ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಪುಟ ಸೇರಲಿದೆ ಪ್ರಧಾನಿ ಮೋದಿ ಹೆಸರು

ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ದೇಶದ ಐತಿಹಾಸಿಕ ತೆರಿಗೆ ಸುಧಾರಣೆಯ ಕನಸು ನನಸು
Last Updated 30 ಜೂನ್ 2017, 20:40 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಸರಕು ಮತ್ತು ಸೇವಾ ತೆರಿಗೆಗೆ(ಜಿಎಸ್‌ಟಿ)  ಭಾರಿ ವಿರೋಧ ವ್ಯಕ್ತಪಡಿಸಿದ್ದ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅದೇ ಜಿಎಸ್‌ಟಿ ಜಾರಿಗೆ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ದೇಶದ ಐತಿಹಾಸಿಕ ತೆರಿಗೆ ಸುಧಾರಣೆಯಾದ ಜಿಎಸ್‌ಟಿ ಜಾರಿಯೊಂದಿಗೆ ಪ್ರಧಾನಿಯ ಹೆಸರು ಕೂಡ ಇತಿಹಾಸದ ಪುಟ ಸೇರಲಿದೆ.

ಹಾಗೆ ನೋಡಿದರೆ ಜಿಎಸ್‌ಟಿ ಪರಿಕಲ್ಪನೆ ಮೊದಲ ಬಾರಿಗೆ ರೂಪಪಡೆದಿದ್ದು 2000ರಲ್ಲಿ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಎಂಬುವುದು ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ.

ಅಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವರಾಗಿದ್ದ  ದೇಶದ ಖ್ಯಾತ ಆರ್ಥತಜ್ಞ  ಅಸೀಮ್‌ ದಾಸ್‌ಗುಪ್ತಾ ಅವರನ್ನು  ವಿವಿಧ ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಜಿಎಸ್‌ಟಿಗೆ ಒಂದು ನಿರ್ದಿಷ್ಟ ರೂಪುರೇಷೆ
ನೀಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು.

ಆದರೆ, ಜಿಎಸ್‌ಟಿ ನಿರ್ದಿಷ್ಟ ರೂಪ ಪಡೆಯುವ ವೇಳೆಗಾಗಲೇ 2004ರಲ್ಲಿ ಚುನಾವಣೆ ಬಂದಿತು.  ಯುಪಿಎ ಸರ್ಕಾರ ಅಧಿಕಾರದ ಗದ್ದುಗೆ ಹಿಡಿಯಿತು.

ಆಗ ಜಿಎಸ್‌ಟಿ ಕರಡು ರಚನೆ ಹೊಣೆ ಹಣಕಾಸು ಸಚಿವರಾದ ಪಿ.ಚಿದಂಬರಂ ಅವರ ಹೆಗಲೇರಿತು. 2006ರ ಬಜೆಟ್‌ ಮಂಡನೆ ವೇಳೆ ಚಿದಂಬರಂ ಅವರು, 2010ರೊಳಗೆ ಜಿಎಸ್‌ಟಿ ಜಾರಿ ಮಾಡುವುದಾಗಿ  ಘೋಷಿಸಿದ್ದರು. 

ಈ ಮಧ್ಯೆ 2008ರಲ್ಲಿ ರಚಿಸಲಾದ ವಿವಿಧ ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡ ಉನ್ನಾಧಿಕಾರ ಸಮಿತಿಯು  ಜಿಎಸ್‌ಟಿಗೆ ಚೌಕಟ್ಟು ರೂಪಿಸುವ ಮಹತ್ವದ ಕೆಲಸ ಮಾಡಿ ಮುಗಿಸಿತ್ತು. ಆದರೆ, ಮರು ಚುನಾವಣೆಯಲ್ಲಿ ಯುಪಿಎ ಮತ್ತೆ ಅಧಿಕಾರಕ್ಕೆ ಬಂದಿತಾದರೂ  ಹಣಕಾಸು ಸಚಿವ ಸ್ಥಾನ ಚಿದಂಬರಂ  ಅವರ ಕೈತಪ್ಪಿ ಹೋಗಿತ್ತು. ಪ್ರಣವ್‌ ಮುಖರ್ಜಿ ಹಣಕಾಸು ಸಚಿವರಾದರು.

ಚಿದಂಬರಂ ಕಾಲದಲ್ಲಿ ರಚಿಸಿದ್ದ ಜಿಎಸ್‌ಟಿ ಕರಡು ಕೈಬಿಟ್ಟ ಮುಖರ್ಜಿ  ಅವರು ಪುನಃ ಅಸೀಮ್‌ ದಾಸ್‌ಗುಪ್ತಾ ಅವರ ಜಿಎಸ್‌ಟಿ ಕರಡನ್ನು ಅಳವಡಿಸಿಕೊಂಡರು. ಇದಕ್ಕೆ ಆಗ ವಿರೋಧ ಪಕ್ಷ ವಾಗಿದ್ದ ಬಿಜೆಪಿಯಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಆ ನಂತರ ಜಿಎಸ್‌ಟಿ ಜಾರಿಗೆ 115ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

ಜಿಎಸ್‌ಟಿಯನ್ನು ಔಪಚಾರಿಕವಾಗಿ ಮಂಡಿಸಿದ ನಂತರ ಬಿಜೆಪಿ ನಾಯಕ ಯಶವಂತ್‌ ಸಿನ್ಹಾ ನೇತೃತ್ವದ ಹಣಕಾಸು ವ್ಯವಹಾರಗಳ ಮೇಲಿನ ಸಂಸದೀಯ  ಸ್ಥಾಯಿ ಸಮಿತಿಗೆ ಒಪ್ಪಿಸಲಾಯಿತು. ಜಿಎಸ್‌ಟಿ ಜಾರಿ ಗಡುವನ್ನು ಮತ್ತೆ ಒಂದು ವರ್ಷ ಮುಂದೂಡಲಾಯಿತು. ಇದೇ ವೆಳೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋತ ಅಸೀಮ್‌ ದಾಸ್‌ಗುಪ್ತಾ ಅವರು ಹಣಕಾಸು ಸಚಿವರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ದಾಸ್‌ಗುಪ್ತಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ  ಕೇರಳದ ಹಣಕಾಸು ಸಚಿವ ಕೆ.ಎಂ. ಮಾಣಿ ಅವರನ್ನು ನೇಮಕ ಮಾಡಲಾಯಿತು.ಅವರ ಅವಧಿಯಲ್ಲಿ ಮೇಲಿಂದ ಮೇಲೆ ರಾಜ್ಯ ಹಣಕಾಸು ಸಚಿವರ ಸಭೆಗಳು ನಡೆದವು. ಆದರೆ, ಪೆಟ್ರೋಲ್‌, ಪೆಟ್ರೋಲಿಯಂ ಉತ್ಪನ್ನ, ಮದ್ಯ, ಪ್ರವೇಶ ತೆರಿಗೆಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಪಟ್ಟನ್ನು ರಾಜ್ಯಗಳು ಬಿಡಲಿಲ್ಲ. ಈ ನಡುವೆ ಯಶವಂತ ಸಿನ್ಹಾ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ   ಜಿಎಸ್‌ಟಿಗೆ ಕೆಲವು ಸುಧಾರಣೆಗಳನ್ನು ಸೂಚಿಸಿ ವರದಿ ಸಲ್ಲಿಸಿತ್ತು.

ವಿರೋಧಿಸಿದ್ದ ಮೋದಿ: ಜಿಎಸ್‌ಟಿ ಜಾರಿಯಿಂದ ರಾಜ್ಯಕ್ಕೆ ₹14 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಆ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಜಿಎಸ್‌ಟಿ ಜಾರಿಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. 

2014ರಲ್ಲಿ ಮತ್ತೊಂದು ಚುನಾವಣೆ ಬಂದರೂ ಜಿಎಸ್‌ಟಿ ಜಾರಿಗೆ ಕಾಲ ಕೂಡಿ ಬರಲಿಲ್ಲ. ಆದರೆ, ದೇಶದ ರಾಜಕೀಯ ವಲಯದಲ್ಲಿ ಭಾರಿ ಸ್ಥಿತ್ಯಂತರಗಳಾದವು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿಯಿತು. ಮುಖ್ಯಮಂತ್ರಿಯಾಗಿದ್ದ ಮೋದಿ ಪ್ರಧಾನಿಯಾದರು.

ಒಂದು ಕಾಲಕ್ಕೆ ಜಿಎಸ್‌ಟಿ ವಿರೋಧಿಯಾಗಿದ್ದ ಮೋದಿ ನೇತೃತ್ವದಲ್ಲಿಯೇ 2014ರಲ್ಲಿ ಡಿಸೆಂಬರ್‌ನಲ್ಲಿ ಜಿಎಸ್‌ಟಿ ಜಾರಿಗೆ ಪೂರಕವಾಗಿ 122ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

ವಿರೋಧ ಪಕ್ಷಗಳು ಹಾಗೂ ರಾಜ್ಯ ಸರ್ಕಾರಗಳೊಂದಿಗೆ  ಖುದ್ದು ಪ್ರಧಾನಿ ಮೋದಿ ಅವರು ಒಮ್ಮತ ಮೂಡಿಸಲು ಸಂಧಾನ ಸಭೆ ನಡೆಸಿದರು. 2015ರ ಮೇನಲ್ಲಿ ಲೋಕಸಭೆ ಹಾಗೂ ಆಗಸ್ಟ್‌ನಲ್ಲಿ ರಾಜ್ಯಸಭೆ ಅನುಮೋದನೆ ಪಡೆಯುವಲ್ಲಿ  ಜಿಎಸ್‌ಟಿ ಯಶಸ್ವಿಯಾಗಿತ್ತು. ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಮಂಡಳಿ ಅಸ್ತಿತ್ವಕ್ಕೆ ಬಂದಿತು. ಕೇಂದ್ರ ಸಚಿವ ಸಂಪುಟ ಸಭೆ ಜಿಎಸ್‌ಟಿಯ ಎಲ್ಲ ಮಸೂದೆಗಳಿಗೆ ಒಪ್ಪಿಗೆ ನೀಡಿತು.

ವಿವಿಧ ರಾಜ್ಯಗಳೊಂದಿಗೆ ಸಂಧಾನ ಮಾತುಕತೆ ನಡೆಸಿದ ಕೇಂದ್ರ ಕೆಲವು ಮಾರ್ಪಾಡುಗಳಿಗೆ ಒಪ್ಪಿಗೆ ಸೂಚಿಸಿತು. ರಾಜ್ಯಗಳ ಬೇಡಿಕೆಯಂತೆ ಪೆಟ್ರೋಲಿಯಂ, ಮದ್ಯ ಮತ್ತು ರಿಯಲ್‌ ಎಸ್ಟೇಟ್‌ ವಲಯಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಯಿತು. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ಜಿಎಸ್‌ಟಿಗೆ ಒಪ್ಪಿಗೆ ಸೂಚಿಸಿವೆ.

ಬಿಜೆಪಿಯಲ್ಲೇ ಭಿನ್ನಮತ
ನವದೆಹಲಿ:
‘ಜಿಎಸ್‌ಟಿ ಜಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಸರ್ಕಾರಕ್ಕೆ ರಾಜಕೀಯವಾಗಿ ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಮುಂದಿನ ಒಂದೆರಡು ತಿಂಗಳಿನಲ್ಲಿ ಜಿಎಸ್‌ಟಿಯಿಂದಾಗುವ ಪರಿಣಾಮಗಳು ಪಕ್ಷದ ಅದೃಷ್ಟವನ್ನು ನಿರ್ಧರಿಸಲಿದೆ’ ಎಂಬ ಅಭಿಪ್ರಾಯ ಬಿಜೆಪಿಯಲ್ಲಿ ವ್ಯಕ್ತವಾಗಿದೆ.

‘ಈ ವರ್ಷಾಂತ್ಯದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವುದರಿಂದ, ಸೆಪ್ಟೆಂಬರ್‌ ಒಳಗೆ ಜಿಎಸ್‌ಟಿ ಜಾರಿ ಅನಿವಾರ್ಯವಾಗಿತ್ತು. ಜಿಎಸ್‌ಟಿಯ ಜಾರಿಯ ರಾಜಕೀಯ ಲಾಭ–ನಷ್ಟಗಳು ಈ ಚುನಾವಣೆಗಳಲ್ಲೇ ತಿಳಿಯಲಿದೆ. ಜಿಎಸ್‌ಟಿ ಯಶಸ್ವಿಯಾದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಅದು ಪ್ರಚಾರದ ಪ್ರಮುಖ ವಿಷಯವಾಗುತ್ತದೆ’ ಎಂದು ಪಕ್ಷದ ಕೆಲವು ನಾಯಕರು ಅಂದಾಜಿಸಿದ್ದಾರೆ.

‘ಜಿಎಸ್‌ಟಿಯಿಂದ ಬಿಜೆಪಿಗೆ ರಾಜಕೀಯವಾಗಿ ನಷ್ಟವಾಗುವ ಅಪಾಯವೂ ಇದೆ. ಈಗಾಗಲೇ ನಮ್ಮದೇ ಆಡಳಿತ ಇರುವ ರಾಜಸ್ತಾನ ಮತ್ತು ಉತ್ತರಪ್ರದೇಶಗಳಲ್ಲಿ ವರ್ತಕರು ಜಿಎಸ್‌ಟಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಎಸ್‌ಟಿಯಿಂದ ಪಕ್ಷಕ್ಕಾಗುವ ಲಾಭ–ನಷ್ಟವನ್ನು ಲೆಕ್ಕ ಹಾಕಲು ಇನ್ನೂ ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ’ ಎಂದು ಪಕ್ಷದ ಕಾರ್ಯದರ್ಶಿ ಮಟ್ಟದ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ನಾಯಕರು, ‘ನೋಟು ರದ್ದತಿ ದೇಶದ ಸಮಸ್ತ ಜನರ ಮೇಲೂ ಪರಿಣಾಮ ಬೀರಿತ್ತು. ಆದರೆ ಜಿಎಸ್‌ಟಿ, ಸುಮಾರು 80 ಲಕ್ಷದಷ್ಟಿರುವ ನೋಂದಾಯಿತ ವರ್ತಕರು ಮತ್ತು ಉದ್ಯಮಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಇದರಿಂದ ಪಕ್ಷಕ್ಕೆ ರಾಜಕೀಯ ನಷ್ಟವಾಗುವ ಅಪಾಯ ಕಡಿಮೆ’ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.

*

ಅರೆಬೆಂದ ಜಿಎಸ್‌ಟಿಗೆ ವಿರೋಧ: ರಾಹುಲ್‌
ನವದೆಹಲಿ:
ನರೇಂದ್ರ ಮೋದಿ ಸರ್ಕಾರವು ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಜಾರಿ ಮಾಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಜಿಎಸ್‌ಟಿ ಜಾರಿಯಿಂದ ದೊಡ್ಡ ಪ್ರಮಾಣದ ಪ್ರಯೋಜನವಿದೆ ನಿಜ, ಆದರೆ ಸರ್ಕಾರ ಅದನ್ನು ತರಾತುರಿಯಲ್ಲಿ ಜಾರಿ ಮಾಡುತ್ತಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ಕೋಟ್ಯಂತರ ಸಾಮಾನ್ಯ ನಾಗರಿಕರು, ಸಣ್ಣ ವ್ಯಾಪಾರಸ್ಥರಿಗೆ ಜಿಎಸ್‌ಟಿ ಜಾರಿಯಿಂದ ಪ್ರಯೋಜನವಾಗುತ್ತದೆ. ಆದರೆ ಪೂರ್ವ ಸಿದ್ಧತೆ ಇಲ್ಲದೆ ಇದನ್ನು ಜಾರಿ ಮಾಡಲಾಗುತ್ತಿದೆ ಎಂದು ವಿದೇಶದಲ್ಲಿ ಇರುವ ರಾಹುಲ್ ಟ್ವೀಟ್ ಮಾಡಿದ್ದಾರೆ.

ನೋಟು ರದ್ದು ಮಾಡಿದ್ದರಿಂದ ಜನರಿಗೆ ಆಗಿರುವ ತೊಂದರೆ ಜಿಎಸ್‌ಟಿ ಜಾರಿಯಿಂದ ಆಗುವುದಿಲ್ಲ. ಆದರೆ ಈ ಹೊಸ ವ್ಯವಸ್ಥೆಯನ್ನು ಅಸಮರ್ಥ ಮತ್ತು ಸಂವೇದನೆಯಿಲ್ಲದ ಸರ್ಕಾರ ಜಾರಿ ಮಾಡುತ್ತಿದೆ ಎಂಬುದೇ ಬೇಸರದ ಸಂಗತಿ ಎಂದಿದ್ದಾರೆ.

ಜಿಎಸ್‌ಟಿ ವ್ಯವಸ್ಥೆ ಬೇಕು ಎಂದು ಕಾಂಗ್ರೆಸ್ ಪಕ್ಷವೇ ಆರಂಭದಿಂದ ಅದರ ಬಗ್ಗೆ ಕೆಲಸ ಮಾಡಿದೆ ಹಾಗೂ ಈ ವ್ಯವಸ್ಥೆಗೆ ಬೆಂಬಲ ನೀಡಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ಅಗತ್ಯವಾದ ಯೋಜನೆ, ಸಾಂಸ್ಥಿಕ ವ್ಯವಸ್ಥೆ ಮಾಡದೆ ಮತ್ತು ಮುಂದಾಲೋಚನೆ ಇಲ್ಲದೆ ತರಾತುರಿಯಲ್ಲಿ ಹೊಸ ವ್ಯವಸ್ಥೆ ಜಾರಿ ಮಾಡುತ್ತಿರುವುದರ ಬಗ್ಗೆ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಬಹಿಷ್ಕಾರ: ಹೊಸ ತೆರಿಗೆ ವ್ಯವಸ್ಥೆಗೆ ಸೂಕ್ತ ಸಿದ್ಧತೆ ಆಗಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮಧ್ಯರಾತ್ರಿ ನಡೆಯಲಿರುವ ಕಾರ್ಯ ಕ್ರಮವನ್ನು ಬಹಿಷ್ಕರಿಸಿದೆ. ಆಹ್ವಾನವಿದ್ದರೂ ಮಾಜಿ ಮನಮೋಹನ್ ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.

ಸಂಸತ್ತಿನ ಈ ಹಿಂದಿನ ಮಧ್ಯ ರಾತ್ರಿ ಕಲಾಪಗಳು ಆಗಸ್ಟ್ 14–15, 1947

* ವಂದೇ ಮಾತರಂ ಗೀತೆ ಹಾಡುವುದರೊಂದಿಗೆ ರಾತ್ರಿ 11 ಗಂಟೆಗೆ ಸಂವಿಧಾನ  ರಚನಾ ಸಮಿತಿಯ ಸಭೆ ಆರಂಭವಾಯಿತು.
* ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಭಾಷಣ ಮಾಡಿದರು.
* ಪ್ರಧಾನಿ ಜವಾಹರಲಾಲ್ ನೆಹರೂ ಅವರು ದೇಶದ ಅಭಿವೃದ್ಧಿಯ ದಿಕ್ಸೂಚಿ ಭಾಷಣ ಮಾಡಿದರು. ಇದು ‘ಟ್ರಿಸ್ಟ್‌ ವಿದ್‌ ಡೆಸ್ಟಿನಿ’ ಎಂದೇ ಪ್ರಸಿದ್ಧ.
* ಸಂವಿಧಾನ ರಚನಾ ಸಭೆಯು ಅಧಿಕಾರ ವಹಿಸಿಕೊಂಡ ಮತ್ತು ಲಾರ್ಡ್ ಮೌಂಟ್‌ಬ್ಯಾಟನ್ ಅವರನ್ನು ಗವರ್ನರ್ ಜನರಲ್ ಆಗಿ ನೇಮಕ ಮಾಡಿರು ವುದನ್ನು ಅನುಮೋದಿಸುವ ವಿಚಾರವನ್ನು ವೈಸ್‌ರಾಯ್ ಅವರಿಗೆ ತಿಳಿಸುವ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.
* ರಾಷ್ಟ್ರಧ್ವಜ ಪ್ರದರ್ಶನ.
* ಸುಚೇತಾ ಕೃಪಾಲಿನಿ ಅವರು ಸಾರೇ ಜಹಾಂ ಸೇ ಅಚ್ಚಾ... ಗೀತೆಯ ಕೆಲವು ಸಾಲುಗಳನ್ನು ಹಾಡಿದ ನಂತರ ರಾಷ್ಟ್ರಗೀತೆಯೊಂದಿಗೆ ಅಧಿವೇಶನ ಮುಕ್ತಾಯವಾಯಿತು.
ಆಗಸ್ಟ್ 14– 15, 1972
* ಸ್ವಾತ್ಯಂತ್ರ್ಯದ ಬೆಳ್ಳಿ ಹಬ್ಬ ಆಚರಣೆಗೆ ಸಂಸತ್ತಿನ ವಿಶೇಷ ಅಧಿವೇಶನ.
* ಪ್ರಧಾನಿ ಇಂದಿರಾ ಗಾಂಧಿ ಅವರಿಂದ ದೇಶದ ಅಭಿವೃದ್ಧಿಯ ಪಣದ ಭಾಷಣ.
ಆಗಸ್ಟ್ 14–15, 1997
* ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಸಂಸತ್ತಿನ ವಿಶೇಷ ಅಧಿವೇಶನ.
* ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರಿಂದ ಭಾಷಣ.
* ಲತಾ ಮಂಗೇಶ್ಕರ್ ಮತ್ತು ಭೀಮಸೇನ ಜೋಷಿ ಅವರ ಹಾಡುಗಾರಿಕೆ.
* ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಗೌರವಾರ್ಥ ಎರಡು ನಿಮಿಷ ಮೌನಾಚರಣೆ.

*


ಗುರುತರ ಕಾರಣವಿಲ್ಲದಿದ್ದರೂ ಸಣ್ಣ ಉದ್ಯಮಿಗಳು–ವ್ಯಾಪಾರಿಗಳನ್ನು ಬಂಧಿಸಲು ಜಿಎಸ್‌ಟಿಯಲ್ಲಿ ಅವಕಾಶವಿದೆ. ಇನ್ಸ್‌ಪೆಕ್ಟರ್‌ ರಾಜ್‌ನ ಅಟ್ಟಹಾಸ ಮರುಕಳಿಸಲಿದೆ.
-ಮಮತಾ ಬ್ಯಾನರ್ಜಿ,
ಪಶ್ಚಿಮ ಬಂಗಾಳ ಮುಖ್ಯಮಂತ್ರಿ

*


ವ್ಯಾಪಾರಿಗಳು, ಉದ್ಯಮಿಗಳು ಹೆದರಿ ಕುಳಿತಿದ್ದಾರೆ. ನೀವು ಸಂಭ್ರಮಿಸುತ್ತಿದ್ದೀರಿ. ಜಿಎಸ್‌ಟಿ ಒಳ್ಳೆಯ ಯೋಚನೆಯೇ ಸರಿ, ಆದರೆ ಕೆಟ್ಟದಾಗಿ ಅನುಷ್ಠಾನ ಮಾಡಲಾಗುತ್ತಿದೆ.
-ಮನೀಶ್‌ ಸಿಸೋಡಿಯಾ,
ದೆಹಲಿ ಉಪಮುಖ್ಯಮಂತ್ರಿ

*
ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ತರುವ ಮತ್ತು ಕೇಂದ್ರ ಸರ್ಕಾರದ ತೆರಿಗೆ ಆದಾಯಕ್ಕಷ್ಟೇ ಒತ್ತು ನೀಡುವ ಜಿಎಸ್‌ಟಿ ಚಾಲನೆಗೆ ವಿಶೇಷ ಕಾರ್ಯಕ್ರಮದ ಅವಶ್ಯಕತೆ ಇರಲಿಲ್ಲ.
-ಎಸ್.ಸುಧಾಕರ ರೆಡ್ಡಿ,
ಸಿಪಿಐ ಪ್ರಧಾನಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT