ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂದಾಣಿಕೆಯೇ ಆಧಾರ

Last Updated 30 ಜೂನ್ 2017, 19:30 IST
ಅಕ್ಷರ ಗಾತ್ರ

ಮದುವೆಗೆ ಮುಂಚೆಯೇ ಪ್ರೀತಿಯ ಮಳೆ ಸುರಿಸಲು ಪ್ರಾರಂಭಿಸಿದ ನನ್ನವರು ಮದುವೆಯ ನಂತರವೂ ಪ್ರೀತಿಯ ಹೊಳೆಯಲ್ಲಿ ತೇಲಿಸಿದರು. ಆದರೆ ದಿನಗಳು ಕಳೆದಂತೆ ಸಂಸಾರದ ತಾಪತ್ರಯಗಳು ಪ್ರಾರಂಭವಾದವು.

ಮದುವೆ ಎಂಬುದು ಗಂಡಿಗಿಂತ ಹೆಣ್ಣಿಗೆ ಹೆಚ್ಚು ಭಾವನಾತ್ಮಕವಾಗಿ ಕಾಡುವ ಪ್ರಕ್ರಿಯೆ. ತಾನು ಹುಟ್ಟಿ ಬೆಳೆದ ಕುಟುಂಬ, ಪರಿಸರಗಳನ್ನು ಬಿಟ್ಟು ಮತ್ತೊಂದು ಕುಟುಂಬ, ಪರಿಸರದಲ್ಲಿ ಮುಂದಿನ ಜೀವನಪರ್ಯಂತ ಬಾಳ್ವೆ ನಡೆಸಬೇಕು. ಆದ್ದರಿಂದ ಹೆಣ್ಣಿನ ಮನದಲ್ಲಿ ತವಕ, ಭಯ, ತಲ್ಲಣಗಳು ಉಂಟಾಗುವುದು ಸಹಜ.

ನನ್ನ ತಂದೆ–ತಾಯಿ ನನಗೆ ಆದಷ್ಟು ಹೊಂದುವಂತಹ ಹುಡುಗನನ್ನೇ ಹುಡುಕಿದ್ದರೂ ನನ್ನ ಮನದಲ್ಲಿ ಭಯವಿತ್ತು. ರಾಜಧಾನಿಯಲ್ಲಿ ಹುಟ್ಟಿ ಬೆಳೆದ ನನಗೆ ಇತರ ನಗರ–ಪಟ್ಟಣಗಳು ಅಪರಿಚಿತವಾಗಿದ್ದವು. ಮದುವೆ ನಿಶ್ಚಯವಾದಗಿನಿಂದ ಮದುವೆ ದಿನದವರೆಗೂ ನಮ್ಮಿಬ್ಬರ ನಡುವೆ (ಮೊಬ್ಯೆಲ್ ಇಲ್ಲದ ಕಾಲವದು) ಪತ್ರವ್ಯವಹಾರ ನಡೆಯಿತು.

ಇದರಿಂದ ನನ್ನಲ್ಲಿದ್ದ ಕೆಲವೊಂದು ತಲ್ಲಣಗಳಿಗೆ ಪರಿಹಾರ ಸಿಕ್ಕಿತು. ಸಾಕಷ್ಟು ಸಾಮಾಜಿಕ ಕಥೆ–ಕಾದಂಬರಿಗಳನ್ನು ಓದಿದ್ದ ನಾನು, ನನ್ನದು ಆದರ್ಶ ದಾಂಪತ್ಯ ಜೀವನವಾಗಬೇಕು – ಎಂಬ ಕನಸನ್ನು ಕಟ್ಟಿಕೊಂಡಿದ್ದೆ. ನನ್ನ ಕನಸಿಗೆ ಪೂರಕವಾಗಿಯೇ ನನ್ನ ಹುಡುಗನ ಪತ್ರಗಳ ಸರಮಾಲೆಗಳು ಬರುತ್ತಿದ್ದವು.

ಮದುವೆಗೆ ಮುಂಚೆಯೇ ಪ್ರೀತಿಯ ಮಳೆ ಸುರಿಸಲು ಪ್ರಾರಂಭಿಸಿದ ನನ್ನವರು ಮದುವೆಯ ನಂತರವೂ ಪ್ರೀತಿಯ ಹೊಳೆಯಲ್ಲಿ ತೇಲಿಸಿದರು. ಆದರೆ ದಿನಗಳು ಕಳೆದಂತೆ ಸಂಸಾರದ ತಾಪತ್ರಯಗಳು ಪ್ರಾರಂಭವಾದವು.

ಇಕ್ಕಟ್ಟಾದ, ಸಾಕಷ್ಟು ಅನುಕೂಲವಿಲ್ಲದ ಮನೆ, ನೀರಿಗೆ ಕೊಡ ಹಿಡಿದು ರಸ್ತೆಯ ಹೊಂಡಕ್ಕೆ ಹೋಗಬೇಕು, ಕರೆಂಟ್ ಸರಿಯಾಗಿರುವುದಿಲ್ಲ, ರಸ್ತೆಗಳಿಲ್ಲದ ಚರಂಡಿ ವಾಸನೆಯ ಊರಿನಲ್ಲಿ ವಾಸಮಾಡುವುದು ಸಾಕಾಗಿ ತವರಿಗೆ ಓಡಿಹೋಗಬೇಕೆನಿಸುತ್ತಿತ್ತು. ಗಂಡನಿಗೆ ಮೂರುನಾಲ್ಕು ವರ್ಷಕ್ಕೊಮ್ಮೆ ಊರಿಂದೂರಿಗೆ ವರ್ಗವಾಗುವ ಕೆಲಸವಿದ್ದುದರಿಂದ ಈ ಎಲ್ಲ ಕಷ್ಟಗಳನ್ನು ಅನುಭವಿಸುವುದು ಅನಿವಾರ್ಯವಾಗಿದ್ದವು.

ಪತಿಯ ಸಂಪೂರ್ಣ ಸಹಕಾರ ಮತ್ತು ಪ್ರೀತಿಯ ಆಸರೆಯಿದ್ದುದರಿಂದ ಹೊಂದಾಣಿಕೆಯ ದೋಣಿಯಲ್ಲಿ ತೇಲಿದೆ. ಅಂತೂ ಮೂವತ್ತು ವರ್ಷಗಳ ದಾಂಪತ್ಯಜೀವನದಲ್ಲಿ ಕೋಪ, ದುಖಃ ನಿರಾಶೆ, ನೋವು, ಸಂಕಟಗಳ ಸರಮಾಲೆಗಳಿದ್ದರೂ ನಮ್ಮಿಬ್ಬರಲ್ಲಿದ್ದ ಅಗಾಧವಾದ ಪ್ರೀತಿಯು ಅವುಗಳಿಂದ ನಮ್ಮನ್ನು ಪಾರುಮಾಡಿತು. ಸಾರ್ಥಕ ವಿವಾಹಜೀವನಕ್ಕೆ ಪರಸ್ಪರ ಪ್ರೀತಿ–ಹೊಂದಾಣಿಕೆಗಳೇ ಆಧಾರ ಎಂಬುದು ನಮಗೆ ಅರಿವಾಗಿದೆ.

ಬಿ. ಶೋಭಾ ಅರಸ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT