ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗದಳ ಮುಖಂಡ ಭರತ್‌ ಬಂಧನ

ಎಸ್‌ಡಿಪಿಐ ಕಾರ್ಯಕರ್ತ ಮೊಹಮ್ಮದ್ ಅಶ್ರಫ್‌ ಕೊಲೆ ಪ್ರಕರಣ
Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಜೂನ್‌ 21ರಂದು ಬೆಂಜನಪದವು ಬಳಿ ನಡೆದ ಎಸ್‌ಡಿಪಿಐ ಅಮ್ಮುಂಜೆ ವಲಯ ಘಟಕದ ಅಧ್ಯಕ್ಷ ಮೊಹಮ್ಮದ್ ಅಶ್ರಫ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಜರಂಗದಳದ ಪುತ್ತೂರು ಜಿಲ್ಲಾ ಘಟಕದ ಸಹ ಸಂಚಾಲಕ ಭರತ್‌ ಕುಮ್ಡೇಲು ಎಂಬಾತನನ್ನು ವಿಶೇಷ ತನಿಖಾ ತಂಡದ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಹಲವು ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದೆ. ಮಂಗಳೂರು ನಗರ ಅಪರಾಧ ಪತ್ತೆದಳದ (ಸಿಸಿಬಿ) ಅಧಿಕಾರಿಗಳ ತಂಡ ಭರತ್‌ನನ್ನು ಪತ್ತೆಮಾಡಿ ವಶಕ್ಕೆ ಪಡೆದು, ತನಿಖಾ ತಂಡಕ್ಕೆ ಹಸ್ತಾಂತರಿಸಿತ್ತು. ಈತನ ಬಂಧನದ ವಿಷಯವನ್ನು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ಭಾನುವಾರ ಖಚಿತಪಡಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಪವನ್‌ಕುಮಾರ್‌ ಅಲಿಯಾಸ್‌ ಪುಂಡ, ಸಂತೋಷ್‌ ಅಲಿಯಾಸ್‌ ಸಂತು, ಶಿವಪ್ರಸಾದ ಅಲಿಯಾಸ್‌ ಶಿವು, ರಂಜಿತ್‌ ಮತ್ತು ಅಭಿನ್‌ ರೈ ಅಲಿಯಾಸ್‌ ಅಭಿ ಎಂಬ ಆರೋಪಿಗಳನ್ನು ಜೂನ್‌ 24ರಂದು ಬಂಧಿಸಲಾಗಿತ್ತು.

ಭರತ್‌ ಜೊತೆ ಸೇರಿ ಅಶ್ರಫ್‌ ಕೊಲೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ದಿವ್ಯರಾಜ್‌ ಶೆಟ್ಟಿ ಎಂಬಾತನನ್ನು ಜೂನ್‌ 24ರಂದು ಬಂಧಿಸಲಾಗಿತ್ತು. ಕೊಲೆ ಕೃತ್ಯದ ಸಾಕ್ಷ್ಯನಾಶಕ್ಕೆ ಸಹಕರಿಸಿದ ಆರೋಪದ ಮೇಲೆ ರಿತೇಶ್‌ ಎಂಬಾತನನ್ನೂ ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಭರತ್‌ ಬಂಧನದೊಂದಿಗೆ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.

ಬಜರಂಗದಳ ಮುಖಂಡ: ಬಂಟ್ವಾಳ ತಾಲ್ಲೂಕು ಪುದು ಗ್ರಾಮದ ಕುಮ್ಡೇಲು ನಿವಾಸಿಯಾಗಿರುವ ಭರತ್‌ ಹಲವು ವರ್ಷಗಳಿಂದ ಬಜರಂಗದಳದಲ್ಲಿ ಸಕ್ರಿಯವಾಗಿದ್ದ. ಬಜರಂಗದಳ ಸಂಘಟನೆಯಲ್ಲಿ ಪುತ್ತೂರು ವ್ಯಾಪ್ತಿಯಲ್ಲಿ ಪ್ರತ್ಯೇಕ ಜಿಲ್ಲಾ ಘಟಕವಿದೆ. ಗೋರಕ್ಷಾ ಪ್ರಮುಖ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಈತನನ್ನು, ಬಜರಂಗದಳದ ಪುತ್ತೂರು ಜಿಲ್ಲಾ ಘಟಕದ ಸಹ ಸಂಚಾಲಕನನ್ನಾಗಿ ನೇಮಕ ಮಾಡಲಾಗಿತ್ತು.

ಭರತ್‌ ವಿರುದ್ಧ ಬಂಟ್ವಾಳ ನಗರ, ಗ್ರಾಮಾಂತರ ಮತ್ತು ಪುತ್ತೂರು ಪೊಲೀಸ್‌ ಠಾಣೆಗಳಲ್ಲಿ 14 ಕ್ರಿಮಿನಲ್‌ ಪ್ರಕರಣಗಳಿವೆ. ಬಂಟ್ವಾಳ ನಗರ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಈತನ ಹೆಸರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT