದಕ್ಕೂ ಉಪಯೋಗಕ್ಕಿಲ್ಲ ಎಂಬ ತಿರ್ಮಾನಕ್ಕೆ ಬರಬೇಡಿ.

2. ನನ್ನ ಹೆಸರು ರಾಮು. ವಯಸ್ಸು 20. ನನಗೆ ಗೆಳೆಯರ ಜೊತೆ ಬೆರೆಯಲು ಮುಜುಗರವಾಗುತ್ತದೆ. ಎಲ್ಲರೂ ನನ್ನನ್ನು ದಡ್ಡ, ಮಾತಿನ ಅರ್ಥ ತಿಳಿಯುವುದಿಲ್ಲ, ಮಾತನಾಡಲು ಬರುವುದಿಲ್ಲ ಎನ್ನುತ್ತಾರೆ. ಇದರಿಂದ ನನಗೆ ತುಂಬಾ ಬೇಸರವಾಗುತ್ತದೆ. ಯಾಕಾದರು ಬದುಕಿದ್ದೇನೋ ಅನ್ನಿಸುತ್ತಿದೆ.
ನೀವು ಓದುತ್ತಿದೀರಾ ಅಥವಾ ಕೆಲಸ ಮಾಡುತ್ತೀದ್ದೀರಾ ಎಂಬುದನ್ನು ನೀವು ತಿಳಿಸಿಲ್ಲ. ಬಿಡಿ, ಓದಾಗಲಿ, ಕೆಲಸವಾಗಲಿ ಅದು ಒಂದು ಮುಖ್ಯ ವಿಷಯವೇ. ಕಾಲೇಜು ಜೀವನದಲ್ಲಿ ಇದೆಲ್ಲವೂ ತಮಾಷೆ. ನೀವು ಅದನ್ನು ಹಗುರವಾಗಿ ಪರಿಗಣಿಸಬಹುದು. ಆದರೆ ನೀವು ಕೆಲಸ ಮಾಡುತ್ತಿದ್ದ ಜಾಗದಲ್ಲಿ ನಿಮ್ಮನ್ನು ಹೀಯಾಳಿಸುತ್ತಿದ್ದರೆ ’ಯಾಕೆ ಹೀಗೆ ನನ್ನನ್ನು ಹೀಯಾಳಿಸುತ್ತೀರಾ?’ ಎಂದು ಸ್ನೇಹಿತರ ಬಳಿ ಧೈರ್ಯವಾಗಿ ಕೇಳುವ ಅಧಿಕಾರ ನಿಮಗಿದೆ. ನಿಮ್ಮಲ್ಲಿ ಏನು ಕೊರತೆ ಇದೆ ಎಂಬುದನ್ನು ತಿಳಿದುಕೊಂಡು, ಆ ಕೊರತೆಯನ್ನು ಹೇಗೆ ನೀಗಿಸಿಕೊಳ್ಳಬಹುದು ಎಂಬುದನ್ನು ನಿಮ್ಮ ಸ್ನೇಹಿತರಿಂದ ಕೇಳಿ ತಿಳಿದುಕೊಳ್ಳಿ. ಆಗಲೂ ಅವರು ನಿಮ್ಮನ್ನು ಹೀಯಾಳಿಸಿದರೆ ಅವರು ನಿಮಗೆ ನಿಜವಾದ ಸ್ನೇಹಿತರಲ್ಲ. ಅವರಿಂದ ದೂರವಿರಿ.

3. ನನ್ನ ಹೆಸರು ಪ್ರಿಯಾಂಕ, ನಾನು ಬಿ.ಎ. ಓದುತ್ತಿದ್ದೇನೆ. ಎಂಜಿನಿಯರಿಂಗ್‌ನ ಕೆಲವು ವಿಷಯಗಳಲ್ಲಿ ಫೇಲ್ ಆಗಿ, ಮಾನಸಿಕವಾಗಿ ನೊಂದಿದ್ದೇನೆ. ಅಲ್ಲದೇ ನನಗೆ ಧೈರ್ಯ ಕಡಿಮೆ. ಮಾತು ಕಡಿಮೆ. ಜನರ ಜೊತೆ ಹೊಂದಿಕೊಳ್ಳಲು ಬರುವುದಿಲ್ಲ, 10ನೇ ತರಗತಿಯಲ್ಲಿದ್ದಾಗ ಕನ್ನಡ ಮತ್ತು ಇತಿಹಾಸ ವಿಷಯದ ಮೇಲೆ ಆಸಕ್ತಿ ಜಾಸ್ತಿ ಇತ್ತು. ಈಗ ನಾನು ಬಿ.ಇ. ಮುಗಿದ ಮೇಲೆ ಟೆಕ್ನಿಕಲ್‌ ವಿಷಯ ಆಯ್ಕೆ ಮಾಡಿಕೊಳ್ಳಲೇ ಅಥವಾ ನಾನ್‌ಟೆಕ್ನಿಕಲ್‌ ವಿಷಯದ ಮೇಲೆ ಕೆಲಸಕ್ಕೆ ಸೇರಿಕೊಳ್ಳಲೇ ಎಂಬ ಗೊಂದಲದಲ್ಲಿದ್ದೇನೆ.
ನೀವು ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡಿದ್ದೀರಿ. ನಿಮ್ಮ ಕೋರ್ಸನ್ನು ಮುಗಿಸುವುದರ ಮೇಲೆ ಗಮನ ಇರಲಿ. ಉತ್ತಮ ಅಂಕಗಳೊಂದಿಗೆ ಎಂಜಿನಿಯರಿಂಗ್ ಪಾಸ್‌ ಮಾಡುತ್ತೇನೆ ಎಂಬ ಗುರಿಯನ್ನು ಇರಿಸಿಕೊಳ್ಳಿ. ಇದರಿಂದ ಕ್ಯಾಂಪಸ್‌ನಲ್ಲಿ ಆಯ್ಕೆಯಾಗಿ ಉತ್ತಮ ಕೆಲಸ ಗಿಟ್ಟಿಸಿಕೊಳ್ಳಬಹುದು. ಅದಕ್ಕೆ ಹೆಚ್ಚು ಆದ್ಯತೆ ನೀಡಿ. ಇದರ ಜೊತೆಗೆ ನಿಮಗೆ ಆಸಕ್ತಿ ಇರುವ ಇತಿಹಾಸ ಹಾಗೂ ಭಾಷಾವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿ, ನಿಮ್ಮದೇ ಒಂದು ಬ್ಲಾಗ್ ತೆರೆಯಿರಿ. ಅದರಲ್ಲಿ ನಿಮಗೆ ಇಷ್ಟವಾದ ವಿಷಯಗಳ ಬಗ್ಗೆ ಆಗಾಗ ಬರೆಯುತ್ತಿರಿ. ಎಂಜಿನಿಯರಿಂಗ್ ಜೊತೆಜೊತೆಗೆ ಪತ್ರಿಕೋದ್ಯಮವನ್ನು ಹವ್ಯಾಸವಾಗಿರಿಸಿಕೊಳ್ಳಿ.

4. ನನ್ನ ಹೆಸರು ಕವನ. ನಾನು ಬಿ.ಇ. ಓದುತ್ತಿದ್ದೇನೆ. ನನನಗೆ ಕ್ಲಾಸಿನಲ್ಲಿ ಕುಳಿತು ಪಾಠ ಕೇಳಲು ಆಗುತ್ತಿಲ್ಲ. ಅಧ್ಯಾಪಕರು ಬಂದು ಐದು ನಿಮಿಷಗಳು ಆಗುವಷ್ಟರಲ್ಲೇ ನಿದ್ದೆ ಆವರಿಸಿಕೊಂಡು ಬಿಡುತ್ತದೆ. ಇದರಿಂದ ಪಾಠ ಕೇಳಲು ಆಗುತ್ತಿಲ್ಲ. ಮನೆಯಲ್ಲಿ ಓದವಾಗಲೂ ಕೂಡ ತುಂಬ ನಿದ್ದೆ ಬರುತ್ತದೆ. ನಿದ್ದೆಯನ್ನು ಹೇಗೆ ನಿಗ್ರಹಿಸಿಕೊಳ್ಳಬೇಕು ಎಂಬುದು ನನಗೆ ತಿಳಿಯುತ್ತಿಲ್ಲ. ಸಲಹೆ ಕೊಡಿ.
ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ತರಹದ ಸಮಸ್ಯೆಗಳು ಕಾಣಿಸಿಕೊಳ್ಳಬಾರದು. ಇದು ನಿಮ್ಮ ದೇಹ ಹಾಗೂ ಮನಸ್ಸಿನ ಆಲಸ್ಯವನ್ನು ಸೂಚಿಸುತ್ತದೆ. ಇದಕ್ಕೆ ಕಾರಣ ಹಲವಿರಬಹುದು. ಸರಿಯಾದ ವ್ಯಾಯಾಮ, ಅಕಾಲದಲ್ಲಿಯ ಆಹಾರಸೇವನೆ ಅಥವಾ ದೈಹಿಕವಾದ ಕೆಲವು ಸಮಸ್ಯೆಗಳು ಇದಕ್ಕೆ ಕಾರಣವಾಗಿರಬಹುದು. ನಡಿಗೆ, ಯೋಗ, ಪ್ರಾಣಾಯಾಮ ಸೇರಿದಂತೆ ಪ್ರತಿದಿನವೂ ತಪ್ಪದೇ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿ. ಸಮತೋಲನದ ಆಹಾರಸೇವನೆಯ ಕ್ರಮವನ್ನು ರೂಢಿಸಿಕೊಳ್ಳಿ. ಆಗಲೂ ನಿಮಗೆ ಹಳೆಯ ಅನುಭವಗಳೇ ಮುಂದುವರೆದರೆ ವೈದ್ಯರ ಸಲಹೆಯನ್ನು ಪಡೆಯಿರಿ. ನಿಮ್ಮ ದೇಹದಲ್ಲಿಯ ಯಾವುದೋ ಒಂದು ಅಂಶದ ಕೊರತೆಯಿಂದ ಈ ಸಮಸ್ಯೆ ಕಾಣಿಸಿಕೊಂಡಿರಬಹುದು.

–ಸುನೀತಾ ರಾವ್‌
ಆಪ್ತ ಸಮಾಲೋಚಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT