ಪತ್ರಕರ್ತರಿಬ್ಬರಿಗೆ ಜೈಲು ಶಿಕ್ಷೆ

ಜೈಲಿಗೆ ದೂಡುವ ಹಟ!

ಹಕ್ಕುಚ್ಯುತಿ ಅಸ್ತ್ರ ಬಳಸಿಕೊಂಡು ಪತ್ರಕರ್ತರನ್ನು ಬೆದರಿಸಿ, ಬಾಯಿ ಮುಚ್ಚಿಸುವುದು ಆ ಅಧಿಕಾರಿಯ ಉದ್ದೇಶವಾಗಿತ್ತು. ಅವರ ಪ್ರಯತ್ನ ಫಲಿಸಲಿಲ್ಲ. ಇದು ಹೊಸದೇನೂ ಅಲ್ಲ....

ಜೈಲಿಗೆ ದೂಡುವ ಹಟ!

ವಿಧಾನಸಭೆ ಸಚಿವಾಲಯ ಬೆಂಗಳೂರಿನಲ್ಲಿ ಶಾಸಕರಿಗಾಗಿ ನಿರ್ಮಿಸಲು ಉದ್ದೇಶಿಸಿದ್ದ ‘ಟೌನ್‌ಶಿಪ್‌’ ಕುರಿತು ನಮ್ಮ ಪತ್ರಿಕೆಯಲ್ಲಿ  ಬರೆಯಲಾಗಿತ್ತು. ಇದರ ಬಗ್ಗೆ ಮಾಹಿತಿ ಪಡೆಯಲು ನಮ್ಮ ವರದಿಗಾರರು ವಿಧಾನಸಭೆ ಸಚಿವಾಲಯದ ಹಿರಿಯ ಅಧಿಕಾರಿಗೆ ದೂರವಾಣಿ ಕರೆ ಮಾಡಿದ್ದರು. ಆ ಅಧಿಕಾರಿ ಬೆದರಿಕೆ ಹಾಕುವ ರೀತಿ ಮಾತನಾಡಿದ್ದರು. ‘ನಿಮಗೆ  ಸಂವಿಧಾನದ ಅರಿವಿದೆಯೇ. ಹಕ್ಕುಚ್ಯುತಿ ಕುರಿತು ತಿಳಿದಿದೆಯೇ’ ಎಂದು ಕೂಗಾಡಿದ್ದರು.

ಹಕ್ಕುಚ್ಯುತಿ ಅಸ್ತ್ರ ಬಳಸಿಕೊಂಡು ಪತ್ರಕರ್ತರನ್ನು ಬೆದರಿಸಿ, ಬಾಯಿ ಮುಚ್ಚಿಸುವುದು ಆ ಅಧಿಕಾರಿಯ ಉದ್ದೇಶವಾಗಿತ್ತು. ಅವರ ಪ್ರಯತ್ನ ಫಲಿಸಲಿಲ್ಲ. ಇದು ಹೊಸದೇನೂ ಅಲ್ಲ. ಕೆ.ಬಿ. ಕೋಳಿವಾಡ ಅವರು ವಿಧಾನಸಭೆ ಅಧ್ಯಕ್ಷರಾದ ನಂತರ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಮಾಧ್ಯಮಗಳ ನಿಯಂತ್ರಣಕ್ಕೆ ನಿಯಮಾವಳಿ ರೂಪಿಸಲು ಸದನ ಸಮಿತಿ ಮಾಡಲಾಗಿದೆ.

ಸಮಿತಿ ರಚಿಸುವ ಮೊದಲು ನಡೆದ ಚರ್ಚೆಯ ಸಮಯದಲ್ಲಿ ಮಾತನಾಡಿದ ಶಾಸಕರೆಲ್ಲರೂ ಮಾಧ್ಯಮಗಳ ವಿರುದ್ಧ ಅದರಲ್ಲೂ ಎಲೆಕ್ಟ್ರಾನಿಕ್‌ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದರು. ‘ಹಾಯ್‌ ಬೆಂಗಳೂರ್‌’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಹಾಗೂ ‘ಯಲಹಂಕ ವಾಯ್ಸ್‌’ ಪತ್ರಿಕೆ ಸಂಪಾದಕ ಅನಿಲ್‌ ರಾಜ್‌ ಪ್ರಕರಣ ಇದರ ಮುಂದುವರಿದ ಭಾಗ ಅಷ್ಟೆ.

ವಿಧಾನಮಂಡಲದ ಮುಂಗಾರು ಅಧಿವೇಶನದ ಕೊನೆಯ ದಿನದ ಕಲಾಪ ಪಟ್ಟಿಯಲ್ಲಿ ಕೊನೆಯ ವಿಷಯವಾಗಿ ‘ಹಕ್ಕು ಬಾಧ್ಯತಾ ಸಮಿತಿಯ ಮೂರನೇ ವರದಿಯನ್ನು ಸದನದ ಪರ್ಯಾಲೋಚನೆಗೆ ಮಂಡಿಸುವುದು’ ಎಂದು ಪ್ರಸ್ತಾಪಿಸಲಾಗಿತ್ತು. 3ನೇ ವರದಿ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌, ಅನಿಲ್‌ ರಾಜ್‌ ವಿರುದ್ಧ ನೀಡಿದ್ದ ದೂರಿಗೆ ಸಂಬಂಧಿಸಿದ್ದು.

ಅಚ್ಚರಿಯ ಸಂಗತಿ ಎಂದರೆ, ಇದರ ಮಧ್ಯದಲ್ಲೇ ಎರಡನೇ ವರದಿಯೂ ತೂರಿಕೊಂಡಿದ್ದು. ರವಿ ಬೆಳಗೆರೆಗೆ ಸಂಬಂಧಪಟ್ಟ ವರದಿಯ ಉಲ್ಲೇಖ ಕಲಾಪ ಪಟ್ಟಿಯಲ್ಲಿ ಇರಲಿಲ್ಲ. ಚರ್ಚೆಯ ನಡುವೆ ಶಾಸಕ ಬಿ.ಎಂ. ನಾಗರಾಜ್‌   ಮಾಡಿದ ಪ್ರಸ್ತಾಪದಿಂದಾಗಿ ವರದಿ ಮಂಡನೆಗೆ ಅವಕಾಶ ಕೊಡಲಾಯಿತು.

ಸದನದ ನಿಯಮಾವಳಿಯಂತೆ ಹಕ್ಕುಬಾಧ್ಯತೆ ಕುರಿತು ಚರ್ಚಿಸಲು ಅಪೇಕ್ಷಿಸುವ ಸದಸ್ಯರು ಕಲಾಪ ಆರಂಭವಾಗುವ ಮುನ್ನ ಕಾರ್ಯದರ್ಶಿಗೆ ಲಿಖಿತವಾಗಿ ನೋಟಿಸ್ ಕೊಡಬೇಕು. ಅಧ್ಯಕ್ಷರ ಅನುಮತಿ ಮೇಲೆ ಹಕ್ಕುಚ್ಯುತಿ ವಿಷಯ ಎತ್ತಿಕೊಳ್ಳಲು ಅವಕಾಶವಿದೆ. ಆದರೆ, 2ನೇ ವರದಿ ಮಂಡನೆ ವೇಳೆ ನಿಯಮಗಳ ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬರುತ್ತದೆ.

ಹಕ್ಕುಬಾಧ್ಯತಾ ಸಮಿತಿಯ ವರದಿ ಸದನದಲ್ಲಿ ಮಂಡನೆಯಾದಾಗ ಅತ್ಯಂತ ಕಡಿಮೆ ಸದಸ್ಯರು (ಸುಮಾರು ಹತ್ತಿಪ್ಪತ್ತು) ಇದ್ದರು. ಸದನದ ಒಟ್ಟು ಬಲ 224.  ಚರ್ಚೆಯಲ್ಲಿ ಪಾಲ್ಗೊಂಡವರು ಕೇವಲ ಎಂಟು ಮಂದಿ. ಆಗತಾನೇ ಸಿದ್ದರಾಮಯ್ಯ ಸದನದಿಂದ ನಿರ್ಗಮಿಸಿದ್ದರು. ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಇರಲಿಲ್ಲ. ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೂ ಬಂದಿರಲಿಲ್ಲ.

1992ರ ಆಗಸ್ಟ್‌ನಲ್ಲಿ ‘ಲಂಕೇಶ್‌ ಪತ್ರಿಕೆ’ಯಲ್ಲಿ ಪ್ರಕಟವಾಗಿದ್ದ ‘ಶಾಸಕಿಯರ ಕಾಲಹರಣ’ ವರದಿ ವಿರುದ್ಧ ಹಕ್ಕುಬಾಧ್ಯತಾ ಸಮಿತಿ ಕೊಟ್ಟ ಶಿಫಾರಸಿನ ಮೇಲೆ ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆಯಾಗಿತ್ತು. ಪತ್ರಕರ್ತ ಟಿ.ಕೆ. ತ್ಯಾಗರಾಜ್‌ ಬರೆದಿದ್ದ ಲೇಖನದ ವಿರುದ್ಧ ವಾಟಾಳ್‌ ನಾಗರಾಜ್‌ ಅವರೊಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಕಿಡಿ ಕಾರಿದ್ದರು. ವಾಟಾಳ್‌ ಮಾತ್ರವೇ ‘ಹಕ್ಕುಚ್ಯುತಿ ಎಂದರೆ ಏನು, ಹಕ್ಕುಚ್ಯುತಿ ಯಾವಾಗ ಆಗುತ್ತದೆ’ ಎಂದು ಸುದೀರ್ಘವಾಗಿ ವಿವರಿಸಿದ್ದರು. ಆ ಬಳಿಕ ವರದಿ ಬಿದ್ದುಹೋಯಿತು.

‘ಆಗ ಜೆ.ಎಚ್‌. ಪಟೇಲರು ಮುಖ್ಯಮಂತ್ರಿ. ಅವರಿಗೂ ಲಂಕೇಶ್‌ ಅವರನ್ನು ಜೈಲಿಗೆ ಕಳುಹಿಸುವ ಆಲೋಚನೆ ಇತ್ತು. ವಿಧಾನಸಭೆ ಅಧ್ಯಕ್ಷರಾಗಿದ್ದ ರಮೇಶ್‌ ಕುಮಾರ್‌ ಅವರ ಕಚೇರಿಯಲ್ಲಿ ಮಧ್ಯಾಹ್ನದ ಬಿಡುವಿನಲ್ಲಿ  ಮನದ ಇಂಗಿತವನ್ನು ಪಟೇಲರು  ಬಿಚ್ಚಿಟ್ಟಿದ್ದರು’ ಎಂದು ವಾಟಾಳ್‌  ಶಾಸನಸಭೆಯ   ಇತಿಹಾಸದ ಪುಟಗಳನ್ನು ಈಗ ನೆನಪು ಮಾಡಿಕೊಂಡಿದ್ದು ಹೀಗೆ.

‘ಪತ್ರಕರ್ತರಿಬ್ಬರಿಗೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ಸದನದೊಳಗೆ ಎಷ್ಟು ಚರ್ಚೆ ಆಗಬೇಕಿತ್ತೊ ಅಷ್ಟು ಆಗಲಿಲ್ಲ. ಅವರು ಬರೆದ ವರದಿ ಮಾನನಷ್ಟದ ವ್ಯಾಪ್ತಿಯಲ್ಲಿ ಬರುವುದೇ ಅಥವಾ ಹಕ್ಕು ಚ್ಯುತಿ ಆಗುವುದೇ ಎಂದು ನೋಡುವ ಪ್ರಯತ್ನ ನಡೆಯಲಿಲ್ಲ. ಈ ವಿಷಯದಲ್ಲಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರ ಜೊತೆ ವಿಧಾನಸಭೆ ಅಧ್ಯಕ್ಷರು  ಚರ್ಚೆ ಮಾಡಬೇಕಿತ್ತು. ಅದ್ಯಾವುದನ್ನೂ ಮಾಡದೆ ಏಕಾಏಕಿ ಜೈಲು ಶಿಕ್ಷೆ ವಿಧಿಸಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರ’ ಎನ್ನುವುದು ವಾಟಾಳ್‌ ವ್ಯಾಖ್ಯಾನ.

ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡ ಅವರೂ ಇದೇ ನಿಲುವು ಹೊಂದಿದ್ದಾರೆ. ‘ಪತ್ರಕರ್ತರಿಗೆ ಶಿಕ್ಷೆ ಕೊಡುವ ಮೂಲಕ ಸದನ ಅತಿರೇಕದಿಂದ ನಡೆದುಕೊಂಡಿದೆ.  ಬೇಕಿದ್ದರೆ ಇಬ್ಬರೂ ಪತ್ರಕರ್ತರನ್ನು ಹಕ್ಕುಬಾಧ್ಯತಾ ಸಮಿತಿ ಮುಂದೆ ಕರೆದು ಎಚ್ಚರಿಕೆ ನೀಡಬಹುದಿತ್ತು. ಸದನಕ್ಕೆ ಕರೆಸಿ ವಾಗ್ದಂಡನೆ ವಿಧಿಸಬಹುದಿತ್ತು. ಈ ವಿಷಯದಲ್ಲಿ ಸದನ ಹಾಗೂ ಸಭಾಧ್ಯಕ್ಷರು ಕಾರ್ಯವ್ಯಾಪ್ತಿ ಮೀರಿ ವರ್ತಿಸಿದ್ದಾರೆ. ಇದರಿಂದ ಏನು ಪ್ರಯೋಜನ’ ಎನ್ನುವುದು ಅವರ ಪ್ರಶ್ನೆ.

ಫಿರ್ಯಾದಿಯೇ ನ್ಯಾಯಾಧೀಶ!: ರವಿ ಬೆಳಗೆರೆ ಅವರಿಗೆ ಸಂಬಂಧಿಸಿದಂತೆ ಹಕ್ಕುಬಾಧ್ಯತಾ ಸಮಿತಿಯ ವರದಿಗಳಲ್ಲಿ ‘ಹಿತಾಸಕ್ತಿ ಸಂಘರ್ಷ’ವೂ ಇದ್ದಂತಿದೆ. ಬೆಳಗೆರೆ ವಿರುದ್ಧ ದೂರು ಕೊಟ್ಟಿದ್ದು ಕೋಳಿವಾಡ ಅವರೇ. ಆಗ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರೂ ಅವರೇ. ದೂರುದಾರರೇ ತಮ್ಮ ದೂರಿನ ವಿಚಾರಣೆ ನಡೆಸುವುದು  ಎಷ್ಟು ಸರಿ? ಸದನದ ನಿಯಮಾವಳಿ ದೃಷ್ಟಿಯಿಂದಲೂ ಇದು ಒಪ್ಪಲು ಸಾಧ್ಯವಿಲ್ಲ. ನೈತಿಕವಾಗಿಯೂ ಸರಿಯಾದ ಕ್ರಮವಲ್ಲ.

‘ಕೋಳಿವಾಡ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷರಾಗಿದ್ದು ನಿಜ. ಆದರೆ, ದೂರಿನ ವಿಚಾರಣೆ ಸಮಯದಲ್ಲಿ ಗೈರು ಹಾಜರಾಗುತ್ತಿದ್ದರು. ಸಮಿತಿಯ ಹಿರಿಯ ಸದಸ್ಯರು ಅಧ್ಯಕ್ಷತೆ ವಹಿಸುತ್ತಿದ್ದರು’ ಎಂದು ವಿಧಾನಸಭೆ ಸಚಿವಾಲಯದ ಮೂಲಗಳ ಪ್ರತಿಪಾದನೆ.

ಅನಿಲ್‌ರಾಜ್‌ ವಿರುದ್ಧದ ದೂರಿನ ವಿಚಾರಣೆ ನಡೆಸಿದ ಕಿಮ್ಮನೆ ರತ್ನಾಕರ ನೇತೃತ್ವದ ಹಕ್ಕುಬಾಧ್ಯತಾ ಸಮಿತಿಯಲ್ಲೂ ದೂರು ಕೊಟ್ಟಿದ್ದ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಸದಸ್ಯರು. ‘ದೂರಿನ ವಿಚಾರಣೆ ಸಮಯದಲ್ಲಿ ಅವರೂ ಹಾಜರಿರುತ್ತಿರಲಿಲ್ಲ’ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಮಿತಿ ಸಭೆಗಳಲ್ಲಿ ಹಾಜರಿಲ್ಲದೆ ಇರಬಹುದು. ಆದರೆ ಪ್ರಭಾವ ಬೀರಿಲ್ಲ ಎಂದು ನಂಬುವುದಾದರೂ ಹೇಗೆ?

ಈ ಪತ್ರಕರ್ತರು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಮಿತಿ ದಾಟಿದ್ದಾರೆಯೇ ಎಂಬ ಚರ್ಚೆಗಳು ನಡೆಯಲೇಬೇಕು.  ಅದೇ ವೇಳೆ ಹಕ್ಕುಚ್ಯುತಿ ಹೆಸರಿನಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆಯನ್ನು ಶಾಸಕರು, ಶಾಸನಸಭೆಗಳ ಅಧ್ಯಕ್ಷರು ಬಿಡಬೇಕು. ಯಾವುದೋ ಕಾಲದಲ್ಲಿ ರೂಪಿಸಲಾದ ವಿಶೇಷ ಹಕ್ಕುಗಳನ್ನು ಕುರಿತು ನಿರ್ದಿಷ್ಟ  ವ್ಯಾಖ್ಯಾನ ಆಗಬೇಕು.

Comments
ಈ ವಿಭಾಗದಿಂದ ಇನ್ನಷ್ಟು
ಐಪಿಸಿ ‘354ಡಿ’ ಅಡಿ ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ

ಹಿಂಬಾಲಿಸುವಿಕೆ
ಐಪಿಸಿ ‘354ಡಿ’ ಅಡಿ ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ

12 Aug, 2017
ಪ್ಲೇಟೋನ ಗುಹೆ

ಪಶ್ಚಿಮದಿಂದ...
ಪ್ಲೇಟೋನ ಗುಹೆ

5 Aug, 2017

ಮೇಷ್ಟ್ರು
ಆನಂದಲಹರಿ

ಬೆಳಗಿನ ಹೊತ್ತು ಸೂರ್ಯನ ಬೆಳಕಿರುತ್ತದೆ.  ರಾತ್ರಿಯಲ್ಲಿ ಚಂದ್ರನ ಬೆಳಕಿರುತ್ತದೆ. ಇದು ನಮ್ಮ ಕಣ್ಣಿಗೆ ಕಾಣುವ ವಿದ್ಯಮಾನ. ಆದರೆ ಇದು ಸತ್ಯವಲ್ಲ; ಬೆಳಗಿನ ಬೆಳಕಿಗೂ ರಾತ್ರಿಯ...

5 Aug, 2017
ಕ್ಯಾಮೆರಾ, ಕ್ಯಾಸ್ಟಿಂಗ್‍ ಕೌಚ್‍... ಕಟ್‍ ಕಟ್‍...

ಅಂತರಾಳ
ಕ್ಯಾಮೆರಾ, ಕ್ಯಾಸ್ಟಿಂಗ್‍ ಕೌಚ್‍... ಕಟ್‍ ಕಟ್‍...

29 Jul, 2017
ಶೋಷಿತರು ಎಚ್ಚೆತ್ತುಕೊಳ್ಳಬೇಕು

ಅಂತರಾಳ
ಶೋಷಿತರು ಎಚ್ಚೆತ್ತುಕೊಳ್ಳಬೇಕು

29 Jul, 2017