ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿ ಹತ್ಯೆ: ಜೈಲು ಸಿಬ್ಬಂದಿಗೆ ಕಠಿಣ ಶಿಕ್ಷೆ ವಿಧಿಸಬೇಕು

Last Updated 30 ಜೂನ್ 2017, 20:23 IST
ಅಕ್ಷರ ಗಾತ್ರ

ಜೈಲುಗಳು ಎಂದರೆ ಸುಧಾರಣಾ ಗೃಹಗಳು, ಮನಃಪರಿವರ್ತನೆಯ ಕೇಂದ್ರಗಳು ಎಂದೇ ಭಾವಿಸಲಾಗುತ್ತದೆ. ಅವು ಪೊಲೀಸ್‌ ಠಾಣೆಗಳ ಮುಂದುವರಿದ ಭಾಗ ಅಲ್ಲ. ಹೀಗಾಗಿ ಅವು  ಕೈದಿಗಳನ್ನು ಪೀಡಿಸುವ, ಹಿಂಸೆ ಕೊಡುವ ಸ್ಥಳಗಳಲ್ಲ. ಈ ಕಾರಣಕ್ಕಾಗಿಯೇ ಜೈಲುಗಳ ನಿರ್ವಹಣೆ, ಕೈದಿಗಳ ಯೋಗಕ್ಷೇಮ, ಅವರ ಆಹಾರ, ಔದ್ಯೋಗಿಕ ತರಬೇತಿ  ಮತ್ತಿತರ ವಿಚಾರಗಳಲ್ಲಿ ಅನೇಕ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ವಿಚಾರಣಾಧೀನ ಕೈದಿಗಳು ಮತ್ತು ಶಿಕ್ಷೆಗೆ ಒಳಗಾಗಿ ಜೈಲು ಸೇರಿರುವ  ಕೈದಿಗಳಿಗೂ ಅನೇಕ ಹಕ್ಕು, ಬಾಧ್ಯತೆಗಳಿವೆ. ಅವನ್ನು ಗೌರವಿಸಿ ಪಾಲಿಸುವುದು, ಅವರ ಮಾನ, ಪ್ರಾಣ ರಕ್ಷಿಸುವುದು ಜೈಲು ಸಿಬ್ಬಂದಿಯ ಕರ್ತವ್ಯ. ಆದರೆ ಮುಂಬೈಯ ಭಾಯ್ಖಳಾ ಜೈಲಿನ ಸಿಬ್ಬಂದಿ ಈ ಕಟ್ಟುಪಾಡುಗಳೆಲ್ಲ ತಮಗೆ ಅನ್ವಯಿಸುವುದೇ ಇಲ್ಲ, ತಾವು ಕಾನೂನಿಗಿಂತ ದೊಡ್ಡವರು ಎಂಬಂತೆ ನಡೆದುಕೊಂಡಿದ್ದಾರೆ.

ಮನಬಂದಂತೆ ಹೊಡೆದು 38 ವರ್ಷದ ಮಂಜುಳಾ ಶೆಟ್ಯೆ ಎಂಬ ಮಹಿಳಾ ಕೈದಿಯೊಬ್ಬರ ಸಾವಿಗೆ ಕಾರಣರಾಗಿದ್ದಾರೆ. ಈ ದೌರ್ಜನ್ಯ ಪ್ರಶ್ನಿಸಿ ಪ್ರತಿಭಟನೆಗೆ ಇಳಿದ ಇತರ ಕೈದಿಗಳ ಮೇಲೆ ಅಮಾನುಷ ದೌರ್ಜನ್ಯ ನಡೆಸಿದ್ದಾರೆ. ಇದನ್ನು ನೋಡಿದರೆ ಜೈಲೂ ಸುರಕ್ಷಿತವಲ್ಲ ಎನಿಸುತ್ತದೆ. ಇದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ.

ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮಂಜುಳಾ ಅವರಿಗೆ ಸನ್ನಡತೆಗಾಗಿ ಅಲ್ಲಿಯೇ ಬ್ಯಾರಕ್‌ನ ವಾರ್ಡನ್ ಜವಾಬ್ದಾರಿ ನೀಡಲಾಗಿತ್ತು. ಕೈದಿಗಳಿಗೆ ಊಟ– ತಿಂಡಿ ವಿತರಣೆ ಕೆಲಸ ವಹಿಸಲಾಗಿತ್ತು. ಆದರೆ ಕಡಿಮೆ ಆಹಾರ ಕೊಡುತ್ತಿರುವುದನ್ನು ಪ್ರಶ್ನಿಸಿದ್ದು ಅವರ ಪ್ರಾಣಕ್ಕೇ ಕುತ್ತಾಯಿತು. ಕೈದಿಗಳ ಎದುರೇ ಅವರನ್ನು ಬೆತ್ತಲೆ ಮಾಡಿ ಥಳಿಸಿ ಜನನಾಂಗದಲ್ಲಿ ಲಾಠಿ ತೂರಿಸಲಾಯಿತು.

ಸಿಕ್ಕಾಪಟ್ಟೆ ರಕ್ತಸ್ರಾವ ಆದರೂ ಚಿಕಿತ್ಸೆ ನೀಡಲಿಲ್ಲ. ಈ ರೀತಿಯ ಪೈಶಾಚಿಕ ವರ್ತನೆ ತೋರಿಸಿದವರು ಮಹಿಳಾ ಜೈಲರ್‌ಗಳು. ಸಹಕೈದಿಗಳ ಒತ್ತಡಕ್ಕೆ ಮಣಿದು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ಅಲ್ಲಿ ಶೆಟ್ಯೆ ಅಸುನೀಗಿದರು. ಈಗೇನೋ ಜೈಲಿನ 6 ಸಿಬ್ಬಂದಿ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ಅವರನ್ನು ಅಮಾನತಿನಲ್ಲಿ ಇಡಲಾಗಿದೆ.

ವರದಿ ನೀಡುವಂತೆ ರಾಜ್ಯ ಮಹಿಳಾ ಆಯೋಗ ಆದೇಶಿಸಿದೆ. ಆದರೆ ಇದರಿಂದ ಹೋದ ಜೀವ ಏನೂ ಬರುವುದಿಲ್ಲ ಎನ್ನುವುದು ನಿಜ. ಹಾಗೆಂದು ಸುಮ್ಮನೆ ಬಿಡಬಾರದು. ತಪ್ಪಿತಸ್ಥ ಸಿಬ್ಬಂದಿ ಬಗ್ಗೆ ಕಿಂಚಿತ್ತೂ ಕರುಣೆ ತೋರದೆ ಕಠಿಣವಾಗಿ ಶಿಕ್ಷಿಸಬೇಕು. ಉಳಿದವರಿಗೆ ಅದೊಂದು ಪಾಠವಾಗಬೇಕು.

ನಮ್ಮ ದೇಶದಲ್ಲಿ ಬಹುತೇಕ ಜೈಲುಗಳು ಕೈದಿಗಳಿಂದ ತುಂಬಿದ ಕಿಷ್ಕಿಂಧೆಗಳಾಗಿವೆ. ಮೂಲ ಸೌಕರ್ಯ ಮತ್ತು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಇದು ಸಹಜವಾಗಿ ಸಿಬ್ಬಂದಿ ಮೇಲೆ ಮಾನಸಿಕ ಒತ್ತಡ ಹೇರುತ್ತದೆ. ಅದು ಕೈದಿಗಳ ಜತೆಗಿನ ಅವರ ವರ್ತನೆ ಮೇಲೂ ಪರಿಣಾಮ ಬೀರುತ್ತದೆ. ಆದರೆ ವೃತ್ತಿ ಬದುಕಿನಲ್ಲಿ ಇವೆಲ್ಲ ಅನಿವಾರ್ಯ.

ಅದನ್ನು ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕೇ ಹೊರತು ಕೈದಿಗಳ ಮೇಲೆ ದಬ್ಬಾಳಿಕೆ ತೋರಿಸಲು ಗುರಾಣಿಯಾಗಿ ಬಳಸಿಕೊಳ್ಳಬಾರದು. ಏಕೆಂದರೆ ಕೈದಿಗಳು ಹೊರ ಜಗತ್ತಿನ ಸಂಪರ್ಕ ಇಲ್ಲದೆ ನಾಲ್ಕು ಗೋಡೆಯ ಒಳಗೆ ಇರುತ್ತಾರೆ. ಅವರೂ ಮನುಷ್ಯರು, ಅವರಿಗೂ ಭಾವನೆಗಳಿವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು.

ನಮ್ಮ ಜೈಲುಗಳಲ್ಲಿ ಹಣ ಅಥವಾ ರಾಜಕೀಯ ಪ್ರಭಾವ ಇರುವವರು, ಕುಖ್ಯಾತ ರೌಡಿಗಳು, ಭೂಗತ ದೊರೆಗಳು, ಸೆಲೆಬ್ರಿಟಿಗಳಿಗೆ ರಾಜಮರ್ಯಾದೆ. ಇದ್ಯಾವುದೂ ಇಲ್ಲದವರನ್ನು ಕೀಳಾಗಿ ಕಾಣುವ ಪ್ರವೃತ್ತಿ ಇದೆ ಎಂಬ ಆರೋಪಗಳು ಸಾಮಾನ್ಯ. ಈ ತಾರತಮ್ಯವೇ ಅಸಮಾಧಾನ, ಅತೃಪ್ತಿಗೆ ಎಡೆ ಮಾಡುತ್ತದೆ. ಜೈಲು ಸುಧಾರಣೆಗೆ ರಚನೆಯಾದ ಆಯೋಗಗಳು, ಸಮಿತಿಗಳೂ ಈ ಅಂಶಗಳನ್ನು ಗುರುತಿಸಿವೆ.

ದೇಶದ 1382 ಜೈಲುಗಳಲ್ಲಿನ ದುಃಸ್ಥಿತಿ ಬಗ್ಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌.ಸಿ. ಲಹೋಟಿ ಅವರು ಬರೆದಿದ್ದ ಪತ್ರವನ್ನೇ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ವಿಚಾರಣೆಗೆ ಎತ್ತಿಕೊಂಡು ಜೈಲು ಸುಧಾರಣೆ ಬಗ್ಗೆ 2016ರ ಫೆ. 5ರಂದು ನೀಡಿದ ಮಾರ್ಗದರ್ಶಿ ಸೂಚನೆಗಳನ್ನು ಐತಿಹಾಸಿಕ ಎಂದೇ ಪರಿಗಣಿಸಲಾಗುತ್ತಿದೆ.

ಎಲ್ಲ ಮನುಷ್ಯರಂತೆ ಕೈದಿಗಳನ್ನೂ ಘನತೆಯಿಂದ ನಡೆಸಿಕೊಳ್ಳಬೇಕು ಎಂದು ಅದು ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಿದ್ದೂ ಭಾಯ್ಖಳಾ ಜೈಲಿನಲ್ಲಿ ನಡೆಯಬಾರದ್ದು ನಡೆದುಹೋಗಿದೆ. ಇದು ಇನ್ನೆಂದೂ, ಎಲ್ಲೂ ಮರುಕಳಿಸಬಾರದು. ಜೈಲು ಸುಧಾರಣೆ ಕೆಲಸವನ್ನು ಸರ್ಕಾರಗಳು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT