ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓಟದ ಹಾದಿ’ಗೆ ಅಂತಿಮ ಸ್ಪರ್ಶ

Last Updated 3 ಜುಲೈ 2017, 9:58 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಅಥ್ಲೀಟ್‌ಗಳು ಸಿಂಥೆಟಿಕ್ ಟ್ರ್ಯಾಕ್‌ ಮೇಲೆ ಅಭ್ಯಾಸ ನಡೆಸುವ ಕನಸು ಶೀಘ್ರದಲ್ಲಿಯೇ ಸಾಕಾರಗೊಳ್ಳಲಿದೆ. ಜಿಲ್ಲಾ ಕೇಂದ್ರದ ಡಾ.ಬಿ.ಆರ್. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ದೂಳಿನ ಕಣಗಳನ್ನು ತೆಗೆದು ಪಟ್ಟಿಗಳನ್ನು ಎಳೆಯುವ ಕೆಲಸ ಬಾಕಿ ಇದೆ. ಇನ್ನು ಹತ್ತು ದಿನಗಳಲ್ಲಿ ಈ ಕೆಲಸವೂ ಮುಗಿಯಲಿದೆ. ಆದರೆ, ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಕ್ರೀಡಾಪಟುಗಳ ಅಭ್ಯಾಸಕ್ಕೆ ಟ್ರ್ಯಾಕ್‌ ಮುಕ್ತವಾಗಲು ಎರಡು ತಿಂಗಳು ಬೇಕಾಗಬಹುದು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ನೀರು ಕ್ಷಣಮಾತ್ರದಲ್ಲಿ ಇಂಗಿಹೋಗುವ ಸಬ್‌ ಏರ್‌ ವ್ಯವಸ್ಥೆಯನ್ನು ಅಳವಡಿಸಿರುವ ಹೈದರಾಬಾದ್‌ ಮೂಲದ ಗ್ರೇಟ್‌ ಸ್ಪೋರ್ಟ್ಸ್‌ ಇನ್‌ಫ್ರಾ ಕಂಪೆನಿ, ಸಿಂಥೆಟಿಕ್‌ ಅಳವಡಿಸುವ ಕಾಮಗಾರಿ ವಹಿಸಿಕೊಂಡಿದೆ. ರಾಜ್ಯದ ಬಹುತೇಕ ಎಲ್ಲ ಪ್ರಮುಖ ಕ್ರೀಡಾಂಗಣಗಳಲ್ಲಿ ಕ್ರೀಡಾ ಸಾಮಗ್ರಿಗಳನ್ನು ಅಳವಡಿಸುವ ಕೆಲಸವನ್ನು ಈ ಕಂಪೆನಿಯೇ ನಿರ್ವಹಿಸುತ್ತಿದೆ.

ಟ್ರ್ಯಾಕ್‌ ಮಾರ್ಗದಲ್ಲಿನ ಡಾಂಬರ್‌ ಮೇಲೆ ಅಂಟು ಚೆಲ್ಲಿ ಅದರ ಮೇಲೆ ಸಿಂಥೆಟಿಕ್ ರಬ್ಬರ್‌ನ ಪುಡಿಗಳನ್ನು ಸಮತಟ್ಟಾಗಿ ಹರಡಲಾಗುತ್ತದೆ. ಹೀಗೆ ಹರವಿದ ರಬ್ಬರ್‌ ಗಟ್ಟಿಯಾಗಲು 4 ರಿಂದ 5 ಗಂಟೆ ಬೇಕಾಗುತ್ತದೆ. ಇದಕ್ಕೆ ಬೇಕಾದ ಎಲ್ಲ ಉಪಕರಣ ಮತ್ತು ಸಾಮಗ್ರಿಗಳನ್ನು ಜರ್ಮನಿಯಿಂದ ತರಿಸಿಕೊಳ್ಳಲಾಗಿದೆ.

400 ಮೀಟರ್‌: ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 2013ರಲ್ಲಿ ₹ 5.60 ಕೋಟಿ ಅನುದಾನ ಮಂಜೂರಾಗಿತ್ತು. ಇದರಲ್ಲಿ ₹ 2.25 ಕೋಟಿ ಬಿಡುಗಡೆಯಾಗಿದೆ. ಒಟ್ಟು 400 ಮೀಟರ್‌ ಉದ್ದದ ಟ್ರ್ಯಾಕ್‌ ನಿರ್ಮಾಣವಾಗಿದೆ. ಇದರಲ್ಲಿ 1.22 ಮೀಟರ್‌ ಅಳತೆಯ 9 ಲೈನ್‌ಗಳನ್ನು ನಿರ್ಮಿಸಲಾಗುತ್ತದೆ.

ಇದರ ಪಕ್ಕದಲ್ಲಿಯೇ 80 ಮೀಟರ್‌ ಉದ್ದದ ಮತ್ತೊಂದು ಟ್‌್ರ್ಯಾಕ್‌ ಸಹ ನಿರ್ಮಾಣವಾಗುತ್ತಿದೆ. ಲಾಂಗ್‌ ಜಂಪ್‌, ಹೈಜಂಪ್‌, ಟ್ರಿಪಲ್‌ ಜಂಪ್‌, ಪೋಲ್‌ ವಾಲ್ಟ್‌, ಶಾಟ್‌ಪಟ್‌, ಡಿಸ್ಕಸ್‌ ಥ್ರೋ, ಜಾವೆಲಿನ್‌ ಥ್ರೋ, ಹ್ಯಾಮರ್ ಥ್ರೋ ಮುಂತಾದ ಕ್ರೀಡೆಗಳಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಶೌಚಾಲಯ ಕೂಡ ನಿರ್ಮಿಸಲಾಗುತ್ತಿದೆ.

ನಿರ್ವಹಣೆ ಮುಖ್ಯ: ಮಳೆ ಬಂದರೆ ಸಿಂಥೆಟಿಕ್‌ ಅಳವಡಿಕೆ ಕಷ್ಟ. ಮಳೆಯಿಂದ ಕ್ರೀಡಾಂಗಣದಲ್ಲಿ ನೀರು ನಿಂತಿದ್ದರಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಈಗ ಮಳೆ ಇಲ್ಲದಿರುವುದರಿಂದ ಸರಾಗವಾಗಿ ಕೆಲಸ ನಡೆದಿದೆ. ನೀರಿನ ಪಸೆಯಿದ್ದರೆ ರಬ್ಬರ್‌ ಅಂಟು ನಿಲ್ಲುವುದಿಲ್ಲ ಎನ್ನುತ್ತಾರೆ ಗುತ್ತಿಗೆದಾರರು.

ಒಮ್ಮೆ ಅಳವಡಿಕೆ ಪೂರ್ಣಗೊಂಡ ಬಳಿಕ ಮಳೆ ಅಥವಾ ಬಿಸಿಲಿಗೆ ಅದು ಕೆಡುವುದಿಲ್ಲ. ಆದರೆ, ನಿರ್ವಹಣೆ ಅತಿ ಮುಖ್ಯ. ಬರಿಗಾಲಲ್ಲಿ ಅಥವಾ ಚಪ್ಪಲಿ ಹಾಕಿಕೊಂಡು ಟ್ರ್ಯಾಕ್‌ನಲ್ಲಿ ಓಡಬಾರದು. ಸ್ಪೋರ್ಟ್ಸ್‌ ಬೂಟುಗಳನ್ನೇ ಬಳಸುವುದು ಕಡ್ಡಾಯ. ಇಲ್ಲದಿದ್ದರೆ ರಬ್ಬರ್‌ ಪುಡಿಯಾಗುವ ಅಪಾಯ ವಿರುತ್ತದೆ. ಏರ್‌ ಬ್ಲೋ ಬಳಸಿ ನಿರಂತರವಾಗಿ ಸ್ವಚ್ಛಗೊಳಿಸುತ್ತಿರಬೇಕು. ಸರಿಯಾಗಿ ನಿರ್ವಹಣೆ ಮಾಡಿದರೆ ಎಂದಿಗೂ ಕಿತ್ತು ಹೋಗುವುದಿಲ್ಲ ಎನ್ನುತ್ತಾರೆ ಅವರು.

ಟ್ರ್ಯಾಕ್‌ಗೆ ಲೈನ್‌ ಎಳೆಯುವುದು, ಲಾಂಗ್‌ ಜಂಪ್‌ನ ಮತ್ತೊಂದು ಟ್ರ್ಯಾಕ್‌ ಮತ್ತು ಗುಣಮಟ್ಟ ಪರಿಶೀಲನೆಗಳನ್ನು ನಡೆಸಿ ಒಂದು ತಿಂಗಳ ಬಳಿಕ ಕಂಪೆನಿಯು ಇದನ್ನು ಕ್ರೀಡಾ ಇಲಾಖೆಗೆ ಒಪ್ಪಿಸುತ್ತದೆ.

ಬೇಲಿ ಇದ್ದರೂ ಸಾಲದು: ಕ್ರೀಡಾಂಗಣದ ಸುತ್ತ ಚೈನ್‌ಲಿಂಕ್‌ ತಡೆಗೋಡೆ ನಿರ್ಮಿಸಲಾಗಿದೆ. ಸಮೀಪದಲ್ಲಿಯೇ ವಿದ್ಯಾರ್ಥಿ ನಿಲಯಗಳು ಇರುವುದರಿಂದ ವಿದ್ಯಾರ್ಥಿಗಳು ತಡೆಗೋಡೆ ದಾಟಿ ಒಳಗೆ ಬರುತ್ತಾರೆ. ಅವರನ್ನು ನಿಯಂತ್ರಿ ಸುವುದು ಸುಲಭವಲ್ಲ. ಇದರಿಂದ ಟ್ರ್ಯಾಕ್‌ ಕೆಡುವ ಸಾಧ್ಯತೆ ಇರುತ್ತದೆ.

ಹೀಗಾಗಿ,  ತಡೆಗೋಡೆಯನ್ನು ಇನ್ನೂ ಎರಡು ಅಥವಾ ಮೂರು ಅಡಿ ಎತ್ತರಿಸುವ ನಿಟ್ಟಿನಲ್ಲಿ ಪ್ರಯತ್ನಿಸ ಲಾಗುತ್ತಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಚಲುವಯ್ಯ ತಿಳಿಸಿದರು.

ಮಳೆ ನೀರು ಹರಿದುಹೋಗಲು ಒಳ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದ ರಕ್ಷಣೆ ಮತ್ತು ನಿರ್ವಹಣೆಗಾಗಿ ಸಿಬ್ಬಂದಿಯೊಬ್ಬರನ್ನು ನೇಮಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಟ್ರ್ಯಾಕ್‌ ಕಾಮಗಾರಿ ಅಂಕಿ ಅಂಶ  
₹5.60ಕೋಟಿ ಕಾಮಗಾರಿಯ ಅನುದಾನ

₹2.25ಕೋಟಿ ಬಿಡುಗಡೆಯಾದ ಮೊತ್ತ

400 ಮೀಟರ್‌ ನಿರ್ಮಿಸಲಾದ ಟ್ರ್ಯಾಕ್‌ನ ಉದ್ದ

* * 

20 ದಿನಗಳಲ್ಲಿ ಟ್ರ್ಯಾಕ್‌ ಅಳವಡಿಕೆ ಮುಗಿಯಲಿದೆ. ಆದರೆ, ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದಿವೆ. ಕ್ರೀಡಾಪಟುಗಳಿಗೆ ಮುಕ್ತವಾಗಲು ಎರಡು ತಿಂಗಳು ಬೇಕು
ಎಂ.ಚಲುವಯ್ಯ
ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT