ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿಶಿಷ್ಟ ರಿಯಾಕ್ಟರ್‌ನ ಅಣುಸ್ಥಾವರ ಸಿದ್ಧ

ಕಲ್ಪಾಕಂ ಬಳಿಯ ಸ್ಥಾವರ ವರ್ಷಾಂತ್ಯದಲ್ಲಿ ಕಾರ್ಯಾರಂಭ ಸಾಧ್ಯತೆ
Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಯೆಕಟೆರಿನ್‌ಬರ್ಗ್ (ರಷ್ಯಾ) (ಪಿಟಿಐ): ‘ಚೆನ್ನೈ ಬಳಿಯ ಕಡಲ ತೀರದಲ್ಲಿ ಸಾಂಪ್ರದಾಯಿಕ ಅಣು ರಿಯಾಕ್ಟರ್‌ಗಳಿಗಿಂತ ಭಾರಿ ವೇಗದಲ್ಲಿ ಅಣುವಿದಳನ ಕ್ರಿಯೆ ನಡೆಸುವ, ವೇಗದ ಅಣುವಿದಳನ ರಿಯಾಕ್ಟರ್‌ ಇರುವ ಅಣು ವಿದ್ಯುತ್ ಸ್ಥಾವರಕ್ಕೆ ಚಾಲನೆ ನೀಡಲು ಭಾರತದ ಅಣುವಿಜ್ಞಾನಿಗಳು ದಿನಗಣನೆ ಮಾಡುತ್ತಿದ್ದಾರೆ’ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಹೇಳಿದೆ.

‘ಅಣುವಿದ್ಯುತ್ ಕ್ಷೇತ್ರದಲ್ಲೇ ಇದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಕಲ್ಪಾಕಂನಲ್ಲಿ ಸ್ಥಾಪಿತವಾಗಿರುವ ಸ್ಥಾವರದಲ್ಲಿ ಬಳಕೆಯಾಗಲಿರುವ ವೇಗದ ಅಣುವಿದಳನ ರಿಯಾಕ್ಟರ್‌ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಸ್ಥಾವರ ಈ ವರ್ಷಾಂತ್ಯದಲ್ಲಿ ಕಾರ್ಯಾರಂಭ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಐಎಇಎ ಹೇಳಿದೆ.

‘ಇವು ಸಾಂಪ್ರದಾಯಿಕ ರಿಯಾಕ್ಟರ್‌ಗಳಿಗಿಂತ ಗರಿಷ್ಠ ಶೇ 70ರಷ್ಟು ಹೆಚ್ಚು ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಅಲ್ಲದೆ, ಇಲ್ಲಿ ಉತ್ಪತ್ತಿಯಾಗುವ ವಿಕಿರಣ ತ್ಯಾಜ್ಯವನ್ನು ಮತ್ತೆ ಇಂಧನವಾಗಿ ಬಳಸಲು ಅವಕಾಶ ಇದೆ. ಹೀಗಾಗಿ ಇದು ಅನಿಯಮಿತವಾಗಿ ಶಕ್ತಿ ಉತ್ಪಾದಿಸುತ್ತಲೇ ಇರುತ್ತದೆ. ಜತೆಗೆ, ಈ ತ್ಯಾಜ್ಯವನ್ನು ಅಣ್ವಸ್ತ್ರ ತಯಾರಿಕೆಗೂ ಬಳಸಬಹುದು. ಈ ರಿಯಾಕ್ಟರ್‌ಗಳು ಒಂದು ರೀತಿಯಲ್ಲಿ  ‘ಅಕ್ಷಯ ಪಾತ್ರೆ’ ಇದ್ದಂತೆ’ ಎಂದು ಐಎಇಎ ಬಣ್ಣಿಸಿದೆ.

ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಭಾದುರಿ, ‘ವೇಗದ ಅಣುವಿದಳನ ರಿಯಾಕ್ಟರ್‌ನ ಮೂಲ ರೂಪದ ಅಭಿವೃದ್ಧಿ ಮತ್ತು ಪರೀಕ್ಷೆಗಾಗಿ ಭಾರತದ ವಿಜ್ಞಾನಿಗಳು 27 ವರ್ಷ ದುಡಿದಿದ್ದಾರೆ. ಇಂತಹ ಪೂರ್ಣ ಪ್ರಮಾಣದ ರಿಯಾಕ್ಟರ್ ಇರುವ ಸ್ಥಾವರದ ನಿರ್ಮಾಣ ಆರಂಭವಾಗಿ 15 ವರ್ಷ ಕಳೆದಿದೆ. ಸಾಂಪ್ರದಾಯಿಕ ರಿಯಾಕ್ಟರ್ ಇರುವ ಸ್ಥಾವರಗಳಿಗಿಂತ ಇದು ಹಲವು ಪಟ್ಟು ಸುರಕ್ಷಿತ’ ಎಂದು ಹೇಳಿದ್ದಾರೆ.

***

ವೇಗದ ವಿದಳನ ರಿಯಾಕ್ಟರ್‌ಗಳಲ್ಲಿ ನ್ಯೂಟ್ರಾನ್‌ಗಳ ಚಲನೆಯ ವೇಗವನ್ನು ಕಾಯ್ದುಕೊಳ್ಳಲಾಗುತ್ತದೆ. ಹೀಗಾಗಿ ಕಡಿಮೆ ಪ್ರತಿರೋಧದ ಭಾರಜಲವನ್ನು ಬಳಸಲಾಗುತ್ತದೆ. ಕಲ್ಪಾಕಂನ ರಿಯಾಕ್ಟರ್‌ನಲ್ಲಿ ದ್ರವ ರೂಪದ ಸೋಡಿಯಂ ಬಳಸಲಾಗಿದೆ. ಇಲ್ಲಿ ನ್ಯೂಟ್ರಾನ್‌ಗಳ ಚಲನೆ ಭಾರಿ ವೇಗದಲ್ಲಿ ಇರುವುದರಿಂದ ಮತ್ತೊಂದು ಹಂತದ ರಾಸಾಯನಿಕ ಕ್ರಿಯೆ ನಡೆದು, ಪ್ಲುಟೋನಿಯಂ ಉತ್ಪತ್ತಿಯಾಗುತ್ತದೆ. ಈ ಹಂತದಲ್ಲಿ ಭಾರಿ ಶಾಖ ಬಿಡುಗಡೆಯಾಗುತ್ತದೆ.

***

ಸಾಮಾನ್ಯ ರಿಯಾಕ್ಟರ್‌ಗಳಲ್ಲಿ ಯುರೇನಿಯಂ 235 ವಿದಳನ ನಡೆದು, ನ್ಯೂಟ್ರಾನ್‌ಗಳು ಉತ್ಪತ್ತಿಯಾಗುತ್ತವೆ. ನ್ಯೂಟ್ರಾನ್‌ಗಳು ಭಾರಿ ವೇಗದಲ್ಲಿ ಚಲಿಸಿ, ಯುರೇನಿಯಂ 235ನ ವಿದಳನ ಸರಪಳಿಯನ್ನು ಮುಂದುವರೆಸುತ್ತವೆ. ವಿದಳನದ ವೇಗವನ್ನು ಕಡಿಮೆ ಮಾಡಲು ಭಾರಜಲವನ್ನು (ಸಾಮಾನ್ಯವಾಗಿ ದ್ರವ ರೂಪದ ಲೋಹವಾಗಿರುತ್ತದೆ) ಬಳಸಲಾಗುತ್ತದೆ. 

ಭಾರಜಲದ ಅಣುಗಳ ಜತೆ ನ್ಯೂಟ್ರಾನ್‌ಗಳು ಸಂಘರ್ಷ ನಡೆಸುವುದರಿಂದ ಶಾಖ ಉತ್ಪಾದನೆಯಾಗುತ್ತದೆ. ಈ ಶಾಖವನ್ನು ಬಳಸಿಕೊಂಡು, ನೀರನ್ನು ಕುದಿಸಿ ಹಬೆ ಉತ್ಪಾದಿಸಲಾಗುತ್ತದೆ. ಆ ಹಬೆಯ ಮೂಲಕ ಚಕ್ರಗಳನ್ನು ತಿರುಗಿಸಿ, ಜನರೇಟರ್‌ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ.

***

ರಷ್ಯಾ ಮೇಲುಗೈ...
ವೇಗದ ಅಣುವಿದಳನ ರಿಯಾಕ್ಟರ್ ಅಭಿವೃದ್ಧಿ ಮತ್ತು ಸ್ಥಾವರ ನಿರ್ಮಾಣದಲ್ಲಿ ಈವರೆಗೆ ಯಶ ಕಂಡಿರುವುದು ರಷ್ಯಾ ಮಾತ್ರ. 1980ರಲ್ಲೇ ತನ್ನ ಅರ್ಲ್ ಪರ್ವತ ಪ್ರದೇಶದ ಬಳಿ ಇಂತಹ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿ ಆರಂಭಿಸಿತ್ತು. ಆದರೆ, ಸೋವಿಯತ್ ಒಕ್ಕೂಟದ ವಿಭಜನೆಯ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು. ಕಳೆದ ದಶಕದಲ್ಲಿ ಅದನ್ನು ಪೂರ್ಣಗೊಳಿಸುವಲ್ಲಿ ರಷ್ಯಾ ಯಶಸ್ವಿಯಾಯಿತು. 

2016ರಲ್ಲಷ್ಟೇ ಕಾರ್ಯಾರಂಭ ಮಾಡಿರುವ ಈ ಸ್ಥಾವರ 800 ಮೆಗಾವಾಟ್ ವಿದ್ಯುತ್‌ ಅನ್ನು ಪೂರೈಸುತ್ತಿದೆ. ಇಂತಹ ಮತ್ತಷ್ಟು ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ರಷ್ಯಾ ಯೋಜನೆ ರೂಪಿಸಿದೆ ಎಂದು ಐಎಇಎ ಮಾಹಿತಿ ನೀಡಿದೆ. ಅಮೆರಿಕವೂ ಇಂತಹ ರಿಯಾಕ್ಟರ್‌ಗಳಿರುವ ಅಣುವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತಾದರೂ, ವಿಕಿರಣ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಪ್ರಕ್ರಿಯೆ ಸಂಕೀರ್ಣವಾಗಿದ್ದ ಕಾರಣ ಯೋಜನೆಯನ್ನು ಕೈಬಿಟ್ಟಿತು.

ಇನ್ನು ಜಪಾನ್‌ ಮತ್ತು ರಷ್ಯಾಗಳು ಇಂತಹ ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಪ್ರಯತ್ನ ನಡೆಸಿ, ಹಲವು ಭಾರಿ ವಿಫಲವಾಗಿವೆ. ಹೀಗಾಗಿ ಅಂತಹ ಯೋಜನೆಗಳನ್ನೇ ಕೈಬಿಟ್ಟಿವೆ. ಚೀನಾವಂತೂ ಈ ವಿಚಾರದಲ್ಲಿ ಭಾರತಕ್ಕಿಂತ ಬಹಳ ಹಿಂದೆ ಉಳಿದಿದೆ ಎಂದು ಐಎಇಎ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT