ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾಂಜಲಿಯಲ್ಲ ಭಾವಾಂಜಲಿ!

Last Updated 1 ಜುಲೈ 2017, 19:30 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ದೇಹದಾನ ಮಾಡಿದ ನನ್ನ ಆತ್ಮೀಯರೊಬ್ಬರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಶ್ರದ್ಧಾಂಜಲಿ ಕಾರ್ಯಕ್ರಮ ಎಂದಮೇಲೆ ಅಲ್ಲಿ ಮೃತರ ದೊಡ್ಡ ಭಾವಚಿತ್ರ, ಅದಕ್ಕೆ ಹೂವಿನ ಹಾರ. ಅಲ್ಲಿದ್ದವರ ಮನಸ್ಸುಗಳಲ್ಲಿ, ಮುಖಗಳಲ್ಲಿ ಮತ್ತು ಮಾತುಗಳಲ್ಲಿ ದುಃಖದ ಛಾಯೆ ಇರುತ್ತದೆ.

ಆ ಸನ್ನಿವೇಶ ಶೋಕಮಯವಾಗಿರುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ಅಲ್ಲಿ ಮೃತರ ಭಾವಚಿತ್ರವಿರಲಿಲ್ಲ. ಅಲ್ಲಿದ್ದವರ ಮನಸ್ಸುಗಳಲ್ಲಿ, ಮುಖಗಳಲ್ಲಿ ಮತ್ತು ಮಾತುಗಳಲ್ಲಿ ದುಃಖದ ಬದಲಿಗೆ ಸಂತೋಷದ ಛಾಯೆ ಇತ್ತು. ಸನ್ನಿವೇಶ ಶೋಕಮಯವಾಗಿರದೆ ಶುಭಮಯವಾಗಿತ್ತು.

ಮೃತರ ಹೆಸರು ಕೆ.ಎಸ್. ಸತ್ಯನಾರಾಯಣ, ಅವರ ಪತ್ನಿ(ವಿಧವೆ)ಯ ಹೆಸರು ಜಯಮ್ಮ. ಅವರ ಸೋದರ ಸಂಬಂಧಿ ಮಹಿಳೆಯೊಬ್ಬರು ಎದ್ದುನಿಂತು ಮೃತರ ಮತ್ತು ತಮ್ಮ ನಡುವಿನ ಬಾಂಧವ್ಯದ ಬೆಸುಗೆಯನ್ನು ವಿವರಿಸುತ್ತ ಸತ್ಯ-ಜಯತ್ತೆ ಎಂದು ಎರಡು ಮೂರು ಸಲ ಹೇಳಿದರು.

ಮೃತರ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿತ್ತು. ಆ ಕಾಲೇಜಿನ ಡಾ. ಸೀತಾರಾಮ ಅವರು ದೇಹದಾನದ ಹಿನ್ನೆಲೆ ಮತ್ತು ಮಹತ್ವವನ್ನು ಸರಳವಾಗಿ, ಸಂಕ್ಷಿಪ್ತವಾಗಿ ವಿವರಿಸಿ 'ಸತ್ಯ ಜಯತ್ತೆ' ಎಂದು ಆ ಮಹಿಳೆ ಹೇಳಿದ್ದನ್ನು ತಾವೂ ಹೇಳಿ ಸತ್ಯಮೇವ ಜಯತೆ ಎಂದು ಅದನ್ನು ಉಕ್ತಿಯಾಗಿಸಿದರು. ಅದು ಅಲ್ಲಿದ್ದವರನ್ನು ಪುಳಕಗೊಳಿಸಿತು. ಮುಂದಿನ ಕೆಲ ಕ್ಷಣಗಳೂ ಪುಳಕಮಯ.

ಮೃತರ ಹಿರಿಯ ಮಗ, ಮೈಸೂರಿನ ಸಮಾಜಮುಖಿ ವ್ಯಕ್ತಿಗಳಲ್ಲೊಬ್ಬರಾದ ಕೆ.ಎಸ್. ರಮೇಶ ಅವರು ತಮ್ಮ ಕುಟುಂಬದ ಸದಸ್ಯರನ್ನು ಪರಿಚಯಿಸಿ ಅಲ್ಲಿದ್ದವರನ್ನೆಲ್ಲ ಅಪ್ಪಿಕೊಳ್ಳುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೆಲ್ಲರ ವಿಶ್ವಾಸಿಕರಾದ ಪರಿ ಅನ್ಯೋನ್ಯವಾಗಿತ್ತು. ಕಾರ್ಯಕ್ರಮ ಶ್ರದ್ಧಾಂಜಲಿಯಾಗದೆ ಭಾವಾಂಜಲಿಯಾಯಿತು. ಕೆಲವರ ಕಣ್ಣುಗಳು ಸಂತೋಷದಿಂದ ತೇವವಾಗಿದ್ದವು.

ಮಾಣಿಕರಾವ ಪಸಾರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT