ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸಭೆ: ಪ್ರತಿಧ್ವನಿಸಿದ ಕಸದ ಸಮಸ್ಯೆ

Last Updated 1 ಜುಲೈ 2017, 8:27 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುತ್ತಿರುವ ಕಸದ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಲಿಕೆ ಸದಸ್ಯರು ಮೇಯರ್‌ ಎಂ.ಜೆ.ರವಿಕುಮಾರ್‌ ಮತ್ತು ಆಯುಕ್ತ ಜಿ. ಜಗದೀಶ್‌ ಅವರನ್ನು ಒತ್ತಾಯಿಸಿದರು.

ಶುಕ್ರವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಕಸ ವಿಲೇವಾರಿ ಮತ್ತು ಘನತ್ಯಾಜ್ಯ ನಿರ್ವಹಣೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಿತು. ತ್ಯಾಜ್ಯ ನಿರ್ವಹಣಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಸದಸ್ಯರು ಆಗ್ರಹಿಸಿದರು.

ನಗರದಲ್ಲಿ ಪ್ರತಿನಿತ್ಯ 700 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಕೇವಲ 200 ಟನ್‌ಗಳಷ್ಟು ತ್ಯಾಜ್ಯದ ಸಂಸ್ಕರಣೆ ನಡೆಯುತ್ತದೆ. ಉಳಿದ ತ್ಯಾಜ್ಯಗಳಿಂದ ಕೆಟ್ಟ ವಾಸನೆ ಬರುತ್ತಿದ್ದು, ಸಮೀಪದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯರು ದೂರಿದರು.

ಸೂಯೆಜ್‌ ಫಾರಂನಲ್ಲಿರುವ ಘನತಾಜ್ಯ ನಿರ್ವಹಣೆ ಘಟಕದ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳದಿದ್ದರೆ ಜನರೊಂದಿಗೆ ಸೇರಿ ಘಟಕವನ್ನು ಮುಚ್ಚಿಸಲು ಹೋರಾಟ ನಡೆಸಲಾಗುವುದು ಎಂದು ಪಾಲಿಕೆ ಸದಸ್ಯ ಬಿ.ಎಲ್‌.ಭೈರಪ್ಪ ಎಚ್ಚರಿಸಿದರು. ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟವರ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆಯೂ ಮೇಯರ್‌ ಅವರನ್ನು ಕೋರಿಕೊಂಡರು.

ಈ ಘನತ್ಯಾಜ್ಯ ಘಟಕದ ನಿರ್ವಹಣೆಗೆ ಎರಡು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ, ಹೊಸ ಏಜೆನ್ಸಿಗಳು ಮುಂದೆ ಬಂದಿಲ್ಲ. ಹಾಲಿ ಇರುವ ಐಎಲ್ಎಫ್‌ಎಸ್ ಸಂಸ್ಥೆಯ ಗುತ್ತಿಗೆ ಅವಧಿ ಮುಂದುವರಿಸಲು ಷರತ್ತು ವಿಧಿಸಲಾಗಿದೆ. ಇದರಿಂದಾಗಿ ಗುತ್ತಿಗೆದಾರರು ಈ ಕೆಲಸದಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ. ಹಾಲಿ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದರೆ ಕಸ ನಿರ್ವಹಣೆ ದೊಡ್ಡ ಸಮಸ್ಯೆಯಾಗಲಿದೆ ಎಂದು ಹೇಳಿದರು.

ಐಎಲ್‌ಎಫ್‌ಎಸ್‌ ಕಂಪೆನಿ ತ್ಯಾಜ್ಯ ನಿರ್ವಹಣೆ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ದೇಶದಲ್ಲಿ ಬೇರೆ ಕಂಪೆನಿಗಳಿಲ್ಲವೇ ಎಂದು ಅಯೂಬ್‌ ಖಾನ್‌ ಪ್ರಶ್ನಿಸಿದರು. ಬಿಡ್‌ ಪ್ರಕ್ರಿಯೆಗೆ ಎಲ್ಲ ಕಂಪೆನಿಗಳನ್ನು ಆಹ್ವಾನಿಸಬೇಕು ಎಂದೂ ಅವರು ಒತ್ತಾಯಿಸಿದರು.

ಬೆಂಗಳೂರು ನಗರ ಸೇರಿದಂತೆ ಇತರ ಪಾಲಿಕೆಗಳು ಕಸ ಸಂಗ್ರಹಿಸುವ ಏಜೆನ್ಸಿಗಳಿಗೆ ಪ್ರತಿ ಟನ್‌ಗೆ ಇಂತಿಷ್ಟು ಹಣ ನೀಡುತ್ತದೆ. ಆದರೆ ಮೈಸೂರು ನಗರ ಪಾಲಿಕೆಯು ಕಸ ಸಂಗ್ರಹಿಸುವ ಏಜೆನ್ಸಿಯಿಂದಲೇ ಗೌರವಧನ ಪಡೆಯುತ್ತದೆ. ಕಸ ನಿರ್ವಹಣೆ ಕೆಲಸವು ಪಾಲಿಕೆಗೆ ಯಾವುದೇ ಹೊರೆಯಲ್ಲ. ಆದರೂ ಈ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು ಪಾಲಿಕೆ ಸದಸ್ಯ ಶಿವಕುಮಾರ್‌ ದೂರಿದರು.

ಸುದೀರ್ಘ ಚರ್ಚೆಯ ಬಳಿಕ ಮೇಯರ್‌, ‘ಆ ಭಾಗದ ಪಾಲಿಕೆ ಸದಸ್ಯರ ಸಭೆ ಕರೆದು ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಅದುವರೆಗೂ ವಿಷಯವನ್ನು ಮುಂದೂಡಲಾಗುವುದು’ ಎಂದು ತಿಳಿಸಿದರು.

ರೈತರಿಗೆ ಭೂಮಿ–ಸರ್ಕಾರಕ್ಕೆ ಪ್ರಸ್ತಾವ: ವೀಳ್ಯದೆಲೆ ಬೆಳೆಯುವ ರೈತರಿಗೆ ನೀಡಲು ಉದ್ದೇಶಿಸಿರುವ ನಾಚನಹಳ್ಳಿ ಮತ್ತು ಮಳಲವಾಡಿ ಬಳಿಯ ಜಮೀನನ್ನು ರೈತರಿಗೆ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಜಮೀನು ನೀಡುವ ಸಂಬಂಧ ಉಂಟಾಗಿರುವ ವಿವಾದ ಬಗೆಹರಿಸಲು ಮೇಯರ್‌ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು.  

ಕುಕ್ಕರಹಳ್ಳಿ ಗ್ರಾಮದ ವಾರ್ಡ್‌ ನಂ.20ರಲ್ಲಿ ಅಂಬೇಡ್ಕರ್‌ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಬದಲಾಗಿ ರಸ್ತೆಗಳ ಡಾಂಬರೀಕರಣ ಮತ್ತು ಕಾಂಕ್ರೀಟ್‌ ಕಾಮಗಾರಿ ನಡೆಸಲು ಪಾಲಿಕೆ ಅನುಮೋದನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT