ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರನ್ನು ಯಾರು ನಿಯಂತ್ರಿಸುವರು?

Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ದಿನೇ ದಿನೇ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚವು ನಮ್ಮ ದೇಶದಲ್ಲಿ ಪ್ರತಿವರ್ಷ 6.30 ಕೋಟಿ ಜನರನ್ನು ಬಡತನ ರೇಖೆಗಿಂತ ಕೆಳಗೆ ನೂಕುತ್ತಿದೆ. ಇದಕ್ಕೆ ಕಾರಣ ಒಒಪಿ (ಔಟ್ ಆಫ್ ಪಾಕೆಟ್ ಎಕ್ಸ್‌ಪೆನ್ಸ್) ಅಥವಾ ತಮ್ಮ ಕಿಸೆಯಿಂದ ಖರ್ಚು ಮಾಡುವುದು ಎನ್ನುತ್ತಾರೆ. 

ದೇಶದ ಶೇ 90ರಷ್ಟು ಜನರಿಗೆ ಯಾವುದೇ ರೀತಿಯ ವಿಮೆ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ಕುಟುಂಬದಲ್ಲಿ ಒಬ್ಬರಿಗೆ ಒಂದು ದೊಡ್ಡ ಕಾಯಿಲೆ ಬಂತೆಂದರೆ, ಅದರ ಖರ್ಚನ್ನು ನಿಭಾಯಿಸಲು ಅವರು ಸಾಲದ ಮೊರೆ ಹೋಗಬೇಕಾಗುತ್ತದೆ ಅಥವಾ ಇದ್ದ ಚೂರುಪಾರು ಆಸ್ತಿಯನ್ನು ಮಾರಬೇಕಾಗುತ್ತದೆ. 

ದುರ್ದೈವವೆಂದರೆ ನಮ್ಮ ಈ ಒಒಪಿ ಹೆಚ್ಚುತ್ತಲೇ ಹೋಗುತ್ತಿದೆ! ಯಾವ ಆರೋಗ್ಯ ಕ್ಷೇತ್ರ ನಮ್ಮ ಆರೋಗ್ಯವನ್ನು ಕಾಪಾಡಬೇಕಿತ್ತೊ ಅದೇ ನಮ್ಮ ಜನರನ್ನು ಬಡತನಕ್ಕೆ ತಳ್ಳುತ್ತಿರುವುದು ವಿಪರ್ಯಾಸವಲ್ಲವೇ? ಇದನ್ನು ವೈದ್ಯಕೀಯ ರಂಗ ಸಮರ್ಥಿಸಿಕೊಳ್ಳುತ್ತಿರುವುದು ವಿಷಾದವಲ್ಲವೇ?

ಸಮುದಾಯ ಆರೋಗ್ಯದ ಜವಾಬ್ದಾರಿ ಸರ್ಕಾರಿ ವ್ಯವಸ್ಥೆಯ ಮೇಲೆ ಇರುತ್ತದೆ. ರೋಗ ತಡೆಗಟ್ಟುವುದು ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದರ ಜೊತೆಗೆ ಉಚಿತವಾಗಿಯೋ, ಕನಿಷ್ಠ ದರದಲ್ಲೋ ಆರೋಗ್ಯ ಸೇವೆ ಒದಗಿಸುವುದು  ಸೇರಿರುತ್ತವೆ.

ಪ್ರತಿಯೊಬ್ಬ ವೈದ್ಯ- ಖಾಸಗಿಯಿರಲಿ, ಸರ್ಕಾರಿ ಇರಲಿ- ಈ ವ್ಯವಸ್ಥೆ ಬಲಪಡಿಸಲು ಕೈಲಾದಷ್ಟು ಸಹಾಯ ಮಾಡಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಸಿಗುವ ಔಷಧಗಳ ಗುಣಮಟ್ಟದ ಬಗ್ಗೆ ಜನರು ಸಂಶಯ ವ್ಯಕ್ತಪಡಿಸಿದರೂ ನಿಜಾಂಶ ಗೊತ್ತಿರುವ ವೈದ್ಯರು ಸರ್ಕಾರಿ ಅಥವಾ ಖಾಸಗಿ ಔಷಧಗಳಲ್ಲಿ ವ್ಯತ್ಯಾಸವಿಲ್ಲವೆಂದು ಜನಸಾಮಾನ್ಯರಿಗೆ ತಿಳಿಸಿ ಹೇಳಬೇಕಾಗುತ್ತದೆ.                    

ಜನರಿಗೆ  ಆರೋಗ್ಯ ಸೇವೆಯನ್ನು ತನ್ನಿಂದ ಪೂರ್ತಿಯಾಗಿ ಒದಗಿಸಲು ಸಾಧ್ಯವಾಗದು ಎಂದು ಮನವರಿಕೆಯಾದ ಕಾರಣ ನಮ್ಮ ರಾಜ್ಯ ಸರ್ಕಾರಗಳು ಜನರಿಗೆ ಚಿಕಿತ್ಸೆ ಒದಗಿಸಲು, ಹಲವಾರು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಅದರಿಂದಾಗಿ ಸರ್ಕಾರದ ಹಣವೂ ಖಾಸಗಿ ವಲಯಕ್ಕೆ ಹರಿದುಹೋಗುತ್ತಿದೆ.

ನಮ್ಮ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ಶೇ 93ರಷ್ಟು ಜನರು ಸ್ವಯಂ ಉದ್ಯೋಗದಲ್ಲಿ ತೊಡಗಿರುವುದರಿಂದ, ಅವರಿಗೆ ವಿಮೆ ಇರುವ ಸಾಧ್ಯತೆಯೇ ಕಡಿಮೆ. ಹೀಗಾಗಿ  ಕಾಯಿಲೆ ಬಂದಾಗ ಅವರು ಸ್ವಂತ ಉಳಿತಾಯದಲ್ಲೇ ಖರ್ಚು ಮಾಡಬೇಕಾಗುತ್ತದೆ.  ದೇಶದಲ್ಲಿ ಇವತ್ತು ಖಾಸಗಿ ಆರೋಗ್ಯ ಕ್ಷೇತ್ರದ ಪಾಲು ಶೇ 80ರಷ್ಟು. ಸರ್ಕಾರಿ  ಕ್ಷೇತ್ರ ಕ್ಷೀಣಿಸುತ್ತಾ ಇದ್ದು, ಕೇವಲ ಶೇ 20ರಷ್ಟು ಪಾಲು ಹೊಂದಿದೆ.

ಖಾಸಗಿ ವಲಯ ಇಷ್ಟು ಬಲಾಢ್ಯವಾಗಿ ಬೆಳೆದು ನಿಂತಿರುವ ಉದಾಹರಣೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮತ್ತೆಲ್ಲೂ ಇಲ್ಲ. ಈ ಖಾಸಗಿ ವಲಯ ಅದೆಷ್ಟು ಪ್ರಭಾವಶಾಲಿಯೆಂದರೆ ಸರ್ಕಾರಿ ವೈದ್ಯ ಕೂಡ ಖಾಸಗಿ ವಲಯಕ್ಕೆ (ಅಲ್ಲಿ ತನ್ನ ಒಂದು ಕಾಲನ್ನು ಇಟ್ಟೇ ಇರುತ್ತಾನೆ) ರೆಫರ್ ಮಾಡಲು ಶತ ಪ್ರಯತ್ನ ನಡೆಸುತ್ತಿರುತ್ತಾನೆ. 

ಹಾಗೆಂದು ಸಾರ್ವಜನಿಕರ ಆರೋಗ್ಯ ಕಾಪಾಡುವಂಥ ಉದಾತ್ತ ಉದ್ದೇಶಗಳಿಂದ ಕಾರ್ಪೊರೇಟ್ ವಲಯದ ಆಸ್ಪತ್ರೆಗಳು ಸ್ಥಾಪಿತವಾಗಿಲ್ಲ.  ಹೆಚ್ಚು ಲಾಭ ಗಳಿಸುವುದೇ ಅವುಗಳ ಗುರಿ. ಅನವಶ್ಯಕವಾಗಿ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳುವುದು,  ಅನವಶ್ಯಕ ತಪಾಸಣೆ, ಅನವಶ್ಯಕವಾಗಿ ದುಬಾರಿ ಔಷಧಗಳನ್ನು ಬರೆದು ಕೊಡುವುದು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ.

ಅವಶ್ಯವಿರಲಿ, ಬಿಡಲಿ ನಿರ್ದಿಷ್ಟ ಪ್ರಮಾಣದಲ್ಲಿ ರೋಗಿಗಳನ್ನು ಅಡ್ಮಿಟ್‌ ಮಾಡಲು ಹಾಗೂ ಅನವಶ್ಯಕ ಪರೀಕ್ಷೆಗಳನ್ನು ಮಾಡಿಸಲು ವೈದ್ಯರಿಗೆ ಅಲ್ಲಿ ವಿಪರೀತ ಒತ್ತಡ ಇರುತ್ತದೆ. ಹಾಗೆಯೇ ಹೊರಗಿನ ವೈದ್ಯರಿಗೆ ‘ಕಿಕ್‌ಬ್ಯಾಕ್’ ಕೂಡ! ಒಂದು ಸ್ಕ್ಯಾನಿಂಗ್‌ಗೆ ರೆಫರ್ ಮಾಡಿದರೆ ಅದರಲ್ಲಿ ಒಂದಷ್ಟು ಮಾರ್ಜಿನ್ ಅವರಿಗೆ.

ಇಷ್ಟು ಬಲಾಢ್ಯವಾಗಿ ಬೆಳೆದು ನಿಂತಿರುವ ಈ ಖಾಸಗಿ ವಲಯವನ್ನು ನಿಯಂತ್ರಿಸುವುದು ಹೇಗೆ ಎಂಬುದೇ  ದೊಡ್ಡ ಸವಾಲು. ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ಮಾಲೀಕರಲ್ಲಿ ಸರ್ಕಾರದ ಪ್ರಮುಖ ಸ್ಥಾನದಲ್ಲಿರುವವರು ಹಾಗೂ ಚುನಾಯಿತ ಪ್ರತಿನಿಧಿಗಳು ಕೂಡ ಇರುವುದರಿಂದ ‘ನಾಯಿಯನ್ನೇ ಬಾಲ ಅಳ್ಳಾಡಿಸಿದ’ ಕತೆ ಆಗಿದೆ.

ತಪ್ಪಾಗಿ ಅರ್ಥೈಸಿಕೊಂಡಿರುವ ನಮ್ಮ ವೈದ್ಯ ಮಿತ್ರರೇನೇ ಹೇಳಲಿ, ಖಾಸಗಿ ವೈದ್ಯಕೀಯ ರಂಗವನ್ನು  ನಿಯಂತ್ರಿಸುವ ಅವಶ್ಯಕತೆ ಬಹಳವಿದೆ. ಖಾಸಗಿ ವೈದ್ಯಕೀಯ ರಂಗದ ನಿಯಂತ್ರಣಕ್ಕಾಗಿ ಅನೇಕ ಪ್ರಯತ್ನಗಳು ಈಗಾಗಲೇ ನಡೆದಿವೆ. ದೇಶದಲ್ಲಿ 0–5 ವರ್ಷದ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಆದಾಗ, ಸರ್ಕಾರ ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ತಂದಿತು. ಇದರ ಪ್ರಕಾರ ಸ್ಕ್ಯಾನಿಂಗ್‌ ಸಾಧನಗಳು  ಹಾಗೂ ಸ್ಕ್ಯಾನ್‌ ಮಾಡುವ ವೈದ್ಯರ ನೋಂದಣಿ ಆಗಬೇಕು.

ಆದರೇನು, ನೋಂದಣಿಯ ಶುಲ್ಕ ಗಣನೀಯ ಪ್ರಮಾಣದಲ್ಲಿದ್ದರೂ  ಸ್ಕ್ಯಾನಿಂಗ್ ಮೆಷಿನ್‌ಗಳೇನೂ ಕಡಿಮೆಯಾಗಿಲ್ಲ, ಹೆಣ್ಣುಮಕ್ಕಳ ಸಂಖ್ಯೆಯೂ ಏರಿಲ್ಲ. ಇನ್ನೊಂದು ಉದಾಹರಣೆ ತೆಗೆದುಕೊಳ್ಳಿ. ಎಲ್ಲಾ ಔಷಧ ಅಂಗಡಿಗಳಲ್ಲೂ ಪದವಿ ಪಡೆದ ಒಬ್ಬ ಫಾರ್ಮಸಿಸ್ಟ್ ಇರಬೇಕು. ಇದು ನಿಯಮ. ಆದರೆ ಔಷಧ ಅಂಗಡಿಯಲ್ಲಿ ಇರುವುದು  ಆ ಸರ್ಟಿಫಿಕೇಟ್ ಮಾತ್ರ, ಅಲ್ಲಿ ಫಾರ್ಮಸಿಸ್ಟ್ ಇರುವುದೇ ಇಲ್ಲ! ಸಂಬಂಧಪಟ್ಟವರ ಕೈ ಬಿಸಿ ಮಾಡಿದರಾಯಿತು.

ಇವೆಲ್ಲ ಸಣ್ಣಪುಟ್ಟ ನಿದರ್ಶನಗಳ ಜೊತೆ ಒಂದು ದೊಡ್ಡ ಉದಾ ಹರಣೆಯನ್ನೂ ನೋಡಿ. 2003ರಲ್ಲಿ ಔಷಧಗಳು ಜನರ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವ ವ್ಯವಸ್ಥೆಯನ್ನು ಮಾಡಬೇಕು ಎಂದು ಆಲ್ ಇಂಡಿಯಾ ಡ್ರಗ್ ಆ್ಯಕ್ಷನ್ ನೆಟವರ್ಕ್‌, ನಮ್ಮ ದೇಶದ ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿತು.

14 ವರ್ಷ ಕಳೆದರೂ ಈ ಸಂಬಂಧದ  ತೀರ್ಪು ಇನ್ನೂ ಹೊರಬಿದ್ದಿಲ್ಲ! ಔಷಧ ಬೆಲೆ ನಿಯಂತ್ರಣ ಮಾಡುವ ಪ್ರಶ್ನೆ ಬಂದಾಗ ದೊಡ್ಡ ಔಷಧ ಕಂಪೆನಿಗಳ ಮಾತಿಗೆ ಸರ್ಕಾರ ಬಗ್ಗುವಂತೆ, ಆಸ್ಪತ್ರೆಗಳ ನಿಯಂತ್ರಣ ವಿಚಾರ ಬಂದಾಗ ಕಾರ್ಪೊರೇಟ್ ವಲಯದ ಆಸ್ಪತ್ರೆಗಳ ಕೈಯೇ ಮೇಲಾಗುತ್ತದೆ. ಸಣ್ಣಪುಟ್ಟ ಆಸ್ಪತ್ರೆಗಳನ್ನು ನಡೆಸುವ ವೈದ್ಯರ ಹೆಗಲ ಮೇಲೆ ಪಿಸ್ತೂಲ್ ಇಟ್ಟು ಅವರು ಗುಂಡು ಹಾರಿಸುತ್ತಿರುತ್ತಾರೆ. 

ಖಾಸಗಿ ವೈದ್ಯಕೀಯ ಕ್ಷೇತ್ರವನ್ನು ನಿಯಂತ್ರಿಸುವ ಕಾಯ್ದೆಯೊಂದನ್ನು ಕೇಂದ್ರ ಸರ್ಕಾರ 2006 ರಲ್ಲಿಯೇ ಜಾರಿಗೆ ತಂದಿತ್ತು. ಆರೋಗ್ಯವು ರಾಜ್ಯಗಳ ವಿಷಯವಾಗಿರುವುದರಿಂದ ಕಾನೂನು ತಂದು ಈ ಕ್ಷೇತ್ರವನ್ನು ನಿಯಂತ್ರಿಸಬೇಕೆಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಆದೇಶಿಸಿದ್ದರ ಫಲವೇ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)– 2017’ ಮಸೂದೆ.

ಪಾಶ್ಚಾತ್ಯ ದೇಶಗಳಲ್ಲಿ ಆರೋಗ್ಯ ಕ್ಷೇತ್ರದ ನಿಯಂತ್ರಣ ಹೇಗಿದೆ? ಬ್ರಿಟಿಷ್ ಸರ್ಕಾರದಲ್ಲಿ  ಸಾಮಾನ್ಯ ಜನರಿಗೆ ಚಿಕಿತ್ಸೆಗೆ ಇರುವ ವ್ಯವಸ್ಥೆ ಎನ್.ಎಚ್.ಎಸ್. (National Health Service). ಇದರ ಅಡಿಯಲ್ಲಿ ಕೆಲಸ ಮಾಡುವ ವೈದ್ಯರು ಖಾಸಗಿಯವರೇ ಆದರೂ ಅವರು ಕಡ್ಡಾಯವಾಗಿ ಪಾಲಿಸಬೇಕಾದ ನಿರ್ದಿಷ್ಟ ನಿಯಮಗಳನ್ನು ಎನ್.ಎಚ್.ಎಸ್. ಹಾಕಿರುತ್ತದೆ. ಅದೇ ರೀತಿಯ ನಿಯಂತ್ರಣವನ್ನು ಫ್ರಾನ್ಸ್‌ನಲ್ಲೂ   ನೋಡಬಹುದು.

ಇವೆಲ್ಲಕ್ಕಿಂತ ಮಿಗಿಲು ಜರ್ಮನಿಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಅಲ್ಲಿ  1883ರಲ್ಲಿಯೇ  ಒಟ್ಟೊವಾನ್ ಬಿಸ್ಮಾರ್ಕ್, ‘ಆರೋಗ್ಯ ವಿಮೆ ಕಾಯ್ದೆ’ ಜಾರಿಗೆ ತಂದ. ಇದರ ಪ್ರಕಾರ ಎಲ್ಲರಿಗೂ ಆರೋಗ್ಯ ವಿಮೆ ಒದಗಿಸುವುದು ಸರ್ಕಾರದ ಜವಾಬ್ದಾರಿ. ಅತಿ ಅವಶ್ಯಕ ಇರುವಂಥ ಜನರಿಗೆ ಅದನ್ನು ಒದಗಿಸುವುದಕ್ಕೆ ಆದ್ಯತೆ. ರಾಜಕೀಯ ಪಕ್ಷಗಳು, ಧುರೀಣರು ಅಥವಾ ಬಂಡವಾಳಶಾಹಿಗಳು ಅಥವಾ ಕಂಪೆನಿಗಳು ಆರೋಗ್ಯ ವಿಷಯದಲ್ಲಿ ಮೂಗು ತೂರಿಸುವ ಹಾಗಿಲ್ಲ. ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಒಂದು ತಜ್ಞರ ಸಮಿತಿ ರಚಿಸಲಾಗಿದೆ.

ಆರೋಗ್ಯ ವಿಮೆ ಕಾಯ್ದೆಯನ್ನು ಜಾರಿಗೊಳಿಸಿದಾಗ ಆದ್ಯತೆ ಮೇರೆಗೆ ಕಡ್ಡಾಯವಾಗಿ ಕಡು ಬಡವರನ್ನು ಹುಡುಕಿ ಅವರನ್ನು ಆರೋಗ್ಯ ವಿಮೆಯಡಿ ನೋಂದಾಯಿಸಲಾಯಿತು. ಹಂತ ಹಂತವಾಗಿ ಎಲ್ಲಾ ವರ್ಗದವರನ್ನು ಇದರ ಅಡಿಯಲ್ಲಿ ತರಲಾಯಿತು. ಈಗ ಜರ್ಮನಿಯಲ್ಲಿ ದೇಶದ ಶೇ 92ರಷ್ಟು ಜನರು ಆರೋಗ್ಯ ವಿಮೆ ಪಡೆದಿದ್ದಾರೆ. ವಿಕೇಂದ್ರಿತವಾಗಿ ನಡೆಯುವ ವ್ಯವಸ್ಥೆಯಿದು.

ಇಲ್ಲಿ ಕೆಲಸ ಮಾಡುವ ವೈದ್ಯರೆಲ್ಲರೂ ಖಾಸಗಿ ವಲಯದವರೇ. ಸರ್ಕಾರದ ಸಹಾಯದಿಂದ ಇವರ ಸೇವೆಯನ್ನು ವಿಮೆ ಅಡಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಫಲಾನುಭವಿಯಿಂದ ಬಂದ ಸದಸ್ಯತ್ವ ಶುಲ್ಕ, ಕೆಲಸ ಮಾಡಿಸುವ ಕಂಪೆನಿಯು ಕೊಡಬೇಕಾದ ಹಣ ಹಾಗೂ ಸರ್ಕಾರದ ದೇಣಿಗೆಗಳಿಂದ ಈ ವ್ಯವಸ್ಥೆ ತನ್ನ ಕಾಲ ಮೇಲೆ ನಿಂತಿದೆ. ರಾಜಕೀಯ ಇಚ್ಛಾಶಕ್ತಿ ತೋರಿದರೆ ಮಾತ್ರ ವೈದ್ಯಕೀಯ ವ್ಯವಸ್ಥೆಯ ನಿಯಂತ್ರಣ ಮತ್ತು ಸಮುದಾಯದ ಆರೋಗ್ಯ ರಕ್ಷಣೆ ಸರ್ಕಾರದಿಂದ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT