ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಗ್ರಾಮಕ್ಕೆ ಇನ್ನು 24 ಗಂಟೆ ವಿದ್ಯುತ್

Last Updated 3 ಜುಲೈ 2017, 5:47 IST
ಅಕ್ಷರ ಗಾತ್ರ

ಶಿರಸಿ: ವಿದ್ಯುತ್ ಪೂರೈಕೆ ಸುಗಮಗೊಳಿಸುವ ನಿಟ್ಟಿನಲ್ಲಿ ಲೋಡ್‌ಗೆ ಅನುಗುಣವಾಗಿ ವಿದ್ಯುತ್ ಪರಿವರ್ತಕ (ಟಿಸಿ) ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ಸಿದ್ಧವಾಗಿದೆ. ಈ ಮಾದರಿ ಗ್ರಾಮ ಯೋಜನೆ ಅನುಷ್ಠಾನಗೊಂಡಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪಡೆಯಲಿವೆ.

ವಿದ್ಯುಚ್ಛಕ್ತಿಯ ಸಮರ್ಥ ಬಳಕೆಗೆ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಗ್ರಾಮಗಳನ್ನು ಮಾದರಿ ವಿದ್ಯುತ್ ಗ್ರಾಮಗಳನ್ನಾಗಿ ರೂಪಿಸಲು ಆದೇಶ ಹೊರಡಿಸಿದೆ. ಆಯ್ಕೆಯಾಗುವ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಪೂರಕ ಸೌಲಭ್ಯ ಕಲ್ಪಿಸುವುದು ಮಾದರಿ ವಿದ್ಯುತ್ ಗ್ರಾಮ ಯೋಜನೆಯ ಆಶಯವಾಗಿದೆ.

ಯೋಜನೆಯನ್ವಯ ಆಯಾ ಕ್ಷೇತ್ರದ ಶಾಸಕ ಸಂಪರ್ಕಿಸಿ ಗ್ರಾಮಗಳ ಆಯ್ಕೆ ಪಟ್ಟಿಯನ್ನು ವಿದ್ಯುತ್ ವಿತರಣಾ ಸಂಸ್ಥೆಯ ಪ್ರಧಾನ ಕಚೇರಿಗೆ ರವಾನಿಸಲಾಗಿದೆ. ಇದಕ್ಕೆ ಹೆಸ್ಕಾಂ ಕೇಂದ್ರ ಕಚೇರಿ ಅಂತಿಮ ಅನುಮೋದನೆ ನೀಡುವುದಷ್ಟೇ ಬಾಕಿ ಇದೆ ಎನ್ನುತ್ತವೆ ಇಲಾಖೆಯ ಮೂಲಗಳು.

ಮಾದರಿ ವಿದ್ಯುತ್ ಗ್ರಾಮ ಯೋಜನೆಯು ವಿದ್ಯುತ್ ವ್ಯವಸ್ಥೆ ಬಲವರ್ಧನೆಗೆ ಆದ್ಯತೆ ನೀಡುವುದು, ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ, ಮಾರ್ಗ, ಪರಿವರ್ತಕ ದುರಸ್ತಿ ಮಾಡುವುದು, ಇಡೀ ಮಾರ್ಗಕ್ಕೆ ಸುರಕ್ಷತಾ ವ್ಯವಸ್ಥೆ ಕಲ್ಪಿಸುವುದು, ಗ್ರಾಮದಲ್ಲಿ ಸೋಲಾರ್ ದೀಪ ಹಾಗೂ ಟೈಮರ್ ಸ್ವಿಚ್ ಅಳವಡಿಕೆ ಮೊದಲಾದ ಅಂಶಗಳನ್ನು ಒಳಗೊಂಡಿದೆ.

ಸ್ಥಳೀಯ ವಿದ್ಯುತ್ ಲೋಡ್‌ಗೆ ಅನುಗುಣವಾಗಿ ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸುವುದು ಮಾದರಿ ಗ್ರಾಮ ಯೋಜನೆಯ ಆದ್ಯತೆಯಾಗಿದೆ. ವಿದ್ಯುತ್ ಪೋಲಾಗದಂತೆ ತಡೆಗಟ್ಟುವ ಜೊತೆಗೆ ಎಲ್ಲ ಕಡೆಗಳಲ್ಲಿ ತ್ರೀ ಫೇಸ್ ವಿತರಣಾ ಮಾರ್ಗ ನಿರ್ಮಿಸುವ ಹಾಗೂ ನಿರಂತರ ವಿದ್ಯುಚ್ಛಕ್ತಿ ಲಭ್ಯತೆಗೆ ವಿಕೇಂದ್ರಿಕೃತ ವಿತರಣಾ ಉತ್ಪಾದನೆ ಸಹ ಯೋಜನೆಯಲ್ಲಿ ಒಳಗೊಂಡಿದೆ ಎನ್ನುತ್ತಾರೆ ಅಧಿಕಾರಿಗಳು.

ಮಾದರಿ ವಿದ್ಯುತ್ ಗ್ರಾಮಗಳ ಯೋಜನೆಯಡಿ ಶಿರಸಿ-–ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಂಡಲ, ಬಚಗಾಂವ, ಸಾಲಕಣಿ, ಹೇರೂರು, ಹೆಗ್ಗರಣಿ, ಯಲ್ಲಾಪುರ-–ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಮೈನಳ್ಳಿ, ಬದನಗೋಡ, ಅರಬೈಲ್, ಮದನೂರು, ಬಿಳಕಿ, ಕಾರವಾರ-–ಅಂಕೋಲಾ ಕ್ಷೇತ್ರದಲ್ಲಿ ಮಾಜಾಳಿ, ಚಿತ್ತಾಕುಲ, ಅಮದಳ್ಳಿ, ಅವರ್ಸಾ, ಬೆಳಂಬರ, ಕುಮಟಾ ಕ್ಷೇತ್ರದಲ್ಲಿ ಗೋಕರ್ಣ, ಮಿರ್ಜಾನ್, ಮುರೂರು, ಹಳದೀಪುರ, ಚಂದಾವರ, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮಂಕಿ, ಗುಣವಂತೆ, ಮಾವಿನಕುರ್ವೆ, ಮಾಗೋಡ, ಕಾಯ್ಕಿಣಿ ಹಾಗೂ ಹಳಿಯಾಳ- ಕ್ಷೇತ್ರದಲ್ಲಿ ಜೊಯಿಡಾ, ಕುಂಬಾರವಾಡ, ಜಗಲಬೇಟ, ಅರ್ಲವಾಡ, ಮುರ್ಕವಾಡ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT