ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆಮನೆಯ ಶ್ರುತಿಗೆ ಸಂಗೀತದ ಪಾಕ

Last Updated 30 ಜೂನ್ 2017, 19:30 IST
ಅಕ್ಷರ ಗಾತ್ರ

- ಸ್ವಯಂಪ್ರಭಾ ಮಹೇಶ್ ಹೆಗಡೆ

ಬಾಲ್ಯದಿಂದಲೂ ಎಲ್ಲರಿಗೂ ಒಂದಲ್ಲ ಒಂದು ಹವ್ಯಾಸದ ಸೆಳೆತ. ಆದರೆ ಅದನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳಲೂ ಬೆಳಸಿಕೊಳ್ಳಲೂ ಆಗದು. ಅದರಲ್ಲೂ ಹೆಣ್ಣಿನ ವಿಷಯದಲ್ಲಿ ಇದು ಮತ್ತಷ್ಟು ನಿಜ. ಮದುವೆಯಾಯಿತು ಎಂದರೆ ಹೆಣ್ಣಿನ ಪಾಲಿಗೆ ಅದು ಎಲ್ಲ ಆಸೆ–ಹವ್ಯಾಸಗಳ ಕೊನೆ. ಹೀಗಿದ್ದರೂ ಅವಳು ತನ್ನ ದಿನಚರಿಯನ್ನು ಜಾಣ್ಮೆಯಿಂದ ವ್ಯವಸ್ಥೆಗೊಳಿಸಿಕೊಂಡರೆ ಹವ್ಯಾಸಗಳಿಗೂ ಸಮಯವನ್ನು ಹೊಂದಿಸಿಕೊಳ್ಳಲು ಸಾಧ್ಯ. ಮನೆಕೆಲಸಗಳ ಆಧಾರಶ್ರುತಿಯಲ್ಲಿ ಸಂಗೀತದ ಅಭ್ಯಾಸ ಹೇಗೆ ನಡೆಯುತ್ತದೆ ಎಂದು ನಿರೂಪಿಸುತ್ತಿದೆ, ಈ ಬರಹ...

ಅಹಿರ್ ಭೈರವದ ಒಂದೊಂದೇ ಸ್ವರಗಳು, ಹೊರಗೆ ಮೂಡುತ್ತಿರುವ ಮುಂಜಾವನ್ನು ಒಂದೊಂದೇ ಎಳೆಯಾಗಿ ಒಳಗೆಳೆದು ತನ್ನ ಮನೆಯೊಳಗಷ್ಟೇ ಅಲ್ಲ ಮನದೊಳಗೂ ಚೂರು ಚೂರೇ ಬೆಳಕಾದಂತೆ ಅನಿಸುತ್ತಿದೆ ಆಕೆಗೆ. ಸಮಯವಿನ್ನೂ ಐದು ಮುಕ್ಕಾಲು. ಎಲ್ಲ ಗಡಿಬಿಡಿಯ ದಿನಗಳಂತೆ ಇದೂ ಒಂದು ದಿನ, ಏನಿಟ್ಟುಕೊಂಡಿದೆಯೋ ತನ್ನ ಗರ್ಭದೊಳಗೆ, ಅವಳಿಗೆ ಅದರ ಅರಿವಿಲ್ಲ. ಅವಳಿಗದು ಬೇಕಾಗಿಯೂ ಇಲ್ಲ. ಗಂಡ, ಮಗ – ಇನ್ನೂ ಮಲಗಿದ್ದಾರೆ, ಅವರು ಏಳುವುದಕ್ಕೆ ಇನ್ನೂ ಹೊತ್ತಿದೆ.

ತಾನೊಬ್ಬಳೇ ಎದ್ದು ತುದಿಗಾಲಲ್ಲಿ ಹೊರಬಂದಿದ್ದಾಳೆ ಅವಳು. ತನ್ನ ಬಿದ್ದು ಒಡೆದು ಗೀರು ಗೀರಾದ ಮೊಬೈಲಿನಲ್ಲಿ ಕಿಶೋರಿ ಅಮೋನ್ಕರಳು ಹಾಡಿದ ಅಹಿರ್ ಭೈರವ್ ರಾಗವನ್ನು ಹಚ್ಚಿ ಸುಮ್ಮನೆ ಕುಳಿತಿದ್ದಾಳೆ. ಒಬ್ಬನ ಹೆಂಡತಿಯಾಗಿ, ಮತ್ತೊಬ್ಬನ ತಾಯಾಗಿ ಮಾರ್ಪಾಡಾಗಲು ಅವಳಿಗಿನ್ನೂ ಅರ್ಧ ತಾಸು ಸಮಯವಿದೆ.

ಆ ಅರ್ಧ ತಾಸು ಅವಳದೇ. ಆ ಅಮೂಲ್ಯವಾದ ಅರ್ಧ ತಾಸಿನ ಅವಧಿಯಲ್ಲಿ ಯಾವ ಉಪಮಾಲಂಕಾರಗಳ ಹಂಗಿಲ್ಲದೇ, ಯಾವ ನಿರೀಕ್ಷೆಗಳ ಭಾರವಿಲ್ಲದೇ, ಅವಳು ಮತ್ತು ಅವಳ ಸಂಗೀತ – ಇಬ್ಬರೇ, ಹೊಸ ದಿನದ ಅನೂಹ್ಯ ತಿರುವಿನಲ್ಲಿ ಕೈ ಕೈ ಹಿಡಿದು ನಿಂತಿದ್ದಾರೆ. ಅಹಿರ್ ಭೈರವ್ ಬೆಳಕಿನಂತೆ ಸುರಿಯುತ್ತಿದೆ, ಹೊರಗೆ ತಂಗಾಳಿಯದೇನೋ ಮಾತಿಗೆ ಕುಲು ಕುಲು ನಗುತ್ತಿರುವ ಮಂದಾರಗಿಡದ ಎಲೆಗಳಿಂದ ಹಿಡಿದು, ಇಲ್ಲಿ ಬಾಲ್ಕನಿಯ ಸಜ್ಜೆಯ ಮೇಲೆ ಸಾಯುತ್ತದೇನೋ, ಬೆಳಕಿಗಾಗಿಯೇ ಕಾಯುತ್ತಿದೆಯೇನೋ ಎಂಬಂತೆ ಬಿದ್ದುಕೊಂಡಿರುವ ಹಳದಿಚಿಟ್ಟೆಯ ನಿರೀಕ್ಷೆಯವರೆಗೆ ಸರ್ವವ್ಯಾಪಿಯಾಗಿ ಪ್ರವಹಿಸುತ್ತಿದೆ.

ಗಡಿಯಾರವನ್ನೊಮ್ಮೆ ನೋಡುತ್ತಾಳೆ ಅವಳು. ಇನ್ನೊಂದೈದು ನಿಮಿಷ ಇದೆ, ಹೆಂಡತಿ, ತಾಯಿಯ ‘ವೇಷ’ವನ್ನು ಹಾಕಲು. ಪಂಚಮದ ನಂತರ ಆಶ್ಚರ್ಯಕರ ರೀತಿಯಲ್ಲಿ ಆರ್ತವಾಗುವ ದೈವತವನ್ನು ಮುಟ್ಟಿಯೂ ಮುಟ್ಟದಂತೆ ಮಧ್ಯಮಕ್ಕಳಿಯುತ್ತಿದ್ದಾಳೆ, ಕಿಶೋರಿ ತಾಯಿ. ಒಮ್ಮೆ ತನ್ನ ಚಿತ್ತವನ್ನೂ ಕಿಶೋರಿಯೊಡನೆ ಧೈವತದ ಮೇಲೆ ಚಿಮ್ಮಿಸಿ, ಮಧ್ಯಮದ ಮೇಲೆ ಕೂರಿಸಿ ಧನ್ಯಳಾಗುತ್ತಾಳೆ, ಮೆಲ್ಲಗೆ ಮೊಬೈಲೆತ್ತಿಕೊಂಡು ಅಡುಗೆಮನೆಯೆಡೆಗೆ ಹೆಜ್ಜೆಯಿಡುತ್ತಾಳೆ.

ಕಿಶೋರಿಯ ಅಭಯಹಸ್ತದಂಥ ಅಹಿರ್ ಭೈರವದ ಹಿನ್ನೆಲೆಯಲ್ಲಿ ಇಗೋ ದಿನದ ಮೊದಲ ಅಂಕ ಶುರು. ತಿಂಡಿಗೇನೂ? - ಅನ್ನಕ್ಕಿಡು - ಬೇಳೆಯೂ ಬೇಕಲ್ಲ- ಛೇ ಸಕ್ಕರೆ ಖಾಲಿ (ಪುಟ್ಟನಿಗೆಂದು ತಂದಿಡುವ ಕೆಂಪು ಕಲ್ಲುಸಕ್ಕರೆಯೆಲ್ಲಿ? ಎಲ್ಲಿ ಆ ಆಪದ್ಬಾಂಧವ?) - ದೋಸೆ ಮೇಲೆ ದೋಸೆ - ಚೊಂಯ್ ಎನ್ನುವ ಆಸೆ - ಕಾಯಿ ಕರೆದು- ಚಟ್ನಿ ಬೀಸಿ - ಓಹೋ! ಉಪ್ಪು ಹಾಕವುದನ್ನೇ ಮರೆತು - ಆಹಾ ಏನು ಚಂದ ಹಾಡ್ತಾಳೆ ಕಿಶೋರಿ, ನನ್ನ ತಾಯಿ! - ಎಲ್ಲಿದ್ದೆ ನಾನು?! ಪುಟ್ಟನ ಎಬ್ಬಿಸಬೇಕಲ್ಲಾ, ಆಗಲೇ ಗಂಟೆ ಏಳಾಯಿತು.

ಮೈಗೆ ಹತ್ತಿಕೊಂಡ ಗಡಿಬಿಡಿಯನ್ನೆಲ್ಲ ಒಮ್ಮೆ ಬಟ್ಟೆಗೆ ಒರೆಸಿಕೊಂಡಂತೆ ಮಾಡಿ, ಮತ್ತೆ ಮೆಲ್ಲಗೆ ಪುಟ್ಟನಿದ್ದಲ್ಲಿ ನಡೆಯುತ್ತಾಳೆ. ಇಡೀ ಹಾಸಿಗೆ ಬೇಕು ಈ ಮರಿ ರಾಕ್ಷಸನಿಗೆ! ಕನಸಿನಲ್ಲಿ ಯಾವ ಯಾವ ಲೋಕ ಸೂರೆ ಹೊಡೆಯುತ್ತಾನೋ ಯಾರಿಗೆ ಗೊತ್ತು, ಇಲ್ಲಿ ಆ ಎಲ್ಲಾ ಲೋಕಗಳನ್ನು ಗೆದ್ದವನಂತೆ ಮಲಗಿದ್ದಾನೆ. ಅಯ್ಯೋ! ದೇವರಂತೆ ನಗುತ್ತಾನಲ್ಲಾ ಕನಸಿನಲ್ಲೇ! ಹೇಗಪ್ಪಾ ಎಬ್ಬಿಸುವುದು? ‘ರಸಿಯಾ ಮಾರಾ....’ ಎನ್ನುತ್ತಿದ್ದಾಳೆ, ಕಿಶೋರಿ. ತನ್ನ ರಸಿಯಾನನ್ನು ಬಾಚಿ ಎತ್ತಿಕೊಂಡು ಹೊರ ನಡೆದರೆ, ಕಣ್ಬಿಡದೆಯೂ ಅವನಿಗೆ ಇದು ತನ್ನ ಅಮ್ಮನೇ ಎಂದು ಗೊತ್ತಾಗಿಹೋಗಿದೆ, ಪುಟ್ಟ ಮೃದುಲ ತೋಳುಗಳಲ್ಲಿ ಅಮ್ಮನ ಕೊರಳನ್ನು ಬಳಸಿ, ಅವಳ ಕತ್ತಿನಡಿ ತನ್ನ ಮುಖವನ್ನು ಹುದುಗಿಸುತ್ತಾನೆ, ಕಳ್ಳ ಪೋರ! ಮತ್ತೊಂದು ನಾಟಕ(ರಣ)ರಂಗ ಶುರು! ‘ಇಲ್ಲಾ! ನಾ ಹಲ್ಲು ತಿಕ್ಕೋಲ್ಲಾ....! ನಾ ಮುಖ ತೊಳೆಯೊಲ್ಲಾ...! ಅಮ್ಮ ನಂಗೆ ಜ್ವರ ಬಂದಿದೆ ನೋಡು! ಮುಟ್ಟಿ ನೋಡು! ಸ್ಕೂಲಿಗೆ ರಜಾ ಹಾಕಲಾ?!’ ‘ಆಯಿತು ಡಾಕ್ಟರ ಹತ್ತಿರ ಹೋಗೋಣ ನಡೀ’. ‘ಡಾಕ್ಟರು ಬೇಡಾ!’ ಲಗುಬಗೆಯಲ್ಲಿ ಹಲ್ಲು ತಿಕ್ಕಿಸಿ, ಸ್ನಾನ ಮಾಡಿಸಿ, ಶಾಲೆಯ ಬಟ್ಟೆ ಹಾಕಿ, ಬ್ಯಾಗು ಡಬ್ಬಿ ತುಂಬಿ, ರೆಡಿ ಮಾಡಿ ಹೋಗುವಷ್ಟರ ಹೊತ್ತಿಗೆ, ‘ಅಮ್ಮಾ, ಚಾಚಿ!’ ಅಳುಮೊಗದಲ್ಲಿ ನಿಂತ ಪೋರ.

ಶಿವಾ ರಾಮಾ! ಮತ್ತೆ ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ಶೂಸಿಂದ ಹಿಡಿದು ಚಡ್ಡಿಯವರೆಗೆ ತೆಗೆದು ಬಚ್ಚಲಿಗೆ ಕಳಿಸಿದ್ದಾಯಿತು. ಚಾಚಿಯ ಸಮಾರಾಧನೆ ಮಾಡಿದ್ದಾಯಿತು. ಬಿಚ್ಚಿಟ್ಟ ಸಿಪ್ಪೆಗಳನ್ನೆಲ್ಲಾ ಮತ್ತೆ ಹಚ್ಚಿಕೊಂಡು, ಇನ್ನು ರೆಕ್ಕೆ ಹಚ್ಚಿಕೊಳ್ಳುವುದಂದೇ ಬಾಕಿ ಎಂಬಂತೆ ಮುದ್ದಗರೆಯುತ್ತಾ ಹಕ್ಕಿಮರಿಯಂತ ಮಗ ಅಪ್ಪನ ಕೈ ಹಿಡಿದು ಶಾಲೆಗೆ ಹೊರಟರೆ, ಒಳಗೆ ಸಣ್ಣ ನೋವಿನ ಸೆಳವು. ಅದನ್ನು ಅರಿತವಳಂತೆ, ತಾರಸ್ಥಾಯಿಯಲ್ಲಿ ಎಳೆದೆಳೆದು ಹಾಡುತ್ತಿರುವ ಕಿಶೋರಿ.

ಈಗ ಒಂದು ಸ್ವಲ್ಪ ಹೊತ್ತಿನ ಬಿಡುವು ಅವಳಿಗೆ. ಇದು ಅವಳ ರಿಯಾಝ್‌ನ ಸಮಯ. ಹೌದು, ಆಕೆ ಸಂಗೀತವನ್ನು ಕಲಿಯುತ್ತಾ ಇದ್ದಾಳೆ. ತನ್ನ ಬಾಲ್ಯದಿಂದ ಪೋಷಿಸಿಕೊಂಡು ಬಂದ ಆಸಕ್ತಿಯೊಂದನ್ನು, ಇನ್ನೂ ಮದುವೆಯಾಗಿ ಒಂದು ಮಗುವಾದ ನಂತರವೂ ಮುಂದುವರೆಸಿದ್ದಾಳೆ. ಇನ್ನೂ ಕಲಿಯುವ ಆಸೆ ತೀರಿಲ್ಲ ಅವಳಿಗೆ. ‘ಈ ವಯಸ್ಸಿನಲ್ಲಿ ಇವಳು ಸಂಗೀತ ಕಲಿತುಕೊಂಡಳು!’ – ಎಂದು ಮೂಗು ಮುರಿದ ಸುಷ್ಮತ್ತಿಗೆಯಿಂದ ಹಿಡಿದು ‘ತನಗೂ ಸಂಗೀತ ಕಲಿಯಬೇಕೆಂದು ಆಸೆಯಿತ್ತು, ಅದರೆ ಮದುವೆಯಾದ ನಂತರ ಅದೆಲ್ಲ ಬೇಡ ಎಂದುಬಿಟ್ಟರು’ ಎಂದು ಅಲವತ್ತುಕೊಂಡ ಆಯಿಯವರೆಗೆ, ಆಕೆಯ ಸಂಗೀತಾಭ್ಯಾಸದ ಬಗ್ಗೆ ತರಹೇವಾರಿ ಪ್ರತಿಕ್ರಿಯೆಗಳು ಸಿಕ್ಕಿದ್ದರೂ, ಅವಕ್ಕೆಲ್ಲ ಅವಳ ಮುಗುಳ್ನಗೆಯೊಂದನ್ನು ಬಿಟ್ಟರೆ ಬೇರೆ ವಿಶೇಷ ಪ್ರತಿಕ್ರಿಯೆ ಇಲ್ಲ.

ಅವಳು ಆಸೆಪಟ್ಟದ್ದನ್ನು ಅವಳು ಕಲಿಯುತ್ತಿದ್ದಾಳೆ ಎಂಬುದರ ಹೊರತಾಗಿ, ಸಂಗೀತ ಆಕೆಗೆ ಎಂಥ ಸಾಂಗತ್ಯ ನೀಡುತ್ತದೆಯೆಂದಾಗಲೀ, ಅದರ ಸಾನ್ನಿಧ್ಯ ಅವಳಿಗೆ ಎಂಥ ಸಮಾಧಾನ ನೀಡುತ್ತದೆಯೆಂಬುದು ಅವಳಿಗಷ್ಟೇ ಗೊತ್ತು. ಹಾಡುವಾಗ ಆಕೆ ಎಲ್ಲವನ್ನೂ ಮರೆಯುತ್ತಾಳೆ. ಗಂಡ, ಮಗ, ಮನೆ, ಕಡೆಗೆ ತನ್ನನ್ನೂ... ಮನವಿಟ್ಟು ರಿಯಾಝ್ ಮಾಡುವಾಗ ಆಕೆಗೆ ಸ್ವರಗಳನ್ನು ಬಿಟ್ಟು ಬೇರೆ ಕಾಣಿಸುವುದಿಲ್ಲ. ಕೆಲವೊಮ್ಮೆ ಅವಳೇ ಸ್ವರವಾದಂತೆ ಭಾಸವಾಗುವುದೂ ಉಂಟು. ಆಗೆಲ್ಲ ಅವಳು ಶುದ್ಧ ಸ್ವರವೊಂದರಷ್ಟೇ ಹಗುರವಾಗುತ್ತಾಳೆ, ಒಳಗಿಂದ ಹೊಮ್ಮುವ ನಾದದಷ್ಟೇ ನಿಜವಾಗುತ್ತಾಳೆ. ದಿನವೂ ಈ ಸ್ವರಗಂಗೆಯಲ್ಲಿ ಮಿಂದು ಶುದ್ಧವಾಗುತ್ತಾಳೆ.

ತಾನೇನೋ ದೊಡ್ಡ ಸಂಗೀತಗಾರ್ತಿಯಾಗಿ ಬಿಡಬೇಕೆಂಬ ನಿರೀಕ್ಷೆ ಇಲ್ಲ ಅವಳಿಗೆ, ಈಗ ಸಧ್ಯಕ್ಕೆ ಕಲಿಯಬೇಕೆಂಬ ಆಸೆ, ಸವಿಯಬೇಕೆಂಬ ತುಡಿತ ಎರಡೇ ಸಾಕು ಅವಳಿಗೆ. ಮಾತಿನಲ್ಲಿ ಹೇಳಲಾಗದ್ದನ್ನೆಲ್ಲ ಸಂಗೀತದಲ್ಲಿ ಸುಲಭದಲ್ಲಿ ಹೇಳಬಹುದು, ನೂರು ಮಾತಲ್ಲಿ ಹಿಡಿಯಲಾಗದ್ದನ್ನು ಶುದ್ಧವಾದ ಒಂದು ಸ್ವರ, ಭಾವತೀವ್ರ ಸ್ವರ ಕಟ್ಟಿಕೊಡಬಲ್ಲದು, ಆಕೆಗದು ಚೆನ್ನಾಗಿ ಗೊತ್ತಿದೆ. ಅವಳ ಇಡೀ ದಿನವನ್ನು ಹೇಗೆ ಜಾಲಾಡಿದರೂ ರಿಯಾಝ್‌ಗಾಗಿ ಅಕೆಗೆ ಸಿಗುವುದು ಕೇವಲ ಎರಡೇ ಎರಡು ತಾಸು. ಆ ಎರಡು ತಾಸಿನ ಸುತ್ತ ಆಕೆ ತನ್ನ ಇಡೀ ದಿನವನ್ನು ಹೆಣೆಯುತ್ತಾಳೆ. ಒಂದು ದಿನ ರಿಯಾಝ್ ತಪ್ಪಿದರೆ ಚಡಪಡಿಸುತ್ತಾಳೆ.

ಇಂದು ರಿಯಾಝ್ ಮುಗಿಸಿ ಹೊರಗೆ ಬಂದ ತಕ್ಷಣ ಆಫೀಸಿಗೆ ಹೊರಡಲು ಸಜ್ಜಾಗಿ ಕುಳಿತ ಪತಿರಾಯರು ಒಮ್ಮೆ ಮುಖವೆತ್ತಿ ನಸುನಗುತ್ತಾರೆ. ‘ಪರವಾಗಿಲ್ಲ, ಇಂಪ್ರೂವ್ ಆಗ್ತಾ ಇದೆ, ತಾರಸ್ಥಾಯಿಯಲ್ಲಿ ಇನ್ನೂ ಅಭ್ಯಾಸ ಬೇಕು’ - ಎಂದೆನ್ನುತ್ತಾ ಆಫಿಸಿಗೆ ತೆರಳುತ್ತಾರೆ. ಅವರೆಂದರೆ ಆಕೆಗೆ ಏನೋ ಹೆಮ್ಮೆ. ಮದುವೆಯಾದ ಹೊಸತರಲ್ಲಿ ನಾನು ಸಂಗೀತ ಕಲಿತಿದ್ದೇನೆಂದು ಗೊತ್ತಾಗಿ ಹಾಡಿಸಿ ಖುಷಿಪಟ್ಟವರು. ಅದನ್ನಷ್ಟಕ್ಕೇ ಬಿಡದೇ ಸಂಗೀತ ಮುಂದುವರೆಸು ಎಂದು ಒತ್ತಾಯ ಮಾಡಿದವರು.

ಅಷ್ಟೇ ಏಕೆ, ತಾನು ಕಲಿಯಲು ಹೋದಾಗೆಲ್ಲ, ರಿಯಾಝ್ ಮಾಡುವಾಗೆಲ್ಲ, ಮಗುವನ್ನು ನೋಡಿಕೊಳ್ಳುವವರು. ‘ನಿನ್ನ ಮನೆಯವರು ಸ್ವಲ್ಪ ಬೇರೆ ಥರ’ - ಎನ್ನುತ್ತಾಳೆ ಗೆಳತಿ ಅನಸೂಯ. ಅವಳ ಲೆಕ್ಕದಲ್ಲಿ ಅಡುಗೆಮನೆಯಲ್ಲಿ ಸಹಾಯ ಮಾಡುವ, ಮಗುವನ್ನು ನೋಡಿಕೋಳ್ಳುವ, ಮನೆಗೆಲದಲ್ಲಿ ಸಹಾಯ ಮಾಡುವ ಗಂಡಂದಿರು ‘ಬೇರೆ ಥರ’. ಹಾಗೆ ಹೇಳುವಾಗ ಅವಳ ದನಿಯಲ್ಲಿ ಸಣ್ಣ ಅಸೂಯೆಯೂ ಇಲ್ಲದಿಲ್ಲ. ಅದೂ ಹೋಗಲಿ, ಈ ಸಂಗೀತ ಕಲಿಯುವ ಹುಚ್ಚಾಟಕ್ಕೆ ಬೆಂಬಲ ಕೊಡುವುದಂತೂ ಅವಳಿಗೆ ಅರಗಿಸಿಕೊಳ್ಳಲಾರದ್ದು.

ಅಡುಗೆಗೆ ತರಕಾರಿ ಹೆಚ್ಚುತ್ತಾ ಅವಳೀಗ ಹಾಡುತ್ತಿದ್ದಾಳೆ. ಅದು ಹೇಗೋ ರಿಯಾಝ್ ಮುಗಿದ ನಂತರವೂ ಸ್ವರಗಳ ಅವಳ ಬೆಂಬತ್ತುತ್ತವೆ. ಅವಳಿಗೇ ಗೊತ್ತಿಲ್ಲದಂತೆ ರಾಗ ಮೂಡುತ್ತದೆ. ಸುಮ್ಮನೆ ಗುನುಗಿಕೊಳ್ಳುವುದಲ್ಲ, ದೊಡ್ಡಕ್ಕೇ ಹಾಡುತ್ತಾಳೆ. ಅಲಾಪವನ್ನು ಮಾಡುತ್ತಾ ಕಣ್ಮುಚ್ಚಿದರೂ ಕೈಗಳು ಅವುಗಳಷ್ಟಕ್ಕೆ ಅವು ಕೊಚ್ಚಲು, ಇವಳು ಮೈಮರೆತು ಹಾಡಲು. ಅನ್ನಕ್ಕಿಡುವಾಗ ಮಧ್ಯಲಯಕ್ಕೇರಿದ ರಾಗ, ಎಲ್ಲ ಮುಗಿಸಿ, ಕಸ ಗುಡಿಸಿ, ಕಟ್ಟೆ ಒರೆಸುವಾಗ ಧೃ ತಗತಿಗೇರಿದೆ.

ಈಗ ಆಕೆಯ ಕೈಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ. ಒಂದು ಕೈಯಲ್ಲಿ ಒರೆಸುವ ಬಟ್ಟೆ ಹಿಡಿದು ಅಡುಗೆಮನೆಯಲ್ಲಿ ನಿಂತು ತನಗೆ ತಿಳಿದಷ್ಟನ್ನು ಮೈಮರೆತು ಹಾಡುತ್ತಾ ಇದ್ದರೆ, ಹುಳಿ ಕುದಿಯುತ್ತ, ಅನ್ನ ಬೇಯುತ್ತ ದಿನ ಸವಿಯಾಗುತ್ತ ನಡೆದಿದೆ. ಈ ದಿನ ಏನೇನೋ ಆಗಬಹುದು, ದಿನಗಟ್ಟಲೆ ಸೇರಿ, ತಿಂಗಳುಗಳಾಗಿ, ವರ್ಷಗಳೇ ಉರುಳಬಹುದು, ಅಡುಗೆಮನೆಗಳು ಬದಲಾಗಬಹುದು, ಅಡುಗೆಯೂ ಬದಲಾಗಬಹುದು, ಬದುಕು ಎಲ್ಲೆಲ್ಲಿಯೋ ನೆಲೆ ಕಂಡು, ಮಗ ದೊಡ್ಡವನಾಗಿ ಗೂಡು ಬಿಟ್ಟು ಹಾರಿ ಹೋಗಬಹುದು. ಏನೇ ಆದರೂ ಅವಳಿಗೆ ಅವಳ ಸಂಗೀತದ ಸ್ಥಾಯೀ ಸಾನ್ನಿಧ್ಯ ಮಾತ್ರ ತಪ್ಪದು. ಅಷ್ಟು ಖಾತ್ರಿ ಇರುವ ಆಕೆಗೆ ಅದೇ ಧೈರ್ಯ, ಅದೇ ಸಮಾಧಾನ.

ಅಡುಗೆಗೆ ತರಕಾರಿ ಹೆಚ್ಚುತ್ತಾ ಅವಳೀಗ ಹಾಡುತ್ತಿದ್ದಾಳೆ. ಅದು ಹೇಗೋ ರಿಯಾಝ್ ಮುಗಿದ ನಂತರವೂ ಸ್ವರಗಳ ಅವಳ ಬೆಂಬತ್ತುತ್ತವೆ. ಅವಳಿಗೇ ಗೊತ್ತಿಲ್ಲದಂತೆ ರಾಗ ಮೂಡುತ್ತದೆ. ಸುಮ್ಮನೆ ಗುನುಗಿಕೊಳ್ಳುವುದಲ್ಲ, ದೊಡ್ಡಕ್ಕೇ ಹಾಡುತ್ತಾಳೆ. ಅಲಾಪವನ್ನು ಮಾಡುತ್ತಾ ಕಣ್ಮುಚ್ಚಿದರೂ ಕೈಗಳು ಅವುಗಳಷ್ಟಕ್ಕೆ ಅವು ಕೊಚ್ಚಲು, ಇವಳು ಮೈಮರೆತು ಹಾಡಲು. ಅನ್ನಕ್ಕಿಡುವಾಗ ಮಧ್ಯಲಯಕ್ಕೇರಿದ ರಾಗ, ಎಲ್ಲ ಮುಗಿಸಿ, ಕಸ ಗುಡಿಸಿ, ಕಟ್ಟೆ ಒರೆಸುವಾಗ ಧೃತಗತಿಗೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT