ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೊಂದೇ ತೆರಿಗೆ ನೀತಿ ಜಾರಿ: ರಾಷ್ಟ್ರಪತಿ, ಪ್ರಧಾನಿಯಿಂದ ಚಾಲನೆ

Last Updated 30 ಜೂನ್ 2017, 20:47 IST
ಅಕ್ಷರ ಗಾತ್ರ

ನವದೆಹಲಿ: ಸ್ವತಂತ್ರ ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಕ್ರಾಂತಿಕಾರಕ ತೆರಿಗೆ  ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಶುಕ್ರವಾರ ಮಧ್ಯರಾತ್ರಿಯಿಂದಲೇ ದೇಶದಾದ್ಯಂತ ಜಾರಿಗೆ ಬಂದಿದೆ.

ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುಂಡಿ ಒತ್ತುವ ಮೂಲಕ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು. 

ಹೊಸ ತೆರಿಗೆ ವ್ಯವಸ್ಥೆ ದೇಶದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದ್ದು,  ಡಿಜಿಟಲ್‌ ಮತ್ತು ಮಾಹಿತಿ ತಂತ್ರಜ್ಞಾನದಿಂದಾಗಿ ಜಿಎಸ್‌ಟಿ ಜಾರಿ ಸುಲಭವಾಗಲಿದೆ ಎಂದು ಪ್ರಣವ್‌ ಮುಖರ್ಜಿ ಆಶಿಸಿದರು.

ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌) ಜಾರಿಯಾದ ಹೊಸದರಲ್ಲಿ ಎದುರಾದ  ತೊಂದರೆಯೇ ಈಗಲೂ ಆಗಬಹುದು. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದರು.

‘ನಾನು ಕೂಡ ಜಿಎಸ್‌ಟಿ ಯಾತ್ರೆಯ ಭಾಗವಾದ ಕಾರಣ ಎಲ್ಲ ಘಟನೆಗಳನ್ನು ಹತ್ತಿರದಿಂದ ಕಾಣುವ ಅವಕಾಶ ದೊರೆಯಿತು. ದೇಶದ ಖ್ಯಾತ ಆರ್ಥಿಕ ತಜ್ಞರು, ಹಣಕಾಸು ಸಚಿವರ ಒಡನಾಟ ಲಭಿಸಿತು’ ಎಂದು ಮುಖರ್ಜಿ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಅವರು ಎಲ್ಲ ಸಂಸ್ಥಾನಗಳನ್ನು ಒಕ್ಕೂಟ ವ್ಯವಸ್ಥೆಗೆ ಸೇರಿಸುವ ಮೂಲಕ ಭಾರತದ ಏಕೀಕರಣಕ್ಕೆ ಕಾರಣರಾದರು. ಇಂದು  ಜಿಎಸ್‌ಟಿ ಮೂಲಕ ದೇಶದ ಆರ್ಥಿಕ ಏಕೀಕರಣಕ್ಕೆ ನಾಂದಿ ಹಾಡಿದ್ದೇವೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.

ಆಗಸ್ಟ್‌ 15ರಂದು ಮಧ್ಯರಾತ್ರಿ ದೊರೆತ ಸ್ವಾತಂತ್ರ್ಯ ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಿತು. ಈಗ ಅದೇ ಪವಿತ್ರ ಸ್ಥಳದಲ್ಲಿ ಮಧ್ಯರಾತ್ರಿ ಜಾರಿಯಾಗುತ್ತಿರುವ ಹೊಸ ತೆರಿಗೆ ವ್ಯವಸ್ಥೆ ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ. ನವ ಭಾರತದ ನಿರ್ಮಾಣದಲ್ಲಿ ಜಿಎಸ್‌ಟಿ ಜಾರಿಯ ಈ ಸಂದರ್ಭ ಕೂಡ ಒಂದು ಐತಿಹಾಸಿಕ ಕ್ಷಣವಾಗಲಿದೆ ಎಂದರು.

ಜಿಎಸ್‌ಟಿ ಯಶಸ್ಸು ಕೇವಲ ಒಂದು ಸರ್ಕಾರಕ್ಕೆ ಸೇರಿದ್ದಲ್ಲ. ಹಿಂದಿನ ಎಲ್ಲ ಸರ್ಕಾರಗಳ ಸಾಮೂಹಿಕ ಶ್ರಮದ ಫಲವಾಗಿ ಎರಡು ದಶಕಗಳ ಕನಸು ಸಾಕಾರಗೊಂಡಿದೆ ಎಂದು ಮೋದಿ ಹೇಳಿದರು.

‘ಜಿಎಸ್‌ಟಿ ಕೇವಲ ಆರ್ಥಿಕ ಬದಲಾವಣೆಗೆ ಸೀಮಿತವಾಗಿಲ್ಲ. ಸಾಮಾಜಿಕ ಬದಲಾವಣೆಗೂ ನಾಂದಿ ಹಾಡಲಿದೆ. ಅತ್ಯಂತ ಸಂಕೀರ್ಣ ಸ್ವರೂಪದ  ತೆರಿಗೆ ವ್ಯವಸ್ಥೆಯಿಂದ ಭಾರತಕ್ಕೆ ಆರ್ಥಿಕ ವಿಮೋಚನೆ ಸಿಗಲಿದೆ. ಕಪ್ಪುಹಣ, ತಪ್ಪುಲೆಕ್ಕಗಳಿಗೆ ಕಡಿವಾಣ ಬೀಳಲಿದೆ’ ಎಂದು ಬಣ್ಣಿಸಿದರು. ಜಿಎಸ್‌ಟಿ ಎಂದರೆ ‘ಗುಡ್‌ ಸಿಂಪಲ್‌ ಟ್ಯಾಕ್ಸ್‌’ (ಉತ್ತಮ ಮತ್ತು ಸರಳ ತೆರಿಗೆ) ಎಂದು ಪ್ರಧಾನಿ ವ್ಯಾಖ್ಯಾನಿಸಿದರು.

ಹೊಸ ತೆರಿಗೆ ವ್ಯವಸ್ಥೆ  ಭಾರತದ ಆರ್ಥಿಕ ದಿಗಂತವನ್ನು ವಿಸ್ತರಿಸಲಿದ್ದು, ಆರ್ಥಿಕ ಪ್ರಗತಿ (ಜಿಡಿಪಿ) ಹೆಚ್ಚಲಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ  ಹೇಳಿದರು.

ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ವೇದಿಕೆಯಲ್ಲಿದ್ದರು.
ಜಿಎಸ್‌ಟಿಯನ್ನು ಜಾರಿಗೆ ತರುವುದಕ್ಕೆ ಕೆಲವೇ ತಾಸುಗಳ ಮೊದಲು ರಸಗೊಬ್ಬರಗಳ ಮೇಲಿನ ತೆರಿಗೆಯನ್ನು  ಜಿಎಸ್‌ಟಿ ಮಂಡಳಿಯು ಶೇ 12ರಿಂದ     ಶೇ 5ಕ್ಕೆ ಇಳಿಸಿದೆ.  ರೈತರ ಹಿತಾಸಕ್ತಿ ರಕ್ಷಿಸಲು ಈ ನಿರ್ಧಾರಕ್ಕೆ ಬರಲಾಗಿದೆ.

17 ವರ್ಷಗಳ ಶ್ರಮ: 2000ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಇದ್ದಾಗಲೇ ಜಿಎಸ್‌ಟಿ ಬಗ್ಗೆ ಚಿಂತನೆ ಆರಂಭವಾಗಿತ್ತು.
ನಂತರದ ಎಲ್ಲ ಸರ್ಕಾರಗಳೂ ಜಿಎಸ್‌ಟಿ ರೂಪಿಸಲು ಕೊಡುಗೆ ನೀಡಿವೆ. ಸೆಂಟ್ರಲ್‌ ಹಾಲ್‌ನಲ್ಲಿ ಪ್ರದರ್ಶಿಸಲಾದ ಎರಡು ಕಿರುಚಿತ್ರಗಳಲ್ಲಿ ಹಿಂದಿನ ಸರ್ಕಾರಗಳು ನೀಡಿದ ಕೊಡುಗೆಗಳನ್ನು ವಿವರಿಸಲಾಗಿದೆ.

ಮೊಬೈಲ್‌ ಬಿಲ್‌ ದುಬಾರಿ

ಜಿಎಸ್‌ಟಿ ಜಾರಿಯಾಗಿರುವುದರಿಂದ ಶನಿವಾರದಿಂದ ಮೊಬೈಲ್ ಬಿಲ್ ದುಬಾರಿಯಾಗಲಿದೆ.

ಪೂರ್ವ ಪಾವತಿ ಮಾಡುವ ಗ್ರಾಹಕರಿಗೆ ಕಡಿಮೆ ಟಾಕ್ ಟೈಮ್ ಸಿಗಲಿದೆ.

ಮೊಬೈಲ್ ಸೇವಾ ತೆರಿಗೆ  ಶೇಕಡ 15ರಿಂದ 18ಕ್ಕೆ ಏರಲಿದೆ. ಆದ್ದರಿಂದ ₹100 ರೀಚಾರ್ಜ್ ಮಾಡಿಸಿದರೆ ₹ 80ಕ್ಕೆ  ಮಾತ್ರ ಟಾಕ್‌ಟೈಮ್. ಇದುವರೆಗೆ ₹ 83 ಟಾಕ್‌ಟೈಮ್ ಇತ್ತು. ಇದೇ ರೀತಿ ಪೋಸ್ಟ್‌ ಪೇಯ್ಡ್ ಸಹ ದುಬಾರಿ ಆಗಲಿದೆ.

ತಿಂಗಳಿಗೆ ಒಂದು ಸಾವಿರ ಬಿಲ್ ಬಂದರೆ ಸೇವಾ ಶುಲ್ಕ ಸೇರಿ ಇದುವರೆಗೆ ₹ 1,150 ಪಾವತಿಸಬೇಕಿತ್ತು.  ಇನ್ನು ಮುಂದೆ ₹1,180 ಪಾವತಿಸಬೇಕು.

ಟೆಲಿಕಾಂ ಸೇವೆಗಳಿಗೆ ಕನಿಷ್ಠ ಅಂದರೆ ಶೇಕಡ 5ರಷ್ಟು ಮಾತ್ರ ತೆರಿಗೆ ವಿಧಿಸಬೇಕು ಎಂದು ಕಂಪೆನಿಗಳು ಮನವಿ ಮಾಡಿದ್ದವು.

ಐಷಾರಾಮಿ ವಸ್ತುಗಳು ತುಟ್ಟಿ

* ದಿನಬಳಕೆಯ ಶೇ 50ರಷ್ಟು ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶ
* ದಿನಬಳಕೆಯ ಉಳಿದ ವಸ್ತುಗಳಿಗೆ ಶೇ 5, ಶೇ 12, ಶೇ 18ರಷ್ಟು ಮಾತ್ರ ತೆರಿಗೆ
* ಐಷಾರಾಮಿ, ಆರೋಗ್ಯಕ್ಕೆ ಹಾನಿಕರ ಸರಕುಗಳಿಗೆ ಶೇ 28ರಷ್ಟು ತೆರಿಗೆ
* ದೂರವಾಣಿ, ಬ್ಯಾಂಕಿಂಗ್‌ ಮತ್ತು ವಿಮೆ ಸೇವೆಗಳು ದುಬಾರಿ
* ಆರೋಗ್ಯ ಮತ್ತು ಶಿಕ್ಷಣ ಸೇವೆಗಳು ಜಿಎಸ್‌ಟಿಯಿಂದ ಹೊರಗೆ ಇವೆ

* 81%ದಿನಬಳಕೆಯ ವಸ್ತುಗಳು ಶೇ 18 ಮತ್ತು ಅದಕ್ಕಿಂತ ಕಡಿಮೆ ತೆರಿಗೆವ್ಯಾಪ್ತಿಗೆ ಬರುತ್ತವೆ

* 16 ಸ್ವರೂಪದ ಕೇಂದ್ರ ಮತ್ತು ರಾಜ್ಯ ತೆರಿಗೆಗಳು ರದ್ದಾಗಲಿವೆ

ಜಾರಿಗೂ ಮುನ್ನವೇ ಇಳಿಕೆ

ಟ್ರ್ಯಾಕ್ಟರ್‌ನ ಆಯ್ದ ಬಿಡಿಭಾಗಗಳ ಮೇಲಿನ ಜಿಎಸ್‌ಟಿಯನ್ನು ಮೊದಲು ಶೇ 28ಕ್ಕೆ ನಿಗದಿ ಮಾಡಲಾಗಿತ್ತು. ಅದನ್ನು ಈಗ ಶೇ 18ಕ್ಕೆ ಇಳಿಸಲಾಗಿದೆ

ತೆರಿಗೆ ಮತ್ತು ವಿನಾಯಿತಿ

*  ₹ 10 ಲಕ್ಷದಿಂದ ₹ 20 ಲಕ್ಷದವರೆಗೆ ವಹಿವಾಟು ನಡೆಸುವ ವರ್ತಕರಿಗೆ ತೆರಿಗೆಯಿಂದ ವಿನಾಯಿತಿ (ಈವರೆಗೆ ಅವರು ವ್ಯಾಟ್‌ ಸಲ್ಲಿಸಬೇಕಿತ್ತು)

* ₹ 20 ಲಕ್ಷದಿಂದ ₹ 75 ಲಕ್ಷದವರೆಗಿನ ವಹಿವಾಟು ನಡೆಸುವ ವರ್ತಕರು ಶೇ 2.5 ರಷ್ಟು ತೆರಿಗೆ ಪಾವತಿಸಬೇಕು

* ₹ 20 ಲಕ್ಷಕ್ಕಿಂತ ಕಡಿಮೆ ಮೊತ್ತದ ವಹಿವಾಟು ನಡೆಸುವ ಉದ್ಯಮಗಳಿಗೆ ತೆರಿಗೆಯಿಂದ ವಿನಾಯಿತಿ

***

* ದೇಶದ ಹಿತಾಸಕ್ತಿಗಾಗಿ ರಾಜಕೀಯ ಪಕ್ಷಗಳು ಪಕ್ಷಪಾತ ಪರಿಗಣನೆ ಬದಿಗಿಟ್ಟು ಒಮ್ಮತಕ್ಕೆ ಬಂದಿವೆ. ಇದು ಭಾರತದ ಪ್ರಜಾತಂತ್ರದ ವಿವೇಕ, ಪರಿಪಕ್ವತೆಗೆ ಸಿಕ್ಕ ಮನ್ನಣೆ

–ಪ್ರಣವ್‌ ಮುಖರ್ಜಿ, ರಾಷ್ಟ್ರಪತಿ

* ಜಿಎಸ್‌ಟಿ ಮೂಲಕ ದೇಶವನ್ನು ಹೊಸ ಹಾದಿಯತ್ತ ನಾವು ಒಯ್ಯುತ್ತಿದ್ದೇವೆ. ಇದು ಒಂದು ಪಕ್ಷ, ಒಂದು ಸರ್ಕಾರದ ಕೆಲಸವಲ್ಲ. ಎಲ್ಲ ಸರ್ಕಾರ, ಎಲ್ಲ ಪಕ್ಷಗಳ ಕೆಲಸ

–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT