ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ಸಹಾಯಕ ಕ್ಷಣಗಳ ನಡುವೆ...

Last Updated 30 ಜೂನ್ 2017, 19:30 IST
ಅಕ್ಷರ ಗಾತ್ರ

‘ವೈದ್ಯನು ದೇವರೆ’ ಎನ್ನುವ ಸ್ಥಿತಿಯಿಂದ ನಾವು ಹೊರಬಂದು ‘ವೈದ್ಯನೂ ಒಬ್ಬ ಮನುಷ್ಯ’ ಎಂಬ ಸತ್ಯವನ್ನು ನಾವು ಒಪ್ಪಬೇಕಿದೆ. ವೈದ್ಯನೂ ಸಮಾಜದ ಎಲ್ಲರಂತೆ ತಪ್ಪು ಮಾಡುವವನೇ. ಆದರೆ ಮಾಡಿದ ತಪ್ಪುಗಳನ್ನು ಮುಚ್ಚಿಡುವ ಬದಲು ತಪ್ಪುಗಳಿಂದ ಕಲಿಯುವ, ಬೇರೆಯವರೊಡನೆ ಅದನ್ನು ಹಂಚಿಕೊಳ್ಳುವ, ಹಾಗೆ ಹಂಚಿಕೊಳ್ಳುವ ಮೂಲಕ ಇತರರೂ ಕಲಿಯುವಂತೆ ಮಾಡುವ ಮುಕ್ತ ವಾತಾವರಣ ವೈದ್ಯಕೀಯ ಕ್ಷೇತ್ರದಲ್ಲಿ ಈ ಹೊತ್ತಿನ ಅಗತ್ಯವಾಗಿದೆ. ವೈದ್ಯರೂ ಸಮಾಜದ ಎಲ್ಲ ವರ್ಗಗಳೂ ರೋಗಿಗಳ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆತ್ಮಾವಲೋಕನ ಈ ಬರಹದ ಹಿಂದಿರುವ ಉದ್ದೇಶ.

ನಿಸ್ಸಹಾಯಕ ಕ್ಷಣಗಳ ನಡುವೆ ...ಆಕೆ ಒಬ್ಬ ಸುಂದರ ಯುವತಿ. ಇನ್ನೂ ಅವಿವಾಹಿತೆ. ಅಣ್ಣನೊಡನೆ ಬಂದಿದ್ದಳು. ಮತ್ತೆ ಮತ್ತೆ ಕೈ ಕೊಯ್ದುಕೊಳ್ಳುವ, ಸಾಯಲು ಪ್ರಯತ್ನ ಪಡುವ ಆಕೆ ಬಂದದ್ದು ಅವಳ ತೀವ್ರ ಆಕ್ರೋಶದ ನಿಯಂತ್ರಣಕ್ಕಾಗಿ. ನೂರಾರು ಎಕರೆಗಳ ಜಮೀನು, ಪ್ರೀತಿಸುವ ತಾಯಿ, ಅಣ್ಣ ಮೇಲ್ನೋಟಕ್ಕೆ ಏನೂ ಕೊರತೆಯಿಲ್ಲದ ಆಕೆಗೆ ಇದ್ದ ಸಮಸ್ಯೆಯಾದರೂ ಏನು? ಭಾವನಾತ್ಮಕ ಅಸ್ಥಿರತೆ ಎಂಬ ವ್ಯಕ್ತಿತ್ವ ದೋಷ. ಭಾವನಾತ್ಮಕ ಅಸ್ಥಿರತೆಯ ವ್ಯಕ್ತಿತ್ವ ದೋಷ ಅಥವಾ Emotionally unstable personality disorderಅನ್ನು- ಗಡಿರೇಖೆಯ - borderline ವ್ಯಕ್ತಿತ್ವ ದೋಷ ಎಂದೂ ಕರೆಯುತ್ತಾರೆ.

ಎಂದರೆ ಇವರು ತಮಗೆ ‘ಸಮಸ್ಯೆಯಿದೆ’ ಎಂಬ ಒಳನೋಟ - insight ಇರುವ, ಇಲ್ಲದಿರುವ ವ್ಯಕ್ತಿಗಳ ನಡುವಿನವರು ಎಂಬ ಕಾರಣಕ್ಕಾಗಿ. ದೂರದ ಉತ್ತರ ಕರ್ನಾಟಕದಿಂದ ನನ್ನ ಬಳಿ ಚಿಕಿತ್ಸೆಗಾಗಿ ಬರುತ್ತಿದ್ದ ಈಕೆ ಈ ವ್ಯಕ್ತಿತ್ವದ ಬಹು ಜನರಂತೆ ಸಂಬಂಧಗಳ ಸಮಸ್ಯೆಗಳಲ್ಲಿ ಸಿಕ್ಕಿಬಿದ್ದಿದ್ದಳು. ಒಮ್ಮೆ ವಿವಾಹಿತ ಯುವಕನನ್ನು ತಾನು ತುಂಬ ಪ್ರೀತಿಸುತ್ತೇನೆ ಎಂದರೆ, ಇನ್ನೊಮ್ಮೆ ತನಗೆ ಮದುವೆಯೇ ಬೇಡವೆಂದು ಅಮ್ಮನನ್ನು ಕಣ್ಣೀರುಗರೆಯುವಂತೆ ಮಾಡುತ್ತಿದ್ದಳು. ಚಿಕಿತ್ಸೆ ನೀಡುವ ನನ್ನ ಬಳಿಯೂ ಅಷ್ಟೆ, ಮಾತನಾಡಿದರೆ ಅಳು, ಇದ್ದಕ್ಕಿದ್ದಂತೆ ಅತಿ ಉತ್ಸಾಹ, ಒಳ್ಳೆಯ ನಡೆವಳಿಕೆಯಿಂದ ನನ್ನನ್ನು ಮೆಚ್ಚಿಸುವ ಛಲ.

ಚಿಕಿತ್ಸೆ ಮನೋಚಿಕಿತ್ಸೆ - Psychotherapy ಮತ್ತು ಆಕ್ರೋಶವನ್ನು ನಿಯಂತ್ರಿಸುವ ಮಾತ್ರೆಗಳಿಂದ ಸಾಗಿತ್ತು. ಅಣ್ಣ-ತಾಯಿ ಬಂದು ಕಳೆದ ಮೂರು ತಿಂಗಳಿಂದ ಆಕೆ ತುಂಬ ಸಮಾಧಾನವಾಗಿರುತ್ತಾಳೆ, ತಮಗೂ ನೆಮ್ಮದಿ ಎಂದಿದ್ದರು. ಸಹಜವಾಗಿ ನನಗೂ ಅದು ಸಂತಸ ತಂದಿತ್ತು. ಇದ್ದಕ್ಕಿದ್ದಂತೆ ಒಂದು ರಾತ್ರಿ ಅಣ್ಣನ ಫೋನು. ಆ ಯುವತಿ ಎರಡು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಸುದ್ಧಿ ಕೇಳಿ ಮನಸ್ಸು ಹೇಳಲಾರದಷ್ಟು, ಬರೆಯಲಾಗದಷ್ಟು ಕ್ಷೋಭೆಗೆ ಒಳಗಾಗಿತ್ತು.

ನಿಸ್ಸಹಾಯಕತೆಯ ಕ್ಷಣಗಳಲ್ಲಿ ನಾನು ಮುಳುಗಿದ್ದೆ. ಸಾಯುವ ಪ್ರಯತ್ನಗಳನ್ನು ಮಾಡುವುದು, ಅವು ‘ಸಹಾಯಕ್ಕಾಗಿ ಒಂದು ಕರೆ’ - cry for help ಎಂಬ ಅಂಶ ಈ ವ್ಯಕ್ತಿತ್ವದೋಷದ ವ್ಯಕ್ತಿಗಳಲ್ಲಿ ತೀರ ಸಾಮಾನ್ಯವೇ. ಅದರ ಬಗ್ಗೆ ಆ ಯುವತಿಗೆ ನಾನು ವಿವರಿಸಿಯೂ ಇದ್ದೆ. ಈ ಪ್ರಯತ್ನಗಳ ಹಿಂದೆ ನಿಜವಾಗಿ ಸಾಯುವ ಉದ್ದೇಶವಿಲ್ಲದಿದ್ದರೂ, ಕೆಲವೊಮ್ಮೆ ಅಪಾಯ ಒದಗಬಹುದು ಎಂದೂ ಹೇಳಿದ್ದೆ. ಅಂಥ ಪ್ರಯತ್ನದಲ್ಲಿ, ಆಕ್ರೋಶದಲ್ಲಿ ಆತ್ಮಹತ್ಯೆ ಸಂಭವಿಸಿತ್ತೋ ಅಥವಾ ಆಕೆ ಖಿನ್ನತೆಯ ಹತಾಶೆಯ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳೋ, ನನಗೆ ವಿವರಿಸಲು ಆಕೆ ಇರಲೇ ಇಲ್ಲ. ಆಕೆಯನ್ನು ಕಳೆದುಕೊಂಡ ದುಃಖದಲ್ಲಿದ್ದ ಅಣ್ಣ-ತಾಯಿ ಮತ್ತೆ ಬಂದು, ಏನಾಯಿತೆಂದು ವಿವರಿಸುವ ಸಂಭವನೀಯತೆಯೂ ಇರಲಿಲ್ಲ. ಆ ಯುವತಿ ಇಂದಿಗೂ ಒಂದು ‘ಪ್ರಶ್ನೆ’ಯೇ ಆಗಿ ನನ್ನ ಮುಂದೆ ಉಳಿದಿದ್ದಾಳೆ.

ಇಂಥಹುದೇ ನಿಸ್ಸಹಾಯಕತೆಯ ಅನುಭವ ಮತ್ತೊಂದು ಭಿನ್ನ ಸಂದರ್ಭದಲ್ಲಿ ನನ್ನನ್ನು ಕಾಡಿದೆ. ಅದು ಮಲೆನಾಡಿನ ಬಿ.ಎಸ್ಸಿ. ಮಾಡುತ್ತಿದ್ದ ಹುಡುಗನೊಬ್ಬನ ವಿಷಯದಲ್ಲಿ. ಅವನಿಗೆ ಇದ್ದ ಮಾನಸಿಕ ಸಮಸ್ಯೆ ‘ಉನ್ಮಾದ-ಖಿನ್ನತೆಯ ಕಾಯಿಲೆ’ - bipolar affective disorder. ಅಪ್ಪ-ಅಮ್ಮನಿಗೆ ಮಗ ‘ಸೈನ್ಸ್’ ಓದಬೇಕೆಂಬ ಆಸೆ. ಅವನಿಗೆ ಛಾಯಾಚಿತ್ರಗ್ರಹಣ ಎಂದರೆ ಊಟ-ತಿಂಡಿ ಯಾವುದೂ ಬೇಡ. ಇವೆಲ್ಲ ಒತ್ತಡದ ನಡುವೆ ಎರಡು ಬಾರಿ ಉನ್ಮಾದ-ಖಿನ್ನತೆಯ ಅವಧಿಗಳಿಗೆ ಆತ ಒಳಗಾದ. ಚಿಕಿತ್ಸೆಯಿಂದ ಅವು ಗುಣುಮುಖವೂ ಆಯಿತು.

ಅವನು ಚಿಕಿತ್ಸೆಗೆ ಬಂದಾಗಲೆಲ್ಲ ಕೇಳುತ್ತಿದ್ದ ’ಏನು ಡಾಕ್ಟ್ರೇ, ನನ್ನ ಖಿನ್ನತೆ ಈ ಬಾರಿ ಹೇಗಿದೆ?’. ಅಪ್ಪ-ಅಮ್ಮಂದಿರ ಮತ್ತು ಅವನ ನಡುವೆ ಘರ್ಷಣೆ ತುಂಬ ಹೆಚ್ಚಾಯಿತು. ಆ ಬಾರಿ ಆತ ಬಂದಾಗ ‘ಖಿನ್ನತೆ’ಯ ಲಕ್ಷಣಗಳು ಬಲವಾಗಿದ್ದವು. ಮಾತನಾಡುತ್ತ ಆತ ಕೇಳಿದ ‘ಡಾಕ್ಟ್ರೇ, ಮನುಷ್ಯನಿಗೆ ಎಷ್ಟು ಚಿಕ್ಕ ವಯಸ್ಸಿನಿಂದ ನಡೆದದ್ದು ನೆನಪಿರಲು ಸಾಧ್ಯ? ನನಗೆ ನಾನು ಒಂದು ವರ್ಷವಿದ್ದಾಗಿನಿಂದ ನಮ್ಮಮ್ಮ ಎತ್ತಿಕೊಂಡಿದ್ದು, ನಾನು ಅವಳೊಡನೆ ಬಸ್ಸು ಹತ್ತಿದ್ದು ಎಲ್ಲವೂ ನೆನಪಿದೆ ಡಾಕ್ಟ್ರೇ. ನಾನು ಹೇಳುವ ಯಾವುದನ್ನೂ ಯಾರೂ ನಂಬುವುದಿಲ್ಲ ಅನ್ನುವುದೇ ಸಮಸ್ಯೆ' ಎಂದ. ನಾನೆಂದೆ: 'ನಾನು ಕೇಳ್ತಾ ಇದ್ದೇನೆ, ನಂಬುತ್ತೇನೆ.' ಈ ಮಾತಿಗೆ ಅವನೆಂದದ್ದು: ’ಅದಕ್ಕೇ ಈಗ ಹೇಳ್ತಾ ಇರೋದು!’ ಮುಂದಿನ ಮಾತುಗಳಲ್ಲಿ ಹತಾಶೆ ತೀವ್ರವಾಗಿತ್ತು.

ಸಾಯುವ ಆಸೆಯ ಬಗ್ಗೆ ಮಾತುಗಳಿದ್ದವು. ಅಪ್ಪ-ಅಮ್ಮ ಆಸ್ಪತ್ರೆಗೆ ದಾಖಲಿಸಲು ಒಪ್ಪಲಿಲ್ಲ. ಸರಿ, ಸಾಮಾನ್ಯವಾಗಿ ಇಂಥ ರೋಗಿಗಳಲಿ ನಾನು ಮಾಡುವಂತೆ ಅವನಿಗೆ ’ನೀನು ಸಾಯುವ ಪ್ರಯತ್ನ ಮಾಡುವುದಿಲ್ಲ ಅಂಥ ಭಾಷೆ ಕೊಡು’ ಎಂದು ಮಾತು ತೆಗೆದುಕೊಂಡೆ. ನಗುತ್ತಲೇ ಮಾತು ಕೊಟ್ಟ ಆ ಹುಡುಗ. ಒಂದೇ ವಾರದಲ್ಲಿ ಆತ ನೇಣು ಹಾಕಿಕೊಂಡ ಸುದ್ದಿ ಆ ಊರಿನ ವೈದ್ಯರೊಬ್ಬರ ಕಡೆಯಿಂದ ನನಗೆ ತಲುಪಿತು. ಇಲ್ಲಿ ನಾನು ವೈದ್ಯಳಾಗಿ ಏನು ಮಾಡಬಹುದೋ ಎಲ್ಲವನ್ನೂ ಮಾಡಿದ್ದೆ. ನನ್ನನ್ನು ಯಾರೂ ದೂರುವಂತಿರಲಿಲ್ಲ. ಆದರೆ ‘ನಿಸ್ಸಹಾಯಕತೆಯ ಕ್ಷಣ’ಗಳಲ್ಲಿ ಮತ್ತೆ ಮುಳುಗಿದ್ದೆ.

ಇವೆರಡೂ ಪ್ರಕರಣಗಳನ್ನು ನಾನು ಸಮಾಜಕ್ಕೆ ಹೇಳುವ ಪ್ರಯತ್ನ ಮಾಡುತ್ತಿರುವ ಹಿಂದೆ ಒಂದು ಉದ್ದೇಶವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ’ನಿನಗೆ ನೆನಪಿದೆಯೇ?’ (Do you remember the patient you saw yesterday?) ಎಂಬ ಪ್ರಶ್ನೆಗೆ ವೈದ್ಯರೆಲ್ಲರೂ ಹೆದರುತ್ತಾರೆ. ಆ ಪ್ರಶ್ನೆಯ ಅನಂತರ ಅವರು ಹಿಂದಿನ ದಿನ/ಇತ್ತೀಚೆಗೆ ನೋಡಿದ ರೋಗಿಯೊಬ್ಬನ ಚಿಂತಾಜನಕ ಸ್ಥಿತಿಯ/ಮರಣದ ಸುದ್ದಿಯಿರಬಹುದು ಎಂಬ ಕಾರಣಕ್ಕಾಗಿ. ಹಾಗೆ ತಮ್ಮ ಚಿಕಿತ್ಸೆ ಕೆಲಸ ಮಾಡದೇ ರೋಗಿ ಮರಣ ಹೊಂದಿದಾಗ, ಅಥವಾ ಚೇತರಿಸಿಕೊಳ್ಳಲಾಗದ ಗಂಭೀರ ಸ್ಥಿತಿಗೆ ಹೋದಾಗ ‘ನಿಸ್ಸಹಾಯಕತೆ’ ವೈದ್ಯರನ್ನು ಕಾಡುತ್ತದೆ.

ಅದನ್ನು ವೈದ್ಯರು ಸ್ವತಃ ಗುರುತಿಸಿಕೊಳ್ಳುವುದನ್ನಾಗಲೀ ಅಥವಾ ಸಮಾಜ ಗುರುತಿಸುವುದನ್ನಾಗಲೀ ನಮ್ಮ ವ್ಯವಸ್ಥೆ ಪ್ರೋತ್ಸಾಹಿಸುವುದಿಲ್ಲ. ಹಾಗಾಗಿ ಇಂಥ ಪ್ರಕರಣಗಳಲ್ಲಿ ವೈದ್ಯ, ಸಮಾಜ, ಕುಟುಂಬಗಳ ಪಾಲೆಷ್ಟು, ತಪ್ಪೆಷ್ಟು ಎನ್ನುವ ಬಗ್ಗೆ   ಚರ್ಚೆಯೂ ಆಗುವುದಿಲ್ಲಪ್ರತಿಯೊಬ್ಬರೂ ಆತ್ಮಪರಿಶೀಲನೆಯ ಮಾಡಿಕೊಳ್ಳುವುದರ ಬದಲು ಒಬ್ಬರ ಮೇಲೊಬ್ಬರು ತಪ್ಪು ಹೊರಿಸುವುದರತ್ತ, ತಮ್ಮನ್ನು ಅಡಗಿಸಿಕೊಳ್ಳುವತ್ತ ಮುಂದಾಗುತ್ತಾರೆ. ಜನರು ತಮ್ಮ ತಪ್ಪುಗಳನ್ನು ಕುರಿತು ಮಾತನಾಡುವುದಿಲ್ಲ. ಡಾ ಬ್ರಿಯಾನ್ ಗೋಲ್ಡ್ ಮನ್ ಎಂಬುವರು ಮಾಡಿದ ಒಂದು ಟಿ.ವಿ. ಶೋ ’white coat - black art’ - ‘ಬಿಳೀ ಕೋಟು, ಕಪ್ಪುಕಲೆ’ಯಲ್ಲಿ ’ಇದು ನನ್ನ ದೊಡ್ಡ ತಪ್ಪು, ನಿಮ್ಮದರ ಬಗ್ಗೆ ಹೇಳಿ’ ಎಂದಾಗ ಆಶ್ಚರ್ಯಕರವಾಗಿ ವೈದ್ಯರು ತಮ್ಮ ‘ಸೋಲಿನ’ ಕಥೆಗಳು, ರೋಗಿಗಳನ್ನು ಕಳೆದುಕೊಂಡ ಕಥೆಗಳನ್ನು, ತಾವು ಅರಿಯದೇ ‘ತಪ್ಪು’ ಮಾಡಿದ ಕಥೆಗಳನ್ನು ತೆರೆದಿಟ್ಟರು. ಅದರ ಹಿಂದಿನ ಉದ್ದೇಶ ’ನಾನು ಮಾಡಿದ ತಪ್ಪನ್ನು ಇತರರು ಮಾಡದಿರಲಿ, ಈ ರೋಗಿಗಾದ ಸ್ಥಿತಿ ಮತ್ತೊಬ್ಬರಿಗೆ ಆಗದಿರಲಿ’ ಎಂಬುದು ಎನ್ನುವುದು ಗಮನಾರ್ಹ.

‘ವೈದ್ಯನು ದೇವರೆ’ನ್ನುವ ಸ್ಥಿತಿಯಿಂದ ನಾವು ಹೊರಬಂದು ‘ವೈದ್ಯನೂ ಒಬ್ಬ ಮನುಷ್ಯ’ ಎಂಬ ಸತ್ಯವನ್ನು ನಾವು ಒಪ್ಪಬೇಕಿದೆ. ಆಧುನಿಕ ವೈದ್ಯ ಒಬ್ಬ ಮನುಷ್ಯ ಆತ ತಪ್ಪುಗಳನ್ನು ಎಲ್ಲರಂತೆ (ವೈದ್ಯರೂ ಸೇರಿದಂತೆ) ಮಾಡಲು ಸಾಧ್ಯವಿದೆ. ಹಾಗೆಂದು ಮಾಡಿದ ತಪ್ಪುಗಳನ್ನು ಮುಚ್ಚಿಡುವ ಬದಲು ತಪ್ಪುಗಳಿಂದ ಕಲಿಯುವ, ಬೇರೆಯವರೊಡನೆ ಅದನ್ನು ಹಂಚಿಕೊಳ್ಳುವ, ಹಾಗೆ ಹಂಚಿಕೊಳ್ಳುವ ಮೂಲಕ ಇತರರೂ ಕಲಿಯುವಂತೆ ಮಾಡುವ ಮುಕ್ತ ವಾತಾವರಣ ವೈದ್ಯಕೀಯ ಕ್ಷೇತ್ರದಲ್ಲಿ ಈ ಹೊತ್ತಿನ ಅಗತ್ಯವಾಗಿದೆ. ಇದನ್ನು ಮಾಡದಿದ್ದರೆ, ತಪ್ಪುಗಳಂತೂ ಮನುಷ್ಯಸಹಜವಾಗಿ ನಡೆಯುತ್ತಿರುತ್ತವೆ.

ಅವುಗಳನ್ನು ಸರಿಪಡಿಸಿಕೊಳ್ಳುವ ಅವಕಾಶವಿಲ್ಲದೆ ಅವು ಮತ್ತೆ ಮತ್ತೆ ನಡೆಯುತ್ತವೆ! ಆಸ್ಪತ್ರೆಗಳಲ್ಲಿ ಸಾವುಗಳು ಉಂಟಾದಾಗ ಜನರು ವೈದ್ಯರನ್ನು ಚಚ್ಚುತ್ತಾರೆ. ವೈದ್ಯರ ನಿರ್ಣಯಗಳಷ್ಟೇ ತಪ್ಪು ಎಂದು ನಿರ್ಧರಿಸಿಬಿಡುತ್ತಾರೆ. ಬದಲಾಗಿ ಪ್ರತಿಯೊಬ್ಬರ ನಿರ್ಣಯಗಳಲ್ಲಿ, ಸಮಾಜದ ಯಾವ ವ್ಯವಸ್ಥೆಗಳು ಪಾಲೆಷ್ಟು ಎಂಬುದನ್ನು ಗಮನಿಸುವುದಿಲ್ಲ. ಹಾಗೆ ಮಾಡಿದ್ಧೇ ಆದರೆ ಮುಂದಿನ ಎಷ್ಟೋ ಸಾವುಗಳನ್ನು ನಾವು ತಡೆಯಬಹುದು ಎಂಬುದು ಗಮನಾರ್ಹ ಸಂಗತಿ.

ಲೇಖನದ ಮೊದಲಲ್ಲಿ ಹೇಳಿದ ಎರಡು ಪ್ರಕರಣಗಳಂಥ ಘಟನೆಗಳಿಂದ ವೈದ್ಯರಿಗಷ್ಟೇ ಅಲ್ಲ, ನಮ್ಮೆಲ್ಲರಿಗೂ ಆತ್ಮಾವಲೋಕನ ಸಾಧ್ಯ. ನಾವೆಲ್ಲರೂ ‘ಮನುಷ್ಯರಾಗಬೇಕಿದೆ. ನಾವು ತಪ್ಪುಗಳನ್ನು ಮಾಡಲು ಸಾಧ್ಯವಿದೆ. ಅದರೊಂದಿಗೆ ಅದರಿಂದ ಕಲಿಯಲೂ ಸಾಧ್ಯವಿದೆ. ಇಂಥ ತಪ್ಪುಗಳಿಂದ ಕಲಿಯುವುದು ’ನಿಮಗೆ ನೆನಪಿದೆಯೇ’ ಎಂಬ ಪ್ರಶ್ನೆಗೆ ಹೆದರುವ ಬದಲು ’ನನಗೆ ಖಂಡಿತ ನೆನಪಿದೆ -’ I do remember’ ಎಂದು ನೆನಪಿಡುವಂತೆ ಮಾಡುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT