ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿ, ‘ನುಕ್ಕಿ ಏಡಿ’

Last Updated 1 ಜುಲೈ 2017, 19:30 IST
ಅಕ್ಷರ ಗಾತ್ರ

ಬೀರಣ್ಣ ನಾಯಕ, ಮೊಗಟಾ

ಕರ್ನಾಟಕದ ಕರಾವಳಿಯಲ್ಲಿ ಬದುಕು ಕಟ್ಟಿಕೊಂಡ ಬಹುತೇಕರ ಬದುಕಿನ ಅಂಗ ‘ಮೀನು’. ಆ ಕಾರಣಕ್ಕಾಗಿಯೇ ‘ಚುಟುಕು ಬ್ರಹ್ಮ’ ದಿನಕರ ದೇಸಾಯಿಯವರು ‘ಕುಚ್ಚಕ್ಕಿ ಅನ್ನ ಮೀನಿನ ಪಳದಿ ಕಾರವಾರ ಜನಕೆಲ್ಲ’ ಎಂದಿರಬೇಕು.

ಕೆಲವರಿಗೆ ಊಟದಲ್ಲಿ ಮೀನು ಎಷ್ಟು ಮುಖ್ಯವೋ, ಇನ್ನು ಹಲವರಿಗೆ ಬಾಳಿನ ಬಂಡಿ ಎಳೆಯಲು ಮತ್ಸ್ಯೋದ್ಯಮ ಕೂಡ ಅನಿವಾರ್ಯ.ಈ ಮತ್ಸ್ಯೋದ್ಯಮದ ಇತ್ತೀಚಿನ ದಿನಗಳಲ್ಲಿ ‘ನುಕ್ಕಿ ಏಡಿ’ಗಳ ಸ್ಥಾನಮಾನ ನೋಡಿದರೆ ನಾವೆಲ್ಲರೂ ‘ಅಬ್ಬಬ್ಬಾ ನುಕ್ಕಿ ಏಡಿಗಳು!’ ಎಂದು ಹುಬ್ಬೇರಿಸಬೇಕು.

ಏಡಿಗಳು ‘ಬ್ರಾಚ್ಯುರಾ’ ಎಂಬ ಗಣಕ್ಕೆ ಸೇರಿದ ದಶಪಾದಿಗಳು. ‘ಎನಿಮೇಲಿಯಾ’ ಸಾಮ್ರಾಜ್ಯಕ್ಕೆ ಸೇರಿದ ಏಡಿಗಳು ‘ಅರ್ತ್ರೋಪೋಡಾ’ ವಂಶದಲ್ಲಿ ಗುರುತಿಸಿಕೊಂಡಿವೆ. ಜಗತ್ತಿನ ಎಲ್ಲಾ ಸಾಗರಗಳಲ್ಲಿಯೂ ಏಡಿಗಳನ್ನು ನೋಡಬಹುದು.

ಈ ಏಡಿಗಳಲ್ಲಿ ಕೆಲವು ಸಿಹಿನೀರಿನಲ್ಲಿ, ಇನ್ನು ಕೆಲವು ಉಪ್ಪುನೀರಿನಲ್ಲಿ ಬದುಕುತ್ತವೆ. ಸೀಮಿತ ಸಂಖ್ಯೆಯ ಏಡಿಗಳು ನಿರ್ದಿಷ್ಟವಾದ ಉಷ್ಣವಲಯದ ಪ್ರದೇಶಗಳಲ್ಲಿ ನೆಲದ ಮೇಲೆ ಕೂಡ ವಾಸಿಸುತ್ತವೆ.

ಏಡಿಗಳ ಗಾತ್ರದಲ್ಲಿ ಸಾಮ್ಯತೆ ಇಲ್ಲ. ಕೆಲವು ಮಿಲಿಮೀಟರ್ ಅಗಲವಿರುವ ಬಟಾಣಿ ಏಡಿಗಳಿಂದ, 13 ಅಡಿಯವರೆಗಿನ ಉದ್ದನೆಯ ಕಾಲುಗಳಿರುವ ಜಪಾನಿನ ಜೇಡ ಏಡಿಗಳನ್ನು ನೋಡಬಹುದು.

6793 ಜಾತಿಯ ಏಡಿಗಳಿವೆ. ಅವುಗಳಲ್ಲಿ ‘ನುಕ್ಕಿ ಏಡಿ’ಯೂ ಒಂದು. ಕರ್ನಾಟಕದ ಕರಾವಳಿಯ ಉಪ್ಪುನೀರು ಹಾಗೂ ಸಿಹಿನೀರು ಮಿಶ್ರಿತ ಗಜನಿ ಭೂಮಿಯಲ್ಲಿ ಸಿಗುವ ಈ ಏಡಿಗಳಿಗೆ ಕಾಲದ ನಿರ್ಬಂಧ ಇಲ್ಲ. ಆದರೂ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನುಕ್ಕಿ ಏಡಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.

ನಾಡಿನ ಹಿರಿಯ ಮತ್ಸ್ಯೋದ್ಯಮಿ ಹಾಗೂ ನುಕ್ಕಿ ಏಡಿಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವ ಕುಮಟಾ ತಾಲೂಕಿನ ಮಾದನಗೇರಿಯ ಗೋವಿಂದ ಹರಿಕಾಂತ ಅವರು – ‘ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನುಕ್ಕಿ ಏಡಿ ಹೆಚ್ಚಾಗಿ ದೊರೆಯುತ್ತಿದ್ದು, ಮೂರು ಕೇಜಿಯವರೆಗೆ ಬೆಳೆಯುತ್ತವೆ.

ದೊಡ್ಡ ನುಕ್ಕಿ ಏಡಿಗಳಿಗೆ ಸ್ಥಳೀಯವಾಗಿ ಪ್ರತಿ ಕಿಲೋಗೆ ₹1400 ತನಕ ಬೆಲೆ ಇದೆ. ಜೀವಂತವಾಗಿ ಈ ಏಡಿಗಳನ್ನು ದೊಡ್ಡ ದೊಡ್ಡ ನಗರಗಳ ಹೆಸರಾಂತ ಹೊಟೇಲುಗಳಿಗೆ ತಲುಪಿಸಿದರೆ ಇನ್ನೂ ಹೆಚ್ಚಿನ ಬೆಲೆ ದೊರೆಯುತ್ತದೆ. ಇವುಗಳನ್ನು ಔಷಧಿಗೆ ಕೂಡ ಬಳಸುತ್ತಾರೆ. ಕೀಲು ನೋವಿನ ಪರಿಹಾರಕ್ಕೆ, ಲೈಂಗಿಕ ಆಸಕ್ತಿ ವೃದ್ಧಿಗೆ ಇದರ ಔಷಧಿ ಪರಿಣಾಮಕಾರಿ ಎನ್ನುವ ನಂಬಿಕೆ ಇದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT